ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬರೀ ಜಮೀನು ಅಲ್ಲ; ಪ್ರಯೋಗಶಾಲೆ

Last Updated 9 ಜನವರಿ 2014, 5:45 IST
ಅಕ್ಷರ ಗಾತ್ರ

ಸಿದ್ದಾಪುರ (ಉ.ಕ.ಜಿಲ್ಲೆ): ಪುಟ್ಟರಾಜ ಗೌಡರ ಜಮೀನು ಎಂದರೆ ಅದೊಂದು ಪ್ರಯೋಗಶಾಲೆ. ಇಲ್ಲಿ ಅವರು ಬೆಳೆಯದ ಬೆಳೆಯಿಲ್ಲ, ಮಾಡದ ಕೆಲಸವಿಲ್ಲ. ಮೊದಲು ಕಷ್ಟವನ್ನೇ ಕಂಡರೂ ಛಲ ಬಿಡದೇ ಮುಂದುವರಿದಿದ್ದರಿಂದ ಕೃಷಿಯಲ್ಲಿಯೇ ಯಶಸ್ಸು ಕಂಡಿದ್ದಾರೆ.

ಈ ಜಾಗದ ಹೆಸರು ದೊಡ್ಡಗದ್ದೆ. ಹೆಸರಿಗೆ ತಕ್ಕಂತೆ ದೊಡ್ಡದಾದ ಬಯಲು ಪ್ರದೇಶ. ನೀರಿನ ಆಸರೆ ಕಡಿಮೆ. ಈ ಬಯಲು  ಭೂಮಿಯಲ್ಲಿ ಅಡಿಕೆ ಬೆಳೆದು ಯಶಸ್ಸು ಕಂಡ ಗೌಡರು, ಪಚೋಲಿಯ ಎಣ್ಣೆ ತೆಗೆಯುವ ಘಟಕವನ್ನೂ ಆರಂಭಿಸಿ ಸಫಲರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ದೊಡ್ಡಗದ್ದೆಯಲ್ಲಿ ಪುಟ್ಟರಾಜ ಹಾಲಯ್ಯ ಗೌಡರ ತಂದೆ 1979ರಲ್ಲಿ ಜಾಗ ಖರೀದಿಸಿದರು. ಅವರು ಮೊದಲು ಇಲ್ಲಿ ಬೆಳೆದದ್ದು ಭತ್ತ ಮತ್ತು ಕಬ್ಬು. ನಂತರ 1987ರಲ್ಲಿ ರೇಷ್ಮೆ  ಬೆಳೆದಾಗ ಅದು ಅವರ ಪಾಲಿಗೆ ಜೀವನ ನೀಡಿತು.

1992ರಲ್ಲಿ ಬಾಳೆ ಬೆಳೆಯಲು ಆರಂಭಿಸಿದ ಅವರಿಗೆ ಬಾಳೆ ಬದುಕು ನೀಡಿತು. ಈ ಜಾಗವನ್ನೇ ತೊರೆದು ಹೋಗಬೇಕಾದೀತೆನ್ನುವ ಭಯವೂ ದೂರವಾಯಿತು. ಬಾಳೆಯೊಂದಿಗೆ ಅಡಿಕೆ ನೆಟ್ಟ ಅವರು, ನಂತರ ಪಚೋಲಿಯನ್ನೂ ಬೆಳೆದರು.

ಅಡಿಕೆಯಲ್ಲಿ ಅವರು ಹೊಸ ಪ್ರಯೋಗವನ್ನೇ ಮಾಡಿದರು. 2 ಎಕರೆ ಪ್ರದೇಶದಲ್ಲಿ ತೀರ್ಥಹಳ್ಳಿ ಅಡಿಕೆ ಹಾಕಿದರೆ, 4 ಎಕರೆಯಲ್ಲಿ ಸ್ಥಳೀಯ ಅಡಿಕೆ ಹಾಕಿದರು. ಈಗ ಅಡಿಕೆ ಮರಗಳಿಗೆ ರಸ ನೀರಾವರಿಯ ಮೂಲಕವೇ ಗೊಬ್ಬರ ನೀಡತೊಡಗಿದರು. ‘ಬಯಲು ಜಾಗ ಆಗಿರುವುದರಿಂದ ಅಡಿಕೆ ಮರಗಳು ಚೆನ್ನಾಗಿ ಬೆಳೆದರೂ, ಪ್ರತಿವರ್ಷ ಇಳುವರಿಯಲ್ಲಿ ವ್ಯತ್ಯಾಸ ಬರುತ್ತದೆ. ಒಂದು ವರ್ಷ ಉತ್ತಮ ಫಸಲು ಬಂದರೆ ಮತ್ತೊಂದು ವರ್ಷ ಅತ್ಯಂತ ಕಡಿಮೆ ಫಸಲು ಸಾಮಾನ್ಯ’ ಎನ್ನುತ್ತಾರೆ ಗೌಡರು.

ಅಡಿಕೆಯ ಫಸಲಿನಲ್ಲಿ ವ್ಯತ್ಯಾಸ ಕಂಡಾಗ 2000ನೇ ಇಸ್ವಿಯಲ್ಲಿ ಪಚೋಲಿ ಬೆಳೆಯಲು ಆರಂಭಿಸಿದರು. ಆಗ ಮಾರುಕಟ್ಟೆ ವ್ಯವಸ್ಥೆಯೂ ಸರಿಯಾಗಿ ಇರಲಿಲ್ಲ. ನಂತರ ಪಚೋಲಿಯ ಧಾರಣೆಯೂ ಕುಸಿಯಿತು. ಎಣ್ಣೆಯ ಬೆಲೆಯೂ ಕಡಿಮೆಯಾಯಿತು. ರೈತರು ‘ಪಚೋಲಿಯ ಕತೆ ಮುಗಿಯಿತು’ ಎಂದು ತಲೆ ಮೇಲೆ ಕೈಹೊತ್ತು ಕುಳಿತ ಸಂದರ್ಭದಲ್ಲಿ ಅವರಿಗೆ ಧೈರ್ಯ ತುಂಬಲು ತಮ್ಮ ಮನೆಯ ಸಮೀಪವೇ ಪಚೋಲಿಯ ಎಣ್ಣೆ ತೆಗೆಯುವ ಘಟಕವನ್ನು 2010ರಲ್ಲಿ ಆರಂಭಿಸಿದರು. ಇದಕ್ಕಾಗಿ ಸುಮಾರು ₨18 ಲಕ್ಷ ವೆಚ್ಚ ಮಾಡಿದರೂ ನಷ್ಟ ಅನುಭವಿಸಲಿಲ್ಲ.

‘ಈ ಭಾಗದ ಗದ್ದೆಗಳಲ್ಲಿ ಬೇಸಿಗೆಯಲ್ಲಿ ಪಚೋಲಿ ಉತ್ತಮ ಬೆಳೆ. ಅಡಿಕೆ ತೋಟದ ನಡುವೆ ಪಚೋಲಿ ಬೆಳೆಯುವುದಕ್ಕಿಂತ ಖುಷ್ಕಿ ಅಥವಾ ಬೇಣದಲ್ಲಿ ಮತ್ತು ಗದ್ದೆಗಳಲ್ಲಿ ಪಚೋಲಿ ಬೆಳೆದರೆ ಒಳ್ಳೆಯ ಆದಾಯ ಪಡೆಯಬಹುದು’ ಎಂದು ಗೌಡರು ಪಚೋಲಿ ಬೆಳೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ರೈತರಿಂದ ಪಚೋಲಿ ಖರೀದಿ ಮಾಡುವುದರೊಂದಿಗೆ ಅದನ್ನು ಬೆಳೆಯುವಂತೆಯೂ ಅವರು ಪ್ರೋತ್ಸಾಹಿಸುತ್ತಿದ್ದಾರೆ. ಸುತ್ತಮುತ್ತಲಿನ ರೈತರಿಂದ ಖರೀದಿ ಮಾಡಿದ ಪಚೋಲಿಯಿಂದ ಎಣ್ಣೆ ತೆಗೆದು, ಹೊರಗಿನ ಮಾರುಕಟ್ಟೆಗೆ ಕಳುಹಿಸುತ್ತಾರೆ.

‘ನನಗೆ ಪಚೋಲಿ ಮಾರಾಟ ಮಾಡಿದವರಲ್ಲಿ  ರೂ. 1ಲಕ್ಷಕ್ಕೂ ಅಧಿಕ ಆದಾಯ ಪಡೆದವರಿದ್ದಾರೆ. ಇಲ್ಲಿನ ಭತ್ತದ ಗದ್ದೆಗಳಲ್ಲಿ ಎಕರೆಗೆ 20–30 ಕ್ವಿಂಟಲ್ ಪಚೋಲಿ ಬೆಳೆಯಬಹುದು. ಇದರಿಂದ ಕನಿಷ್ಠ ರೂ. 70 ಸಾವಿರ ವರಮಾನ ದೊರಕುತ್ತದೆ’ ಎನ್ನುತ್ತಾರೆ ಗೌಡರು.
‘ನಾನು ಓದಿದ್ದು ಕೇವಲ 8ನೇ ತರಗತಿವರೆಗೆ. ಕೃಷಿಯನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ಸಂಪೂರ್ಣ ಕೃಷಿಯಲ್ಲಿಯೇ ತೊಡಗಿಸಿಗೊಂಡರೆ ಉತ್ತಮ ಜೀವನ ನಡೆಸಲು ಖಂಡಿತ ಸಾಧ್ಯ’ಎಂಬುದು ಪುಟ್ಟರಾಜರ ಮನದಾಳದ ಮಾತು.

ಪತ್ನಿ ಮತ್ತು ಇಬ್ಬರು ಮಕ್ಕಳ ಸುಖಿ ಸಂಸಾರ ಹೊಂದಿರುವ ಪುಟ್ಟರಾಜ ಗೌಡರು, ಕೃಷಿಯಿಂದಲೇ ದೊಡ್ಡವರಾಗಿದ್ದಾರೆ. ಅವರ ದೂರವಾಣಿ ಸಂಖ್ಯೆ 08389–277858, 9480220222

***
ಈ ಜಾಗ ಅಪಜಯದ ಸ್ಥಳ ಎಂದೇ ಖ್ಯಾತವಾಗಿತ್ತು. ಹಲವರು ಇಲ್ಲಿ ಕೃಷಿ ಮಾಡಿ ಕೈಸುಟ್ಟುಕೊಂಡಿದ್ದರು. ಆದರೆ ಇದೇ ಸ್ಥಳದಲ್ಲಿ

ಪುಟ್ಟರಾಜ ಗೌಡರು  ಶ್ರದ್ಧೆ ಮತ್ತು ಪ್ರಯೋಗಶೀಲತೆಯಿಂದ ಯಶಸ್ಸು ಕಂಡಿದ್ದಾರೆ.  ತಾಲ್ಲೂಕಿನಲ್ಲಿ ಪಚೋಲಿ ಕೃಷಿಗೆ ಉತ್ತಮ ಅವಕಾಶವಿದೆ ಎಂದು ತೋರಿಸಿಕೊಟ್ಟಿದ್ದಾರೆ

ಉಮೇಶ ಹೆಗಡೆ, ಕೃಷಿ ವಸ್ತುಗಳ ವರ್ತಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT