ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಲ್ಲಾ ಕರ್ನಾಟಕದಲ್ಲಿ ಮಾತ್ರ ಸಾಧ್ಯವೇನೋ?

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಗಂಗಾವತಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು ಕವನ ವಾಚನ ಹಾಗೂ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಸಮಯದಲ್ಲಿ ರಾಜಕಾರಣಿಗಳನ್ನು ಲೇವಡಿ ಮಾಡಿದ್ದರಿಂದ ಕ್ರುದ್ಧರಾದ  ಕನ್ನಡ ಸಂಸ್ಕೃತಿ ಸಚಿವರು ಮೂಲ ಸಂಸ್ಕೃತಿಯನ್ನೇ ಮರೆತು `ಸಾಹಿತ್ಯ ಸಮ್ಮೇಳನಕ್ಕೆ ಕೋಟಿಗಟ್ಟಲೆ ಕಾಸು ಕೊಟ್ಟು ಸಾಹಿತಿಗಳಿಂದ ಬೈಸಿಕೊಳ್ಳಬೇಕೆ~ ಎಂದು ಅಲವತ್ತುಕೊಂಡಿದ್ದರು.
 
ಕಾರಜೋಳರ ಮಾತು ಕೊಂಚ ಖಾರವೇ. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ಬಗ್ಗೆ ಮಾತನಾಡದೆ ಜಾತಿ, ಕೋಮುವಾದ, ಬಲಿ, ಎಡಪಂಥೀಯ ರಾಜಕಾರಣದ ಕುರಿತು ಏಕೆ ಮಾತನಾಡಬೇಕೆಂಬ ಚೌಕಟ್ಟನ್ನು ಹಾಕುವುದೂ ತರವಲ್ಲ.

ಕನ್ನಡಿಗರ ಸಮಸ್ಯೆಗಳನ್ನು ಕುರಿತು ಮಾತನಾಡುವಾಗ ಜಾತಿ ರಾಜಕಾರಣ, ಕೋಮುವಾದ, ಚರ್ಚ್, ಮಸೀದಿಗಳ ಮೇಲೆ ದಾಳಿ ಇತ್ಯಾದಿಗಳ ಬಗ್ಗೆ ಮಾತನಾಡಬಾರದೆಂಬುದೂ ಸರಿಯಲ್ಲ. ಇವೆಲ್ಲಾ ಕನ್ನಡಿಗರ ಸಮಸ್ಯೆಗಳು.
 
ಕರ್ನಾಟಕದ ಅಭಿವೃದ್ಧಿ ಹಾಗೂ ಭಾವೈಕ್ಯಕ್ಕೆ ಹಿನ್ನಡೆ ತಂದೊಡ್ಡುತ್ತಿರುವ ಪೀಡೆಗಳು. ರಾಜಕಾರಣಿಗಳನ್ನು ಟೀಕಿಸುವ ಸಾಹಿತಿಗಳು ಬಂಡಾಯವನ್ನು ಮೂಲೆಗೆ ಕಟ್ಟಿಟ್ಟು ಸರ್ಕಾರದ ಪ್ರಾಧಿಕಾರ ಅಕಾಡೆಮಿಗಳ ಅಧ್ಯಕ್ಷಗಿರಿಗಾಗಿ ತೆರೆಯ ಮರೆಯಲ್ಲಿ ರಾಜಕಾರಣಿಗಳನ್ನು ಓಲೈಸುವುದು ರಹಸ್ಯವಾಗಿ ಉಳಿದಿಲ್ಲ.

ಸಮ್ಮೇಳನಗಳಿಗೆ ರಾಜಕಾರಣಿಗಳನ್ನು, ಮಠಾಧೀಶರನ್ನು ಆಹ್ವಾನಿಸಬಾರದೆಂದು ಹುಯಿಲೆಬ್ಬಿಸುವ ಸಾಹಿತಿಗಳು ಸ್ವಜಾತಿ ಮಠಾಧೀಶರ ಕೃಪಾಶೀರ್ವಾದವಿಲ್ಲದೆ ಅಧ್ಯಕ್ಷ ಪದವಿಯನ್ನು, ಸರ್ಕಾರದ ಕಾಂಚಾಣವಿಲ್ಲದೆ ಸಮ್ಮೇಳನಗಳನ್ನು ನಡೆಸಲು ಅಸಮರ್ಥರು. ಕನ್ನಡ ಸಾಹಿತ್ಯ ಪರಿಷತ್ತು ಈವರೆಗೆ ಸ್ವಂತ ಶಕ್ತಿಯ ಮೇಲೆ ಸಮ್ಮೇಳನ ನಡೆಸುವ ಕುರಿತು ಗಂಭೀರವಾಗಿ ಯೋಚಿಸಿಯೂ ಇಲ್ಲ.

ಯೋಜನೆಗಳನ್ನು ಹಾಕಿಕೊಂಡಿಲ್ಲ. ಸಿಕ್ಕಷ್ಟೇ ಸೀರುಂಡೆ ಎಂಬಂತೆ ಆಯ್ಕೆಯಾದ ಅಧ್ಯಕ್ಷರು ವರ್ತಿಸುತ್ತಿದ್ದಾರೆ. ಇದೆಲ್ಲಾ ಬಲ್ಲ ಮಾತಿನ ಮಲ್ಲರಾದ ರಾಜಕಾರಣಿಗಳು ಸಾಹಿತಿಗಳ ಮಾತಿಗೆ ಕಡಿವಾಣ ಹಾಕಬೇಕೆಂಬ ಉದ್ಧಟತನ ತೋರಿದ್ದಾರೆ.

ಟೀಕೆಗಳನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ ತಪ್ಪುಗಳನ್ನು ತಿದ್ದಿಕೊಳ್ಳುವ ಬದಲು ನಮ್ಮನ್ನು ಟೀಕಿಸಲೇಬಾರದು ಎಂಬುದು ಫ್ಯಾಸಿಸ್ಟ್ ಧೋರಣೆ. ಇಂಥದ್ದು ಕರ್ನಾಟಕದಲ್ಲಿ ಮಾತ್ರ ನಡೆಯಲು ಸಾಧ್ಯ.

ನಮ್ಮ ರಾಜಕಾರಣಿಗಳು ಜೈಲು ಹಾದಿ ಹಿಡಿಯುತ್ತಿದ್ದಾರೆ. ಕೆಲವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಜಾಮೀನಿನ ಮೇಲೆ ಹೊರಬಂದರೂ ವಿಜಯೋತ್ಸವ ಆಚರಿಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ. `ಜೈಲಿನಿಂದ ಹೊರಬರುತ್ತಲೇ ನನ್ನನ್ನು ಒಳಗೆ ಕಳಿಸಿದವರು ಪಶ್ಚಾತ್ತಾಪ ಪಡುವಂತೆ ಮಾಡುತ್ತೇನೆ~ ಎಂದು ಗುಡುಗುತ್ತಾರೆ.

ಆದರೆ ಜೈಲಿಗೆ ಹೋಗುವಂತಹ ಪರಿಸ್ಥಿತಿ ತನಗೇಕೆ ಬಂತು ಎಂದು ಆತ್ಮಾವಲೋಕನ ಮಾಡಿಕೊಳ್ಳುವುದಿರಲಿ ಕನಿಷ್ಠ ಪಶ್ಚಾತ್ತಾಪವನ್ನೂ ಪಡುವುದಿಲ್ಲ.  ಅತ್ಯಾಚಾರ ಆರೋಪ ಹೊತ್ತ ರಾಜಕಾರಣಿಯನ್ನು ಅವನ ಊರಿನ ಯುವಕರು ಬೈಕ್ ರ‌್ಯಾಲಿ ಮಾಡಿ ಸ್ವಾಗತಿಸುತ್ತಾರೆ. ಜೈಲಿನಲ್ಲಿರುವ ಮಾಜಿಗಳನ್ನು ಮಠಾಧೀಶರೂ ಸಮರ್ಥಿಸಿಕೊಳ್ಳುತ್ತಾರೆ! `ಅವರು ಕೇವಲ ಆರೋಪಿ, ಅಪರಾಧಿ ಅಲ್ಲ~ ಎಂದು `ವ್ಯಾಖ್ಯಾನ~ಕ್ಕೆ ಇಳಿಯುತ್ತಾರೆ. 

ಯಾವ ರಾಜ್ಯದಲ್ಲೂ ನಡೆಯದಂತಹ ವಿಪರೀತಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ಇಂತಹ ಅಸಂಬದ್ಧಗಳು ಅಪಸವ್ಯಗಳು ಕರ್ನಾಟಕದಲ್ಲಿ ಹೊಸ ದಾಖಲೆಗಳನ್ನೇ ನಿರ್ಮಿಸುತ್ತಿವೆ.

ನೈತಿಕತೆ ಎಂಬುದು ಖಾದಿಧಾರಿಗಳಿಗೆ ಮಾತ್ರವಲ್ಲ, ಕಾವಿಧಾರಿಗಳಿಗೂ ಇಲ್ಲ. ತಮ್ಮ ಮೇಲೆ ಅಪರಾಧ ಹೇರಿದರೆಂಬ ಜಿದ್ದಿಗೆ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚುವ ಹುನ್ನಾರ ಮಾಡುವ ರಾಜಕಾರಣಿಗಳೂ ಇದ್ದಾರೆ. `ನೀವು ಭ್ರಷ್ಟರು, ದೇಶದ ಸಂಪತ್ತನ್ನೆಲ್ಲ ತಿಂದು ತೇಗುತ್ತಿದ್ದೀರಿ~ ಎಂದರೆ ಒಂದಿಷ್ಟೂ ಅಳುಕದೆ `ಹಿಂದಿನವರು ತಿಂದಿಲ್ಲವೆ? ನಾವು ಅದನ್ನೇ ಮಾಡುತ್ತೇವೆ~ ಎಂದು ಸಮರ್ಥನೆಗಿಳಿಯುತ್ತಾರೆ.

ಭ್ರಷ್ಟಾಚಾರ ಆರೋಪಗಳ ಬಗ್ಗೆ  ಆರೋಪ ಪಟ್ಟಿ ದಾಖಲಾದರೂ ಮಂತ್ರಿಗಳಾಗಿಯೇ ಉಳಿಯುತ್ತಾರೆ. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳದಂತಹ ನಿಷ್ಕ್ರಿಯ ಸರ್ಕಾರ ಸದಾ ತತ್ವ ಸಿದ್ಧಾಂತಗಳ ವೇದಾಂತ ಹೇಳುತ್ತದೆ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಕೊಡದ ಸರ್ಕಾರ ಮಠಗಳಿಗೆ ಕೋಟಿಗಟ್ಟಲೆ ಹಣ ಕೊಟ್ಟು ಮಠಗಳನ್ನೂ ತನ್ನ ಮುಲಾಜಿಗೆ ಕೆಡವಿಕೊಂಡಿದೆ.
 
ಹೀಗಾಗಿ `ಮಠಪತಿ~ಗಳೂ ರಾಜಕಾರಣಿಗಳ ಹಂಗಿಗೆ ಬಿದ್ದು ಅವರ ತಪ್ಪನ್ನು ತಪ್ಪು ಎನ್ನದ ಸ್ಥಿತಿಗೆ ತಲುಪಿದ್ದಾರೆ. ಇದೆಲ್ಲಾ ಇಲ್ಲಿ ಮಾತ್ರ ನಡೆಯಲು ಸಾಧ್ಯವೇನೋ.  ಬ್ರಾಹ್ಮಣರು ಉಂಡು ಬಿಟ್ಟ ಎಲೆಗಳ ಮೇಲೆ ಅನ್ಯಜಾತಿಯರು ಉರುಳುವುದು 500 ವರ್ಷಗಳಿಂದ ನಡೆದು ಬಂದ ಸಂಪ್ರದಾಯವಂತೆ. ಈ ಕೊಳಕು ಸಂಪ್ರದಾಯವನ್ನು ಪ್ರಶ್ನಿಸಿದವರನ್ನು ಹಿಗ್ಗಾಮುಗ್ಗಾ ಬಡಿಯಲಾಗಿದೆ.

ಗರ್ಭಗುಡಿ ಸಂಸ್ಕೃತಿಯ ಸರ್ಕಾರಕ್ಕೆ ಇದನ್ನು ನಿಷೇಧಿಸುವ ಮನಸ್ಸಿಲ್ಲ. ಜೈಲಿಗೆ ಹೋಗಿ ಬಂದು ಮಾಜಿಗಳಾದವರು ಬೇಲ್ ಮೇಲೆ ಆಚೆ ಬರುತ್ತಿದ್ದಂತೆಯೇ ಮತ್ತೆ ಹಾಲಿ ಸಿ. ಎಂ. ಆಗಲು ದೆಹಲಿಗೆ ಹಾರುವುದು, ಏನೆಲ್ಲಾ ನಾಟಕ ಕಟ್ಟಿ ಕುಣಿಯುವುದು ಸಹ ಕರ್ನಾಟಕದಲ್ಲಿ ಮಾತ್ರ ಸಾಧ್ಯವೇನೋ.

ಶಾಲೆಗಳಲ್ಲಿ ಮಕ್ಕಳಿಲ್ಲವೆಂಬ ಕಾರಣ ನೀಡಿ ಸಾವಿರಾರು ಕನ್ನಡ ಶಾಲೆಗಳನ್ನೇ ಮುಚ್ಚುವ ಕನ್ನಡ ಪ್ರೇಮ ತೋರುತ್ತದೆ ಸರ್ಕಾರ.  ಧಾರ್ಮಿಕ ದತ್ತಿ ವಿಧೇಯಕಕ್ಕೆ ಸೋಲಾದಾಗ ಕಣ್‌ಕಣ್ ಬಿಡುತ್ತದೆ. ಮಾತುಮಾತಿಗೆ ಪ್ರತಿಪಕ್ಷ ರಾಜೀನಾಮೆ ನೀಡಿರೆಂದು ಕನವರಿಸುತ್ತದೆ - ನಿದ್ದೆಗಣ್ಣಿನಲ್ಲೂ ಇಂಥದ್ದೆಲ್ಲಾ ಕರ್ನಾಟಕದಲ್ಲಿ ಮಾತ್ರ ಸಾಧ್ಯವೇನೋ.

ಅಣ್ಣಾ ಹಜಾರೆ ಸಂವಿಧಾನಕ್ಕಿಂತ ದೊಡ್ಡವರು ಅಂತ ಹೇಳುವ ಅರಳು ಮರುಳು ಮಂದಿಯೂ ನಮ್ಮಲ್ಲಿದ್ದಾರೆ. ರಾಷ್ಟ್ರಕಾರಣದಲ್ಲೇ ಆಪರೇಷನ್ ಕಮಲದ ಮೂಲಕ ಕೆಟ್ಟ ಸಂಪ್ರದಾಯ ಸೃಷ್ಟಿಸಿದ, ಹಣದ ಆಮಿಷ ತೋರಿ ಶಾಸಕರನ್ನು ಪಕ್ಷಕ್ಕೆ ಸೆಳೆದು ಜನತೆಯ ತೀರ್ಪನ್ನೇ ಕಡೆಗಣಿಸಿ ಉಪಚುನಾವಣೆಗಳನ್ನು ನಡೆಸುವ ಮೂಲಕ ಪ್ರಜಾಪ್ರಭುತ್ವಕ್ಕೇ ಧಕ್ಕೆ ತಂದ ಜನಪ್ರತಿನಿಧಿಗಳು ಜಾಮೀನಿನ ಮೇಲೆ ಬಚಾವಾಗಿ ಸ್ವಪಕ್ಷದವರಿಗೇ ಸೆಡ್ಡು ಹೊಡೆಯುತ್ತಿದ್ದಾರೆ. ಇಲ್ಲಿ ಜೈಲಿಗೆ ಹೋದವರಿಗೆ ಬೇಲ್ ಸಿಗುತ್ತೆ. ಬೇಲ್ ಸಿಕ್ಕವರು ಕೋಟಿಗಟ್ಟಲೆ ಡೀಲಿಗೆ ನಿಂತು ಚುನಾವಣೆ ಗೆಲ್ಲಿಸುತ್ತಾರೆ. 

ದರೋಡೆಕೋರರು, ಭೂಗಳ್ಳರು, ಗುಡ್ಡಗಾಡು ನುಂಗುವವರು ಮರಳು ಲೂಟಿ ಮಾಡುವವರು ರೈತರ ಜಮೀನು ಕಿತ್ತುಕೊಳ್ಳುವ ಖದೀಮರು, ಭ್ರಷ್ಟಾತಿಭ್ರಷ್ಟರು ಚುನಾವಣೆಯಲ್ಲಿ ಸಾವಿರಾರು ಮತಗಳ ಅಂತರದಲ್ಲಿ ಗೆದ್ದು ಬಂದು ಪಟಾಕಿ ಹೊಡೆಯುತ್ತಾರೆ.  ಇದೆಲ್ಲಾ ಕರ್ನಾಟಕದಲ್ಲಿ ಮಾತ್ರ ಸಾಧ್ಯ. ಎಲ್ಲಿಯವರೆಗೆ ಸಾಧ್ಯ?
ಜನ ನೋಟು ತಗೊಂಡು ಓಟು ಹಾಕುವುದನ್ನು ಬಿಟ್ಟು ಪ್ರಾಮಾಣಿಕರನ್ನು ಆಯ್ಕೆ ಮಾಡುವ ದಿಟ್ಟತನ ತೋರುವವರೆಗೂ ಇದೆಲ್ಲಾ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT