ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಯಕ್ಷಿಯ ಕತೆ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

`ಅದು ಆ ಕ್ಷಣಕ್ಕೆ ಹೊಳೆದ ಕಲ್ಪನೆ. ನಮ್ಮ ಕೈಯಲ್ಲಿದ್ದುದು ಕೇವಲ ಎರಡು ದಿನ ಮಾತ್ರ. ಉತ್ಸವವನ್ನು ಅವಿಸ್ಮರಣೀಯ ಹಬ್ಬವನ್ನಾಗಿಸುವ ಹೊಣೆಗಾರಿಕೆಯೂ ನಮ್ಮ ಮೇಲಿತ್ತು. ಗಂಡ ಬೇರುಂಡ, ಹದ್ದು, ಆಮೆ, ನವಿಲು ಮೊದಲಾದ ಪ್ರಾಣಿ ಪಕ್ಷಿಗಳ ಬಳಕೆ ಬಗ್ಗೆ ಬಹಳಷ್ಟು ಚರ್ಚೆ-ವಾದಗಳು ನಡೆದವು. ಯುವಜನರನ್ನು ಓಲೈಸುವ ಉದ್ದೇಶವೂ ಅದರೊಂದಿಗೆ ಸೇರಿದ್ದರಿಂದ ಇವಾವುವೂ ಹಿತವೆನಿಸಲಿಲ್ಲ. ಎರಡು ದಿನದ ಹಗಲಿರುಳು ಪ್ರಯತ್ನದಿಂದ ಹುಟ್ಟಿದ ಕೂಸು ಈ `ಯಕ್ಷಿ...~

ಮಂಗಳೂರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಯುವಜನೋತ್ಸವದ ಲಾಂಛನ `ಯಕ್ಷಿ~ಯ ನಿರ್ಮಾತೃ ವಿನೋದ್ ಮಾತಿಗೆ ಕೂತರೆ ಕಣ್ಣಲ್ಲಿ ನೂರೆಂಟು ಕನಸು. ಹೊಸದೇನನ್ನೋ ಏನೋ ಸಾಧಿಸಿದ ತೃಪ್ತ ಭಾವ.

`ವಿವಿಧತೆಯಲ್ಲಿ ಏಕತೆಯ ಆಚರಣೆ~ ನಮಗೆ ಕೊಟ್ಟ ವಿಷಯವಾಗಿತ್ತು. ಈ ಆಫರ್ ಸಿಕ್ಕಾಗ ಹೊಸತನದ ತುಡಿತದೊಂದಿಗೆ ವಿಭಿನ್ನವಾಗಿ ಮಾಡಬೇಕೆಂಬ ಗುರಿಯಿತ್ತು. ಕರ್ನಾಟಕದ ಇತಿಹಾಸದೊಂದಿಗೆ ಮಂಗಳೂರಿನ ಪರಂಪರೆಯನ್ನೂ ಮೊದಲಿಗೆ ಅಭ್ಯಾಸ ಮಾಡಲಾಯಿತು. ಜಂಬೋ ಚಿತ್ರ (1982ರಲ್ಲಿ ಏಷ್ಯಾಡ್‌ನಲ್ಲೂ ಸೇರಿ) ಹಲವಾರು `ಲೋಗೋ~ಗಳಲ್ಲಿ ಬಳಕೆಯಾಗಿದೆ ಎಂಬ ಮಾತು ಕೇಳಿಬಂದರೂ ಮತ್ತೆ ಅದೇ ಆನೆಯನ್ನು ವಿಭಿನ್ನವಾಗಿ ಬಳಸಿಕೊಳ್ಳುವ ಇಂಗಿತಕ್ಕೇ ಒಪ್ಪಿಗೆ ಸಿಕ್ಕಿತು. ಯುವಜನತೆಯ ಶಕ್ತಿಯನ್ನು ಪ್ರದರ್ಶಿಸಲು ಆನೆಗಿಂತ ಬಲಿಷ್ಠವಾದ ಪ್ರಾಣಿ ಸಿಗಲಾರದು ಎಂಬುದು ಸಾರ್ವಕಾಲಿಕ ಸತ್ಯವೂ ಹೌದು.

ಇನ್ನು ವಿನ್ಯಾಸದ ಬಗ್ಗೆ ಹೇಳುವುದಾದರೆ ನಮ್ಮ ದೇಶದ ಸಾಮರ್ಥ್ಯವನ್ನು, ಸಮಗ್ರತೆಯನ್ನು, ವೈವಿಧ್ಯವನ್ನು, ಪರಿಸರ ಸ್ನೇಹಿ ಮನೋಭಾವವನ್ನು ಈ ಲಾಂಛನದಲ್ಲಿ ಪ್ರತಿಬಿಂಬಿಸುವ ಸವಾಲು ನಮ್ಮೆದುರಿಗಿತ್ತು. ಆನೆ ಕೇವಲ ಶಕ್ತಿಯುತ ಪ್ರಾಣಿ ಎಂಬ ಕಾರಣಕ್ಕೆ ಅದು ನಮ್ಮ ಆಯ್ಕೆಯಾಗಿರಲಿಲ್ಲ. ನಮ್ಮ ದೇಶದ ಪರಂಪರೆಯನ್ನು ಪ್ರತಿನಿಧಿಸುವ, ರಾಜ್ಯದ ದಸರಾ ಹಬ್ಬದಲ್ಲಿ ರಾಜಮರ್ಯಾದೆ ಪಡೆಯುವ ಜೀವಿ. ಆನೆ ಸದಾ ಚಿರಯೌವ್ವನಕ್ಕೆ ಸಂಕೇತ. ಕಡಲತಡಿಯ ಕಂಪನ್ನೂ ಇದರಲ್ಲಿ ಸೇರಿಸಬೇಕೆಂಬ ಕಾರಣಕ್ಕೆ ಅಲ್ಲಿನ ಪ್ರಸಿದ್ಧ ಕಲೆ ಯಕ್ಷಗಾನದ ಕಿರೀಟವನ್ನು ಆನೆಗೆ ತೊಡಿಸಲಾಯಿತು. ರಾಷ್ಟ್ರಧ್ವಜವನ್ನು ಆನೆಯ ಸೊಂಡಿಲಿಗೆ ತೂಗು ಹಾಕುವುದರ ಮೂಲಕ ದೇಶಪ್ರೇಮವನ್ನು ಸಾಂಕೇತಿಕವಾಗಿ ತೋರಿಸಲಾಯಿತು.

ಬಣ್ಣದ ಆಯ್ಕೆ ವಿಷಯದಲ್ಲೂ ಸಾಕಷ್ಟು ಚರ್ಚೆ ನಡೆದವು. ಸಹಜ ಬಣ್ಣವಾದ ಬಿಳಿ ಇಲ್ಲವೇ ಕಪ್ಪು ನೀಡುವುದರ ಬದಲಾಗಿ ಹಳದಿ ಬಣ್ಣದ ಆಯ್ಕೆ ಯಾಕೆ ಎಂಬ ಪ್ರಶ್ನೆಗಳೂ ಮೂಡಿಬಂದವು. ಯುವಜನತೆಯ ಚುರುಕುತನ, ತೀಕ್ಷ್ಣ ಮನೋಬಲಕ್ಕೆ ಸರಿಸಾಟಿಯಾಗಿ ಆಕರ್ಷಕ ಹಳದಿ ಬಣ್ಣವೇ ಸೂಕ್ತ ಎಂದು ನಿರ್ಧರಿಸಲಾಯಿತು. ಕರಾವಳಿಯ ಸೊಗಡನ್ನು ಉಳಿಸಿಕೊಳ್ಳಲೆಂದೇ `ಯಕ್ಷಿ~ ಎಂದು ನಾಮಕರಣ ಮಾಡಿ, ಸ್ತ್ರೀ ರೂಪ ನೀಡಿ ಆಕೆಯನ್ನು ಮತ್ತಷ್ಟು ಮೋಹಕಳನ್ನಾಗಿ ರೂಪುಗೊಳಿಸಲಾಯಿತು.

ಹೀಗೆ 48 ಗಂಟೆಯ ತರಾತುರಿಯಲ್ಲಿ ತಯಾರಾದ ಲೋಗೋ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರ ತಲುಪಿತು. ಕೆಲವೇ ದಿನಗಳಲ್ಲಿ ದೆಹಲಿಯಿಂದ ಪ್ರಶಂಸೆಗಳ ದೂರವಾಣಿ ಕರೆಗಳು ಬಂದವು. ಹೀಗೆ ಕಲ್ಪನೆಯಲ್ಲಿ ಮೂಡಿಬಂದ ಚಿತ್ರ ಮೂರ್ತರೂಪ ಪಡೆದುಕೊಂಡಿತು...

ಒಂದೇ ಉಸಿರಿನಲ್ಲಿ ಎಲ್ಲವನ್ನೂ ಹೇಳಿ ಮುಗಿಸುವ ಅವರ ತವಕದಲ್ಲಿ ಸಂಭ್ರಮ ವ್ಯಕ್ತವಾಗದೆ ಇರಲಿಲ್ಲ. ವಿಜಯನಗರ ಪಟ್ಟಾಭಿಷೇಕ ಕಾರ್ಯಕ್ರಮಕ್ಕೂ ಸೇರಿದಂತೆ ಕಾರ್ಪೊರೇಟ್ ಸಂಸ್ಥೆಗಳಾದ ಐಬಿಎಂ, ವೊಡಫೋನ್, ಇಂಟೆಲ್ ಕಂಪೆನಿಗಳು ಸೇರಿದಂತೆ ನೂರಕ್ಕೂ ಅಧಿಕ ಲೋಗೊ ತಯಾರಿಸಿದ ಅನುಭವ ವಿನೋದ್‌ಗಿದೆ. 40ಕ್ಕೂ ಅಧಿಕ ಖಾಸಗಿ ಡಿಸೈನಿಂಗ್ ಸಂಸ್ಥೆಗಳ ನಡುವೆ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದ ಹೆಮ್ಮೆಯೂ ಅವರದ್ದು.

ಇನ್ನು 30 ವರ್ಷಗಳ ಬಳಿಕ ರಾಜ್ಯಕ್ಕೆ ಸಿಗುವ ಈ ಅವಕಾಶವನ್ನು ನೆನಪಿನಲ್ಲಿ ಸದಾ ಉಳಿಯುವಂತೆ ಮಾಡಲು ಇದಕ್ಕಿಂತ ಉತ್ತಮ ವಿನ್ಯಾಸ ಸಿಗಲಾರದು ಎನ್ನುವ ಅವರಲ್ಲಿ ಕೃತಾರ್ಥಭಾವ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT