ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸಂಸ್ಕೃತಿಯ ಪ್ರಶ್ನೆ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಮಡೆಸ್ನಾನದಂತಹ ಆಚರಣೆಗಳಲ್ಲಿ ಪಾಲ್ಗೊಳ್ಳುವವರ ಭಾವನೆಗಳು ಎಲ್ಲೋ ಒಂದು ಕಡೆ ಅತಿಕ್ರಮಕ್ಕೊಳಪಟ್ಟಿರುತ್ತದೆ. ಈ ಆಚರಣೆಗೆ ಬದ್ಧವಾದ ಮನಸ್ಥಿತಿಗಳು ತಮ್ಮ ಮೂಲ ಸೆಲೆಯನ್ನೇ ಒತ್ತೆ ಇಟ್ಟು ಯಾವುದೋ ಒಂದು ಸಾಂಸ್ಥಿಕ ಚೌಕಟ್ಟಿಗೆ ತಮ್ಮನ್ನು ತಾವು ಅಳವಡಿಸಿಕೊಳ್ಳುವ ತವಕದಲ್ಲಿರುತ್ತಾರೆ. ಈ ತವಕ-ತಲ್ಲಣಗಳನ್ನು ಮತೀಯ-ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಸಲು ಪಟ್ಟಭದ್ರ ಹಿತಾಸಕ್ತಿಗಳು ಕಥೆ ಪುರಾಣಗಳನ್ನು ಹೊಸೆಯುತ್ತಲೇ ಇರುತ್ತವೆ.

ಇಂತಿಪ್ಪ ಸನ್ನಿವೇಶದಲ್ಲಿ ಅವಮಾನ ಎನ್ನುವ ಪರಿಕಲ್ಪನೆಯೇ ಸಾಪೇಕ್ಷತೆಯನ್ನು ಹೊಂದಿ ತನ್ನ ಮೂಲ ಅರ್ಥವನ್ನೇ ಕಳೆದುಕೊಳ್ಳುತ್ತದೆ. ವಾಸ್ತವತೆಯ ನೆಲೆಗಟ್ಟಿನಲ್ಲಿ ನೋಡಿದಾಗ ನಿಜವಾಗಿ ಅವಮಾನ ಅನುಭವಿಸಬೇಕಿರುವುದು ಈ ಪದ್ಧತಿಯಿಂದ ಪುಳಕಿತರಾಗುವ ಸಮುದಾಯವೇ ಹೊರತು ಆಚರಣಾಬದ್ಧ ಭಕ್ತಾದಿಗಳಲ್ಲ. ಆದರೆ ಈ ಸುಪ್ರಜ್ಞೆಯನ್ನೇ ಕಳೆದುಕೊಂಡಿರುವ ಸಮಾಜ ತನ್ನ ಅಪರಾಧಿ ಪ್ರಜ್ಞೆಯನ್ನು ಎಂದೋ ಭೂಗತ ಮಾಡಿರುವ ಹಿನ್ನೆಲೆಯಲ್ಲಿ ಮಡೆ ಸ್ನಾನದ ಆಚರಣೆ ತುಲನಾತ್ಮಕ ಪದ್ಧತಿಯಾಗಿ ಕಾಣುತ್ತದೆ.

ಹಾಗಾಗಿಯೇ ಕೆಲವು ಚಿಂತಕರು ಮಡೆಸ್ನಾದ ಅವಮಾನವನ್ನು ಐಪಿಎಲ್ ಹರಾಜಿನ ಅವಮಾನಕ್ಕೆ ತುಲನೆ ಮಾಡಲು ಯತ್ನಿಸುತ್ತಾರೆ. ಅಕ್ಷರ ಮಾಡಿರುವುದೂ ಇದನ್ನೇ. ಆದರೆ ಐಪಿಎಲ್ ಒಂದು ವಿಭಿನ್ನ ವಿದ್ಯಮಾನ. ಇದು ನೆಲಸಂಸ್ಕೃತಿಯಿಂದ ಹೊರಹೊಮ್ಮಿದ, ಜನಸಮುದಾಯಗಳ ಪ್ರಜ್ಞೆಯನ್ನೇ ಆಳುವ ಪ್ರಭುತ್ವಶಕ್ತಿಯ ವಿದ್ಯಮಾನವಲ್ಲ.

ಆಧುನಿಕ ಮಾನವನ ಮುನ್ನಡೆಯಲ್ಲಿ ಸುಖ ಸಂಪನ್ನಗಳನ್ನು ಅರಸುವ ಹುಚ್ಚು ಹಪಾಹಪಿಯ ಒಂದು ಅಂಶಿಕ ಭಾಗವಾಗಿ ಹೊರಹೊಮ್ಮಿರುವ ಅರ್ಥಶಾಸ್ತ್ರೀಯ ವಿದ್ಯಮಾನವಾಗಿ ಕ್ರೀಡೆಯೂ ರೂಪುಗೊಂಡಿದೆ. ಈ ನೆಲೆಯಲ್ಲಿ ಪ್ರಾಚೀನ ಮಾನವ ಸಮಾಜದ ಕೆಲವು ಪಳೆಯುಳಿಕೆಗಳು ಆಧುನಿಕ ಜಗತ್ತಿನಲ್ಲಿ ಭಿನ್ನ ಸ್ವರೂಪ ಪಡೆದಿರುವುದನ್ನು, ಮಾನವನ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಸಂಪನ್ಮೂಲ ಎಂದು ಪರಿಗಣಿಸುವ ಬಂಡವಾಳಶಾಹಿ ಸಮಾಜದಲ್ಲಿ ಪುರಾತನ ಕಾಲದ ಗುಲಾಮಗಿರಿಯ ಪುನರಾವರ್ತನೆಯನ್ನು ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕಾಣಬಹುದು.

ಆಧುನಿಕ ಪ್ರಜ್ಞಾವಂತ ಸಮಾಜದ ದೃಷ್ಟಿಯಲ್ಲಿ ಇದೂ ಅವಮಾನಕರವಾಗಿಯೇ ಕಂಡರೂ ಇದು ಸಾಮುದಾಯಿಕ ಪ್ರಜ್ಞೆಯನ್ನು ಭ್ರಷ್ಟಗೊಳಿಸುವ ವಿದ್ಯಮಾನವಲ್ಲ. ಈ ಎರಡೂ ವಿದ್ಯಮಾನಗಳ ತೌಲನಿಕ ಅಧ್ಯಯನ ಮಾಡುವುದರ ಮೂಲಕ ಒಂದನ್ನು ಸಮರ್ಥಿಸುವ ಅಕ್ಷರ ಅವರ ವಾದ ಯಥಾಸ್ಥಿತಿವಾದವನ್ನು ಸಮರ್ಥಿಸುವ ಪ್ರಯತ್ನವಾಗಿದೆಯಷ್ಟೆ. ಅಂತಿಮವಾಗಿ ಕಾಡುವ ಪ್ರಶ್ನೆ ಎಂದರೆ ಮಾನವ ಸಂಸ್ಕೃತಿಯ ಔನ್ನತ್ಯದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT