ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸಕ್ಕೆ ಜೀವ ನೀಡಿದ ಗೊಂಬೆಗಳು!

Last Updated 28 ಜನವರಿ 2012, 12:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೈಯಲ್ಲಿ ತಂಬೂರಿ ಹಿಡಿದಿದ್ದ ಕನಕದಾಸರು `ಬನ್ನಿರಿ ವಿಜಯನಗರ ಸಾಮ್ರಾಜ್ಯಕ್ಕೆ, ಹಿಂದೂ ಸಂಸ್ಕೃತಿಯ ವೈಭವದ ತಾಣಕ್ಕೆ~ ಎಂಬ ಆಲಾಪ ತೆಗೆದಿದ್ದರು. ಗೊಂಬೆಗಳ ರೂಪತಾಳಿದ್ದ ಇತಿಹಾಸ ಪುರುಷರು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು. ಇತಿಹಾಸದ ನೆನಪುಗಳ ಮೆರವಣಿಗೆ ಹೀಗೆ ತೆರೆಯ ಮೇಲೆ ಸಾಗಿದ್ದರೆ, ಕುಳಿತ ಪ್ರೇಕ್ಷಕರು ಕಣ್ಣು ಪಿಳಿಕಿಸದಂತೆ ಆ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದರು.

ಆರ್‌ಎಸ್‌ಎಸ್ ಶಿಬಿರದ ಅಂಗವಾಗಿ ಬೆಂಗಳೂರಿನ `ಧಾತು~ ಸಂಸ್ಥೆ, `ವಿಜಯನಗರ ವೈಭವ~ ಎಂಬ ಗೊಂಬೆಯಾಟ ಏರ್ಪಡಿಸಿದ್ದು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಅಪಾರ ಸಂಖ್ಯೆಯ ಸಾಹಿತ್ಯಾಸಕ್ತರನ್ನು ಸೆಳೆದಿದೆ. ತೆರೆ ಮೇಲೆ ಅಭಿನಯಿಸುವ ಮೂಲಕ 70 ಗೊಂಬೆಗಳು ಇತಿಹಾಸವನ್ನು ವಾಸ್ತವಕ್ಕೆ ತಂದಿಡುತ್ತವೆ.

ಈ ಗೊಂಬೆಗಳ ಕಥೆ ರಾಮಾಯಣದಿಂದ ಆರಂಭವಾಗುತ್ತದೆ. ಸೀತೆಯನ್ನು ಕಳೆದುಕೊಂಡ ರಾಮ-ಲಕ್ಷ್ಮಣರು ಅಲೆಯುತ್ತಾ ಅಂಜನಾದ್ರಿ ಪರ್ವತದತ್ತ ಬಂದಿದ್ದು, ಹನುಮನನ್ನು ಸಂಧಿಸಿದ್ದು, ಸುಗ್ರೀವನ ಜತೆ ಒಪ್ಪಂದ ಮಾಡಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕಣ್ಣಮುಂದೆ ಹಾಯ್ದು ಹೋಗುತ್ತದೆ. ಸುಗ್ರೀವ ತನ್ನ ವಶದಲ್ಲಿದ್ದ ಸೀತಾ ಆಭರಣಗಳ ಗಂಟನ್ನು ರಾಮನಿಗೆ ಹಸ್ತಾಂತರಿಸುವ ದೃಶ್ಯವನ್ನು ನೋಡಿಯೇ ಅನುಭವಿಸಬೇಕು.

ನೃತ್ಯಗಾರ, ನೃತ್ಯಗಾರ್ತಿ, ಋಷಿ-ಮುನಿ, ರಾಜ-ರಾಣಿ, ಪೈಲ್ವಾನ, ಸಂಗೀತಗಾರ ಗೊಂಬೆಗಳು ಇಲ್ಲಿವೆ. ಕಟ್ಟಿಗೆಯಲ್ಲಿ ಸಿದ್ಧಪಡಿಸಲಾದ ಈ ಗೊಂಬೆಗಳು ಸನ್ನಿವೇಶಕ್ಕೆ ತಕ್ಕಂತೆ ಅಭಿನಯಿಸುವ ಮೂಲಕ ಇತಿಹಾಸಕ್ಕೆ ಜೀವ ತುಂಬುತ್ತವೆ.

ವಿಜಯನಗರ ಸಾಮ್ರಾಜ್ಯದ ಇತಿಹಾಸ ಜಗತ್ತಿನಲ್ಲೇ ಹೆಸರುವಾಸಿಯಾಗಿದೆ. ಕಲೆ, ಸಂಸ್ಕೃತಿ ಸೇರಿದಂತೆ ದೇಶಕ್ಕೆ ಈ ರಾಜರು ನೀಡಿದ ಕಾಣಿಕೆ ದೊಡ್ಡದು ಎಂಬುದನ್ನು ಕಥೆ ಸಾರುತ್ತದೆ.
ಕೃಷ್ಣದೇವರಾಯನ ಕಾಲದ ದಾಸವರೇಣ್ಯರಾದ ಕನಕದಾಸರು `ವಿಜಯನಗರವನ್ನು ನೋಡಲು ಬನ್ನಿ~ ಎಂಬ ಆಹ್ವಾನ ನೀಡುತ್ತಾ ಹೋಗುವ ಮೂಲಕ ಕಥೆ ಆರಂಭವಾಗುತ್ತದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮಾಧವಾಚಾರ್ಯರು ತಮ್ಮ ಶಿಷ್ಯರಾದ ಹರಿಹರ ಮತ್ತು ಬುಕ್ಕರಿಗೆ ಮಾರ್ಗದರ್ಶನ ಮಾಡುವ ಸನ್ನಿವೇಶ ಅತ್ಯಂತ ಮನೋಜ್ಞವಾಗಿ ಮೂಡಿಬಂದಿದೆ. ಕೃಷ್ಣದೇವರಾಯನ ಪರಿಚಯ ಮುಂದಿನ ಭಾಗದಲ್ಲಿದ್ದರೆ,
 
ಚಿನ್ನದೇವಿ ನಾಟ್ಯ ವೈಭವವಂತೂ ಅಮೋಘವಾಗಿದೆ.  ಅಷ್ಟ ದಿಗ್ಗಜರ ಮುಂದೆ ನಡೆಯುವ ಸಭಾ ಕಲಾಪ ಖುಷಿ ಕೊಡುತ್ತದೆ.
ಆಮೇಲೆ ಕನಕ-ಪುರಂದರರ ಸಮಾಗಮ ಆಗುತ್ತದೆ. ಪುರಂದರ ದಾಸರು ಪಿಲ್ಲಾರಿ ಗೀತೆ ಬರೆದರೆ, ಕನಕದಾಸರು ಮೋಹನತರಂಗಿಣಿ ಹಾಡುತ್ತಾರೆ. ಮುಂದಿನ ಸನ್ನಿವೇಶದಲ್ಲಿ ಬರುವ ಕೋಲಾಟ ಕಚಗುಳಿ ಇಟ್ಟರೆ, ಮಹಾನವಮಿ ದಿಬ್ಬದಲ್ಲಿ ನಡೆಯುವ ಕುಸ್ತಿ ಸ್ಪರ್ಧೆ ರೋಮಾಂಚನ ಉಂಟುಮಾಡುತ್ತದೆ. ಆಟದ ಕೊನೆಗೆ ಪ್ರೇಕ್ಷಕರಿಗೆ ಹಂಪಿ ಬಜಾರದ ದರ್ಶನವಾಗುತ್ತದೆ. ಬಂಗಾರವನ್ನು ಸೇರಿನಲ್ಲಿ ಅಳೆದ ಬಜಾರ ನೋಡುಗರ ಅಭಿಮಾನ ಉಕ್ಕಿ ಹರಿಯುವಂತೆ ಮಾಡುತ್ತದೆ.

`ಐತಿಹಾಸಿಕ ಕಥೆಗಳೇ ನಮ್ಮ ಈ ಗೊಂಬೆಯಾಟಕ್ಕೆ ಪ್ರೇರಣೆ. ಗೊಂಬೆಯಾಟದ ಮೂಲಕ ವಿದ್ಯಾರ್ಥಿಗಳಿಗೆ ಇತಿಹಾಸದ ಬೆಳಕಿಂಡಿಯನ್ನು ತೆರೆದಿಡುವುದು ನಮ್ಮ ತಂಡದ ಉದ್ದೇಶ~ ಎಂದು `ಧಾತು~ ಸಂಸ್ಥೆಯ ಅನುಪಮಾ ಹೊಸ್ಕೇರಿ ಹೇಳುತ್ತಾರೆ. `ಈ ಗೊಂಬೆಯಾಟವನ್ನು ನೋಡಿದವರು ವಿಜಯನಗರ ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನಮ್ಮ ಶ್ರಮ ಸಾರ್ಥಕ. ಜಗತ್ತಿನ ಅತ್ಯುತ್ಕೃಷ್ಟ ಸಾಮ್ರಾಜ್ಯ ಮತ್ತು ಅಂತಹ ಸಾಮ್ರಾಜ್ಯವನ್ನು ಸ್ಥಾಪಿಸಿದ ದೊರೆಗಳಿಗೆ ನಾವು ನೀಡುವ ಗೌರವ ಇದು~ ಎನ್ನುತ್ತಾರೆ ಅವರು.
ಪ್ರತಿನಿತ್ಯ ಮೂರು ಪ್ರದರ್ಶನಗಳನ್ನು ತೋರಿಸಲಾಗುತ್ತಿದ್ದು, ಕುಣಿದು, ದಣಿದರೂ ಆ ಗೊಂಬೆಗಳು ಎಂದಿನ ನಗುಮೊಗದಲ್ಲೇ ಮತ್ತೊಂದು ಆಟಕ್ಕೆ ಸಜ್ಜಾಗುತ್ತವೆ. ಸೂತ್ರದಾರರ ಕೈಗಳು ಮಾತ್ರ ಗೊಂಬೆಗಳನ್ನು ಕುಣಿಸಿ, ಕುಣಿಸಿ ಸುಸ್ತು ಹೊಡೆಯುತ್ತವೆ. ಮಕ್ಕಳಿಗೆ ಈ ಗೊಂಬೆಗಳ ಆಟ ಕಚಗುಳಿ ಇಟ್ಟರೆ, ಹಿರಿಯರನ್ನು ಇತಿಹಾಸದತ್ತ ಹೊರಳಿ ನೋಡುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT