ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಇತಿಹಾಸದ ಆಳದಲ್ಲಿ ಸಮಸ್ಯೆಗಳಿಗೆ ಪರಿಹಾರ'

Last Updated 8 ಜುಲೈ 2013, 5:05 IST
ಅಕ್ಷರ ಗಾತ್ರ

ಧಾರವಾಡ: `ಪ್ರಸ್ತುತ ಸಮಸ್ಯೆಗಳ ಪರಿಹಾರಕ್ಕೆನಾವಿಂದು ಪಶ್ಚಿಮ ರಾಷ್ಟ್ರಗಳತ್ತ ನೋಡುತ್ತಿದ್ದೇವೆ. ಆದರೆ, ನಮ್ಮ ಇತಿಹಾಸದ ಆಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾವಿದೆ. ವಿದ್ಯಾರಣ್ಯರಂಥ ಮಹಾತ್ಮರು ಸಮೃದ್ಧ ಸಾಮ್ರಾಜ್ಯ ಕಟ್ಟಿ, ಸರ್ವರಿಗೂ ಸಮಬಾಳು ನೀಡಿದ ಉದಾಹರಣೆಯಿದೆ. ಅವರು ಕೊಟ್ಟ ಜ್ಞಾನ, ಆಡಳಿತದ ರೀತಿಗಳನ್ನು ಅಲ್ಪ ಪ್ರಮಾಣದಲ್ಲಿ ಅನುಸರಿಸಿದರೂ ಸಾಕು ದೇಶವನ್ನು ಸಮೃದ್ಧ ರಾಷ್ಟ್ರವಾಗಿ ರೂಪಿಸಲು ಸಾಧ್ಯವಿದೆ' ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಹೇಳಿದರು.

ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ ಮತ್ತು ಸೌಂದರ್ಯ ಭಕ್ತಿ ಸಂಸ್ಕೃತಿ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ನಗರದಲ್ಲಿ ಆಯೋಜನೆಗೊಂಡಿದ್ದ ವಿದ್ಯಾರಣ್ಯ ವೈಭವ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ವಿದ್ಯಾರಣ್ಯರು ಪ್ರೇರಣೆ ಎನ್ನುವ ಕುರಿತು ಕೆಲವರು ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಈ ಕುರಿತು ಅನುಮಾನಕ್ಕೆ ಆಸ್ಪದವಿಲ್ಲದೇ ನೂರಾರು ವರ್ಷಗಳಿಂದ ಜನ ಇದನ್ನು ನಂಬಿಕೊಂಡು ಬಂದಿದ್ದಾರೆ.

ವಿಜಯನಗರ ಎಂದರೆ ನೆನಪಿಗೆ ಬರುವುದು ವಿದ್ಯಾರಣ್ಯರು. ತಮ್ಮ ತಪೋಬಲ, ಜ್ಞಾನದಿಂದ ಒಂದು ಮಾದರಿ ಸಾಮ್ರಾಜ್ಯ ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ ಎಲ್ಲರಿಗೂ ಸಾಮಾಜಿಕ, ರಾಜಕೀಯ, ಆರ್ಥಿಕ ನ್ಯಾಯ ಒದಗಿಸುವುದು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಒದಗಿಸುವುದು ಉದ್ದೇಶ. ಇದನ್ನು ವಿದ್ಯಾರಣ್ಯರು ಮಂತ್ರಿಯಾಗಿ, ಮಾರ್ಗದರ್ಶಕರಾಗಿ ಅಂದೇ ಅನುಷ್ಠಾನಗೊಳಿಸಿದ್ದರು. ವಿದ್ಯಾರಣ್ಯರು ಕಟ್ಟಿದ ವಿಜಯನಗರ ಸಾಮ್ರಾಜ್ಯವನ್ನು ನೋಡಿದರೆ, ಅವರ ಸೂತ್ರಗಳನ್ನು ಅಳವಡಿಸಿಕೊಳ್ಳುವದರಲ್ಲಿ ನಮ್ಮ ಬುದ್ಧಿವಂತಿಕೆ ಇದೆ' ಎಂದು ಹೇಳಿದರು.

`ಇಂದು ಸಮಾಜವು ಜಾತಿ, ಧರ್ಮಗಳ ಹೆಸರಿನಲ್ಲಿ ಹೋಳಾಗುತ್ತಿದೆ. ಒಂದು ಸಾಮ್ರಾಜ್ಯವನ್ನು ಕಟ್ಟುವುದು ಕೇವಲ ಅಧಿಕಾರ, ರಾಜಕೀಯ ಶಕ್ತಿಯಿಂದ ಸಾಧ್ಯವಿಲ್ಲ. ಎಲ್ಲರನ್ನು ಒಳಗೊಂಡು ಮುನ್ನಡೆಯಬೇಕು. ಅದನ್ನು ಸಾಕಾರಗೊಳಿಸಿದವರು ವಿದ್ಯಾರಣ್ಯರು. ಇಂದಿನ ರಾಜಕೀಯ ಆಡಳಿತ ನಡೆಸುತ್ತಿರುವವರು ಅದನ್ನು ಕಲಿಯಬೇಕಿದೆ. ಸಮಾಜದ ವಿವಿಧ ಸ್ತರಗಳಲ್ಲಿರುವ ಜನರಿಗೆ ಸಮಾನ ಅವಕಾಶ ದೊರೆತರೆ ಮಾತ್ರ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ' ಎಂದರು.

`ಯಾವ ಸಾಮ್ರಾಜ್ಯದ ಹಿಂದೆ ಗುರುವಿನ ಮಾರ್ಗದರ್ಶನವಿದೆ. ಅದು ಸಮೃದ್ಧ ಸಾಮ್ರಾಜ್ಯವಾಗಿ ನಮ್ಮ ಮುಂದಿರುವುದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ. ಧರ್ಮ ಮತ್ತು ರಾಜಕೀಯ ಪೂರಕವಾಗಿ ಹೋಗಬೇಕು. ಧಾರ್ಮಿಕ ಗುರುಗಳು ನಿಸ್ವಾರ್ಥಿಗಳಾಗಿ ಮಾರ್ಗದರ್ಶನ ಮಾಡಬೇಕು. ಅವರೇ ಆಡಳಿತ ನಡೆಸುವಂತಾದರೆ ಅರಾಜಕತೆ ಉಂಟಾಗುತ್ತದೆ' ಎಂದು ನುಡಿದರು.

ಉಪನ್ಯಾಸ ನೀಡಿದ ಡಾ.ಶ್ರೀರಾಮ ಭಟ್, `ವಿದ್ಯಾರಣ್ಯರು ಕೇವಲ ರಾಜಕೀಯಕ್ಕೆ ಮಾತ್ರ  ಕೊಡುಗೆ ನೀಡಿಲ್ಲ. ಜ್ಞಾನಕ್ಕೂ ಗಟ್ಟಿ ಬುನಾದಿ ಹಾಕಿಕೊಟ್ಟಿದ್ದಾರೆ. ಅವರ ಕಾಲಘಟ್ಟದಲ್ಲಿ ರಚಿತಗೊಂಡ ಹಲವು ಕೃತಿಗಳು ಇಂದಿಗೂ ಪ್ರಸ್ತುತ. ನಮ್ಮ ಆಧ್ಯಾತ್ಮಿಕ ಗ್ರಂಥಗಳಿಗೆ ಭಾಷ್ಯ ಬರೆಯುವ ಮೂಲಕ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ರೂಪುಗೊಂಡಿವೆ. ತಮ್ಮ ಗ್ರಂಥಗಳಲ್ಲಿ ಎಲ್ಲ ಕಾಲಕ್ಕೂ ಅನನ್ಯವಾದ ನೀತಿ ಸಂಹಿತೆಗಳನ್ನು ವಿದ್ಯಾರಣ್ಯರು ಚರ್ಚಿಸಿದ್ದಾರೆ' ಎಂದರು. ಶಕಟಪುರ ವಿದ್ಯಾಪೀಠದ ಕೃಷ್ಣಾನಂದತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಅರವಿಂದಕುಮಾರ, ಗಣಪತಿ ಪಾಟೀಲ, ಡಾ.ವೇಣಿಮಾಧವ ಶಾಸ್ತ್ರಿ ಜೋಶಿ, ಉಮಾಕಾಂತ ಭಟ್,ಡಾ.ಮಹೇಶ ಹಂಪಿಹೊಳಿ, ಡಾ.ಉದಯ ದೇಸಾಯಿ, ಆರ್. ಬಿ. ಕುಲಕರ್ಣಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT