ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಎಂಥಾ ಮೋಜು ನೋಡಿರಯ್ಯ!

Last Updated 1 ಆಗಸ್ಟ್ 2013, 13:03 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ಕೈಬೀಸಿ ಕರೆಯುವ ಚಂದ್ರದ್ರೋಣ ಪರ್ವತ ಶ್ರೇಣಿಯ ಐತಿಹಾಸಿಕ ಸ್ಥಳ ಮುಳ್ಳಯ್ಯನಗಿರಿ, ಜಿಲ್ಲಾಡಳಿತದ ನಿರ್ಲಕ್ಷ್ಯದ ಪರಿಣಾಮ ಕುಡುಕರಿಗೆ ವಾರಾಂತ್ಯದಲ್ಲಿ ಮದ್ಯಮೋಜು ನಡೆಸಲು `ಮುಕ್ತ ಬಾರಿನ ಅಡ್ಡೆ'ಯಾಗಿ ಮಾರ್ಪಟ್ಟಿದೆ.

ಗಿರಿಶ್ರೇಣಿಯಲ್ಲಿ ಮುಳ್ಳಯ್ಯನಮಠ, ಸೀತಾಳಯ್ಯನ ಮಠ, ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗ, ಗಾಳಿ ಕೆರೆ ಭೂತಪ್ಪ ದೇವಾಲಯ, ದೇವೀರಮ್ಮ ಸನ್ನಿಧಿ, ಬಿಸಗ್ನಿ ಮಠ, ನಾರುಕಂತೆ ಮಠ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿದ್ದು, ರಾಜ್ಯದ ವಿವಿಧೆಡೆಯ ಯಾತ್ರಾರ್ಥಿಗಳಿಗೆ ಪವಿತ್ರ ಸ್ಥಳವೆನಿಸಿದೆ. ಆದರೆ, ಬೆಂಗಳೂರು, ಮೈಸೂರು ಇನ್ನಿತರರ ನಗರಗಳಿಂದ ಬರುವ ಪ್ರವಾಸಿಗರು ವಾರಾಂತ್ಯವನ್ನು ಮೋಜಿನಿಂದ ಕಳೆಯಲು ಗಿರಿತಪ್ಪಲನ್ನು ಅಡ್ಡೆ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಜಿಲ್ಲಾಡಳಿತ ಕಣ್ಗಾವಲು ಸಡಿಲಗೊಳಿಸಿದ ಪರಿಣಾಮ ಕೈಮರದ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ಅಡೆತಡೆ ಇಲ್ಲದೆ, ಮದ್ಯದ ಬಾಟಲುಗಳು ಮತ್ತು ಪ್ಲಾಸ್ಟಿಕ್ ಸಾಮಗ್ರಿಗಳು ಪ್ರವಾಸಿಗರ ಜತೆಯಲ್ಲಿ ಗಿರಿ ಏರುತ್ತಿವೆ! ಗಿರಿಶ್ರೇಣಿಯ ರಮ್ಯ ತಾಣಗಳು ಕುಡುಕರ ಅಡ್ಡೆಯಾಗುವ ಜತೆಗೆ, ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ.

ಗಿರಿಶ್ರೇಣಿಯನ್ನು ಪ್ಲಾಸ್ಟಿಕ್ ಮತ್ತು ಮದ್ಯ ಮುಕ್ತಗೊಳಿಸುವ ಉದ್ದೇಶದಿಂದ ಕೈಮರದ ಬಳಿ 2010-11ರಲ್ಲಿ ತಪಾಸಣಾ ಕೇಂದ್ರ ಸ್ಥಾಪಿಸಲಾಗಿತ್ತು. ಕಳೆದ ವರ್ಷದವರೆಗೂ ಸ್ವಚ್ಛ ಟ್ರಸ್ಟ್ ಈ ತಪಾಸಣಾ ಕೇಂದ್ರದ ನಿರ್ವಹಣೆ ನೋಡಿಕೊಳ್ಳುತ್ತಿತ್ತು. ಕ್ರಿಯಾಶೀಲವಾಗಿದ್ದ ತನಿಖಾ ತಂಡ ಮದ್ಯ ಸೇವಿಸುವವರನ್ನು ಮತ್ತು ಪ್ಲಾಸ್ಟಿಕ್ ಬಿಸಾಡಿ ಪರಿಸರ ಹಾಳು ಮಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತಿತ್ತು. ತನಿಖಾ ತಂಡದ ಭಯಕ್ಕೆ ಪ್ರವಾಸಿಗರು ಪರಿಸರಕ್ಕೆ ಧಕ್ಕೆ ತರುವ ಯಾವುದೇ ಚಟುವಟಿಕೆಯಲ್ಲಿ ತೊಡಗಲು ಹಿಂಜರಿಯುತ್ತಿದ್ದರು.

ಈಗ ತಪಾಸಣಾ ಕೇಂದ್ರದ ನಿರ್ವಹಣೆ ಗುತ್ತಿಗೆಯನ್ನು ಇ-ಟೆಂಡರ್ ಮೂಲಕ ಖಾಸಗಿ ವ್ಯಕ್ತಿಗಳಿಗೆ ಜಿಲ್ಲಾಡಳಿತ ನೀಡಿದೆ. ತಪಾಸಣಾ ಕೇಂದ್ರ ಈಗ ವಾಣಿಜ್ಯೀಕರಣಗೊಂಡಿದೆ. ಸುಮಾರು 4.50 ಲಕ್ಷ ರೂಪಾಯಿ ಸಂದಾಯ ಮಾಡಿ ಗುತ್ತಿಗೆ ಹಿಡಿದಿರುವ ವ್ಯಕ್ತಿಗಳು ಲಾಭ ಗಳಿಸಲೇಬೇಕಾದ ಉದ್ದೇಶದಿಂದ ತಪಾಸಣಾ ಕೇಂದ್ರದಲ್ಲಿ ವಾಹನಗಳಿಂದ ಪ್ರವೇಶ ಶುಲ್ಕ ವಸೂಲಿಗೆ ಮಾತ್ರ ಗಮನ ನೀಡಿದ್ದಾರೆ. ಮದ್ಯ, ಪ್ಲಾಸ್ಟಿಕ್ ಸಾಮಗ್ರಿ ಕೊಂಡೊಯ್ಯದಂತೆ ನಿರ್ಬಂಧ ವಿಧಿಸುತ್ತಿಲ್ಲ. ತನಿಖಾ ತಂಡವು ನಿಷ್ಕ್ರಿಯಗೊಂಡಿದೆ. ಹೀಗಾಗಿ ನಿರಾತಂಕವಾಗಿ ಮದ್ಯ ತುಂಬಿದ ಬಾಟಲಿಗಳು, ಆಹಾರ ಪೊಟ್ಟಣ ಕಟ್ಟಿದ ಪ್ಲಾಸ್ಟಿಕ್‌ಗಳು, ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಕೈಚೀಲಗಳು ಗಿರಿತಪ್ಪಲಿಗೆ ಹೋಗುತ್ತಿವೆ. ಅವುಗಳನ್ನು ಬಳಸಿ, ಎಲ್ಲೆಂದರಲ್ಲಿ ಬಿಸಾಡಿ ಬರುವ ಪ್ರವೃತ್ತಿ ದಿನನಿತ್ಯ ನಡೆಯುತ್ತಿವೆ. ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್‌ಗಿರಿ ಮಾರ್ಗದ ಉದ್ದಕ್ಕೂ ರಸ್ತೆ ಬದಿ ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕುಡಿದು ಬಿಸಾಡಿರುವ ಮದ್ಯದ ಬಾಟಲಿಗಳು ಕಾಣ ಸಿಗುತ್ತಿವೆ.

ಪ್ರವಾಸ ಬರುವವರಲ್ಲಿ ಐ.ಟಿ, ಬಿ.ಟಿ ಉದ್ಯೋಗಿಗಳೇ ಹೆಚ್ಚಿದ್ದಾರೆ. ಬಾಕ್ಸ್‌ಗಟ್ಟಲೆ ಬ್ರಾಂಡಿ, ಬಿಯರ್‌ಗಳನ್ನು ವಾಹನಗಳಲ್ಲಿ ತುಂಬಿಕೊಂಡು ಗಿರಿಯಲ್ಲಿ ಅಡ್ಡಾಡುತ್ತಾ ಕಂಠಮಟ್ಟ ಕುಡಿದು, ಮೋಜು ಮಾಡುವುದೇ `ಪರಿಸರ ಪ್ರವಾಸೋದ್ಯಮ' ಎನಿಸಿಕೊಳ್ಳುತ್ತಿದೆ.

ಗಿರಿಶ್ರೇಣಿಯ ಪಾವಿತ್ರ್ಯ ಮತ್ತು ಪರಿಸರ ನೈರ್ಮಲ್ಯ ಕಾಪಾಡಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಪರಿಸರಾಸಕ್ತರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT