ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಜಗನ್ನಾಥದಾಸರ ತಂಬೂರಿ!

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಭಾರತದ ವೇದಾಂತ ಮತ್ತು ದರ್ಶನ ಶಾಸ್ತ್ರ ಶ್ರೀಮಂತಗೊಳ್ಳುವಲ್ಲಿ ಕರ್ನಾಟಕದ ದಾಸ ಸಾಹಿತ್ಯಕ್ಕೆ ಮಹತ್ತರ ಸ್ಥಾನವಿದೆ. ಈ ಪರಂಪರೆಯಲ್ಲಿ ಬಂದ ಅದ್ವಿತೀಯ ಪಂಡಿತರಲ್ಲಿ ಶ್ರೀ ಜಗನ್ನಾಥದಾಸರು ಪ್ರಮುಖರು.

ಅವರು `ಹರಿಕಥಾಮೃತಸಾರ~ದಂಥಹ ಮೇರು ಕೃತಿಯನ್ನು ಕನ್ನಡದಲ್ಲಿ ರಚಿಸಿದ ಮಹಾಮಹಿಮರು. ಮಹಾನ್ ಜ್ಞಾನಿಗಳಾಗಿದ್ದ ಶ್ರೀ ವಿಜಯದಾಸರು ಹಾಗೂ ಶ್ರೀ ಗೋಪಾಲದಾಸರು ಅವರ ಪ್ರಭಾವಕ್ಕೆ ಒಳಗಾಗಿ ವೇದಾಂತ ಮತ್ತು ದರ್ಶನಗಳ ಸಾರವನ್ನು ಜನಸಾಮಾನ್ಯರಿಗೂ ಉಣಬಡಿಸಲು ಕನ್ನಡದಲ್ಲೆೀ ತಮ್ಮ ಬರವಣಿಗೆ ಆರಂಭಿಸಿದರು.

ದಾಸವರೇಣ್ಯರ ವಿಚಾರ ಬಂದಾಗ ನಮ್ಮ ಕಣ್ಣ ಮುಂದೆ ಬರುವ ಚಿತ್ರ ಕೈಯಲ್ಲಿ ತಂಬೂರಿ ಹಿಡಿದ ದಾಸವರೇಣ್ಯರದ್ದು. ದಾಸರಿಗೂ ತಂಬೂರಿಗೂ ಅವಿನಾಭಾವ ಸಂಬಂಧ. ತಂಬೂರಿ ಇಲ್ಲದ ದಾಸರುಗಳ ಚಿತ್ರಗಳನ್ನು ಕಲ್ಪಿಸಿಕೊಳ್ಳುವುದೇ ಕಷ್ಟ.

ತಂಬೂರಿ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವಿದೆ. ಅದೇನೆಂದರೆ 17ನೇ ಶತಮಾನದ ಉತ್ತರಾರ್ಧದಲ್ಲಿ ಬದುಕಿದ್ದ ಶ್ರೀ ಜಗನ್ನಾಥದಾಸರು ಉಪಯೋಗಿಸಿದ ತಂಬೂರಿ ಈಗಲೂ ದರ್ಶನಕ್ಕೆ ಲಭ್ಯ ಎಂದರೆ ನಿಮಗೆ ಆಶ್ಚರ್ಯವಾಗಬಹುದು, ಆದರೂ ಇದು ಸತ್ಯ.

ಇದು ಈಗ ಬೆಂಗಳೂರಿನ ವಿದ್ವಾನ್ ಶ್ರೀ ಸತ್ಯನಾರಾಯಣಾಚಾರ್ಯ ಅವರ ಬಳಿ ಭದ್ರವಾಗಿದೆ. ಇದಕ್ಕೆ `ಭಂಗಿ ತಂಬೂರಿ~  ಅಥವಾ  `ಸುರಶತ ವೀಣೆ~ ಎಂದು ಹೆಸರು. ದಾಸ ಸಾಹಿತ್ಯ ಪ್ರಚಾರಕ್ಕಾಗಿ  ಶ್ರೀಪೂರ್ಣಪ್ರಜ್ಞ ತತ್ವಜ್ಞಾನ ಪ್ರಚಾರ ಸಭಾ ಎಂಬ ಸಂಸ್ಥೆ ಕಟ್ಟಿ ನಡೆಸುತ್ತಿರುವ ಆಚಾರ್ಯರಿಗೆ 1995ರಲ್ಲಿ ದಾವಣಗೆರೆ ದೀಕ್ಷಿತ್ ಗಲ್ಲಿಯ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಈ ತಂಬೂರಿ ಪ್ರಾಪ್ತಿಯಾಯಿತು. ಹರಿಹರದ ಭೀಮಾಚಾರ್ಯ ಕಟ್ಟಿ ಇದನ್ನು ಮಠಕ್ಕೆ ನೀಡಿದ್ದರು.

ಅಷ್ಟರೊಳಗೆ ಈ ತಂಬೂರಿ ಹಲವಾರು ಕೈಗಳನ್ನು ಬದಲಾಯಿಸಿತ್ತು. ಹಾಗಾಗಿ ಸತ್ಯನಾರಾಯಣಾಚಾರ್ಯರ ಕೈಗೆ ಬಂದಾಗ ಅದು ಶಿಥಿಲಾವಸ್ಥೆಯಲ್ಲಿತ್ತು.

ಜಗನ್ನಾಥದಾಸರು 1780ರಲ್ಲಿ ಪ್ರಿಯ ಶಿಷ್ಯ  ವಿಠ್ಠಲದಾಸರಿಗೆ (ಪೂರ್ವಾಶ್ರಮದ ಹೆಸರು ದಾಸಪ್ಪ. ಈಗಿನ ಹಾವೇರಿ ಜಿಲ್ಲೆ ಕರ್ಜಗಿಯ ಶಾನುಭೋಗರು) ಇದನ್ನು ಕಾಣಿಕೆ ಕೊಟ್ಟಿದ್ದರು. ಅವರು ದೈವಾಧೀನರಾಗುವ ಮುನ್ನಾದಿನ ಇದನ್ನು ಕರಡಗಿ ನಾರಾಯಣಾ ಚಾರ್ಯ ಎಂಬುವರಿಗೆ ನೀಡಿದರು. ಅವರ ವಂಶಸ್ಥರಿಂದ ಇದು ಹರಿಹರದ ಕುಮಾರಪಟ್ಟಣದ  ಭೀಮಾಚಾರ್ಯ ಕಟ್ಟಿಯವರ ಕೈಸೇರಿತು.

ಶ್ರೀ ಸತ್ಯನಾರಾಯಣಾಚಾರ್ಯರು ತಂಬೂರಿ ದುರಸ್ತಿ ಮಾಡಿಸಿ ಮೊದಲಿನ ಸ್ಥಿತಿಗೆ ತಂದಿದ್ದಾರೆ. ರಾಜ್ಯಾದ್ಯಂತ ಭಕ್ತರು ಅರಿಕೆ ಮಾಡಿಕೊಂಡ ಕಡೆಯೆಲ್ಲಾ ಈ ತಂಬೂರಿ ತೆಗೆದುಕೊಂಡು ಹೋಗುತ್ತಾರೆ.

ಕಳೆದ ತಿಂಗಳು ಪೂರ್ಣಪ್ರಜ್ಞ ತತ್ವಜ್ಞಾನ ಪ್ರಚಾರ ಸಭಾ, ಶ್ರೀ ದಶಮಪ್ರತಿ ದಾಸವೃಂದ ಮತ್ತು ನಾಗರಭಾವಿ ಪಾಪರೆಡ್ಡಿಪಾಳ್ಯದ ಶ್ರೀ ತಾಮ್ರಪರ್ಣಿ ಶ್ರೀ ಮಧ್ವರಾಘವೇಂದ್ರ ಟ್ರಸ್ಟ್ ವತಿಯಿಂದ ರಾಯರ ಮಠದಲ್ಲಿ ನಡೆದ ಜಗನ್ನಾಥದಾಸರ ಆರಾಧನೆಯಲ್ಲಿ ಸಾವಿರಾರು ಭಕ್ತರು ಈ ತಂಬೂರಿಯ ದರ್ಶನ ಮಾಡಿದರು. 

ಈ ತಂಬೂರಿ ನೋಡಬೇಕೆಂದರೆ 3271 2716 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT