ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಮಿತಿ ಮಧ್ಯೆ ನ್ಯಾಯಸಮ್ಮತ ಕೆಲಸ...

Last Updated 28 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ದೇಶದ ಸದ್ಯದ ಆರ್ಥಿಕ ಪರಿಸ್ಥಿತಿಯ ಇತಿಮಿತಿ ಮತ್ತು ಸಂಕಷ್ಟದ ಪರಿಸ್ಥಿತಿಯಲ್ಲಿ ಪಿ.ಚಿದಂಬರಂ ಉತ್ತಮ ಬಜೆಟ್ ಮಂಡಿಸುವ ಮೂಲಕ ಎಲ್ಲರೂ ಒಪ್ಪಬಹುದಾದ ನ್ಯಾಯಸಮ್ಮತ ಕೆಲಸವನ್ನೇ ಮಾಡಿದ್ದಾರೆ.

ಬಜೆಟ್‌ನಲ್ಲಿ ಅವರು ಮೂರು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.  ಮುಂದಿನ ಆರ್ಥಿಕ ವರ್ಷದಲ್ಲಿ ಶೇ 4.8ರಷ್ಟು ವಿತ್ತೀಯ ಕೊರತೆಯನ್ನು ಅವರು ಅಂದಾಜಿಸಿದ್ದಾರೆ. ವರಮಾನ ಮತ್ತು ವೆಚ್ಚಗಳು ಅಂದಾಜು ಮಾಡಿದ ವಿತ್ತೀಯ ಕೊರತೆ ಪ್ರಮಾಣವನ್ನು ಹೇಗೆ ಸರಿದೂಗಿಸುತ್ತವೆ ಎಂಬುದನ್ನು ಕಾಯ್ದು ನೋಡಬೇಕು.

ಚಿದಂಬರಂ ಅವರು ತಮ್ಮ ಭಾಷಣದಲ್ಲಿ ಈ ವಿಷಯ  ಪ್ರಸ್ತಾಪಿಸಿರದಿದ್ದರೂ ನನ್ನ ಊಹೆಯಂತೆ ಷೇರು ವಿಕ್ರಯಗಳ ಮಾರಾಟದಿಂದ  ಸರ್ಕಾರ  ರೂ 58,000 ಕೋಟಿ ಸಂಗ್ರಹಿಸುವ ಉದ್ದೇಶ ಹೊಂದಿರಲು ಸಾಕು. ವಿದೇಶಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವುದು ಸೇರಿದಂತೆ ಅನೇಕ ಸೂತ್ರಗಳನ್ನು ಪ್ರಕಟಿಸಿದ್ದಾರೆ.

ಭವಿಷ್ಯದಲ್ಲಿ ವಿದೇಶಿ ವಿನಿಮಯ ಮತ್ತು ಬಂಡವಾಳ ನಿರಂತರವಾಗಿ ಹರಿದುಬರಲು ಈ ದೂರದೃಷ್ಟಿಯ ನಿರ್ಧಾರ ನೆರವಾಗಬಹುದು. ಕಂದಕ ಮುಚ್ಚಲು ಇದು ನೆರವಾಗಬಹುದು ಎಂಬುದನ್ನು ಈಗಲೇ ಹೇಳುವುದು ಕಷ್ಟವಾದೀತು. ಆದರೆ, ಕರೆನ್ಸಿ (ರೂಪಾಯಿ) ಅಪಮೌಲ್ಯವಾಗುವುದನ್ನು ತಡೆಗಟ್ಟುವುದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಗೆ ಕಷ್ಟವಾಗಬಹುದು.

ಮುಂದಿನ ಕೆಲವೇ ವರ್ಷಗಳಲ್ಲಿ ಶೇ 8ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸುವ ಬಗ್ಗೆ ಸಚಿವರು ಭಾರಿ ಆಶಾಭಾವನೆ ಹೊಂದಿದ್ದಾರೆ. ಇದು ಉತ್ತೇಜನಕಾರಿ ನಿಲುವೂ ಹೌದು. ಆದರೆ, ಅವರು ಹೇಳುವಂತೆ ಎಲ್ಲವನ್ನೂ ಒಳಗೊಂಡ ಸುಸ್ಥಿರ ಬೆಳವಣಿಗೆ ಕೇವಲ ಆಕರ್ಷಕವಾಗಿ ಮಾತ್ರ ಕಾಣಬಹುದು. ವಾಸ್ತವದಲ್ಲಿ ಇದು ಕಷ್ಟಸಾಧ್ಯ.  ರೂ  100 ಕೋಟಿಗೂ ಹೆಚ್ಚು ಬಂಡವಾಳ ಹೂಡುವ ಪ್ರಮುಖ ಉತ್ಪಾದನಾ ಉದ್ಯಮಗಳಿಗೆ ಶೇ 15 ರಿಯಾಯ್ತಿ ಘೋಷಿಸಿರುವುದು ಬೆಳವಣಿಗೆಗೆ ಪೂರಕವಾದ ಹೆಜ್ಜೆಯಾದರೂ ನಿಧಾನವಾಗಿ ಫಲ ನೀಡಲಿದೆ.

ಬ್ಯಾಂಕಿಂಗ್ ಮಾದರಿಯಲ್ಲಿ ಹೊರಹೊಮ್ಮಿರುವ ವಿಮಾ ವಲಯ ಒಳ್ಳೆಯ ಫಲಿತಾಂಶ ನೀಡುವ ಸೂಚನೆ ಇದೆ. ಗೃಹಸಾಲದ ಬಡ್ಡಿ ಮೇಲಿನ ರಿಯಾಯ್ತಿ, ಮೂಲಸೌಕರ್ಯ ಬಾಂಡ್‌ಗಳು, ಬಂದರು, ಕೈಗಾರಿಕಾ ವಲಯಗಳು, ಸೆಮಿಕಂಡಕ್ಟರ್ಸ್‌, ಶೇಲ್ ಅನಿಲ ಮುಂತಾದ ಬಜೆಟ್ ಘೋಷಣೆಗಳು ಸ್ವಾಗತಾರ್ಹ. ಆದರೆ, ಅನುಷ್ಠಾನದಲ್ಲಿ ಅಧಿಕಾರಿ ವರ್ಗ ಹೇಗೆ ಸ್ಪಂದಿಸುತ್ತದೆ ಎನ್ನುವ ಪ್ರಶ್ನೆ ಮೂಡುತ್ತದೆ. ಗುಣಾತ್ಮಕ ಅಭಿವೃದ್ಧಿಗೆ ಪೂರಕವಾಗಲು ದೊಡ್ಡ ಮೊತ್ತದ ಬಂಡವಾಳ  ಆಕರ್ಷಿಸುವ ದಿಸೆಯಲ್ಲಿ ಚಿದಂಬರಂ ಅವರ ಬಜೆಟ್ ಘೋಷಣೆಗಳು ಯಾವ ರೀತಿ ಪ್ರೇರೆಪಿಸುತ್ತವೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಮಹಿಳಾ ಬ್ಯಾಂಕ್ ಸ್ಥಾಪನೆ ಕುರಿತಾದ ಘೋಷಣೆ ಹೊಸತಾಗಿದ್ದು ಆಕರ್ಷಕವಾಗಿದೆ. ಆರ್ಥಿಕ ವಿಷಯಕ್ಕಿಂತ ರಾಜಕೀಯೇತರ ನಿರ್ಧಾರವಾಗಿ ಇದು ಗಮನಸೆಳೆಯುತ್ತದೆ. ಯುವಕರ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಅನುದಾನ ತೆಗೆದಿರಿಸಿರುವುದು ಅಭಿವೃದ್ಧಿಪರ ಚಿಂತನೆಗೆ ಸಾಕ್ಷಿಯಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ನೇರ ತೆರಿಗೆ ನೀತಿ ಸಂಹಿತೆ ರೂಪಿಸಿರುವುದು ಉತ್ತಮ ನಿರ್ಧಾರವಾಗಿದೆ.

ಬಜೆಟ್ ವೆಚ್ಚದ ಬಗ್ಗೆ ಹೇಳಬೆಕೆಂದರೆ ಗ್ರಾಮೀಣ ಮತ್ತು ನಗರದ ಬಡವರ ಕಲ್ಯಾಣಕ್ಕಾಗಿ ಈ ಬಾರಿ ಹೆಚ್ಚಿನ ಹಣ ಮೀಸಲು ಇಡಲಾಗಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆ ಮಾಡಲು ವಿಶಿಷ್ಟ ಗುರುತಿನ ಸಂಖ್ಯೆ (ಯುಡಿಐ) ಬಳಸಿಕೊಳ್ಳುವುದು ಒಳ್ಳೆಯ ನಡೆ. ಸರ್ಕಾರದ ಬಹುತೇಕ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪದೆ ಮಧ್ಯದಲ್ಲಿಯೇ ಸೋರಿಕೆಯಾಗುವುದು ಎಲ್ಲರಿಗೂ ಗೊತ್ತಿರುವ  ವಿಷಯ. ಕೇಂದ್ರದ ಹೊಸ ಯೋಜನೆಯಿಂದಾಗಿ ಹಣ ಅರ್ಹ ಬಡ ಫಲಾನುಭವಿಗಳ ಕೈಸೇರಲಿದೆ.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರವನ್ನು ಗುರುತಿಸಿ ಸಂಶೋಧನಾ ನಿಧಿ ಸ್ಥಾಪನೆ, ತ್ಯಾಜ್ಯದ ಸದ್ಬಳಕೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ತ್ಯಾಜ್ಯ ನಿರ್ವಹಣೆ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ಹಾಗೂ ಇತರ ಮಹಾನಗರಗಳು ಈ ಯೋಜನೆಯ ಲಾಭ  ಪಡೆಯಬಹುದಾಗಿದೆ.

ಇನ್ನು ಕುಬೇರರ ತೆರಿಗೆಯಲ್ಲಿ ಸಾಕಷ್ಟು ಬದಲಾವಣೆ  ಹಳೆಯ ಬಜೆಟ್‌ನ್ನು ನೆನಪಿಸುತ್ತದೆ. ಈ ಮಾರ್ಗದ ಮೂಲಕ ದೊಡ್ಡ ಮೊತ್ತದ ತೆರಿಗೆಯೇನೂ ಸಂಗ್ರಹವಾಗುವುದಿಲ್ಲ.  ರೂ 2 ರಿಂದ ರೂ5 ಲಕ್ಷ ಆದಾಯ ವರ್ಗದವರಿಗೆ   ರೂ 2000 ತೆರಿಗೆ ವಿನಾಯ್ತಿ ನೀಡಿರುವುದು ಅಂತಹ ದೊಡ್ಡ ಬದಲಾವಣೇನೂ ಅಲ್ಲ.

ಒಟ್ಟಾರೆ ಯುಪಿಎ ಎರಡನೇ ಅವಧಿಯ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಆಶ್ಚರ್ಯಕರ ಬದಲಾವಣೆಗಳೇನೂ ಕಾಣುತ್ತಿಲ್ಲ. ಬಹುತೇಕ ಯಥಾಸ್ಥಿತಿ  ಕಾಪಾಡಿಕೊಳ್ಳುವ ನಿಲುವಿಗೆ ಸರ್ಕಾರ ಅಂಟಿಕೊಂಡಿದೆ. ಇದಕ್ಕೂ ಕಾರಣವೂ ಇಲ್ಲದಿಲ್ಲ. ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ರಾಜಕೀಯ ಕಾರಣಗಳಿಗಿಂತ ಹೆಚ್ಚು ವಾಸ್ತವ ಬಜೆಟ್ ಮಂಡನೆಗೆ ಹೆಚ್ಚು ಒತ್ತು ನೀಡಿರುವುದು ಕಂಡುಬರುತ್ತದೆ.

ಭಾರಿ ಬೆಳವಣಿಗೆ  ಮತ್ತು ಬಂಡವಾಳ ಹೂಡಿಕೆಗೆ ಈ ಬಜೆಟ್ ಯಾವ ರೀತಿ ಕಾರಣವಾಗಬಹುದು ಹಾಗೂ ಬಂಡವಾಳದಾರರನ್ನು ಯಾವ ರೀತಿ ಆಕರ್ಷಿಸಬಹುದು ಎಂದು ಕಾಯ್ದು ನೋಡಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT