ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ದೇಶವೇ ಹೊರಗುತ್ತಿಗೆಗೆ: ಬರಗೂರು ವಿಷಾದ

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಭಾರತದಲ್ಲಿ ಕೇವಲ ಉದ್ಯೋಗವನ್ನು ಹೊರಗುತ್ತಿಗೆಗೆ ನೀಡಿಲ್ಲ. ಬದಲಾಗಿ ಇಡೀ ದೇಶವನ್ನೇ ಹೊರ ಗುತ್ತಿಗೆಗೆ ನೀಡಲಾಗಿದೆ' ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.    

ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ `ಅತಿಥಿ ಉಪನ್ಯಾಸಕರ ರಾಜ್ಯ ಮಟ್ಟದ ಸಮಾವೇಶ'ವನ್ನು ಉದ್ಘಾಟಿಸಿ ಮಾತನಾಡಿದರು.

`ಮುಕ್ತ ಆರ್ಥಿಕ ನೀತಿಯ ಅನುಷ್ಠಾನ ಮತ್ತು ನೂತನ ಆರ್ಥಿಕ ನೀತಿಗಳಿಂದ ಉದ್ಯೋಗದ ನೀತಿಯಲ್ಲೂ ಬದಲಾವಣೆಗಳಾಗಿವೆ. ಖಾಸಗಿ ಉದ್ಯೋಗ ನೀತಿಯನ್ನು ಅನುಸರಿಸುವ ಸರ್ಕಾರಗಳು ಸೇವಾ ಭದ್ರತೆಯನ್ನು ಒದಗಿಸುವ ನೈತಿಕ ಜವಾಬ್ದಾರಿಯನ್ನೇ ಮರೆತುಬಿಟ್ಟಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಕಾಯಂ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಸೇವಾ ಭದ್ರತೆ ಒದಗಿಸಿದರೆ, ಅವರಿಂದ ಹೆಚ್ಚಿನ ಕೆಲಸಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಕೆಲಸವನ್ನು ಮಾಡಿಸಿಕೊಳ್ಳುತ್ತಿದೆ' ಎಂದರು. 

`ಶಿಕ್ಷಣ ಕ್ಷೇತ್ರವು ಉದ್ಯಮವಾಗಿ ಬದಲಾಗಿದ್ದು, ಶಿಕ್ಷಣ ತಜ್ಞರ ಸ್ಥಾನವನ್ನು ಶಿಕ್ಷಣೋದ್ಯಮಿಗಳು ಆಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ಸಾಮಾನ್ಯ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣದ ನಡುವಿನ ಅಂತರ ಹೆಚ್ಚಾಗಿದೆ. ಜೊತೆಗೆ ಶಿಕ್ಷಣದ ವ್ಯಾಪಾರೀಕರಣದಿಂದ ಉನ್ನತ ಶಿಕ್ಷಣದ ಸ್ವರೂಪವೇ ಬದಲಾಗಿ ಹೋಗಿದೆ' ಎಂದರು.

ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಕ್ಕಿಂತ ಖಾಸಗಿಯವರ ಪ್ರಾಬಲ್ಯ ಹೆಚ್ಚಾಗುತ್ತಿದ್ದು, ಸರ್ಕಾರ ಶಕ್ತಿ ಹೀನವಾಗುತ್ತಿದೆ. ಹೀಗಾಗಿಯೇ ನಮ್ಮ ದೇಶದ ಹಲವು ನಿರ್ಧಾರಗಳನ್ನು ವಿದೇಶಿ ಸಂಸ್ಥೆಗಳು ತೆಗೆದುಕೊಳ್ಳುವ ಪರಿಸ್ಥಿತಿ ನಿಮಾರ್ಣವಾಗಿದೆ ಎಂದು ವಿಷಾಧಿಸಿದರು.
`ಇತ್ತೀಚೆಗೆ ಉಳ್ಳವರು ಮತ್ತು ಇಲ್ಲದವರ ನಡುವಿನ ಪ್ರಜಾಸತ್ತಾತ್ಮಕ ಹೋರಾಟಕ್ಕಿಂತ, ಉಳ್ಳವರ ನಡುವೆಯೇ ಹೆಚ್ಚಿನ ಲಾಭಕ್ಕಾಗಿ ಹೋರಾಟ ನಡೆಯುತ್ತಿದೆ. ಇದರಿಂದಾಗಿ ಪ್ರಜಾಸತ್ತಾತ್ಮಕ ಹೋರಾಟಗಳು ಮೌಲ್ಯ ಕಳೆದುಕೊಳ್ಳುತ್ತಿವೆ'ಎಂದರು.

`ವಿಶ್ವವಿದ್ಯಾಲಯಗಳ ಅನುದಾನ ಆಯೋಗದ ನಿಯಮಗಳ ಪ್ರಕಾರ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ 50 ಗಂಟೆ ಕೆಲಸ ನೀಡಿ, ಗಂಟೆಗೆ ರೂ500ರಂತೆ ತಿಂಗಳಿಗೆ ರೂ25 ಸಾವಿರ ವೇತನ ನೀಡಬೇಕು. ಆದರೆ ಅದಕ್ಕಿಂತ ಕಡಿಮೆ ವೇತನವನ್ನು ಸಮಯಕ್ಕೆ ಸರಿಯಾಗಿ ನೀಡದೆ ಶೈಕ್ಷಣಿಕ ಅವಮಾನ ಮಾಡುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.

`ಪ್ರಸ್ತುತ ಇರುವ ಶಿಕ್ಷಣ ಪದ್ದತಿಯಲ್ಲಿ ಬದಲಾವಣೆ ತಂದು, ಸಾಮಾನ್ಯ ಶಿಕ್ಷಣ ಮತ್ತು ವೃತ್ತಿ ಶಿಕ್ಷಣದ ನಡುವೆ ಸಮತೋಲನವನ್ನು ಕಾಪಾಡಬೇಕಿದೆ. ಜೊತೆಗೆ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ, ಅದಕ್ಕೆ ತಕ್ಕಂತೆ ಪ್ರಥಮ ದರ್ಜೆಯ ಕಾಲೇಜುಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು' ಎಂದು ಸಲಹೆ ನೀಡಿದರು.  

`ಬೇಡಿಕೆಗಳು ಈಡೇರಬೇಕಾದರೆ ಸರ್ಕಾರ ನೈತಿಕತೆಯಿಂದ ಕೊರಗುವಂತೆ ಕ್ರಮಬದ್ಧವಾಗಿ ಸಾತ್ವಿಕ ಹೋರಾಟ ನಡೆಸಬೇಕು. ಅದಕ್ಕೆ ನನ್ನ ಸಹಕಾರವೂ ಇದೆ' ಎಂದು ಭರವಸೆ ನೀಡಿದರು.

ಅಖಿಲ ಭಾರತ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಮಹಾದೇವಯ್ಯ ಮಠಪತಿ ಮಾತನಾಡಿ, `ಹಿಂದೆ ಇದ್ದ ಜೀತ ಪದ್ದತಿಗೂ, ಅತಿಥಿ ಉಪನ್ಯಾಸಕರ ಪರಿಸ್ಥಿತಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಸಂಬಳ ಹೊಟ್ಟೆಪಾಡಿನ ವಿಷಯವಾಗಿ ಉಳಿದಿಲ್ಲ. ಬದಲಾಗಿ ಪ್ರತಿಷ್ಠೆಯ ಪ್ರತೀಕವಾಗಿದೆ. ಇದು ನಾಚಿಕೆಗೇಡಿನ ವಿಷಯ' ಎಂದರು. 

ಸಂಶೋಧಕ ಡಾ.ಮಲ್ಲಿಕಾರ್ಜುನ ಅವರು ಮಾತನಾಡಿ, `ಶಿಕ್ಷಣ ಈಗ ಮಾರಾಟದ ವಸ್ತುವಾಗಿದೆ. ಇದರಿಂದಾಗಿ ಶಿಕ್ಷಣವನ್ನು ಸಮಾಜ ನೋಡುವ ರೀತಿಯೇ ಬದಲಾಗಿದೆ. ವ್ಯಕ್ತಿ ವಿಕಸನ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ನೀಡುತ್ತಿದ್ದ ಶಿಕ್ಷಣವನ್ನು ಈಗ ಕೇವಲ ಹಣ ಸಂಪಾನೆಯ ದೃಷ್ಟಿಯಿಂದ ನೋಡಲಾಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.

ವೇತನ ಹೆಚ್ಚಳ, ಸೇವಾ ಭದ್ರತೆಗೆ ಆಗ್ರಹಿಸಿ 25ಕ್ಕೆ ಪ್ರತಿಭಟನೆ
ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳ ಮೊದಲನೇ ವಾರದಲ್ಲಿ 25 ಸಾವಿರ ವೇತನ ನೀಡುವುದು ಹಾಗೂ ಸೇವಾ ಭದ್ರತೆ ಒದಗಿಸಲು ಸರ್ಕಾರ ತಕ್ಷಣವೇ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಇದೇ 25 ರಂದು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಮಾವೇಶದಲ್ಲಿ ನಿರ್ಧರಿಸಲಾಗಿದೆ.
- ಎನ್.ಎಲ್.ಭರತ್‌ರಾಜ್, ಒಕ್ಕೂಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT