ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಸೇರಿದ ಸುರತ್ಕಲ್ ಮಂಗಳಪೇಟೆ ಶಾಲೆ

Last Updated 16 ಅಕ್ಟೋಬರ್ 2012, 7:05 IST
ಅಕ್ಷರ ಗಾತ್ರ

ಸುರತ್ಕಲ್: ಮಂಗಳಪೇಟೆ ಎಂದು ಹೇಳಿದ ಕೂಡಲೇ ಕುತ್ತೆತ್ತೂರು, ಕಾಟಿಪಳ್ಳ ಪರಿಸರದ ಜನತೆಗೆ ನೆನಪಾಗುವುದು ಇಲ್ಲಿನ ದ.ಕ.ಜಿ.ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ. ಹಲವು ವರ್ಷಗಳ ಕಾಲ ಸುಸಂಸ್ಕೃತ ವಿದ್ಯಾರ್ಥಿಗಳನ್ನು ತಯಾರಿಸಿ ಸಮಾಜಕ್ಕೆ ನೀಡಿದ ಕೀರ್ತಿ ಈ ಶಾಲೆಗಿದೆ. ಇಂಥ ಹಿನ್ನೆಲೆಯುಳ್ಳ ಶಾಲೆಯ ಹಳೆಯ ಕಟ್ಟಡವನ್ನು ಭಾನುವಾರ ಕೆಡವಲಾಯಿತು.

ಪ್ರತಿ ವರ್ಷ ಶಾರದ ಮಾತೆಯ ಆರಾಧನೆಯೂ ಇಲ್ಲಿ ನಡೆಯುತ್ತಿತ್ತು. ಈಗ ಶಾರದಾ ಮಾತೆಗೆ ಹೊಸ ಆಲಯ ಪಕ್ಕದಲ್ಲೇ ಸಾರ್ವಜನಿಕರಿಂದ ನಿರ್ಮಾಣಗೊಂಡಿದೆ. ಶಾಲೆ ಹೊಸ ಕಟ್ಟಡ ಹೊಂದಿದೆ. ಶಾಲೆಯ ಹಳೆಯ ಜಾಗವನ್ನು ಖಾಸಗಿಯವರಿಗೆ ಮಾರಿದ ಹಿನ್ನೆಲೆಯಲ್ಲಿ ಶಾಲಾ ಕಟ್ಟಡ ಕೆಡವಿ ಹಾಕಲಾಯಿತು.
ಈ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ವಿವಿಧ ಹುದ್ದೆಯನ್ನು ಅಲಂಕರಿಸಿದ್ದಾರೆ.

ಎಂಜಿನಿಯರ್‌ಗಳಾಗಿ, ಅಧ್ಯಾಪಕರಾಗಿ, ವೈದ್ಯರಾಗಿ, ಬ್ಯಾಂಕ್ ಉದ್ಯೋಗಿಗಳಾಗಿ, ಗುತ್ತಿಗೆದಾರರಾಗಿ, ಸರ್ಕಾರಿ ಮಟ್ಟದ ಅಧಿಕಾರಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಪಾರಂಪರಿಕ ವಾಸ್ತು ಶೈಲಿ ಹೊಂದಿದ್ದ ಈ ಶಾಲೆಯ ತರಗತಿಗಳನ್ನು ಬೇರ್ಪಡಿಸಲು ಗೋಡೆಯನ್ನು ಅಡ್ಡವಾಗಿ ನಿರ್ಮಿಸದೇ ಇದ್ದುದರಿಂದ ಸಭಾಂಗಣವಾಗಿ ವಿವಿಧ ಕಾರ್ಯಕ್ರಮಕ್ಕೂ ಉಪಯೋಗವಾಗುತ್ತಿತ್ತು.

ಆರಂಭದಲ್ಲಿ ಐದನೇ ತರಗತಿಯವರೆಗೆ ಇದ್ದ ಈ ಶಾಲೆ ಕ್ರಮೇಣ ಹಂತಹಂತವಾಗಿ ಏಳನೇ ತರಗತಿಯವರೆಗೆ ವಿಸ್ತರಣೆಗೊಂಡಿತು. ಹೊಸ ಕಟ್ಟಡಕ್ಕೆ ಸ್ಥಳಾಂತರವಾದ ಬಳಿಕ ಖಾಲಿ ಬಿದ್ದಿದ್ದ ಕಟ್ಟಡ ಎಂಆರ್‌ಪಿಎಲ್ ಗುತ್ತಿಗೆ ಕಾರ್ಮಿಕರಿಗೆ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿತ್ತು. ಕೆಲ ದಿನಗಳವರೆಗೆ ಸಂಗೀತ ಶಿಕ್ಷಣವನ್ನೂ ಶಾಲೆಯ ಕೊಠಡಿಯಲ್ಲಿ ನೀಡಲಾಗುತ್ತಿತ್ತು.

ಅಧ್ಯಾಪಕನ ಸ್ಮರಣೆ: ಈ ಶಾಲೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ ಅಧ್ಯಾಪಕರಲ್ಲಿ ಒಬ್ಬರು ಬಾಲಕೃಷ್ಣ ರಾವ್. ಇತ್ತೀಚೆಗಷ್ಟೇ ಅವರು ನಿಧನರಾಗಿದ್ದರು. ಈಗ ಶಾಲಾ ಕಟ್ಟಡವೂ ನೆಲಸಮವಾಗಿದೆ. ಶಾರದಾ ಮಾತೆಯ ಆರಾಧನೆಗೂ ಕಾರಣಕರ್ತರಾಗಿದ್ದ ಅವರು ಹಲವು ಶಿಷ್ಯಂದಿರ ಭವಿಷ್ಯ ರೂಪಿಸಿದ ರೂವಾರಿಯೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT