ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಸಂಶೋಧನೆಯ ಮೇರು ಶಿಖರ

ಅಕ್ಷರ ಗಾತ್ರ

ನಮ್ಮ ದೇಶ ಕಂಡಿರುವ ಶ್ರೇಷ್ಠ ಇತಿಹಾಸ ಸಂಶೋಧಕರಲ್ಲಿ ಪ್ರಮುಖರು ಡಾ.ಎಸ್. ಶ್ರೀಕಂಠಶಾಸ್ತ್ರೀ, ಯಾವುದೇ ಒಂದು ಚಿಂತನ ಪ್ರಸ್ಥಾನಕ್ಕೆ ಜೋತು ಬೀಳದೆ, ವಸ್ತುನಿಷ್ಠವಾಗಿ ಲಭ್ಯ ಸಾಕ್ಷ್ಯಗಳನ್ನು ವಿಶ್ಲೇಷಿಸಿ, ಇತಿಹಾಸದ ವಿವರಗಳನ್ನು ದಾಖಲಿಸಿದ ಆದರ್ಶ ಇತಿಹಾಸತಜ್ಞ ಅವರು.

ಬೆಂಗಳೂರಿನ ನೆಲಮಂಗಲ ಸಮೀಪದ ಸೊಂಡೆಕೊಪ್ಪ ಶ್ರೀಕಂಠಶಾಸ್ತ್ರೀಗಳ ಪೂರ್ವಜರು ನೆಲಸಿದ್ದ ಗ್ರಾಮ. ಶಾಸ್ತ್ರಿಗಳ 1904ರ ನವೆಂಬರ್ ಐದರಂದು ಜನಿಸಿದರು. ಬಾಲ್ಯದಲ್ಲಿಯೇ ಅವರು ಸಿಡುಬು ರೋಗಕ್ಕೆ ತುತ್ತಾಗಿ, ಎಡಗಣ್ಣು ಮತ್ತು ಎಡಗಿವಿಯ ಶಕ್ತಿಯನ್ನು ಕಳೆದುಕೊಂಡರು.
ಆದರೆ ಇದರಿಂದ ಶಾಸ್ತ್ರೀಗಳು ಕುಗ್ಗಲಿಲ್ಲ; ಈ ಬಲಹೀನತೆ ಪ್ರತಿಭೆಗೆ ಅಡ್ಡಿಯಾಗಲು ಅವರು ಆಸ್ಪದ ಕೊಡಲಿಲ್ಲ. ಕೋಲಾರದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದರು.

ಎಂ. ಎ. ಮಾಡುತ್ತಿದ್ದಾಗಲೇ ಲಂಡನ್‌ನ ಪ್ರತಿಷ್ಠಿತ ಜೆ.ಆರ್.ಎ.ಎಸ್. ಪತ್ರಿಕೆ ಸೇರಿದಂತೆ ಇಂಡಿಯನ್ ಆಂಟಿಕ್ವರಿ, ಮಾಡರ್ನ್ ರೆವ್ಯೂ ಮುಂತಾದ ಸಂಶೋಧನಾ ಪತ್ರಿಕೆಗಳಲ್ಲಿ ವಿದ್ವತ್ಪೂರ್ಣ ಲೇಖನಗಳನ್ನು ಪ್ರಕಟಿಸಿ ವಿದ್ವಾಂಸರ ಗಮನವನ್ನು ಸೆಳೆದಿದ್ದರು. ಕರ್ನಾಟಕ ಇತಿಹಾಸವನ್ನು ಕುರಿತು ಸಂಶೋಧನೆ ಮಾಡಲು ದೊರೆತ ವಿದ್ಯಾರ್ಥಿ ವೇತನವನ್ನು ಉಪಯೋಗಿಸಿಕೊಂಡು ‘ಸೋರ್ಸಸ್ ಆಫ್ ಕರ್ನಾಟಕ ಹಿಸ್ಟರಿ’ ಎಂಬ ಸಂಶೋಧನಾ ಗ್ರಂಥವನ್ನು ಇಂಗ್ಲಿಷಿನಲ್ಲಿ ಸಿದ್ಧಪಡಿಸಿದರು. ಇದೇ ಅವರ ಮೊದಲ ಸಂಶೋಧನಾ ಗ್ರಂಥ.

1935ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿ, ಮುಂದೆ ವಿಭಾಗದ ಮುಖ್ಯಸ್ಥರಾಗಿ ಮೂವತ್ತೆರಡು ವರ್ಷಗಳ ಸಾರ್ಥಕ ಸೇವೆಯಿಂದ ನಿವೃತ್ತರಾದರು. ಆದರ್ಶ ಗುರುಗಳಾಗಿ ಹಲವರು ಸಮರ್ಥ ಶಿಷ್ಯರನ್ನು ತಯಾರು ಮಾಡಿದರು.
ಶ್ರೀಕಂಠಶಾಸ್ತ್ರೀಗಳ ವಿದ್ವತ್ತು, ಪರಿಶ್ರಮಗಳು ಕೇವಲ ಇತಿಹಾಸಕ್ಕಷ್ಟೆ ಸೀಮಿತವಾಗಿರಲಿಲ್ಲ. ಸಾಹಿತ್ಯ, ಅಧ್ಯಾತ್ಮ, ಸಂಸ್ಕೃತಿ, ಚಿತ್ರಕಲೆ, ಶಾಸನಶಾಸ್ತ್ರ, ಪುರಾತತ್ವ, ಮೂರ್ತಿಶಿಲ್ಪ, ಅಲಂಕಾರಶಾಸ್ತ್ರ, ರಾಜ್ಯಶಾಸ್ತ್ರ- ಹೀಗೆ ಹತ್ತು ಹಲವು ವಿಷಯಗಳಲ್ಲಿ ಅವರದ್ದು ತಲಸ್ಪರ್ಶಿಯಾದ ಪಾಂಡಿತ್ಯ.

ಕನ್ನಡ, ತೆಲುಗು, ಸಂಸ್ಕೃತ, ಇಂಗ್ಲಿಷ್‌ ಭಾಷೆಗಳಲ್ಲಿ ಮಾತ್ರವಲ್ಲದೆ, ಜರ್ಮನ್, ಫ್ರೆಂಚ್ ಮುಂತಾದ ವಿದೇಶಿ ಭಾಷೆಗಳಲ್ಲೂ ಪ್ರಭುತ್ವ ಸಂಪಾದಿಸಿದ್ದರು. ಶಾಸ್ತ್ರೀಗಳು 1949ರಲ್ಲಿ ಡಿ. ಲಿಟ್. ಪದವಿಗಾಗಿ ಅದುವರೆಗೂ ಅವರು ಪ್ರಕಟಿಸಿದ್ದ ಸಂಶೋಧನಾ ಪ್ರಬಂಧಗಳನ್ನು ವಿಶ್ವವಿದ್ವಾಲಯಕ್ಕೆ ಸಲ್ಲಿಸಿದರು. ಪರೀಕ್ಷಕರಾಗಿದ್ದ ರಾಧಾ ಕುಮುದ ಮುಖರ್ಜಿ ‘ಇಷ್ಟು ದೊಡ್ಡ ಪ್ರಮಾಣದ ಸಂಶೋಧನಕಾರ್ಯಕ್ಕೆ ಡಿ. ಲಿಟ್.ನಂಥ ಪದವಿ ಅತ್ಯಲ್ಪ ಮಾತ್ರದ್ದಾಗುತ್ತದೆ’ - ಎಂದು ಟಿಪ್ಪಣಿ ಬರೆದಿದ್ದರಂತೆ.

ಶಾಸ್ತ್ರೀಗಳು ಹತ್ತಾರು ಸಂಶೋಧನಾ ಗ್ರಂಥಗಳನ್ನೂ ನೂರಾರು ಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ. ಈ ಒಂದೊಂದು ಬರಹಗಳಲ್ಲಿಯೂ ಅವರ ವಿದ್ವತ್ತು, ಅಧ್ಯಯನ, ಸ್ವತಂತ್ರ ಚಿಂತನೆ, ಅಪಾರ ಪರಿಶ್ರಮಗಳನ್ನು ಕಾಣಬಹುದು. ಅವರ ‘ಭಾರತೀಯ ಸಂಸ್ಕೃತಿ’ ಜನಪ್ರಿಯ ಶೈಲಿಯಲ್ಲಿ ರಚಿತವಾಗಿದ್ದರೂ ಅದು ಇಂದಿಗೂ ಭಾರತೀಯ ಸಂಸ್ಕೃತಿಯನ್ನು ಕುರಿತಂತೆ ಪ್ರಮುಖ ಆಕರಗ್ರಂಥವಾಗಿದೆ.

‘ರೋಮನ್ ಚಕ್ರಾಧಿಪತ್ಯದ ಇತಿಹಾಸ’, ‘ಪ್ರಪಂಚ ಚರಿತ್ರೆಯ ರೂಪರೇಖೆಗಳು’, ‘ಪುರಾತತ್ವ ಶೋಧನೆ’, ‘ಹೊಯ್ಸಳ ವಾಸ್ತುಶಿಲ್ಪ’ - ಅವರ ಪ್ರಮುಖ ಕನ್ನಡ ಕೃತಿಗಳು. ‘ಪ್ರೊಟೊ ಇಂಡಿಕ್ ರಿಲಿಜಿಯನ್’, ‘ಐಕನಾಗ್ರಫಿ ಆಫ್ ವಿದ್ಯಾರ್ಣವತಂತ್ರ’, ‘ಅರ್ಲಿ ಗಂಗಾಸ್ ಆಫ್ ತಲಕಾಡ್’, ‘ಎವಲ್ಯೂಷನ್ ಆಫ್ ಗಂಡಬೇರುಂಢ’- ಇವು ಪ್ರಮುಖ ಇಂಗ್ಲಿಷ್ ಕೃತಿಗಳು.

ಅವರ ಮುನ್ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಜಗತ್ತಿನ ವಿವಿಧ ವಿದ್ವತ್‌ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಈ ಬರಹಗಳು ಆರ್. ಸಿ. ಮಜುಂದಾರ್, ಪಿ. ಕೆ. ಗೋಡೆ, ಡಿ. ಸಿ. ಸರ್ಕಾರ್, ಆ. ನೇ. ಉಪಾಧ್ಯೇ ಮುಂತಾದ ಖ್ಯಾತನಾಮರ ಮೆಚ್ಚುಗೆಯನ್ನೂ ಪಡೆದಿವೆ.
ಜನಸಾಮಾನ್ಯರಿಗೂ ಇತಿಹಾಸ ಸಂಶೋಧನೆಯ ಫಲ ದಕ್ಕಬೇಕೆಂಬ ತುಡಿತದಿಂದ ಶಾಸ್ತ್ರಿಗಳು ಹಲವು ಲೇಖನಗಳನ್ನು ದಿನಪತ್ರಿಕೆಗಳಿಗೂ ಬರೆದರು. ಹೀಗೆ ಬರೆದ ಅತಿ ಹೆಚ್ಚು ಲೇಖನಗಳು ‘ಪ್ರಜಾವಾಣಿ’ಯಲ್ಲಿಯೇ ಪ್ರಕಟವಾಗಿವೆ.

ಶಾಸ್ತ್ರೀಗಳು ಕನ್ನಡದಲ್ಲಿ ಬರೆದಿರುವ 112 ಸಂಶೋಧನಾ ಲೇಖನಗಳನ್ನು ಸೇರಿಸಿ ಒಂದು ಸಂಪುಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಡಾ.ಬಾ.ರಾ. ಗೋಪಾಲ್ ಮತ್ತು ಡಾ.ಟಿ.ವಿ. ವೆಂಕಟಾಚಲಶಾಸ್ತ್ರೀ ಸಂಪಾದಕತ್ವದಲ್ಲಿ ಈಗಾಗಲೇ (1975) ಪ್ರಕಟಿಸಿದೆ. ಇದೀಗ ಇಂಗ್ಲಿಷ್ ಪ್ರಬಂಧಗಳು ಮಿಥಿಕ್ ಸೊಸೈಟಿಯಿಂದ ಎರಡು ಸಂಪುಟಗಳಲ್ಲಿ ಪ್ರಕಟವಾಗುತ್ತಿದೆ. ಶಾಸ್ತ್ರಿಗಳ ಶಿಷ್ಯರೂ ಅಭಿಮಾನಿಗಳೂ ಅವರಿಗೆ ‘ಶ್ರೀಕಂಠಿಕಾ’ ಎಂಬ ಅಭಿನಂದನಗ್ರಂಥವನ್ನು 1973ರಲ್ಲಿ ಅರ್ಪಿಸಿದರು. ಶ್ರೀಕಂಠಶಾಸ್ತ್ರಿಗಳು 1974ರ ಮೇ 10ರಂದು ಬೆಂಗಳೂರಿನಲ್ಲಿ ತೀರಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT