ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಮರುಕಳಿಸೀತೇ?

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್ ವಿಧಾನಸಭೆ ಚುನಾವಣೆಗೆ ಉಳಿದಿರುವುದು ಇನ್ನೊಂದು ವಾರ. ಮೈ ನಡುಗುವ ಚಳಿಯಲ್ಲೂ ಚುನಾವಣೆ ಬಿಸಿ ವಾತಾವರಣ ರಂಗೇರುವಂತೆ ಮಾಡಿದೆ. 117 ಕ್ಷೇತ್ರಗಳ ಪುಟ್ಟ ರಾಜ್ಯದ ಪ್ರಜ್ಞಾವಂತ ಮತದಾರರು ಇದುವರೆಗೆ ಯಾವುದೇ ಪಕ್ಷವನ್ನು ಸತತ ಎರಡನೇ ಬಾರಿಗೆ ಬೆಂಬಲಿಸಿಲ್ಲ. ಸರದಿಯಲ್ಲಿ ಒಂದೊಂದು ಪಕ್ಷಕ್ಕೆ ಒಂದೊಂದು ಸಲ ಅವಕಾಶ ನೀಡಿದ್ದಾರೆ.

ಕಾಂಗ್ರೆಸ್, ಪ್ರಾದೇಶಿಕ ಪಕ್ಷ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಪಂಜಾಬಿನಲ್ಲಿ ಲಯ ಕಂಡುಕೊಂಡಿವೆ. ಮತ್ತೊಂದು ರಾಷ್ಟ್ರೀಯ ಪಕ್ಷ ಬಿಜೆಪಿಗೆ ಅಕಾಲಿದಳದ `ಆಸರೆ~ ಬೇಕು. ಸಿಪಿಐ, ಸಿಪಿಎಂ ಉಳಿದೆಲ್ಲ ಪಕ್ಷಗಳು ನೆಪಕ್ಕೆ. ಸಿಖ್ಖರ ನಾಡಿನಲ್ಲೆಗ ಇರುವುದು      ಎಸ್‌ಎಎಡಿ- ಬಿಜೆಪಿ ಸಮ್ಮಿಶ್ರ ಸರ್ಕಾರ. 2007ರ ಚುನಾವಣೆಯಲ್ಲಿ ಇವೆರಡು ಪಕ್ಷಗಳ ಪಾಲು 71. ಇದರಲ್ಲಿ ಬಿಜೆಪಿ ಶಾಸಕರ ಸಂಖ್ಯೆ 19. ಕಾಂಗ್ರೆಸ್ ಖಾತೆಗೆ ಜಮಾ ಆಗಿದ್ದು 46. ಹಿಂದೆ 2002ರಲ್ಲಿ `ಕೈ~ ಆಡಳಿತವಿತ್ತು.

ಈಗ ಅಧಿಕಾರಕ್ಕಾಗಿ ಕಾಂಗ್ರೆಸ್-ಅಕಾಲಿಗಳ ನಡುವೆ ಪೈಪೋಟಿ ನಡೆದಿದೆ. 85 ವರ್ಷದ ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ಅಧಿಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. 65 ವರ್ಷಗಳ ಸುದೀರ್ಘ ರಾಜಕಾರಣ ಈ ಹಿರಿಯ ರಾಜಕಾರಣಿಯ ಅಧಿಕಾರ ದಾಹವನ್ನು ನೀಗಿಸಿದಂತಿಲ್ಲ. ಬಹುಶಃ ಬಾದಲ್ ಅವರಿಗೆ ಇದೇ ಕೊನೆ ಸ್ಪರ್ಧೆ ಇರಬಹುದೇನೋ. ಆಮೇಲೆ ರಾಜಕೀಯ ನಿವೃತ್ತಿ ಘೋಷಿಸಬಹುದೇನೋ?

ಅಕಾಲಿದಳದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರಕಾಶ್‌ಸಿಂಗ್ ನಿಧಾನವಾಗಿ ತೆರೆಮರೆಗೆ ಸರಿಯುವಂತೆ ಕಾಣುತ್ತಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಇವರ ಮಗ ಸುಖ್‌ಬೀರ್‌ಸಿಂಗ್ ಬಾದಲ್ ಅವರೇ ಮುಖ್ಯಮಂತ್ರಿ ಎನ್ನಲಾಗುತ್ತಿದೆ. ಈಗಲೇ ಹಿರಿಯ ಬಾದಲ್ ಬರೀ `ರಬ್ಬರ್ ಸ್ಟ್ಯಾಂಪ್~. ಸರ್ಕಾರದ ನಿಜವಾದ ಯಜಮಾನ ಉಪ ಮುಖ್ಯಮಂತ್ರಿ ಜೂ. ಬಾದಲ್!

ಸುಖ್‌ಬೀರ್ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಎಸ್‌ಎಡಿ ಬಿಂಬಿಸಿಲ್ಲ. ಹಾಗೇನಾದರೂ ಮಾಡಿದರೆ ಪಕ್ಷ ನೆಲ ಕಚ್ಚಬಹುದೆಂಬ ಆತಂಕ ಬಾದಲ್‌ಗೆ. 49ವರ್ಷದ ಸುಖ್‌ಬೀರ್ ಮಡಿಲಲ್ಲಿ ಕೆಂಡ ಕಟ್ಟಿಕೊಂಡಿದ್ದಾರೆ. ಅವರಿಗೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚು. ಸಿಟ್ಟು, ಸಿಡುಕಿನ ಸ್ವಭಾವ. ಮಿತ್ರಪಕ್ಷ ಬಿಜೆಪಿ, ಸ್ವಪಕ್ಷ ಅಕಾಲಿದಳದಲ್ಲೂ ಬಹಳಷ್ಟು ವಿರೋಧಿಗಳಿದ್ದಾರೆ. ಪ್ರಕಾಶ್‌ಸಿಂಗ್ ಅವರದ್ದು ತದ್ವಿರುದ್ಧ ನಡೆ. ಹೀಗಾಗಿ ಚುನಾವಣೆಗೆ ಅವರದೇ ನಾಯಕತ್ವ.

ಇದುವರೆಗಿನ ಸಂಪ್ರದಾಯ ಮುರಿದು ಸತತ ಎರಡನೇ ಬಾರಿಗೆ ಬಾದಲ್ ಅವರನ್ನು ಪಂಜಾಬಿನ ಜನ ಬೆಂಬಲಿಸುವರೆ? ಆ ಮೂಲಕ ಹೊಸ ಇತಿಹಾಸ ಬರೆಯುವರೆ? ಇಲ್ಲವೆ ಪರಂಪರೆಯಂತೆ ಕಾಂಗ್ರೆಸ್ `ಕೈ~ ಹಿಡಿಯುವರೆ? ಎಂಬುದು ಕೋಟಿ ರೂಪಾಯಿ ಪ್ರಶ್ನೆ. ಸದ್ಯ  ಯಾರು ಸರ್ಕಾರ ಮಾಡುತ್ತಾರೆಂದು ಜನರಿಗೂ ಗೊತ್ತಿಲ್ಲ. ಮತದಾರನ ಒಲವು ನಿಲುವು ಇನ್ನೂ `ಗುಪ್ತಗಾಮಿನಿ~.

ಕಾಂಗ್ರೆಸ್ ಪಟಿಯಾಲದ ರಾಜ ವಂಶಸ್ಥ ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತಿದೆ. ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಮರೀಂದರ್ ಅವರನ್ನು ಕಾಂಗ್ರೆಸ್ `ಮುಖ್ಯಮಂತ್ರಿ ಅಭ್ಯರ್ಥಿ~ ಎಂದು ಘೋಷಣೆ ಮಾಡದಿದ್ದರೂ ಪಕ್ಷ ಅಧಿಕಾರಕ್ಕೆ ಬಂದರೆ ಬಹುತೇಕ ಅವರೇ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿದೆ.

ಎಸ್‌ಎಡಿ `ಸಾಧನೆಯನ್ನೇ ನಂಬಿಕೊಂಡಿದೆ. ಹಿಂದಿನ ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಗಳಲ್ಲಿ ಎಷ್ಟು ಈಡೇರಿವೆ ಎಂದು ಪಟ್ಟಿ ಸಿದ್ಧ ಮಾಡಿದೆ. ಆದರೆ, ಸರ್ಕಾರದ್ದು `ಶೂನ್ಯ ಸಂಪಾದನೆ~ ಎಂದು ಕಾಂಗ್ರೆಸ್ ಕಾಲೆಳೆಯುತ್ತಿದೆ. ಆಡಳಿತ ವಿರೋಧಿ ಅಲೆ, ಕೆಲವು (ಬಿಜೆಪಿ) ಸಚಿವರ ಮೇಲಿನ ಭ್ರಷ್ಟಾಚಾರ ಆರೋಪ, ಚುನಾವಣೆ ವೇಳೆ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳದೆ ಇರುವುದನ್ನು `ಬ್ರಹ್ಮಾಸ್ತ್ರ~ ಮಾಡಿಕೊಂಡಿದೆ.

ಯಾರೇ ಅಧಿಕಾರಕ್ಕೆ ಬರಲು ಕನಿಷ್ಠ 59 ಶಾಸಕರು ಬೇಕು. ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ `ಮಾಳ್ವ~ದಲ್ಲಿ ಅಧಿಕ ಸ್ಥಾನ ಪಡೆದವರು ಸರ್ಕಾರ ಮಾಡುತ್ತಾರೆ. ಅಕಾಲಿಗಳು 2007ರಲ್ಲಿ ಮಾಳ್ವದಲ್ಲಿ ಕೇವಲ 28 ಸ್ಥಾನಗಳನ್ನು ಪಡೆದಿದ್ದರಿಂದ ಬಿಜೆಪಿ ಬೆಂಬಲ ಪಡೆದರು. ಈ ಭಾಗದ 65ರಲ್ಲಿ 37 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತು. ಮಾಳ್ವ, ಬಾದಲ್ ಕುಟುಂಬದ `ಹೋಂ ಟರ್ಫ್~. ಪಟಿಯಾಲ ರಾಜ ವಂಶಸ್ಥರ ಅಖಾಡವೂ ಹೌದು!

`ಕಿಂಗ್ ಮೇಕರ್~ ಮಾಳ್ವ ಭಾಗದಲ್ಲಿ `ದೇರಾ ಸಚ್ಚಾಸೌದಾ~ ಧಾರ್ಮಿಕ ಗುರುಗಳ ಮಾತಿಗೆ ಬೆಲೆ ಇದೆ. ಅವರು ಹೇಳಿದ್ದನ್ನು ಮತದಾರರು ಅದರಲ್ಲೂ ದಲಿತರು, ದುರ್ಬಲರು ಮತ್ತು ಹಿಂದುಳಿದ ವರ್ಗಗಳ ಸಮಾಜ ಕೇಳುತ್ತದೆ. ಅವರ ಆಣತಿಯಂತೆ ನಡೆಯುತ್ತದೆ. ಕಾಂಗ್ರೆಸ್‌ಗೆ ಅಧಿಕ ಸ್ಥಾನ ಈ ಗುರುಗಳ ಬೆಂಬಲದಿಂದಲೇ ಸಿಕ್ಕಿದೆ ಎಂಬುದು `ಕಾಂಗ್ರೆಸ್ ಪ್ರಚಾರ ಸಮಿತಿ~ ಉಪಾಧ್ಯಕ್ಷ ರಾಜ್‌ಪಾಲ್ ಸಿಂಗ್ ವಿಶ್ಲೇಷಣೆ. `ಈ ಸಲ ಬೆಂಬಲ ಯಾರಿಗೆ~ ಎಂಬ ರಹಸ್ಯವನ್ನು ದೇರಾ ಗುರುಗಳು ಬಿಟ್ಟುಕೊಟ್ಟಿಲ್ಲ. ಕಾಂಗ್ರೆಸ್, ಎಸ್‌ಎಡಿ ಗುರುಗಳೇನು ಮಾಡುತ್ತಾರೆಂದು ಕುತೂಹಲದಿಂದ ಕಾಯುತ್ತಿವೆ. ಮಜ್ಹ ಭಾಗದಲ್ಲಿ ಕಾಂಗ್ರೆಸ್ ಪಡೆದಿದ್ದು ಕೇವಲ ನಾಲ್ಕು ಸ್ಥಾನ. ಉಳಿದ 23 ಕ್ಷೇತ್ರಗಳು ಮೈತ್ರಿಕೂಟಕ್ಕೆ ಹೋಗಿವೆ. ದೋ ಅಬ್ ಪ್ರಾಂತ್ಯದ 25 ಕ್ಷೇತ್ರಗಳು ಮೈತ್ರಿಕೂಟದ್ದು 20. ಕಾಂಗ್ರೆಸ್ ಐದು. ಈ ಸಲ ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಕಾಲಿದಳ 23 ಕ್ಷೇತ್ರಗಳನ್ನು ಮಿತ್ರ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ಬಾದಲ್ ಕುಟುಂಬ ಕಲಹದಿಂದ ಹೊಸದಾಗಿ ಹುಟ್ಟಿಕೊಂಡಿರುವ `ಪಂಜಾಬ್ ಪೀಪಲ್ ಪಾರ್ಟಿ~  (ಪಿಪಿಪಿ) ಮತ್ತೊಂದು ಮಹತ್ವದ ಬೆಳವಣಿಗೆ. ಪ್ರಕಾಶ್‌ಸಿಂಗ್ ಬಾದಲ್ ಸೋದರ ಗುರುದಾಸ್ ಬಾದಲ್ ಅವರ ಪುತ್ರ ಮನ್‌ಪ್ರೀತ್‌ಸಿಂಗ್ ಹುಟ್ಟುಹಾಕಿರುವ  `ಪಿಪಿಪಿ~ ಅಭ್ಯರ್ಥಿಗಳು ಎಲ್ಲೆಡೆ ಕಣದಲ್ಲಿದ್ದಾರೆ. ಅತೃಪ್ತ ಅಕಾಲಿಗಳು. ಕೆಲವು ಬಂಡುಕೋರ ಕಾಂಗ್ರೆಸಿಗರಿಗೆ ಇದು ಮಣೆ ಹಾಕಿದೆ. ಈ ಪಕ್ಷದ ಅಭ್ಯರ್ಥಿಗಳು ಆರಿಸಿ ಬರದೇ ಇದ್ದರೂ ಉಭಯ ಪಕ್ಷಗಳ ಗೆಲುವಿಗೆ ಅಡ್ಡಗಾಲು ಹಾಕಬಹುದೇನೋ.

ಪುತ್ರ ವ್ಯಾಮೋಹದಿಂದ ಕುರುಡಾಗಿರುವ ಪ್ರಕಾಶ್‌ಸಿಂಗ್ ಬಾದಲ್ ಒಡಹುಟ್ಟಿದ ಸೋದರರು ಮತ್ತು ಅವರ ಮಕ್ಕಳನ್ನು ರಾಜಕೀಯದಲ್ಲಿ ಬೆಳೆಯಲು ಬಿಟ್ಟಿಲ್ಲ. ಈ ಪರಿಣಾಮವೇ ಹೊಸ ಪಕ್ಷ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಂಬಂಧ ಕಡಿದುಕೊಂಡಿರುವ ಮನ್‌ಪ್ರೀತ್‌ಸಿಂಗ್ ಪಿಪಿಪಿ ಕಟ್ಟಿದ್ದಾರೆ. ಇದು ಒಂದು ವರ್ಷದ ಕೂಸು. ಇನ್ನೊಂದು ಅಚ್ಚರಿ ಸಂಗತಿ ಎಂದರೆ ಇದುವರೆಗೆ ಪ್ರಕಾಶ್‌ಸಿಂಗ್ ಚುನಾವಣೆ ಉಸ್ತುವಾರಿ ಹೊರುತ್ತಿದ್ದ ಕಿರಿಯ ಸೋದರ ಗುರುದಾಸ್ ಬಾದಲ್ ಅವರೇ `ಲಂಬಿ~ಯಲ್ಲಿ ಅಣ್ಣನ ವಿರುದ್ಧ ಪಿಪಿಪಿ ಅಭ್ಯರ್ಥಿ.

ಕುಟುಂಬ ಕಲಹದಿಂದ ಅಕಾಲಿ ಹೋಳಾಗಿದೆ. ಅಮರೀಂದರ್ ಸರ್ವಾಧಿಕಾರಿ ಧೋರಣೆಯಿಂದ ಕಾಂಗ್ರೆಸ್‌ನಲ್ಲೂ ಅತೃಪ್ತಿ, ಅಸಮಾಧಾನ, ಭಿನ್ನಮತ- ಬಂಡಾಯ, ಗುಂಪುಗಾರಿಕೆ ತಲೆಯೆತ್ತಿದೆ. ಕಾಂಗ್ರೆಸ್ ಟಿಕೆಟ್ ಸಿಗದ ಅನೇಕರು ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಮಧ್ಯಸ್ಥಿಕೆಯಿಂದ ಕೆಲವೆಡೆ ಬಂಡಾಯ ಶಮನಗೊಂಡಿದೆ.

ಇಷ್ಟಾದರೂ ಕಾಂಗ್ರೆಸ್ ಆತಂಕ ಕಡಿಮೆ ಆಗಿಲ್ಲ. ಟಿಕೆಟ್ ಸಿಗದ ಕೆಲವು ಹಾಲಿ ಶಾಸಕರೂ ಸೇರಿದಂತೆ ಕನಿಷ್ಠ 20 ಕಡೆ ಬಂಡಾಯದ ಸಮಸ್ಯೆ ಎದುರಾಗಿದೆ. ಬಂಡುಕೋರರು ಇರದಿದ್ದರೆ ಕಾಂಗ್ರೆಸ್‌ಗೆ ದಾರಿ ಸುಲಭವಿತ್ತು. ಈಗಿನ ಸ್ಥಿತಿಯಲ್ಲಿ ಏನೂ ಹೇಳುವುದು ಕಷ್ಟ ಎಂಬುದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರ ಅಭಿಪ್ರಾಯ.

ಅಕಾಲಿದಳವೂ ಬಂಡಾಯದ ಬಿಸಿಯಿಂದ ತತ್ತರಿಸಿದೆ. ಡಜನ್‌ಗೂ ಹೆಚ್ಚು ಕ್ಷೇತ್ರಗಳಲ್ಲಿ ಟಿಕೆಟ್ ದೊರೆಯದವರು ಅಧಿಕೃತ ಅಭ್ಯರ್ಥಿಗಳಿಗೆ `ಸೆಡ್ಡು~ ಹೊಡೆದಿದ್ದಾರೆ. ಪಕ್ಷಕ್ಕೆ ತಿರುಗಿಬಿದ್ದವರನ್ನು ಎಸ್‌ಎಡಿ ಹೊರ ಹಾಕಿದ್ದರೂ ಹಾನಿ ಖಚಿತ. ಬಿಜೆಪಿಯಲ್ಲಿ ಅಪಸ್ವರಗಳಿದ್ದರೂ ಏನೂ ಬಹಿರಂಗವಾಗಿ ಕಾಣುತ್ತಿಲ್ಲ. ಮಿತ್ರ ಪಕ್ಷ ಬಿಜೆಪಿ 23ರ ಪೈಕಿ ಎಷ್ಟರಲ್ಲಿ ಗೆಲ್ಲುತ್ತದೆ ಎಂಬುದರ ಮೇಲೆ ಅಕಾಲಿ ಭವಿಷ್ಯ ನಿಂತಿದೆ. ಅಕಸ್ಮಾತ್ ಪಿಪಿಪಿ ನಾಲ್ಕೈದು ಕ್ಷೇತ್ರಗಳಲ್ಲಿ ಗೆದ್ದರೆ ಅದರದೇ ಅಂತಿಮ ಆಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT