ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಪಠ್ಯ ಪುನರ್ ಮುದ್ರಣಕ್ಕೆ ಒತ್ತಾಯ

Last Updated 8 ಜುಲೈ 2012, 18:30 IST
ಅಕ್ಷರ ಗಾತ್ರ

 ಬೆಂಗಳೂರು:  `ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿನ ಬಿಎ ದ್ವಿತೀಯ ಸೆಮಿಸ್ಟರ್‌ನ ಇತಿಹಾಸ ಪಠ್ಯ ಪುಸ್ತಕದಲ್ಲಿರುವ `ರಾಜ ನೀತಿ ವಿವೇಚಕರು~ ಎಂಬ ಪಾಠದಲ್ಲಿ ಊಹೆಗೂ ನಿಲುಕದ ಅಪರಿಮಿತ ವಾಕ್ಯ ರಚನೆಯ ದೋಷಗಳು ಮತ್ತು ತಪ್ಪು ಮಾಹಿತಿಗಳಿದ್ದು, ಈ ಪುಸ್ತಕವನ್ನು ಕೂಡಲೇ ಹಿಂದಕ್ಕೆ ಪಡೆದು ಪುನರ್ ಮುದ್ರಿಸಬೇಕು~ ಎಂದು ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಆಗ್ರಹಿಸಿದರು.

`ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಕುರಿತು ತಪ್ಪು ಮಾಹಿತಿ ಪ್ರಕಟವಾಗಿದ್ದು, ಅವರ ಕಾಲ ಕಿ.ಶ. 1131-1167 ಎಂದು ನಮೂದಿಸಲಾಗಿದೆ. ಆದರೆ ಬಸವಣ್ಣನವರ ಜನ್ಮ ಮತ್ತು ಐಕ್ಯವಾದ ವರ್ಷ ಈವರೆಗೆ ಯಾವುದೆಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. 12ನೇ ಶತಮಾನದ ಮಧ್ಯಭಾಗದಲ್ಲಿ ಇದ್ದರು ಎಂಬುದು ವಾಸ್ತವಕ್ಕೆ ಹತ್ತಿರವಾದುದು. ಪಠ್ಯ ರಚಿಸುವವರು ಮೂಲ ಆಕರವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.

ಈ ವಿಚಾರವನ್ನು ವಿ.ವಿ.ಕುಲಪತಿ ಗಂಭೀರವಾಗಿ ಪರಿಗಣಿಸಬೇಕು~ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
`ಪಠ್ಯ ಪುಸ್ತಕದ ಪ್ರತಿ ಪುಟದಲ್ಲೂ ಅಚ್ಚಿನ ದೋಷ ಹಾಗೂ ವಾಕ್ಯ ರಚನೆಯ ತಪ್ಪುಗಳು ಹೇರಳವಾಗಿವೆ. ಇದರೊಂದಿಗೆ ಬಸವಣ್ಣನವರು ವೀರಶೈವ ಧರ್ಮವನ್ನು ಸ್ಥಾಪಿಸಿದರು ಎಂದು ತಪ್ಪು ಮಾಹಿತಿ ನೀಡಲಾಗಿದೆ.

ಬಸವಣ್ಣ ಅವರು ಜನಿಸುವ ಮೊದಲೇ ವೀರಶೈವ ಧರ್ಮವಿತ್ತು. ಆದರೆ, ಅದು ಅವರಿಂದ ಜನಪ್ರಿಯಗೊಂಡಿತ್ತು ಎಂಬುದು ಸತ್ಯವಾದ ವಿಚಾರ. `ಅಮಾನವೀಯತೆಯ ಉತ್ಪಾದನೆಯ ಫಲವನ್ನು ಪರಸ್ಪರ ಹಂಚಿಕೊಂಡು ಬಾಳುವ ಕಲೆ ದಾಸೋಹ ತತ್ವವಾಗಿದೆ~ ಎಂಬ ವಾಕ್ಯವಿದೆ. ಇದರಲ್ಲಿ ವ್ಯತಿರಿಕ್ತ ವಾಕ್ಯರಚನೆ ಮತ್ತು ತಪ್ಪು ಅರ್ಥಗಳನ್ನೇ ಕಾಣಬಹುದು~ ಎಂದು ಉದಾಹರಿಸಿದರು.

`ಇನ್ನು ಪ್ರಥಮ ಪಿಯುಸಿ ಇತಿಹಾಸ ಪಠ್ಯ ಪುಸ್ತಕದಲ್ಲೂ `ಬಸವಣ್ಣ~ ಪಾಠದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಪಿಯುಸಿ ಪಠ್ಯ ಸಮಿತಿಯು `ಬಸವಣ್ಣ~ ಎಂಬ ಹೆಸರಿನ ಪಾಠವನ್ನು ಅರ್ಹರಿಂದ ಪರಿಶೀಲಿಸಿ ಮರು ಮುದ್ರಿಸಬೇಕು. ಇಲ್ಲದಿದ್ದರೆ ಪಠ್ಯದಲ್ಲಿನ ತಪ್ಪು ಮಾಹಿತಿಯನ್ನೇ ನಿಜವೆಂದು ಭಾವಿಸಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಾರೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT