ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ‘ಸಾಮಾಜಿಕ ಬಹಿಷ್ಕಾರ’ ಇದಕ್ಕಿಂತ ಹಿಂಸೆ ಉಂಟಾ?

*ಎರಡನೇ ಮದುವೆ ಪರಿಹಾರವೆ? *ಸಂಬಂಧಿಕರಿಂದಲೇ ಶೋಷಣೆ, ಕೀಳರಿಮೆ *ಜನಗಣತಿಗೂ ಸಿಗದ ಲೆಕ್ಕ *ಹಂಬಲಿಸಿದರೂ ಈಡೇರದ ನಿರೀಕ್ಷೆ
Last Updated 3 ಡಿಸೆಂಬರ್ 2013, 6:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅಂಗವಿಕಲರ ಕಲ್ಯಾಣಕ್ಕೆಂದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪದೇ ಪದೇ ಹೇಳುತ್ತಾರೆ. ಸಮಸ್ಯೆಗಳು ಸಾಲುಸಾಲಾಗಿ ಪರಿಹಾರಗೊಳ್ಳುತ್ತವೆ ಎಂಬಂತೆ ಭರವಸೆ ಮೂಡಿಸುತ್ತಾರೆ. ಆದರೆ ನಾವು ಮನೆಯೊಳಗೆ ಮತ್ತು ಹೊರಗೆ ಅನುಭವಿಸುವ ಚಿತ್ರಹಿಂಸೆ, ಯಾತನೆ ಒಂದೆರಡಲ್ಲ. ಒಂದರ್ಥದಲ್ಲಿ ಸಾಮಾಜಿಕ ಬಹಿಷ್ಕಾರದಂತಹ ಸ್ಥಿತಿ ಎದುರಿಸುತ್ತೇವೆ. ಬದುಕಿದ್ದರೂ ಸತ್ತಂತೆ ಇರುತ್ತೇವೆ. ನಮ್ಮ ದೇಹ ಸಹಜವಾಗಿ ಉಸಿರಾಡುತ್ತದೆಯೇ ಹೊರತು ಬದುಕುವ ಹಂಬಲದಿಂದಲ್ಲ’

–ಅಂಗವೈಕಲ್ಯಕ್ಕೆ ತುತ್ತಾಗಿ ಪ್ರತಿ ದಿನವೂ ನೋವನ್ನು ಅನುಭವಿಸುತ್ತ ಅದರ ಸಂಕೋಲೆಗಳಿಂದ ಹೊರಬರಲು ಯತ್ನಿಸುತ್ತಿರುವ ಮಹಿಳೆಯೊಬ್ಬರ ಮನದಾಳದ ಮಾತುಗಳಿವು.

ಅಂಗವೈಕಲ್ಯಕ್ಕೆ ಒಳಗಾದ ನೋವು ಒಂದು ಕಡೆಯಿದ್ದರೆ, ಮತ್ತೊಂದೆಡೆ ಪ್ರತಿ ದಿನವೂ ಸಮಾಜವು ತಮ್ಮನ್ನು ನೋಡುವ ದೃಷ್ಟಿಕೋನದ ಬಗ್ಗೆ ನೊಂದು ಹೇಳಿದ ಮಾತುಗಳಿವು. ‘ರೆಕ್ಕೆಗಳು ಗಾಯಗೊಂಡರೂ ಹಕ್ಕಿಗಳು ಹಾರಲು ಪ್ರಯತ್ನಿಸುತ್ತಲೇ ಇರುತ್ತವೆ. ನಾವು ಕಾಲುಗಳ ಸ್ವಾಧೀನ ಕಳೆದುಕೊಂಡು ನಡೆದಾಲು ಪ್ರಯತ್ನಿಸುತ್ತೇವೆ. ಆದರೆ ಅದಕ್ಕೆ ತಕ್ಕಂತೆ ನಮಗೆ ಸೂಕ್ತ ಬೆಂಬಲ ಮತ್ತು ಪ್ರೋತ್ಸಾಹ ಸಿಗುವುದಿಲ್ಲ’ ಎಂದು ಅವರು ಹೇಳುತ್ತಾರೆ.

ಎರಡನೇ ಮದುವೆಯೇ ಪರಿಹಾರ!: ಅಂಗವಿಕಲರಲ್ಲಿ ಅದರಲ್ಲೂ ಮಹಿಳೆಯರು ಪಂಜರದಲ್ಲಿರುವಂತಹ ಸ್ಥಿತಿ ಅನುಭವಿಸುತ್ತಾರೆ. ‘ಅತ್ತ ಪೋಷಕರಿಗೂ ಭಾರ, ಇತ್ತ ಪತಿಗೆ ಸಾಕುವುದು ಕಷ್ಟ ಎಂಬರ್ಥದಲ್ಲಿ ನಮ್ಮಂತಹ ಮಹಿಳೆಯರು ಬದುಕುತ್ತಿದ್ದಾರೆ. ಅಂಗವಿಕಲರಾಗಿದ್ದರೂ ನಾವೂ ಎಲ್ಲರಂತೆ ಬದುಕಲು ಹಂಬಲಿಸುತ್ತೇವೆ. ಆದರೆ ಅಂಗವಿಕಲರಿಂದ ಏನು ಮಾಡಲು ಸಾಧ್ಯವೆಂದು ಕಡೆಗಣಿಸಲಾಗುತ್ತದೆ. ಅಕ್ಕನ ಗಂಡನೊಂದಿಗೆ ಎರಡನೇ ಮದುವೆಗೆ ಪ್ರಯತ್ನಿಸಲಾಗುತ್ತದೆ. ಅಂಗವಿಕಲೆಯನ್ನು ಸಾಕುವ ಜವಾಬ್ದಾರಿಯಿಂದ ಕೈ ತೊಳೆದುಕೊಂಡರೆ ಸಾಕು ಎಂಬಂತೆ ಅಷ್ಟು–ಇಷ್ಟು ಹಣ ಕೊಟ್ಟು ಮದುವೆ ಮಾಡಿಸುತ್ತಾರೆ. ನಂತರ ನಮ್ಮ ಬದುಕು ಏನಾಯಿತೆಂದು ಕೇಳುವವರೂ ಇರುವುದಿಲ್ಲ. ಅತ್ತ ಮದುವೆಯಾದ ಗಂಡ ಕೈಕೊಟ್ಟರೆ, ಇತ್ತ ತಂದೆ–ತಾಯಿಯ ಆಸರೆ ಕೂಡ ಇರುವುದಿಲ್ಲ’ ಎನ್ನುತ್ತಾರೆ ಅವರು.

‘ಬಡ ಕುಟುಂಬಗಳಲ್ಲಿ ಅಂಗವಿಕಲೆಯೊಬ್ಬಳು ಇದ್ದುಬಿಟ್ಟರಂತೂ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡತೊಡಗುತ್ತಾರೆ. ಎಷ್ಟೋ ಸಲ, ಅಕ್ಕನ ಗಂಡನೇ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮದುವೆಯಾಗುವ ನಾಟಕವಾಡುತ್ತಾನೆ. ಆಕೆಯ ತಂದೆ, ತಾಯಿಯ ಅಸಹಾಯಕತೆಯನ್ನೇ ದುರ್ಬಳಕೆ ಮಾಡಿಕೊಂಡು ಮದುವೆ ಮಾಡಿಸಿಕೊಳ್ಳುತ್ತಾನೆ. ಕೆಲ ದಿನಗಳ ಮಟ್ಟಿಗೆ ಆರೈಕೆ ಮಾಡಿದಂತೆ ನಟಿಸಿ, ನಂತರ ಕೈಕೊಡುತ್ತಾನೆ. ಆಕೆ ಒಂದು ವೇಳೆ ಗರ್ಭಿಣಿಯಾದರಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಆಕೆ ಕಡೆಯಿಂದ ಎಲ್ಲವನ್ನೂ ಕಸಿದುಕೊಂಡು ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಹಾಕಲಾಗುತ್ತದೆ. ಆಕೆ ಬೇರೆ ದಾರಿಗಾಣದೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಇಲ್ಲವೇ ಯಾವುದಾದರೂ ಸಂಘಟನೆಗಳ ಬಳಿ ಆಶ್ರಯಕ್ಕೆ ಹೋಗಬೇಕು’ ಎಂದು ಅವರು ಹೇಳುತ್ತಾರೆ.

ಇಲ್ಲಿ ಎಲ್ಲವೂ ರಹಸ್ಯ: ‘ಅಂಗವಿಕಲೆಯರು ಹೀಗೆ ನಿತ್ಯವೂ ಶೋಷಣೆಯಾಗುತ್ತಿರುವ ಪ್ರಕರಣಗಳು ಚಿಂತಾಮಣಿ ಮತ್ತು ಬಾಗೇಪಲ್ಲಿಯಲ್ಲಿ ಹೆಚ್ಚಿದ್ದು, ಬಹುತೇಕ ಸಲ  ಹೊರಬರುವುದಿಲ್ಲ. ಲೈಂಗಿಕ ಕಿರುಕುಳ, ಅತ್ಯಾಚಾರ, ಶೋಷಣೆ, ದೌರ್ಜನ್ಯ, ಮದುವೆ ಎಲ್ಲವೂ ರಹಸ್ಯವಾಗಿಯೇ ನಡೆದು ಹೋಗುತ್ತದೆ. ಕೆಲ ಸಂದರ್ಭಗಳಲ್ಲಿ ಆಕೆ ಸಾವನ್ನಪ್ಪಿದಾಗ ಅಥವಾ ಬೇರೆಯವರಿಂದ ತಿಳಿದಾಗ, ವಿಷಯ ಬಹಿರಂಗವಾಗುತ್ತದೆ. ಅಂಗವಿಕಲೆಗೆ ನೇರವಾಗಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡುವಷ್ಟು ಶಕ್ತಿ ಇರುವುದಿಲ್ಲ ಮತ್ತು ಆತ್ಮಬಲ, ಆತ್ಮವಿಶ್ವಾಸ ತುಂಬಬಲ್ಲ ಆಪ್ತರು ಇರುವುದಿಲ್ಲ. ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು ಘಟಿಸುತ್ತಿದ್ದು, ಯಾರೂ ಅವುಗಳನ್ನು ಬಹಿರಂಗಪಡಿಸುತ್ತಿಲ್ಲ’ ಎಂದು ಕರ್ನಾಟಕ ಅಂಗವಿಕಲ ಸಂಘಟನೆಯ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕ ಸಂದರ್ಭಗಳಲ್ಲಿ ಕುಟುಂಬ ಸದಸ್ಯರೇ ಅಂಗವಿಕಲರತ್ತ ನಿರ್ಲಕ್ಷ್ಯದ ನೋಟ ಬೀರುತ್ತಾರೆ. ಜನಗಣತಿ ಅಥವಾ ಮತದಾರರ ಸಮೀಕ್ಷೆಗೆ ಅಧಿಕಾರಿಗಳು ಬಂದಾಗ, ಅಂಗವಿಕಲ ಸದಸ್ಯರೊಬ್ಬರು ಇದ್ದಾರೆ ಎಂಬ ವಿಷಯವನ್ನು ಹೇಳುವುದೇ ಇಲ್ಲ. ಅಂಗವಿಕಲರನ್ನು ಯಾಕೆ ಸುಮ್ಮನೆ ಗಂಭೀರವಾಗಿ ಪರಿಗಣಿಸಬೇಕು. ಅವರು ಚುನಾವಣೆಯಲ್ಲಿ ಮತ ಹಾಕುವುದರಿಂದ ಅಥವಾ ಅವರ ಎಣಿಕೆ ಮಾಡುವುದರಿಂದ ಯಾರಿಗೆ ತಾನೇ ಪ್ರಯೋಜನ ಎಂಬಂತೆ ಒಬ್ಬರೂ ಮಾತನಾಡುವುದಿಲ್ಲ. ಹೀಗಾಗಿ ಅಂತಹ ಕೆಲ ಅಂಗವಿಕಲರಿಗೆ ಸರ್ಕಾರದ ಬಹುತೇಕ ಯೋಜನೆಗಳು ಕೈ ತಪ್ಪುತ್ತವೆ. ಅಂಗವಿಕಲರು ಪ್ರತಿಭಾವಂತರಾಗಿದ್ದರೂ ಸಮಾಜದೊಂದಿಗೆ ಅವರ ನಿಕಟ ಸಂಪರ್ಕ ಬೆಳೆಯುವುದೇ ಇಲ್ಲ. ಅವರಿಗೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದಿಲ್ಲ’ ಎಂದು ಅವರು ತಿಳಿಸಿದರು.

ಸರ್ಕಾರದ ಪರಿಶೀಲನೆ ಅಗತ್ಯ: ‘ಸರ್ಕಾರ ಯೋಜನೆಗಳನ್ನು ಪ್ರಕಟಿಸಿದರೆ ಸಾಲದು, ಅವುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ಪರಿಶೀಲನೆ ಮಾಡಬೇಕು. ಸಮಾಜಕ್ಕಿಂತ ಕುಟುಂಬ ಸದಸ್ಯರಲ್ಲಿಯೇ ಮೊದಲು ಅರಿವು ಮೂಡಿಸಬೇಕು. ಅಂಗವಿಕಲರನ್ನು  ಕುಟುಂಬ ಸದಸ್ಯರನ್ನಾಗಿ ಭಾವಿಸುವಂತಹ ಗುಣ ಬೆಳೆಸಿಕೊಳ್ಳುವುದರ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು. ಅಂಗವಿಕಲೆ ಎಂಬ ಕಾರಣಕ್ಕೆ ಎರಡನೇ ಮದುವೆ ಮಾಡಿಸುವುದು ಅಥವಾ ಕೀಳಾಗಿ ಕಾಣುವುದು, ಪ್ರೀತಿ–ಮಮತೆಯಿಂದ ಕಾಣದೆ ಮತ್ತು ಸೌಲಭ್ಯ ಕೂಡ ದೊರಕಿಸದೆ ಕೀಳಾಗಿ ಕಾಣುವಂತಹ ಮನೊಭಾವ ಕೊನೆಗಾಣಬೇಕು. ಹೀಗೆ ಮಾಡಿದಲ್ಲಿ ಮಾತ್ರ ಸಮಾಜದಲ್ಲಿ ಅಲ್ಲದೇ ಮನೆಯಲ್ಲೂ ಅಂಗವಿಕಲೆಯರು ನೆಮ್ಮದಿಯಿಂದ ಬಾಳಲು ಸಾಧ್ಯ’ ಎಂದು ಅವರು ತಿಳಿಸಿದರು.

ಅಂಗವಿಕಲರ ಬೇಡಿಕೆಗಳು

*ಪೊಲೀಸ್‌ ಠಾಣೆ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ರ್‌ಯಾಂಪ್ ಸೌಲಭ್ಯ
*ಗ್ರಾಮ ಪಂಚಾಯತಿ ಕಚೇರಿಯ ಶೇ 3ರಷ್ಟು ಅಂಗವಿಕಲರ ಅನುದಾನ   ಪ್ರತ್ಯೇಕ ಬ್ಯಾಂಕ್‌ ಖಾತೆಯಲ್ಲಿ
*ಅರ್ಹರಿಗೆ ಮತದಾರರ ಗುರುತಿನ ಚೀಟಿ ಮತ್ತು ಪ್ರಮಾಣಪತ್ರ
*ಇತರ ರಾಜ್ಯಗಳಂತೆಯೇ ಕರ್ನಾಟಕದಾದ್ಯಂತ ಉಚಿತ ಬಸ್‌ ಪ್ರಯಾಣ  ಸೌಲಭ್ಯ
*ಶೇ 40ರಷ್ಟು ಅಂಗ ವೈಕಲ್ಯಕ್ಕೆ 400 ರೂಪಾಯಿ, ಶೇ 75ರಷ್ಟು   ವೈಕಲ್ಯಕ್ಕೆ 1,200 ರೂಪಾಯಿ ಮಾಸಾಶನ ಇದ್ದು, ಇದರ ಹೆಚ್ಚಳ.
*ಎಲ್ಲ ಅಂಗವಿಕಲರಿಗೂ ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿ
*ಅಂಗವಿಕಲರಿಗೆಂದೇ ಪ್ರತ್ಯೇಕ ವಸತಿ ನಿಲಯ, ಭವನ
*ಅಂಗವಿಕಲರ ಮನೆಗೆ ಶಿಕ್ಷಕರೇ ಬಂದು ಪಾಠ ಮಾಡುವ ಯೋಜನೆಯ  ಪುನರಾರಂಭ
 

ಸರ್ಕಾರದಿಂದ ಸಕಲ ಸೌಲಭ್ಯ
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳನ್ನು ಅಂಗವಿಕಲರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಎರಡೂ ಸರ್ಕಾರಗಳಿಂದ ಉಪಯುಕ್ತ ಯೋಜನೆಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಗ್ರಾಮೀಣ ಪುನರ್ವಸತಿ ಕಾರ್ಯಕ್ರಮ, ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಪ್ರೋತ್ಸಾಹಧನ ಮತ್ತು ಪೋಷಣಾ ಭತ್ಯೆ ಸೇರಿದಂತೆ ಹಲವಾರು ಯೋಜನೆಗಳಿವೆ. ಅಂಗವಿಕಲರು ನಮ್ಮ ಇಲಾಖೆಯ ಕಚೇರಿಗೆ ಸಂಪರ್ಕಿಸಿದಲ್ಲಿ ಅವರಿಗೆ ಸಕಲ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತೇವೆ. ಸಹಾಯ ಮಾಡುತ್ತೇವೆ.

–ಎನ್‌.ಎಂ.ಶಾಂತರಸ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT