ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬೂಟಾಟಿಕೆಯ ಮಾತಲ್ಲ!

Last Updated 27 ಡಿಸೆಂಬರ್ 2010, 10:45 IST
ಅಕ್ಷರ ಗಾತ್ರ

ನಾನು ಚಿಕ್ಕವನಿದ್ದಾಗ ನನ್ನ ಬಹುತೇಕ ರಜೆಯ ದಿನಗಳನ್ನು ಮೈಸೂರಿನಲ್ಲಿ ಕಳೆಯುತ್ತಿದ್ದೆ. ತಾತನ ಮನೆಯಲ್ಲಿ. ಬೆಂಗಳೂರಿನ ಸುಭಾಷ್ ಮೈದಾನದಿಂದ ಮೈಸೂರಿಗೆ ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್ ಹತ್ತಿದಾಗ, ಮನೆಯವರೆಲ್ಲ ಹಿಂದೆ ಕುಳಿತರೂ ನಾನು ಮಾತ್ರ ಹೇಗೋ ತೂರಿಕೊಂಡು, ಅವರಿವರನ್ನು ಗಿಂಜಿಕೊಂಡು ಡ್ರೈವರ್ ಪಕ್ಕದ ಸೀಟನ್ನು ಗಿಟ್ಟಿಸಿಕೊಳ್ಳುತ್ತಿದ್ದೆ. ಅಲ್ಲಿಂದ ಮೈಸೂರಿನವರೆಗೆ ಡ್ರೈವರ್‌ನನ್ನು ನೋಡುತ್ತಿರುವುದೇ ಒಂದು ಖುಷಿ. ಅವನ ಹಾವ-ಭಾವ, ಗೇರ್ ಹಾಕುವ ಸ್ಟೈಲ್, ಬ್ರೇಕ್ ಒತ್ತುವ ಬಗೆ, ಸ್ಟೀರಿಂಗ್ ತಿರುಗಿಸುವ ವೈಖರಿ, ಹಾರ್ನ್ ಒತ್ತುವ ಭಂಗಿ, ಕಾಲರ್ ಮೇಲೆ ಮಾಡಿ ಶರ್ಟಿನ ಎರಡು ಗುಂಡಿಗಳನ್ನು ಬಿಚ್ಚಿ ಎದೆಗೆ ತನ್ನ ಕರ್ಚೀಫಿನಿಂದ ಗಾಳಿ ಹೊಯ್ದುಕೊಳ್ಳುತ್ತಿದ್ದ ರೀತಿ ಹೀಗೆ ಅವನ ಎಲ್ಲ ಬಗೆಯ ಚಟುವಟಿಕೆಗಳನ್ನು ನೋಡುತ್ತ ನಾನು ಮಂತ್ರಮುಗ್ಧನಾಗಿರುತ್ತಿದ್ದೆ. ಯಾರಾದರೂ ಆ ಹೊತ್ತಿನಲ್ಲಿ ನನ್ನನ್ನು ನೀನೇನಾಗಬೇಕೆಂದಿದ್ದೀಯೆ ಎಂದು ಪ್ರಶ್ನಿಸಿದರೆ “ನಾನು ಬಸ್ ಡ್ರೈವರ್ ಆಗಬೇಕೆಂದಿದ್ದೇನೆ!” ಎಂಬುದೊಂದೇ ನನ್ನ ಉತ್ತರ! ಮಿಕ್ಕೆಲ್ಲ ಗೌಣ.

ಮೈಸೂರಿನಲ್ಲಿ ಬಸ್ಸಿನಿಂದ ಇಳಿದ ತಕ್ಷಣ ಅಲ್ಲಿಯವರೆಗಿನ ನನ್ನ ಡ್ರೈವರ್ ಆಗಬೇಕೆಂಬ ಅದಮ್ಯ ಗುರಿ ಕ್ಷಣಾರ್ಧದಲ್ಲಿ ಮಾಯ. ಅಲ್ಲಿಂದ ತಾತನಿದ್ದ ಲಕ್ಷ್ಮೀಪುರಂನ ಮನೆಯವರೆಗೆ ಜಪ್ಪಯ್ಯ ಅಂದರೂ ನಾನು ನಡೆದದ್ದಿಲ್ಲ. ಬಸ್ ಹತ್ತಿದ್ದಂತೂ ಇಲ್ಲವೇ ಇಲ್ಲ. ಏನಿದ್ದರೂ ಜಟಕಾ ಬಂಡಿಯೇ ಆಗಬೇಕು. ಜಟಕಾ ಓಡಿಸುವವನ ಪಕ್ಕದಲ್ಲಿ ಹುಲ್ಲಿನ ಮೆದೆಯ ಮೇಲೆ ಒಂದು ಕಾಲನ್ನಿಟ್ಟು, ಇನ್ನೊಂದನ್ನು ಗಾಳಿಯಲ್ಲಿ ನೆಲದೆಡೆ ಹೊರ ಚೆಲ್ಲುತ್ತ, ಆಗಾಗ್ಗೆ ಅವನಿಂದ ಅಂಗಲಾಚಿ ಪಡೆದ ಚಾಟಿಯಿಂದ ಕುದುರೆಗೆ ನೋವಾಗದ ಹಾಗೆ ಹೊಡೆಯುತ್ತ, “ಹೇಯ್, ಹೇಯ್‌” ಎಂದು ಅಪಸ್ವರದಲ್ಲಿ ಕಿರುಚುತ್ತ ಮುಂದೆ ಸಾಗುವಾಗ ವಿಶ್ವವನ್ನು ಗೆದ್ದ ಅಲೆಗ್ಸಾಂಡರಿನಿಗಿಂತ ಹತ್ತು ಪಟ್ಟು ಹೆಮ್ಮೆ. ಮನೆಯಲ್ಲಿ ಅಜ್ಜಿ ನನ್ನನ್ನು ಮತ್ತದೇ ಪ್ರಶ್ನೆ ಕೇಳಿದಾಗ ನನ್ನದು ಒಂದೇ ಉತ್ತರ “ಅಜ್ಜಿ, ನಾನು ಜಟಕಾ ಓಡಿಸಬೇಕೆಂದಿದ್ದೇನೆ!” ಮಿಕ್ಕೆಲ್ಲ ಗೌಣ!

ಹೀಗೆಯೇ ನನ್ನದು ದಿನಕ್ಕೊಂದು ಗುರಿ. ಬದುಕಿಗೆ ದಿನಕ್ಕೊಂದು ಕಾರಣ. ಯಾರೂ ಕೂಡ ಇಷ್ಟೊಂದು ತೀವ್ರಗತಿಯಲ್ಲಿ ಬದಲಾಗುತ್ತಿದ್ದ ನನ್ನ ಧ್ಯೇಯಗಳ ವಿವರ ಕೇಳಿ ಕಸಿವಿಸಿಗೊಳ್ಳುತ್ತಿರಲಿಲ್ಲ. ಬದಲಾಗಿ ಇದೊಂದು ಮುಗ್ಧತೆಯ ಪರಾಕಾಷ್ಠೆ ಎಂದಷ್ಟೇ ತಿಳಿದು, ನಕ್ಕು ಸುಮ್ಮನಾಗಿಬಿಡುತ್ತಿದ್ದರು.

ನಾನು ಹಲವಾರು ಕಂಪೆನಿಗಳನ್ನು ಕಂಡಿದ್ದೇನೆ. ಅವುಗಳ ಗುರಿಗಳು ಹೆಚ್ಚು-ಕಡಿಮೆ ನನ್ನ ಬಾಲ್ಯದ ದಿನಗಳನ್ನೇ ಹೋಲುತ್ತದೆ.ಅವುಗಳದು ತಿಂಗಳಿಗೊಂದೊಂದು ಗುರಿ. ತಾವು ಸೇರಬೇಕಾದ ದಡದ ಮಾಹಿತಿ ಇಲ್ಲದೆಯೇ ಹುಟ್ಟು ಹಾಕುತ್ತಿರುತ್ತಾರೆ.ಅಂತೆಯೇ ಅಂತಹ ಕಂಪೆನಿಗಳನ್ನು ಅದರ ಗ್ರಾಹಕರಾಗಲೀ, ಮಾಧ್ಯಮದವರಾಗಲೀ ಅಥವಾ ಅದರದೇ ನೌಕರ ವರ್ಗವಾಗಲೀ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಅವುಗಳ ಬಾಲ್ಯಚೇಷ್ಟೆಗಳನ್ನು ಕಂಡು ಆದೆಷ್ಟು ಬೇಗ ಇವುಗಳಿಂದ ದೂರ ನಿಲ್ಲುವ ಪ್ರಯತ್ನದಲ್ಲಿರುತ್ತಾರೆ. ಅಷ್ಟೆ!

ಒಂದು ಕಂಪೆನಿಗೆ ಮೂಲಭೂತವಾಗಿ ತನ್ನದೇ ಆದ ಎರಡು ದಿಕ್ಸೂಚಿಗಳಿರಬೇಕು. ಒಂದನ್ನು mission statement ಎಂದೂ, ಇನ್ನೊಂದನ್ನು vision statement ಎಂದೂ ಮ್ಯಾನೇಜ್‌ಮೆಂಟ್ ಪ್ರಾಜ್ಞರು ಕರೆಯುತ್ತಾರೆ. ಇವುಗಳನ್ನೇ ನಾನು “ಉದ್ದೇಶ ವಾಕ್ಯ” ಹಾಗೂ “ಧ್ಯೇಯವಾಕ್ಯ” ಎಂದು ಕರೆಯಲಿಚ್ಛಿಸುತ್ತೇನೆ. ಆಗಿಂದಾಗ್ಗೆ ಮೂಡಿಬರುವ ಉದ್ದೇಶ ವಾಕ್ಯಗಳು ಕಂಪೆನಿಯೊಂದರ ಪ್ರಸ್ತುತ ಕಾಲಘಟ್ಟದ ಗುರಿಯನ್ನು ಚಿತ್ರಿಸಿದರೆ, ಅವುಗಳ ಮಿಲನ ದೂರದಲ್ಲಿನ ಧ್ಯೇಯವಾಕ್ಯವೇ ಆಗಿರಬೇಕು. ಮೊದಲನೆಯದು ಸರಿದಾರಿಯನ್ನು ತೋರಿದರೆ, ಎರಡನೆಯದು ಅಂತಿಮ ಸಾಧನೆಯನ್ನು ನೆನಪು ಮಾಡಿಸುತ್ತಿರಬೇಕು.

ಯಾವುದೇ ಕಂಪೆನಿಯಾಗಲಿ, ಈ ಎರಡೂ ವಾಕ್ಯಗಳನ್ನು ಮೊದಲೇ ಹುಟ್ಟುಹಾಕಿಕೊಳ್ಳಬೇಕು. ಬೋರ್ಡ್‌ರೂಮಿನ ಹಾಗೂ ಅದರ ಸುತ್ತಮುತ್ತಲಿನ ಮಂದಿ ಈ ಎರಡೂ ಹೇಳಿಕೆಗಳನ್ನು ಜೋಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಏಕೆಂದರೆ, ಮೇಲ್ನೋಟಕ್ಕೆ ಇವುಗಳು ಬರಿಯ ಸೂತ್ರವೊಂದರ ಪದಪುಂಜಗಳಂತೆ ತೋರಿಬಂದರೂ ಹೊರಜಗತ್ತಿನ ಎಲ್ಲರಿಗೂ ಕಂಪೆನಿಯ ನಿಜ ಪರಿಚಯವನ್ನು ಮಾಡಿಸುವ ಹಾಗೂ ತನ್ನದೇ ಸಿಬ್ಬಂದಿ ವರ್ಗದವರನ್ನೆಲ್ಲ ಒಂದುಗೂಡಿಸುತ್ತ ಸರ್ವದಾ ಹುರಿದುಂಬಿಸುವ ಪ್ರಚಂಡ ಸಾಧನಗಳಾಗಿರುತ್ತವೆ ಕೂಡ. ಅನೇಕ ಕಂಪೆನಿಗಳು ಈ ಎರಡೂ ಹೇಳಿಕೆಗಳನ್ನು ಒಂದೆರಡು ನಿಮಿಷಗಳಲ್ಲೇ ಕಾಟಾಚಾರಕ್ಕಾಗಿ ಬರೆದು,   ಪ್ರಕಟಣೆಗಳಲ್ಲಿ ಬಿಂಬಿಸಿ, ತನ್ನ ಲೆಕ್ಕ ಪುಸ್ತಕಗಳಲ್ಲಿ ಪ್ರಕಟಿಸಿ ಅವುಗಳನ್ನಲ್ಲೇ ಮರೆತೂ ಬಿಡುತ್ತವೆ.

ಇವುಗಳಿಗೆ ಹೊರತಾದ ಅಸಾಧಾರಣ ಕಂಪೆನಿಗಳೂ ಇರುತ್ತವೆ. ಅವುಗಳು ಈ ಹೇಳಿಕೆಗಳನ್ನು ಶ್ರದ್ಧೆಯಿಂದ ಬಹಳ ಶ್ರಮವಹಿಸಿ, ಎಲ್ಲರೊಡನೆ ಪರಾಮರ್ಶಿಸಿ, ಎಲ್ಲರಿಗೂ ಅರ್ಥವಾಗುವಂತೆ, ಎಲ್ಲರಿಂದಲೂ ಸಾಧಿಸಲಾಗುವಂತೆ ಹಾಗೂ ಹೊರ ಜಗತ್ತಿಗೆ ತನ್ನ ಪರಿಚಯವನ್ನು ದ್ವಂದ್ವಗಳಿಲ್ಲದೆಯೇ ನೇರವಾಗಿ ತಿಳಿಸುವಂತೆ ರೂಪಿಸಿಕೊಳ್ಳುತ್ತವೆ.

ಕಂಪೆನಿಯ ಎಲ್ಲರ ಚಿಂತನೆಗಳು ಹಾಗೂ ಅವರ ಕಾರ್ಯಗಳು ಈ ಎರಡು ವಾಕ್ಯಗಳನ್ನು ಬೆನ್ನಟ್ಟುವ ಹಾಗೆ ಮಾಡುತ್ತಿರುತ್ತವೆ. ಅಂತಹ ಕಂಪೆನಿಗಳು ನೀರಿನ ಮೇಲಿನ ಗುಳ್ಳೆಗಳಾಗದೆ ಒಟ್ಟಾರೆ ವಿಜಯದ ಯಾತ್ರೆಯಲ್ಲಿ ಸಾಗುತ್ತಿರುತ್ತವೆ ಎಂಬುದಂತೂ ಸತ್ಯ.ಈ ಎರಡು ವಾಕ್ಯಗಳನ್ನು ಹೇಗೆ ರಚಿಸಬೇಕು? ಅವುಗಳನ್ನು ಹೇಗೆ ಬಳಸಬೇಕು? ಅವುಗಳ ಗಾತ್ರ, ಗಮನ, ಅಂತರ ಎಂತಿಷ್ಟಿರಬೇಕು? ಇತ್ಯಾದಿ ಅನೇಕ ಪ್ರಶ್ನೆಗಳಿಗೆ ಪುಟಗಳಷ್ಟು ಉತ್ತರಗಳನ್ನು ಅಮೆರಿಕದ ಮ್ಯಾನೇಜ್‌ಮೆಂಟ್ ಪಂಡಿತರು ತಮ್ಮ ಗ್ರಂಥಗಳಲ್ಲಿ ಬರೆದಿದ್ದಾರೆ. ಈ ಅಂಕಣದ ಗುರಿ ಖಂಡಿತವಾಗಿಯೂ ಅದಲ್ಲ. ಏನಿದ್ದರೂ ಇವುಗಳ ಸೂಕ್ತಾಸೂಕ್ತತೆಯನ್ನು ತಿಳಿಸಿಕೊಡುವುದೊಂದೇ ಇಲ್ಲಿಯ ಉದ್ದೇಶ.


ಕುರುಕ್ಷೇತ್ರದಲ್ಲಿ ಕೃಷ್ಣನದು ಒಂದೇ ಒಂದು ಧ್ಯೇಯವಾಕ್ಯ. “ಧರ್ಮ ಸಂಸ್ಥಾಪನೆಯೇ” ಅವನ ಅಂತಿಮ ಚಿತ್ತ. ಈ ಧ್ಯೇಯವಾಕ್ಯದ ಪರಿಪಾಲನೆಯಲ್ಲೇ ಅವನ ಎಲ್ಲ ಚಿಂತನೆ, ಸಾಧನೆ ಹಾಗೂ ಉದ್ದೇಶ ವಾಕ್ಯಗಳು, ಇದರಡಿಯಲ್ಲಿ ವಿಶ್ಲೇಷಿಸಿದಾಗ ಮೇಲ್ನೋಟಕ್ಕೆ ಸರಿಯಲ್ಲವೆಂದು ತೋರಿಬರುವ ಅವನ ಎಲ್ಲ ಯುದ್ಧ ತಂತ್ರಗಳೂ ಸೂಕ್ತವೆನ್ನಿಸುತ್ತವೆ. ಅವನ ಗೀತೋಪದೇಶ ನಮಗೆಲ್ಲ ಪರಮ ಪೂಜ್ಯವಾಗುತ್ತದೆ.

ನಮ್ಮ ಸ್ವಾತಂತ್ರ್ಯ ಸಂಗ್ರಾಮ ಯಶಸ್ವಿಯಾದದ್ದೂ ಇಂತಹ ವೇದವಾಕ್ಯಗಳಿಂದ ಹಾಗೂ ಅವುಗಳ ಪ್ರಾಮಾಣಿಕ ಅನುಷ್ಠಾನದಿಂದ.ವೈಯಕ್ತಿಕವಾಗಿ ನನಗೆ ಪ್ರಭಾವ ಬೀರಿದ ನಮ್ಮ ಸ್ವಾತಂತ್ರ್ಯ ಸಮರದ ಧ್ಯೇಯ ವಾಕ್ಯವೆಂದರೆ, ಸನ್ಮಾನ ಗೋಖಲೆಯವರು ನುಡಿದ “ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು. ನಾನದನ್ನು ಪಡೆದೇ ತೀರುತ್ತೇನೆ” ಎಂಬುದೇ ಆಗಿದೆ. “ಬಿಳಿಯರೇ, ನಮ್ಮ ದೇಶವನ್ನು ಬಿಟ್ಟು ತೊಲಗಿರಿ” ಇತ್ಯಾದಿ ಉದ್ದೇಶ ವಾಕ್ಯಗಳೆಲ್ಲ ಗೋಖಲೆಯವರ ಧ್ಯೇಯವಾಕ್ಯವನ್ನು ಸಾಕಾರಗೊಳಿಸಿದವುಗಳೇ ಆಗಿವೆ. ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲವೆಂಬುದು ಸತ್ಯವೇ ಆದರೂ, ಮಾವಿನ ಕಾಯಿಯನ್ನು ಉದುರಿಸಲು ನಮ್ಮನ್ನು ಸಜ್ಜಾಗಿಸುವತ್ತ ಮಂತ್ರಗಳ ಮಹತ್ವವಿದೆ ಎಂಬ ಸತ್ಯವನ್ನೂ ನಾವು ಅರಿತುಕೊಳ್ಳಬೇಕು!

ಈ ಎರಡು ವಾಕ್ಯಗಳ ಮೂಲಭೂತ ಕೆಲಸಗಳಲ್ಲಿ ನನ್ನ ಮಟ್ಟಿಗೆ ಅತ್ಯಂತ ಮುಖ್ಯವಾದದ್ದು, ಕಂಪೆನಿಯ ಸಿಬ್ಬಂದಿ ವರ್ಗದವರ ಮೇಲೆ ಇದು ಬೀರಬಹುದಾದ ಸಕಾರಾತ್ಮಕ ಪರಿಣಾಮ. ಈ ವಾಕ್ಯಗಳನ್ನು ಸರಿಯಾದ ರೀತಿಯಲ್ಲಿ ರೂಪಿಸಿ ಬಳಸಿಕೊಂಡರೆ ಕಂಪೆನಿಯ ಬಹುತೇಕ ಜನರ ಉದ್ದೇಶ ಹಾಗೂ ಧ್ಯೇಯಗಳೂ ಇದರೊಟ್ಟಿಗೆ ಸಂಗಮಿಸಿ, ಕಂಪೆನಿಯ ಕಾರ್ಯತತ್ಪರತೆ ಯಾರೂ ಭೇದಿಸಲಾಗದ ವಜ್ರ ಕವಚವಾದೀತು!

ವರ್ತಕನೊಬ್ಬ ತನ್ನ ಕತ್ತೆಯ ಬೆನ್ನಿಗೆ ಎರಡು ಉಪ್ಪಿನ ಮೂಟೆಗಳನ್ನು ಹೇರಿ ವ್ಯಾಪಾರಕ್ಕೆ ಕರೆದೊಯ್ಯುತ್ತಿದ್ದ. ದಾರಿಗಡ್ಡವಾದ ನದಿ ದಾಟುವಾಗ ಒಮ್ಮೆ ಎಡವಿದ ಕತ್ತೆಗೆ, ನೀರಿನಲ್ಲೊಮ್ಮೆ ಮುಳುಗಿ ಮೇಲೆದ್ದಾಗ ತನ್ನ ಬೆನ್ನಿನ ಭಾರ ಕಡಿವೆುಯಾದದ್ದು ತಿಳಿದುಬಂತು.ಏಕೆಂದರೆ ಸಾಕಷ್ಟು ಉಪ್ಪು ನೀರಿನಲ್ಲಿ ಕರಗಿಹೋಗಿತ್ತು. ಕತ್ತೆಗೋ ಇದರಿಂದ ಪರಮಾನಂದ. ಯಜಮಾನನ ಕೆಲಸವನ್ನೂ ಮಾಡುತ್ತ ಜೊತೆಗೇ ತನ್ನ ಕೆಲಸವನ್ನು ಹಗುರಗೊಳಿಸಿಕೊಂಡ ವಿಧಾನ ಅರಿತ ವಿಜಯೋತ್ಸವ. ಮುಂದೆಯೂ ಉಪ್ಪಿನ ಮೂಟೆ ಹೊತ್ತು ನದಿ ದಾಟುವಾಗಲೆಲ್ಲ ಕತ್ತೆ ಬೇಕೆಂದೇ ಎಡವಿ ಬೀಳುತ್ತಿತ್ತು. ತನ್ನ ಬುದ್ಧಿವಂತಿಕೆಗೆ ತಾನೇ ಬೆನ್ನು ತಟ್ಟಿಕೊಳ್ಳುತ್ತಿತ್ತು. ಆದರೆ ಇದರಿಂದಾಗಿ ವರ್ತಕರಿಗೆ ಸಾಕಷ್ಟು ನಷ್ಟ. ತಾನಂದುಕೊಂಡಿದ್ದ ಲಾಭ ಕೊನೆಯಲ್ಲಿ ದೊರಕದೆ ಆ ವರ್ತಕ ಈ ವ್ಯಾಪಾರವನ್ನೇ ಕೈಬಿಟ್ಟು ಕತ್ತೆಯನ್ನು ಹೊಡೆದು ಕಾಡಿಗಟ್ಟಿಬಿಟ್ಟ!

ಯೋಚಿಸಿ ನೋಡಿ. ವರ್ತಕನ ಧ್ಯೇಯಕ್ಕೂ ಹಾಗೂ ಅವನ ನೌಕರಿಯಲ್ಲಿದ್ದ ಕತ್ತೆಯ ಉದ್ದೇಶಕ್ಕೂ ಅಜಗಜಾಂತರ ವ್ಯತ್ಯಾಸ. ಇಬ್ಬರೂ ತಮ್ಮದೇ ನಿಟ್ಟಿನಲ್ಲಿ ಯೋಚಿಸುತ್ತ ಅದರಂತೆಯೇ ನಡೆದರು. ಹೀಗಾಗಿ ಫಲಿತಾಂಶ ಕಡೆಯಲ್ಲಿ ಇಬ್ಬರಿಗೂ ಸರಿಬರಲಿಲ್ಲ. ಹೀಗೊಮ್ಮೆ ವರ್ತಕ ತನ್ನ ಧ್ಯೇಯವನ್ನು ಕತ್ತೆಗೆ ಅರಿವಾಗುವ ಹಾಗೆ ತಿಳಿಸಿಕೊಟ್ಟಿದ್ದರೆ, ಕತ್ತೆಯೂ ತನ್ನ ಉದ್ದೇಶವನ್ನು ಆ ಧ್ಯೇಯದ ಸಾಕ್ಷಾತ್ಕಾರದತ್ತಲೇ ಹಮ್ಮಿಕೊಂಡಿರುತ್ತಿತ್ತು. ಆಗ ಅವರಿಬ್ಬರ ಜೀವನವೂ ಉಪ್ಪಿನ ಹಾಗೆ ನೀರಿನಲ್ಲಿ ಕರಗಿಹೋಗುವ ಪ್ರಮೇಯವೇ ಬರುತ್ತಿರಲಿಲ್ಲ.

ಕಡೆಯಲ್ಲಿ ಒಂದು ಮಾತು! ನಿಮ್ಮ ಊರಿನ ಯಾವುದಾದರೂ ಉತ್ತಮ ಕಂಪೆನಿಯ ನಿಮ್ಮ ಸ್ನೇಹಿತರನ್ನು ಮತ್ತು ಆ ಕಂಪೆನಿಯಲ್ಲಿ ಈ ಎರಡು ವಾಕ್ಯಗಳ ಬಗ್ಗೆ ವಿಚಾರಿಸಿ. ಅವುಗಳ ಅರ್ಥವನ್ನು ನಿಮಗೆ ತಿಳಿಸುವಂತೆ ಕೇಳಿ. ಶೇಕಡಾ ತೊಂಬತ್ತು ಮಂದಿಗೆ ಇದು ತಿಳಿದಿರುವುದಿಲ್ಲ. ಹಾಗೊಮ್ಮೆ ತಿಳಿದಿದ್ದರೂ ಇವುಗಳ ನಿಜಸ್ವರೂಪದ ಪರಿಚಯ ಅವರಿಗಿರುವುದಿಲ್ಲ. ಮುಖ್ಯವಾಗಿ ಹೇಗೆ ತಮ್ಮ ಕೆಲಸ ಸಾಧನೆಯಲ್ಲಿ ಪೂರಕವಾಗಿದೆ ಎಂಬ ಅರಿವಂತೂ ಖಂಡಿತವಾಗಿಯೂ ಇರುವುದಿಲ್ಲ. ತಪ್ಪು ನಿಮ್ಮ ಸ್ನೇಹಿತರದ್ದಲ್ಲ. ಅವರ ಕಂಪೆನಿಯ ಬೋರ್ಡ್‌ರೂಮಿನ ಸುತ್ತಮುತ್ತ ಈ ವಾಕ್ಯಗಳಿಗೆ ಮನ್ನಣೆ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ! ನನಗಂತೂ ಹಾಗೆಯೇ ತೋರುತ್ತದೆ!                     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT