ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಂಥ ಹೊಣೆಗೇಡಿತನ?

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ತಾಂತ್ರಿಕ ಶಿಕ್ಷಣ ಬೋಧನೆಗಾಗಿಯೇ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಅಸ್ತಿತ್ವಕ್ಕೆ ತಂದಿರುವುದು ರಾಜ್ಯ ಸರ್ಕಾರದ ಮಹತ್ವದ ಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವಿಶ್ವವಿದ್ಯಾಲಯಕ್ಕೆ ಅತಿ ಅವಶ್ಯಕವಾದ ಸಿಬ್ಬಂದಿಯ ನೇಮಕದಲ್ಲಿ ಹೊಣೆಯಿಂದ ವರ್ತಿಸಿಲ್ಲ ಎಂಬುದು ವಿಷಾದರ ಸಂಗತಿ.

ರಾಜ್ಯದಾದ್ಯಂತ ಹಬ್ಬಿರುವ 187 ಎಂಜಿನಿಯರಿಂಗ್ ಕಾಲೇಜುಗಳಿಂದ ಪ್ರತಿ ವರ್ಷ 75ಸಾವಿರ ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿರುವಾಗ ವಿಶ್ವವಿದ್ಯಾಲಯದ ಸುಗಮ ಆಡಳಿತಕ್ಕೆ ಪೂರಕ ಸೌಲಭ್ಯಗಳನ್ನು ಕಲ್ಪಿಸುವುದು ಸರ್ಕಾರದ ಹೊಣೆ. ಅದನ್ನು ನಿರ್ವಹಿಸುವುದರಲ್ಲಿ ಸರ್ಕಾರ ವಿಫಲವಾಗಿದೆ.

ಇದು ಅಕ್ಷಮ್ಯವಾದ ಬೇಜವಾಬ್ದಾರಿ ನಡವಳಿಕೆ. ವಿಶ್ವವಿದ್ಯಾಲಯವನ್ನು ಆರಂಭಿಸಿ 13 ವರ್ಷಗಳಾದರೂ ತನ್ನದೇ ಆದ ಬೋಧಕ ಬೋಧಕೇತರ ಸಿಬ್ಬಂದಿಯ ನೇಮಕಕ್ಕೆ ರಾಜ್ಯ ಸರ್ಕಾರ ಅವಶ್ಯಕ ಮಂಜೂರಾತಿ ನೀಡಲು ವಿಫಲವಾಗಿದೆ ಎಂದರೆ ತಾಂತ್ರಿಕ ಶಿಕ್ಷಣದ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ನಿಶ್ಚಿತ ತಿಳುವಳಿಕೆಯೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಗುತ್ತಿಗೆಯ ನೆಲೆಯಲ್ಲಿ ಇಟ್ಟುಕೊಂಡು ತಾಂತ್ರಿಕ ಶಿಕ್ಷಣದ ವಿಶ್ವವಿದ್ಯಾಲಯವನ್ನು ಇಷ್ಟು ದೀರ್ಘ ಕಾಲ ನಡೆಸಲು ಆಸ್ಪದ ಕೊಟ್ಟಿರುವ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆ ತನ್ನ ಅಸ್ತಿತ್ವವನ್ನೇ ಪ್ರಶ್ನಾರ್ಹಗೊಳಿಸಿದೆ. ಉನ್ನತ ಶಿಕ್ಷಣ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ಸಚಿವರಿಗೆ ಈ ಕುರಿತಾಗಿ ತಿಳುವಳಿಕೆ ಮೂಡಿಸುವ ಅವಶ್ಯಕತೆ ಹೆಚ್ಚಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.

ವಿಶ್ವವಿದ್ಯಾಲಯಗಳಿಗೆ ಅತ್ಯವಶ್ಯಕವಾದ ಸೌಕರ್ಯಗಳನ್ನು ಒದಗಿಸುವುದರಲ್ಲಿ ವಿಫಲವಾಗುತ್ತಿದ್ದರೂ ಜಿಲ್ಲೆಗೊಂದರಂತೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ತೋರುತ್ತಿರುವ ಆಸಕ್ತಿಯೇನೂ ಕಡಿಮೆಯಾಗಿಲ್ಲ.

ಈಗಾಗಲೇ 21 ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿವೆ. ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜುಗಳನ್ನು ಒಂದು ವಿಶ್ವವಿದ್ಯಾಲಯದ ವ್ಯಾಪ್ತಿಗೆ ತರುವುದಕ್ಕೆ ಬೇಕಾದ ಸಿಬ್ಬಂದಿಯ ನೇಮಕಕ್ಕೆ 13 ವರ್ಷಗಳಿಂದ ಕ್ರಮ ಕೈಗೊಳ್ಳಲಾಗದ ಸರ್ಕಾರ, ಉನ್ನತ ಶಿಕ್ಷಣ ಎಲ್ಲರಿಗೂ ಸಿಗಬೇಕೆಂಬ ಸದುದ್ದೇಶದಿಂದ ವಿವಿಗಳ ಸ್ಥಾಪನೆಗೆ ಆಸಕ್ತಿ ತೋರುತ್ತಿದೆ ಎಂದು ಹೇಳಲಾಗದು.

ನೇಮಕಗಳ ನೆಪದಲ್ಲಿ ಹಣ ವಸೂಲಿ, ಅನುದಾನ ಮಂಜೂರಾತಿಯಲ್ಲಿ ಶೇಕಡಾವಾರು ಪಾಲು, ಆಡಳಿತ ಕಟ್ಟಡಗಳ ನಿರ್ಮಾಣದಲ್ಲಿ ಹಣ ಗಳಿಸುವ ಲಾಭದ ದೃಷ್ಟಿಯೇ ಈ ತೀರ್ಮಾನಗಳ ಹಿಂದೆ ಇರುವುದನ್ನು ಅಲ್ಲಗಳೆಯುವಂತಿಲ್ಲ.

ಇದೇನೇ ಇದ್ದರೂ, ರಾಜ್ಯದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಅವಶ್ಯಕ ಸಿಬ್ಬಂದಿಯ ನೇಮಕ ಇನ್ನೂ ವಿಳಂಬವಾಗುವುದಕ್ಕೆ ಉನ್ನತ ಶಿಕ್ಷಣ ಸಚಿವರು ಆಸ್ಪದ ನೀಡಬಾರದು.

ರಾಜ್ಯ ಸಂಪುಟದಲ್ಲಿ ದಕ್ಷರೆಂದು ಹೆಸರಾಗಿರುವ ಡಾ. ವಿ.ಎಸ್. ಆಚಾರ್ಯರು ಇದುವರೆಗೆ ಆಗಿರುವ ಲೋಪಗಳ ನಿವಾರಣೆಗೆ ತುರ್ತಾಗಿ ಕ್ರಮಕೈಗೊಳ್ಳಬೇಕು. ಈಗ ಗುತ್ತಿಗೆ ನೆಲೆಯಲ್ಲಿ ಕೆಲಸ ಮಾಡುತ್ತಿರುವವರ ಸೇವಾವಧಿಯನ್ನೂ, ಸರ್ಕಾರದ ಮೀಸಲಾತಿ ನಿಯಮಗಳಿಗೆ ಧಕ್ಕೆ ಆಗದಂತೆ ಪರಿಗಣಿಸುವ ಬಗ್ಗೆ ಸರ್ಕಾರ ನಿರ್ಧರಿಸಬೇಕು.

ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಮೈಸೂರು ಮತ್ತು ಹಾಸನ ವೈದ್ಯಕೀಯ ಕಾಲೇಜುಗಳಿಗೆ ಮಾಡಲಾಗಿದ್ದ ನೇಮಕಗಳಲ್ಲಿ ಆಗಿದ್ದ ಲೋಪಗಳು  ಮರು ಕಳಿಸದಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT