ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸವಾಗಿ ಉಳಿದ ತೆರೆದ ಬಾವಿ

Last Updated 26 ಫೆಬ್ರುವರಿ 2013, 7:14 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಅಂತರ್ಜಲ ಕುಸಿತದಿಂದ ತೆರೆದ ಬಾವಿ ಸಂಸ್ಕೃತಿ ನೇಪಥ್ಯಕ್ಕೆ ಸರಿದಿದ್ದರೂ; ತಾಲ್ಲೂಕಿನಲ್ಲಿ ತೆರೆದ ಬಾವಿ ಸಂಸ್ಕೃತಿಗೆ ಸಾಕ್ಷಿಯಾಗಿ ಕಲ್ಲು ಕಟ್ಟಡ ನಿರ್ಮಿಸಿದ ಹಲ ಬಾವಿಗಳು ಇನ್ನೂ ಸುಸ್ಥಿತಿಯಲ್ಲಿವೆ.

ಕೊಳವೆ ಬಾವಿ ಸಂಸ್ಕೃತಿ ಆರಂಭದೊಂದಿಗೆ ತೆರೆದ ಬಾವಿಗಳು ಬತ್ತಿ ಹೋದವು. ಬರಿದಾದ ದೊಡ್ಡ ಬಾವಿಗಳಿಗೆ ಮಣ್ಣು ಹೊಡಿದು ಮುಚ್ಚಿ, ಆ ಸ್ಥಳವನ್ನೂ ಕೃಷಿಗೆ ಬಳಸಿಕೊಳ್ಳಲಾಯಿತು. ಹಾಗಾಗಿ ಸಾವಿರಾರು ಬಾವಿ ನೆಲ ಸೇರಿದವು. ಆದರೂ ಕೆಲವರು ಅವುಗಳನ್ನು ಮುಚ್ಚದೆ ಉಳಿಸಿಕೊಂಡಿದ್ದಾರೆ.

ಈ ಬಾವಿಗಳು ಗ್ರಾಮೀಣ ಪ್ರದೇಶದಲ್ಲಿ ಜನ ಜಾನುವಾರುಗಳಿಗೆ ದೊಡ್ಡ ಅಪಾಯವಾಗಿ ಪರಿಣಮಿಸುತ್ತಿವೆ. ಯಾವುದೇ ತಡೆಗೋಡೆ ಇಲ್ಲದೆ ನೆಲ ಮಟ್ಟದಲ್ಲಿರುವ ಈ ಆಳವಾದ ಬಾವಿಗಳಲ್ಲಿ ಆಕಸ್ಮಿಕವಾಗಿ ಬಿದ್ದರೆ ಕತೆ ಮುಗಿಯಿತು. ವ್ಯಕ್ತಿಯಾಗಲಿ, ಪ್ರಾಣಿಯಾಗಲಿ ಮತ್ತೆ ಮೇಲೆ ಬರುವುದು ಸುಳ್ಳು. ಬಾವಿಗಳ ತಳ ಹಾಗೂ ಗೋಡೆಗಳಲ್ಲಿ ಗಿಡಮರಗಳು ಬೆಳೆದು ನಿಂತಿವೆ. ದುಷ್ಕರ್ಮಿಗಳು ಇಂಥ ಬಾವಿಗಳನ್ನು ತಮ್ಮ ದುಷ್ಕೃತ್ಯಗಳಿಗೆ ಬಳಸಿಕೊಳ್ಳುವುದುಂಟು.

ಜೆಸಿಬಿ ಸೌಲಭ್ಯ ಇಲ್ಲದ ಕಾಲದಲ್ಲಿ ಈ ತೆರೆದ ಬಾವಿಗಳನ್ನು ಭೋವಿ ಜನಾಂಗದ ಶ್ರಮಿಕರು ನೆಲ ಅಗೆದು, ಆಳದಿಂದ ಮಣ್ಣನ್ನು ಹೊರಗೆ ಹೊತ್ತು ನಿರ್ಮಿಸಿದ್ದಾರೆ. ಆ ಕಾಲಕ್ಕೆ ಬಾವಿ ನಿರ್ಮಿಣ ಅತ್ಯಂತ ಕಷ್ಟದ ಕೆಲಸವಾಗಿತ್ತು. ಕಲ್ಲು ಕಟ್ಟಡ ನಿರ್ಮಿಸುವ ಪರಿಣಿತರೂ ಇದ್ದರು. ಅವರ ಶ್ರಮದ ಫಲವಾಗಿ ನೀರಿನ ಭಾಗ್ಯ ದೊರೆಯುತ್ತಿತ್ತು. ಬಾವಿ ನಿರ್ಮಿಸಿ ನೀರು ಸಿಗದೆ ಸಂಕಷ್ಟಕ್ಕೆ ಒಳಗಾದ ರೈತರಿಗೂ ಕೊರತೆ ಇರಲಿಲ್ಲ.

ಒಂದು ಕಾಲದಲ್ಲಿ ತುತ್ತಿಗೆ ಆಸರೆಯಾಗಿದ್ದ ತೆರೆದ ಬಾವಿಗಳು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ಬಾವಿಗಳಿಗೆ ಅಳವಡಿಸುತ್ತಿದ್ದ ಕಪಿಲೆ, ಏತ, ತಿರುಗು ಡಬ್ಬಾ ಯಂತ್ರದ ವ್ಯವಸ್ಥೆ ಹೊಸ ಪೀಳಿಗೆಗೆ ಗೊತ್ತೇ ಇಲ್ಲ. ಆಗ ನೀರಿನ ಬಳಕೆ ಮಿತವಾಗಿತ್ತು. ಹಾಗಾಗಿ ಸಮಸ್ಯೆ ಇರಲಿಲ್ಲ. ಈಗ ಆಳದ ನೀರಿನ ಸೇವನೆ ಹಲ ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಿದೆ. ನೀರಿನ ಬವಣೆ ಹೆಚ್ಚಿಸಿದೆ.

ತೆರೆದ ಬಾವಿ ಮುಚ್ಚದೆ, ಮಳೆಗಾಲದಲ್ಲಿ ಅವುಗಳಿಗೆ ಮಳೆ ನಿರು ತುಂಬುವ ಮೂಲಕ ಅಂತರ್ಜಲ ವೃದ್ಧಿಸಬಹುದು. ಆದರೆ ಜನ ಜಾನುವಾರು ಬೀಳದಂತೆ ತಡೆಗೋಡೆ ನಿರ್ಮಿಸುವುದು ಕ್ಷೇಮಕರ ಎಂದು ಗೌರಿಬಿದನೂರಿನ ಜಲತಜ್ಞ ಕೆ.ನಾರಾಯಣಸ್ವಾಮಿ ಹೇಳುತ್ತಾರೆ. ಹೀಗೆ ನಡೆದುಕೊಂಡರೆ ಅಳಿದುಳಿದ ತೆರೆದ ಬಾವಿಗಳನ್ನು ಲಾಭದಾಯಕವಾಗಿ ಬಳಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT