ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಭಾರತದ ವೇಗ

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಅಂದು ಆನಂದ ಶೆಟ್ಟಿ ಬಿಲ್ಲಿನಿಂದ ಬಿಟ್ಟ ಬಾಣದಂತೆ ಓಡಿದ್ದರು. ಅವರಿಗೆ ಪೈಪೋಟಿಯೇ ಇರಲಿಲ್ಲ. ಅವರು ಮೊದಲಿಗರಾಗಿ ಗುರಿ ಮುಟ್ಟಿದಾಗ ರೈಲ್ವೇಸ್‌ನ ಸೋಮಶೇಖರ್ ಐದಾರು ಅಡಿ ಹಿಂದಿದ್ದರು. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ 1987ರಲ್ಲಿ ನಡೆದ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 100 ಮೀಟರ್ಸ್ ಓಟದ ರೋಚಕ ಕ್ಷಣವದು.

ಹೌದು, ಆನಂದ ಶೆಟ್ಟಿ ಅಂದು ದೇಶದ `ವೇಗದ ರಾಜ~ ಎನಿಸಿದ್ದರು.
ಮೈದಾನದ ಸುತ್ತಲೂ ಕಿಕ್ಕಿರಿದಿದ್ದವರು ತಮ್ಮೂರ ಹುಡುಗನ ಮಿಂಚಿನ ಓಟವನ್ನು ನೋಡಿ ಕುಣಿದು ಕುಪ್ಪಳಿಸಿದ್ದರು. ಪಿ.ಟಿ.ಉಷಾ, ಶೈನಿ ವಿಲ್ಸನ್, ವಂದನಾರಾವ್, ರಾಮಿರೆಡ್ಡಿ... ಸೇರಿದಂತೆ ಆ ದಶಕದ ಶ್ರೇಷ್ಠ ಅಥ್ಲೀಟ್‌ಗಳೆಲ್ಲಾ ಆನಂದ ಶೆಟ್ಟಿಯನ್ನು ಸುತ್ತುವರಿದು ಅಭಿನಂದಿಸಿದ್ದರು.
 
ಅರಳು ಹುರಿದಂತೆ ಮಾತನಾಡುತ್ತಾ ಆನಂದದ ಬುಗ್ಗೆಯಂತಿದ್ದ ಶೆಟ್ಟರು ವರ್ಷಗಳುರುಳಿದಂತೆ `ಮೌನಿ~ಯಾದರು. ಜನಮಾನಸದಿಂದ ಮರೆತೇ ಹೋದರು. ಆ `ಮೌನ~ದೊಳಗೆ ಈ ನೆಲದ ವೇಗದ ಓಟಕ್ಕೆ ಸಂಬಂಧಿಸಿದ ನೂರೆಂಟು ವಿಷಾದದ ಕಥೆಗಳು ಧುಮುಗುಟ್ಟುತ್ತಲೇ ಇವೆ.

ಎಂಬತ್ತರ ದಶಕದ ರಾಷ್ಟ್ರೀಯ ಅಥ್ಲೆಟಿಕ್ ಕೂಟಗಳಲ್ಲಿ ವೇಗದ ಓಟವೆಂದರೆ ಆನಂದ ಶೆಟ್ಟಿ ಮತ್ತು ರಾಮಿರೆಡ್ಡಿಯವರ ಸೆಣಸಾಟದ್ದೇ ಕಥೆ. ಎಪ್ಪತ್ತರ ದಶಕದಲ್ಲಿ ವೇಗದ ತಾರೆಯಾಗಿದ್ದ ಜ್ಞಾನಶೇಖರ್ ಅವರನ್ನು 1982ರ್ಲ್ಲಲಿ ಹಿಂದಿಕ್ಕಿದ್ದ ಆನಂದಶೆಟ್ಟಿ, ಅದರ ಮರುವರ್ಷವೇ ರಾಷ್ಟ್ರೀಯ ಚಾಂಪಿಯನ್ ಅದಿಲ್ ಸುಮೆರಿವಾಲಾ (ಪ್ರಸಕ್ತ ಇವರು ಅಖಿಲ ಭಾರತ ಅಥ್ಲೆಟಿಕ್ ಫೆಡರೇಷನ್ ಅಧ್ಯಕ್ಷರಾಗಿದ್ದಾರೆ) ಅವರನ್ನೂ ಹಿಂದಿಕ್ಕಿದ್ದರು. ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಆನಂದ್, ಎರಡು ಏಷ್ಯಾಡ್, ಐದು ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಕೂಟಗಳಲ್ಲಿ ಪಾಲ್ಗೊಂಡ ಅನುಭವಿ.

ಇಸ್ಲಾಮಾಬಾದ್‌ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್‌ನ 4x100 ಮೀ. ರಿಲೆಯಲ್ಲಿ ಆನಂದಶೆಟ್ಟಿ, ಅರ್ಜುನ್ ದೇವಯ್ಯ, ಆನಂದ ನಟರಾಜನ್, ವಿಜು ಅವರಿದ್ದ ತಂಡ ಕೂಟ ದಾಖಲೆ ಮಾಡಿತ್ತು.

ವಿಶಾಖಪಟ್ಟಣದ ನಿಲವು ರಾಮಿರೆಡ್ಡಿ, ಆಂಧ್ರದಲ್ಲಿ ಅಲ್ಲಿನ ಸರ್ಕಾರ ಕ್ರೀಡಾ ಹಾಸ್ಟೆಲ್ ವ್ಯವಸ್ಥೆ ಶುರು ಮಾಡಿದಾಗ ಅದರ ಮೊದಲ ಪೀಳಿಗೆಯ ಓಟಗಾರ. 1984ರಲ್ಲಿ ಮುಕ್ತ ರಾಷ್ಟ್ರೀಯ ಕೂಟದ 100ಮೀ. ಓಟದಲ್ಲಿ ಚಾಂಪಿಯನ್ ಆಗಿದ್ದರು. ಶೆಟ್ಟಿ, ರೆಡ್ಡಿ ಸಮರದ ನಡುವೆ ಸುಮೆರಿವಾಲಾ ನಿವೃತ್ತಿ ಪ್ರಕಟಿಸಿದರು.
 
ರೆಡ್ಡಿ 100 ಮೀಟರ್ಸ್ (10.8ಸೆ.) ಮತ್ತು 200 ಮೀಟರ್ಸ್ (21.01ಸೆ.) ಓಟಗಳಲ್ಲಿ ಅಂದು ಉತ್ತಮ ಸಾಧನೆ ತೋರಿದ್ದರು. ಭಾರತದಮಟ್ಟಿಗೆ ಆ ಕಾಲದ ಅತ್ಯುತ್ತಮ ಓಟಗಾರರಾಗಿದ್ದ ಶೆಟ್ಟಿ ಮತ್ತು ರೆಡ್ಡಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಇನ್ನಿಲ್ಲದಂತೆ ಹೆಣಗಾಡಿದ್ದರಾದರೂ ಯಶಸ್ವಿಯಾಗಲಿಲ್ಲ.

ಹೌದು, ಭಾರತದಲ್ಲಿ ಕಳೆದ ಒಂದು ಶತಮಾನದಲ್ಲಿ ಇಂತಹ ಹಲವಾರು ವೇಗದ ಓಟಗಾರರು ಮಿಂಚಿ ಮಾಯವಾಗಿದ್ದಾರೆ. ಕೆಲವರು ಒಲಿಂಪಿಕ್ಸ್‌ಗೆ ಹೋಗಿಯೂ ನಿರಾಸೆಗೊಂಡಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಹೊಳೆದವರು ಇಲ್ಲವೇ ಇಲ್ಲ.

ಭಾರತ ಗೆದ್ದಿರುವುದು ಇದೊಂದೇ ಪದಕ!

ಒಲಿಂಪಿಕ್ಸ್‌ನಲ್ಲಿ ಓಡಿದ ಭಾರತದ ವೇಗದ ಓಟಗಾರರು ಎಂದೊಡನೆ ಸ್ಮೃತಿಪಟಲದಲ್ಲಿ ಮೂಡುವ ಮೊದಲ ಹೆಸರು ನಾರ್ಮನ್ ಗಿಲ್ಬರ್ಟ್ ಪ್ರಿಚರ್ಡ್. ಕೋಲ್ಕತ್ತಾದಲ್ಲಿ ಹುಟ್ಟಿದ (23-6-1875) ಆಂಗ್ಲೊ ಇಂಡಿಯನ್ ಪ್ರಿಚರ್ಡ್ ಅಲ್ಲಿನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಪದವಿ ಪಡೆದರು. 1897ರ ಸುಮಾರಿಗೆ ಬಂಗಾಳ ಪ್ರಾಂತ್ಯದ ಬಲು ಜನಪ್ರಿಯ ಫುಟ್‌ಬಾಲ್ ಆಟಗಾರನಾಗಿದ್ದ ಇವರು ಅದೇ ಸಮಯದಲ್ಲಿ ಆ ಪ್ರದೇಶದ 100 ಯಾರ್ಡ್ ಓಟದ ಸ್ಪರ್ಧೆಗಳಲ್ಲಿ ಹಲವು ಸಲ ಪ್ರಶಸ್ತಿ ಗೆದ್ದಿದ್ದರು.

ಅಲಿಪುರದಲ್ಲಿ ಲೆಕ್ಕ ಪರಿಶೋಧಕರಾಗಿ ಕೆಲಸ ಮಾಡುತ್ತಿದ್ದರಾದರೂ, ಕ್ರೀಡಾ ಚಟುವಟಿಕೆಗಳಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಇಂಡಿಯನ್ ಫುಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ದುಡಿದಿದ್ದರು.
 
ಇವರು 1900ರಲ್ಲಿ ಪ್ಯಾರಿಸ್‌ಗೆ ತೆರಳಿ ಅಲ್ಲಿ ನಡೆದಿದ್ದ ಎರಡನೇ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 200 ಮೀಟರ್ಸ್ ಸ್ಪರ್ಧೆಯಲ್ಲಿ 22.8 ಸೆಕೆಂಡುಗಳಲ್ಲಿ ಓಡಿ ಬೆಳ್ಳಿಯ ಪದಕ ಗೆದ್ದಿದ್ದರು. ಆ ನಂತರ ಈವರೆಗೂ ಭಾರತ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಒಂದೇ ಒಂದು ಪದಕ ಗೆಲ್ಲಲಾಗಿಲ್ಲ.

ಪ್ಯಾರಿಸ್‌ನಲ್ಲಿ 1924ರಲ್ಲಿ ಎರಡನೇ ಸಲ ಒಲಿಂಪಿಕ್ಸ್ ನಡೆದಿತ್ತು. ಆಗ ಭಾರತವನ್ನು ಪ್ರತಿನಿಧಿಸಿದ್ದ ಟಿ.ಕೆ.ಪಿಟ್ ಎಂಬುವವರು 400 ಮೀಟರ್ಸ್ ಓಟದ ಸೆಮಿಫೈನಲ್ ತಲುಪಿದ್ದರು.

1932ರ ಲಾಸ್‌ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮರ್ವಿನ್ ಸಟ್ಟಾನ್ ಎಂಬಾತ 110 ಮೀಟರ್ಸ್ ಹರ್ಡಲ್ಸ್‌ನಲ್ಲಿ 7ನೇ ಸ್ಥಾನ ಗಳಿಸಿದ್ದರು. 1948ರ ಲಂಡನ್ ಒಲಿಂಪಿಕ್ಸ್‌ನ 110 ಮೀಟರ್ಸ್ ಹರ್ಡಲ್ಸ್‌ನಲ್ಲಿ ಓಡಿದ ಜಿಮ್ ವಿಕರ್ಸ್ ಕೂಡಾ ಸೆಮಿಫೈನಲ್ ತಲುಪಿ ನಿರ್ಗಮಿಸಿದ್ದರು.
 
ಮೂಲತಃ ಕೇರಳದವರಾದ ಎರಿಕ್ ವಿಲ್ಸನ್ ಚೆನ್ನೈನಲ್ಲಿಯೇ ತಮ್ಮ ಶಿಕ್ಷಣ ಪೂರೈಸಿ ಬೆಂಗಳೂರಿನಲ್ಲಿ ನೆಲಸಿದ್ದ ಹೆಸರುವಾಸಿ ಅಥ್ಲೀಟ್. ಇವರು 1948ರ ಲಂಡನ್ ಒಲಿಂಪಿಕ್ಸ್‌ನ 100 ಮೀಟರ್ಸ್ ಸ್ಪರ್ಧೆಯಲ್ಲಿ (10.8 ಸೆ.) ಕ್ವಾರ್ಟರ್ ಫೈನಲ್ ತಲುಪಿದ್ದರು.
 
ಇದರ ಜತೆಗೆ ಲ್ಯಾವಿ ಪಿಂಟೊ ಅವರನ್ನು ನೆನಪಿಸಿಕೊಳ್ಳಲೇಬೇಕು. ಐವತ್ತರ ದಶಕದ ಆರಂಭದಲ್ಲಿ ಏಷ್ಯಾದ ವೇಗದ ಓಟಗಾರರಲ್ಲಿ ಒಬ್ಬರಾಗಿದ್ದ ದೆಹಲಿಯ ಪಿಂಟೊ 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಏರಿದ ಎತ್ತರ ಅನನ್ಯ. ಇವರು 100 ಮತ್ತು 200 ಮೀಟರ್ಸ್ ಸ್ಪರ್ಧೆಗಳೆರಡರಲ್ಲಿಯೂ ಸೆಮಿಫೈನಲ್ ತಲುಪಿದ್ದರು.

ಮಿಲ್ಖಾ ಮಿಂಚು

ವೇಗದ ಓಟಕ್ಕೆ ಸಂಬಂಧಿಸಿದಂತೆ ಮಿಲ್ಖಾಸಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿಲ್ಲ. ಆದರೆ ಭಾರತದ ಮಟ್ಟಿಗೆ ದಂತಕಥೆ ಎನಿಸಿದ್ದಂತೂ ಹೌದು. ಇವರು 1956ರ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರಾದರೂ ಅದ್ಭುತ ಸಾಮರ್ಥ್ಯ ತೋರಿದ್ದು ರೋಮ್ ಒಲಿಂಪಿಕ್ಸ್‌ನಲ್ಲಿಯೇ.
 
1960ರ ರಾಷ್ಟ್ರೀಯ ಕ್ರೀಡಾಕೂಟದ 400 ಮೀಟರ್ಸ್ ಸ್ಪರ್ಧೆಯಲ್ಲಿ 46.1 ಸೆಕೆಂಡುಗಳಲ್ಲಿ ಇವರು ಓಡಿದ್ದರು. ಇವರು 45.63 ಸೆಕೆಂಡುಗಳಲ್ಲಿ ಓಡಿದ್ದ ಏಷ್ಯಾ ದಾಖಲೆಯೂ 26 ವರ್ಷಗಳ ಕಾಲ ಅಬಾಧಿತವಾಗಿತ್ತು.
 
ಇವರು ರೋಮ್‌ನಲ್ಲಿ 400 ಮೀಟರ್ಸ್ ಓಟದಲ್ಲಿ 45.6 ಸೆಕೆಂಡುಗಳಲ್ಲಿ ಓಡಿದ್ದರೆ, ದಕ್ಷಿಣ ಆಫ್ರಿಕಾದ ಎಂ.ಸ್ಪೆನ್ಸ್ 45.5 ಸೆಕೆಂಡುಗಳಲ್ಲಿ ಗುರಿಮುಟ್ಟಿ ಕಂಚಿನ ಪದಕ ಗೆದ್ದಿದ್ದರು. ಕೂದಲೆಳೆಯಷ್ಟು ಅಂತರದಿಂದ ಮಿಲ್ಖಾಸಿಂಗ್ ಪದಕ ವಂಚಿತರಾಗಿದ್ದರು. ಹೀಗಾಗಿ ಮಿಲ್ಖಾ ಭಾರತಕ್ಕೆ ವಾಪಸಾದ ಮೇಲೆ ಪದಕ ಗೆದ್ದ ಸಾಹಸಿ ಎಂಬಂತೆ ಜನ ಗೌರವಿಸಿದ್ದರು.
 
ಪಂಜಾಬ್‌ನ ಸಂಗ್ರೂರ್‌ನ ಅಜ್ಮೀರಾ ಸಿಂಗ್ ಟೋಕಿಯೊ ಒಲಿಂಪಿಕ್ಸ್‌ನ 4x400 ಮೀಟರ್ಸ್ ರಿಲೆ ತಂಡದಲ್ಲಿದ್ದರು. ಆದರೆ ಇವರು 1966ರ ಏಷ್ಯಾ ಅಥ್ಲೆಟಿಕ್ಸ್‌ನ 400 ಮೀಟರ್ಸ್ ಓಟದಲ್ಲಿ ಗಮನಾರ್ಹ ಸಾಮರ್ಥ್ಯ (47.1 ಸೆ.) ತೋರಿದ್ದನ್ನು ಮರೆಯುವಂತಿಲ್ಲ (ಕೆಳಗಿನ ಬಾಕ್ಸ್ ನೋಡಿ).

ಕೇರಳದ ಇಡುಕ್ಕಿ ಜಿಲ್ಲೆಯ ಕೆ.ಎಂ.ಬಿನು 2004ರ ಅಥೆನ್ಸ್ ಒಲಿಂಪಿಕ್ಸ್‌ನ 400 ಮೀಟರ್ಸ್ ಓಟದ ಮೊದಲ ಹೀಟ್ಸ್‌ನಲ್ಲಿ 45.48 ಸೆಕೆಂಡುಗಳಲ್ಲಿ ಓಡಿದ್ದರೆ, ಸೆಮಿಫೈನಲ್‌ನಲ್ಲಿ 45.97 ಸೆಕೆಂಡುಗಳಲ್ಲಿ ಓಡಿ ನಿರ್ಗಮಿಸಿದರಾದರೂ, ಮಿಲ್ಖಾಸಿಂಗ್ ಅವರ ಭಾರತದ ಮಟ್ಟಿಗಿನ ಒಲಿಂಪಿಕ್ಸ್ ದಾಖಲೆಯನ್ನು ಹಿಂದಿಕ್ಕಿದ್ದರು.

ಪ್ರಸಕ್ತ 100 ಮೀಟರ್ಸ್ ದಾಖಲೆ (10.3 ಸೆ.) ಹೈದರಾಬಾದ್‌ನ ಅಬ್ದುಲ್ ನಜೀಬ್ ಖುರೇಷಿ ಮತ್ತು ಕೇರಳದ ಅನಿಲ್ ಕುಮಾರ್ ಪ್ರಕಾಶ್ ಅವರ ಹೆಸರಲ್ಲಿದೆ. ಅನಿಲ್ ಕುಮಾರ್ 2005ರಲ್ಲಿ ದೆಹಲಿಯ ರಾಷ್ಟ್ರೀಯ ಅಥ್ಲೆಟಿಕ್ ಕೂಟದಲ್ಲಿ 10.3 ಸೆಕೆಂಡುಗಳಲ್ಲಿ ಓಡಿದ್ದರು. ಇವರು ಮೂರು ಸಲ ದೇಶದ ವೇಗದ ಚಾಂಪಿಯನ್ ಎನಿಸಿದ್ದರು.
 
ಅಬ್ದುಲ್ ನಜೀಬ್ ಖುರೇಷಿ 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪುವ ಯತ್ನದಲ್ಲಿ 10.3 ಸೆಕೆಂಡುಗಳಲ್ಲಿ ಓಡಿ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದ್ದರು. 200 ಮೀಟರ್ಸ್ ಓಟದ ರಾಷ್ಟ್ರೀಯ ದಾಖಲೆ (20.73 ಸೆ.) ಕೂಡಾ ಕಳೆದ ಒಂದು ದಶಕದಿಂದ ಅನಿಲ್ ಕುಮಾರ್ ಹೆಸರಿನಲ್ಲಿಯೇ ಇದೆ.

ಇವರೆಲ್ಲರ ನಡುವೆ ಬೆಂಗಳೂರಿನ ಎಂ.ಗೇಬ್ರಿಯಲ್ ಎಂಬುವವರ ಸಾಧನೆ ಇವತ್ತು ಯಾರ ನೆನಪಿನಲ್ಲೂ ಉಳಿದಿಲ್ಲ. ಐವತ್ತರ ದಶಕದ ಆರಂಭದಲ್ಲಿ ಇವರು ದೇಶದ ವೇಗದ ಓಟದ ಚಾಂಪಿಯನ್ ಆಗಿದ್ದರು. ಇವರು ಏಷ್ಯನ್ ಕ್ರೀಡಾಕೂಟದಲ್ಲಿ ಮೂರು ಪದಕಗಳನ್ನು ಗೆದ್ದಂತಹ ಧೀರ.

1951ರಲ್ಲಿ ದೆಹಲಿಯಲ್ಲೇ ನಡೆದ ಮೊದಲ ಏಷ್ಯಾಡ್‌ನ 200ಮೀ. ಓಟ ಮತ್ತು ರಿಲೆ ಸ್ಪರ್ಧೆಗಳಲ್ಲಿ ರಜತ ಪದಕಗಳನ್ನು ಗೆದ್ದಿದ್ದ ಇವರು, ಮನಿಲಾ ಏಷ್ಯನ್ ಕ್ರೀಡಾಕೂಟದಲ್ಲಿ 100 ಮೀಟರ್ಸ್ ಓಟದಲ್ಲಿ ಕಂಚಿನ ಪದಕ ಗಳಿಸಿದ್ದರು.

ಬೆಂಗಳೂರಿನ ಇವರು 40ರ ದಶಕದಲ್ಲಿ ಭಾರತದ ಹೆಸರಾಂತ ವೇಗದ ಓಟಗಾರರಾಗಿದ್ದರು. 1947ರಲ್ಲಿ ಸೇನೆಗೆ ಸೇರಿದ್ದು, ಸರ್ವಿಸಸ್ ಅಥ್ಲೆಟಿಕ್ ತಂಡವನ್ನು ರಾಷ್ಟ್ರೀಯ ಕೂಟಗಳಲ್ಲಿ ಪ್ರತಿನಿಧಿಸುತ್ತಿದ್ದರು.
 
ನಂತರ ರೈಲ್ವೆ ಇಲಾಖೆಗೆ ಕೆಲಸಕ್ಕೆ ಸೇರಿ ಆ ತಂಡವನ್ನು ಪ್ರತಿನಿಧಿಸುತ್ತಿದ್ದರು. ಹಿಂದೆ ಅವರೊಡನೆ ಮಾತನಾಡುವಾಗಲೆಲ್ಲಾ ತಾವು 1952ರ ಹೆಲ್ಸಿಂಕಿ ಒಲಿಂಪಿಕ್ಸ್ ತಂಡಕ್ಕೆ ಆಯ್ಕೆಯಾಗಿದ್ದರೂ, ಅದೇ ಸಮಯದಲ್ಲಿ ತೀವ್ರವಾಗಿ ಕಾಡಿದ್ದ ನ್ಯುಮೋನಿಯಾದಿಂದಾಗಿ ತಮಗೆ ಅಲ್ಲಿಗೆ ಹೋಗಲಾಗಲಿಲ್ಲ ಎಂದು ನೋವಿನಿಂದ ಹೇಳುತ್ತಿದ್ದುದು ನನಗಿನ್ನೂ ನೆನಪಿದೆ.
 
ಕಳೆದ ವರ್ಷದ ಜನವರಿ ಕೊನೆಯ ವಾರ ಗೇಬ್ರಿಯಲ್ ನಿಧನರಾದರು. ಫ್ರೇಜರ್‌ಟೌನ್‌ನ ಸೇಂಟ್ ಕ್ಸೇವಿಯರ್ ಫ್ರಾನ್ಸಿಸ್ ಚರ್ಚ್‌ನ ಒಳಗೆ ಧಾರ್ಮಿಕ ವಿಧಿಗಳನ್ನು ನಡೆಸಲಾಗುತಿತ್ತು.

ಆಗ ಅಂತಿಮ ದರ್ಶನಕ್ಕೆ ಸೇರಿದ್ದ ಸುಮಾರು ನೂರು ಮಂದಿಯಲ್ಲಿ ಆರ್ಮಿ ಶಾಲೆಯ ಪ್ರತಿನಿಧಿಗಳು, ಸೇನೆಯ ಸಿಗ್ನಲ್ಸ್ ವಿಭಾಗದ ಪ್ರತಿನಿಧಿಗಳು ಮತ್ತು ರೈಲ್ವೆ ಇಲಾಖೆಯ ಪ್ರತಿನಿಧಿಗಳೇ ಹೆಚ್ಚಾಗಿದ್ದರು. ಚರ್ಚ್‌ನ ಹೊರಗೆ ಸೇನೆಯ ಐದಾರು ವಾಹನಗಳು ನಿಂತಿದ್ದವು. ಇನ್ನುಳಿದಂತೆ ಅವರ ಕೆಲವು ಬಂಧುಗಳಿದ್ದರು.

ಆಗ ಅಲ್ಲಿಯೇ ಇದ್ದ ಖ್ಯಾತ ಮ್ಯಾರಥಾನ್ ಓಟಗಾರ ಎ.ಜಯರಾಜ್ ನನ್ನೊಡನೆ ಮಾತನಾಡುತ್ತಾ `ಕ್ರೀಡಾ ಕುಟುಂಬದ ಯಾರೂ ಬಂದಿಲ್ಲವಲ್ಲಾ... ರಾಜ್ಯ ಸರ್ಕಾರ, ಅಥ್ಲೆಟಿಕ್ ಸಂಸ್ಥೆಗಳೆಲ್ಲಾ ಗೇಬ್ರಿಯಲ್ ಅವರನ್ನು ಎಂದೋ ಮರೆತು ಬಿಟ್ಟಿವೆ, ಅಲ್ಲವೆ~ ಎಂದಿದ್ದು ನೆನಪಾಗುತ್ತಿದೆ.

ಕಾಲು ಶತಮಾನದ ಹಿಂದೆ ಉತ್ಸಾಹದ ಚಿಲುಮೆಯಂತಿದ್ದ ಆನಂದ ಶೆಟ್ಟಿ, ನಂತರದ ದಿನಗಳಲ್ಲಿ ಭೇಟಿಯಾದಾಗಲೆಲ್ಲಾ ಅವರ ಮಾತುಗಳು `ವೇಗದ ಓಟದ ರೋದನ~ ದಂತೆನಿಸುತ್ತಿದೆ.
 
ಹೌದು, ಇದು ಅವರೊಬ್ಬರ ಕಥೆಯಲ್ಲ. ವೇಗದ ಓಟದಲ್ಲಿ ಭಾರತೀಯರು ಏಷ್ಯಾ ಮಟ್ಟದಲ್ಲಿ ಬಂಗಾರದ ಸಾಮರ್ಥ್ಯ ತೋರುವುದೇ ಪ್ರಯಾಸಕರವಾಗಿದೆ. ಯುರೋಪ್, ಅಥವಾ ವಿಶ್ವಮಟ್ಟದಲ್ಲಿ ಎತ್ತರಕ್ಕೇರುವುದು ಮುಂದಿನ ಕೆಲವು ದಶಕಗಳ ಮಟ್ಟಿಗಂತೂ ಭಾರತೀಯರಿಗೆ ಸುಲಭ ಅಲ್ಲ.
 
ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವುದೇ ಹೆಗ್ಗುರಿ ಎಂಬಂತಾಗಿದೆ ಭಾರತದ ವೇಗದ ಓಟಗಾರರ ಸ್ಥಿತಿ. ಇದರ ಹಿಂದೆ ನೂರೆಂಟು ಕಾರಣಗಳಿವೆ. ಹಾಗಿದ್ದರೆ ಭಾರತದಲ್ಲಿ ವೇಗದ ಓಟ ತನ್ನ `ನಿಧಾನ ಗತಿ~ಯಿಂದ ಚುರುಕು ಪಡೆದುಕೊಳ್ಳುವುದಾದರೂ ಹೇಗೆ?

ನಾವೆಲ್ಲಿದ್ದೇವೆ...
ಭಾರತದ ಅನಿಲ್ ಕುಮಾರ್ ಹೆಸರಿನಲ್ಲಿ 100ಮೀ. ಓಟದ ರಾಷ್ಟ್ರೀಯ ದಾಖಲೆ (10.3ಸೆಕೆಂಡು) ಇದೆ.  ಪರ್ಸಿ ವಿಲಿಯಮ್ಸ ಎಂಬುವವರು 1930ರಲ್ಲಿ ಇದೇ ದೂರವನ್ನು ಟೊರಾಂಟೊದಲ್ಲಿ 10.3 ಸೆಕೆಂಡುಗಳಲ್ಲಿ ಓಡಿದ್ದರು. ಜಗತ್ತಿನ ವೇಗದ ಓಟಕ್ಕೆ ಸಂಬಂಧಿಸಿದಂತೆ ಭಾರತದ ವೇಗ ಸುಮಾರು 80 ವರ್ಷಗಳಷ್ಟು ಹಿಂದಿದೆ!

ಜಮೈಕಾದ ಉಸೇನ್ ಬೋಲ್ಟ್ 2009ರಲ್ಲಿ 9.58 ಸೆಕೆಂಡುಗಳಲ್ಲಿ ಓಡಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಭಾರತ 10 ಸೆಕೆಂಡುಗಳ ಗಡಿ ತಲುಪಲಿಕ್ಕೆ ಇನ್ನೆಷ್ಟು ದಶಕಗಳು ಬೇಕಾಗಬಹುದು?

ಅಮೆರಿಕಾದ ಟೈಸನ್ ಗೇ (9.69ಸೆ.), ಜಮೈಕಾದ ಅಸಾಫ ಪೊವೆಲ್ (9.72ಸೆ.), ಅಮೆರಿಕಾದ ಮಾರಿಸ್ ಗ್ರೀನ್ (9.79ಸೆ.), ಕೆನಡಾದ ಡೊನೊವನ್ ಬೇಲಿ (9.84ಸೆ.), ಕೆನಡಾದ ಬ್ರೂನ್ ಸುರಿನ್ (9.84ಸೆ.), ಅಮೆರಿಕಾದ ಲೆರಾಯ್ ಬುರೆಲ್ (9.85ಸೆ.), ಜಸ್ಟಿನ್ ಗ್ಯಾಟ್ಲಿನ್ (9.85ಸೆ.), ನೈಜಿರಿಯಾದ ಒಲುಸೊಜಿ ಫಸಾಬಾ (9.85ಸೆ.), ಅಮೆರಿಕಾದ ಕಾರ್ಲ್ ಲೂಯಿಸ್ (9.86ಸೆ.) ಈಗಾಗಲೇ 10 ಸೆಕೆಂಡುಗಳ ಗಡಿ ದಾಟಿದ್ದಾರೆ.

ಕರ್ನಾಟಕದ ರಾಜ್ಯ 100 ಮೀಟರ್ಸ್ ದಾಖಲೆ 10.4 ಸೆಕೆಂಡುಗಳಲ್ಲಿಯೇ ನಿಂತು ಹೋಗಿದೆ. ಕೆನೆತ್ ಪೊವೆಲ್ 1964ರಲ್ಲಿ 10.5 ಸೆಕೆಂಡುಗಳಲ್ಲಿ ಓಡಿ ನಿರ್ಮಿಸಿದ್ದ ರಾಜ್ಯ ದಾಖಲೆ 31 ವರ್ಷಗಳ ಕಾಲ ಅಬಾಧಿತವಾಗಿತ್ತು. 

ಅನಿಲ್ ಕುಮಾರ್ ನೇತೃತ್ವದ ಭಾರತದ 4x100ಮೀ. ರಿಲೆ ತಂಡ ಸಿಡ್ನಿಯ ಹೀಟ್ಸ್‌ನಲ್ಲಿ 40.23 ಸೆಕೆಂಡುಗಳ ಸಾಧನೆ ತೋರಿತ್ತು. ಭಾರತಕ್ಕೆ ಅದೇ ದೊಡ್ಡದು. ಆದರೆ 1936ರಲ್ಲಿಯೇ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ತಂಡ ಈ ರಿಲೆಯಲ್ಲಿ 39.80 ಸೆಕೆಂಡುಗಳಲ್ಲಿ ಗುರಿ ಮುಟ್ಟಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT