ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಮಡೆಸ್ನಾನ ಅಲ್ಲ; ಮರಳ ಮೇಲೆ ಉರುಳು ಸೇವೆ

ಸಸಿಹಿತ್ಲು ನಡಾವಳಿಯಲ್ಲಿ ವಿಶೇಷ ಹರಕೆ
Last Updated 6 ಏಪ್ರಿಲ್ 2013, 7:09 IST
ಅಕ್ಷರ ಗಾತ್ರ

ಸುರತ್ಕಲ್: ಸಾಮಾಜಿಕ ಮತ್ತು ರಾಜಕೀಯ ಸಂಘರ್ಷಗಳಿಗೆ ಕಾರಣವಾಗಿರುವ ಮಡೆಸ್ನಾನ ವಿವಾದ ಇನ್ನೂ ಹಸಿರಾಗಿರುವಾಗಲೇ ಇವೆಲ್ಲಕ್ಕೆ ಉತ್ತರ ನೀಡಬಲ್ಲ ಮಡೆಸ್ನಾನವಲ್ಲದ ಉರುಳು ಸೇವೆಯೊಂದು ಸಸಿಹಿತ್ಲು ನಡಾವಳಿಯಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ.

ಯಾವುದೇ ಜಾತಿ ಮತ ಪಂಥ ಪಂಗಡಗಳ ಬೇದವಿಲ್ಲದೆ ಸೂರ್ಯೋದಯಕ್ಕೆ ಮುನ್ನವೇ ದೇವಸ್ಥಾನದ ಅಂಗಣದಲ್ಲಿ ಸೇರುವ ಹರಕೆ ಹೊತ್ತ ಭಕ್ತರು ಅಂಗಣಕ್ಕೆ ಮೂರು ಸುತ್ತು ಉರುಳುತ್ತಾ ಸೇವೆ ಸಲ್ಲಿಸುತ್ತಾರೆ.

ದೇವಸ್ಥಾನದ ಪ್ರಾಂಗಣದ ಒಳಗೆ ಪ್ರಾಕೃತಿಕವಾಗಿ ಇರುವ ಮರಳ ಮೇಲೆ ನೂರಾರು ಭಕ್ತರು ಉರುಳು ಸೇವೆ ಮಾಡುತ್ತಾರೆ. ಇದಕ್ಕೂ ಮಡೆಸ್ನಾನ ಎನ್ನುತ್ತಾರಾದರೂ ಇಲ್ಲಿ ಮಡೆ (ಉಂಡ ಎಂಜಲೆಲೆ) ಮೇಲೆ ಉರುಳಾಡುವುದಿಲ್ಲ. ಬದಲಾಗಿ ಶುದ್ಧ ಮರಳ ಮೇಲೆ ಉರುಳಾಡುತ್ತಾರೆ. ದೇವಸ್ಥಾನದ ಅಂಗಣದೊಳಗೆ ಬ್ರಾಹ್ಮಣರ ಸಹಿತ ಯಾವುದೇ ಸಮುದಾಯದವರು ಊಟ ಮಾಡುವ ಕ್ರಮವೇ ಈ ಕ್ಷೇತ್ರದಲ್ಲಿಲ್ಲ. ಎಂಜಲು ಮತ್ತು ರಕ್ತ ಈ ಕ್ಷೇತ್ರದ ಒಳಗೆ ನಿಷಿದ್ಧ. ಈ ಕಾರಣದಿಂದಲೇ ಸಸಿಹಿತ್ಲು ನಡಾವಳಿಯ ಉರುಳು ಸೇವೆಗೆ ವರುಷ ವರುಷ ಭಕ್ತರ ಸಂಖ್ಯೆ ಅಧಿಕವಾಗುತ್ತಲೇ ಇದೆ.

ಜಿಲ್ಲೆಯ ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮಡೆಸ್ನಾನ, ವಿವಾದದ ಕೇಂದ್ರ ಬಿಂದುವಾಗಿ ಪರ ವಿರೋಧಗಳ ಜಂಗಿ ಕುಸ್ತಿಯ ವಿಷಯವಾಗಿರುವಾಗ ಅದೇ ತೆರನಾದ ಸೇವೆಯೊಂದು ಯಾವುದೇ ಗೊಂದಲಗಳಿಲ್ಲದೆ ಉರುಳು ಸೇವೆಯ ನಿಜ ವ್ಯಾಖ್ಯಾನವನ್ನು ಅನುಷ್ಠಾನಗೊಳಿಸುವಂತೆ ಸಸಿಹಿತ್ಲು ಕ್ಷೇತ್ರದಲ್ಲಿ ನಡೆಯುತ್ತಿದೆ. ಹಾಗಾಗಿ ಸಸಿಹಿತ್ಲು ಕ್ಷೇತ್ರದಲ್ಲಿ ನಡೆಯುವ ಈ ಸೇವೆಯನ್ನು ಮಡೆಸ್ನಾನ ಎನ್ನುವ ಬದಲು ಮಡಸ್ನಾನ ಎನ್ನುತ್ತಿದ್ದಾರೆ. `ಮಡೆ' ತುಳು ಭಾಷೆಗೆ ಅನ್ವರ್ಥಗೊಂಡಾಗ ಈ ಪದ ಹುಟ್ಟಿರಲೂ ಬಹುದಾದರೂ ಇಲ್ಲಿ ಮಡೆ ಇಲ್ಲದ ಕಾರಣ ಇದನ್ನು ಮಡ ಎನ್ನಲಾಗುತ್ತಿದೆ ಎನ್ನುವವರೂ ಇದ್ದಾರೆ. ಏನೇ ಆದರೂ ಈ ಉರುಳು ಸೇವೆ ಮಾತ್ರ ಒಂದು ವಿಶೇಷ ಸಂಪ್ರದಾಯವಾಗಿ ಇಂದಿಗೂ ಸಸಿಹಿತ್ಲು ಕ್ಷೇತ್ರದಲ್ಲಿ ನಡೆಯುತ್ತಿದೆ.

ಮಡ ಸ್ನಾನ ಹಾಕುವವರು ನಡಾವಳಿ ಜಾತ್ರೆಯ ಎರಡು ದಿನ ಮುನ್ನ ಒಪ್ಪೊತ್ತಿನ ಊಟವನ್ನು ಮಾಡಿ ವ್ರತ ಆಚರಣೆ ನಡೆಸಬೇಕಾಗುತ್ತದೆ. ನಡಾವಳಿ ದಿನ ಮುಂಜಾನೆ ಸೂರ್ಯ ಮೂಡುವ ಹೊತ್ತಿಗೆ ಸ್ನಾನ ಮಾಡಿ ದೇವಸ್ಥಾನದ ತೀರ್ಥ ಪ್ರೋಕ್ಷಣೆ ಮಾಡಿಸಿ ಅಂಗಣಕ್ಕೆ ಬಂದು ಕ್ಷೇತ್ರಕ್ಕೆ ಮೂರು ಸುತ್ತು ಉರುಳು ಸೇವೆ ಮಾಡ ಬೇಕಾಗುತ್ತದೆ. ಈ ಉರುಳು ಸೇವೆಯ ಜೊತೆಗಿನ ಇನ್ನೊಂದು ವಿಶೇಷ ಎಂದರೆ ಉರುಳು ಸೇವೆ ಜೊತೆಗೆ ಕಂಚಿಲು ಬಲಿ ಹಾಗೂ ಭಗವತಿ ಮಾತೆಯ ಮೂರ್ತಿ ಬಲಿಯೂ ಏಕಕಾಲದಲ್ಲಿ ನಡೆಯುತ್ತದೆ.

ಮಕ್ಕಳ ಬಗ್ಗೆ ಯಾವುದೇ ರೀತಿಯ ಹರಕೆ ಹೊತ್ತವರು ಮಕ್ಕಳನ್ನು (ಗಂಡಾದರೆ ವರನಂತೆ ಹೆಣ್ಣಾದರೆ ವಧುವಿನಂತೆ ) ಸಿಂಗರಿಸಿ ನಡಾವಳಿ ದಿನ ಸೂರ್ಯ ಅಸ್ತನಾಗುವ ಹೊತ್ತಿಗೆ ಕ್ಷೇತ್ರಕ್ಕೆ ಕರೆತಂದು ಅಂಗಣದಲ್ಲಿ ಹೊಸ ಚಾಪೆ ಮೇಲೆ ಸ್ವಸ್ಥಿಕೆ ಇಟ್ಟು ದೀಪ ಹಚ್ಚಿ ಮಕ್ಕಳನ್ನು ಕುಳ್ಳಿರಿಸಬೇಕು ಹಾಗೂ ಸೂರ್ಯೊದಯದ ಹೊತ್ತಿಗೆ ಮಡಸ್ನಾನ ಮತ್ತು ಮೂರ್ತಿ ಬಲಿ ವೇಳೆ ಮಕ್ಕಳನ್ನು ಸಂಬಂಧದಲ್ಲಿ ಮಾವ ಬೀಳುವ ವ್ಯಕ್ತಿ ಎತ್ತಿ ಹಿಡಿದು ಕ್ಷೇತ್ರಕ್ಕೆ ಮೂರು ಸುತ್ತಿನ ಪ್ರದಕ್ಷಣೆ ಹಾಕಬೇಕು.

ಕೊನೆಗೆ ದೇವರ ದರ್ಶನ ಪಡೆಯುವಲ್ಲಿಗೆ ಈ ಹರಕೆ ಮುಕ್ತಾಯವಾಗುತ್ತದೆ. ಕಂಚಿಲು ಸೇವೆಗೆ ಪ್ರಾಯದ ಮಿತಿ ಇಲ್ಲಾದರೂ ಹೆಚ್ಚಾಗಿ ಮಕ್ಕಳಿಗೆ ಮಾತ್ರ ಈ ಸೇವೆ ಮಾಡಿಸುತ್ತಾರೆ. ವಿವಾಹ ಸಂಬಂಧ ಕೂಡಿ ಬಾರದಿದ್ದರೂ ಈ ಹರಕೆ ಹೇಳುತ್ತಾರೆ. ಕಂಚೀಲು ಮತ್ತು ಮಡಸ್ನಾನದ ಹರಕೆ ಹೊತ್ತವರ ಅಭಿಲಾಷೆಯನ್ನು ದೇವಿ ಈಡೇರಿಸುತ್ತಾಳೆ ಎನ್ನುವ ನಂಬಿಕೆ ಇದ್ದು ಇದು ಸತ್ಯವೂ ಆಗಿದೆ. ಕಂಚಿಲು ಹರಕೆ ಯಾರೂ ಒಪ್ಪಿಸಬಹುದಾದರೂ ಮಡಸ್ನಾನನ್ನು ಕೇವಲ ಗಂಡಸರು ಮಾತ್ರ ಮಾಡುತ್ತಾರೆ.

ಅನಾದಿ ಕಾಲದಲ್ಲಿ ಸಸಿಹಿತ್ಲಿಗೆ ಮಾತೆ ಭಗವತಿ ತನ್ನ ಸಹೋದರಿಯರ ಜೊತೆ ಬಂದಾಗ ಮೊದಲು ದೇವಿಯ ಬಾಯಾರಿಕೆ ನೀಗಿಸಿದವನು ಮೂರ್ತೆದಾರಿಕೆ ಮಾಡುತ್ತಿದ್ದ ಬಿಲ್ಲವ ತೀಯಾ ಸಮುದಾಯದ ಬಡವ, ಆತನ ಭಕ್ತಿಗೆ ಮೆಚ್ಚಿದ ದೇವಿ ಮುಂದೆ ತನ್ನ ಕ್ಷೇತ್ರದ ಸೇವೆ ಮಾಡುವ ಭಾಗ್ಯವನ್ನು ದೇವಿ ಆತನ ಸಮುದಾಯದವರಿಗೆ ನೀಡಿದರು. ಹೀಗಾಗಿ ಇಂದಿಗೂ ಸಸಿಹಿತ್ಲು ಕ್ಷೇತ್ರದ ಪೂಜಾ ಕೈಂಕರ್ಯ ನಡೆಸುವವರು ತೀಯಾ ಸಮುದಾಯದವರೇ ಆಗಿದ್ದಾರೆ. ಈ ಕಾರಣದಿಂದಲೂ ಇಲ್ಲಿ ಮಡೆಸ್ನಾನ ಇಲ್ಲ ಎನ್ನುತ್ತಾರೆ ಹಿರಿಯರು. ಕರಾವಳಿಯ ಪುಣ್ಯ ಕ್ಷೇತ್ರಗಳಲ್ಲಿ ಇಂತಹ ಸೇವೆ ಸಸಿಹಿತ್ಲು ಕ್ಷೇತ್ರದಲ್ಲಿ ಮಾತ್ರ ಕಂಡುಬರುತ್ತಿದೆ. ಉರುಳು ಸೇವೆಯ ವಿವಾದಗಳಿಗೆ ಈ ಕ್ಷೇತ್ರ ಒಂದು ಸೂಕ್ತ ಉತ್ತರವೂ ಹೌದು ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT