ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ ನನ್ನೂರುಇಲ್ಲಿಯವರೇ ನನ್ನೋರು

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

`ಅರೆ ಮಿಟ್ಟಿ ಯಾರ್... ಮಿಟ್ಟಿ ಕೇಲಿಯೇ ಇತ್ನಾ ಪೈಸಾ ಕೌನ್ ದೇಗಾ?~ (ಬರೀ ಮಣ್ಣಿಗಾಗಿ ಯಾರು ಇಷ್ಟು ಹಣ ಕೊಡ್ತಾರೆ?) ಎಂದು ನಮ್ಮೂರಲ್ಲಿ ಮುಖದ ಮೇಲೆ ಹೊಡೆವಂತೆ ಹೇಳುತ್ತಾರೆ.

ಆದರೆ ಈ ನಗರದಲ್ಲಿ ಹಾಗಲ್ಲ. ಇಲ್ಲಿ  ಕಲೆಗೆ ಬೆಲೆ ಇದೆ. ನಮ್ಮ ವಸ್ತುಗಳನ್ನು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಕಲೆಯನ್ನು ಅಷ್ಟೇ ಗೌರವದಿಂದ ಕಾಣುತ್ತಾರೆ~ ಎನ್ನುತ್ತಾ ಮುಖ ಅರಳಿಸುವ ಮಹೇಶ್ ಮಣ್ಣಿನಲ್ಲೂ ವಿವಿಧ ಕಲಾಕೃತಿಗಳನ್ನು ಅರಳಿಸಿದ್ದಾರೆ.

ಮೂಲತಃ ರಾಜಸ್ತಾನದ ಅಲ್ವರ್‌ನವರಾದ ಮಹೇಶ್ ದೆಹಲಿಯಲ್ಲಿ ವಾಸವಿದ್ದರು. ಬೆಂಗಳೂರಿಗೆ ಬಂದು 15 ವರ್ಷವಾಯಿತು. ಇಲ್ಲೇ ವಿದ್ಯಾಭ್ಯಾಸ ಮುಗಿಸಿ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರಕಲಾ ಪರಿಷತ್‌ನಲ್ಲಿ ನಡೆಯುವ ಹಲವಾರು ಪ್ರದರ್ಶನಗಳಲ್ಲಿ ಟೆರಕೋಟಾದಿಂದ ತಯಾರಾದ ಇವರ ಕಲಾಕೃತಿಗಳು ಸ್ಥಾನ ಪಡೆದಿರುತ್ತವೆ.
 
ಪರಿಷತ್ ಮುಂಬಾಗಿಲಲ್ಲೇ ನಿಂತು ಸ್ವಾಗತ ಕೋರುವ ಇವರ ಕಲಾಕೃತಿಗಳು ನಗರದ ಹಲವಾರು ಮನೆಗಳು, ಕಚೇರಿಗಳನ್ನು ಅಲಂಕರಿಸಿವೆ. ಪ್ರದರ್ಶನವೊಂದರಲ್ಲಿ ಮಹೇಶ್ `ಮೆಟ್ರೊ~ದೊಂದಿಗೆ ಮಾತಿಗೆ ಇಳಿದರು.

ಎಷ್ಟು ವರ್ಷಗಳಿಂದ ಈ ಕೆಲಸದಲ್ಲಿ ನಿರತರಾಗಿದ್ದೀರಿ?
ಎಂಟ್ಹತ್ತು ವರ್ಷಗಳಾಯಿತು. ಹೆಚ್ಚಾಗಿ ದೆಹಲಿಯಲ್ಲೇ ಕಲಾಕೃತಿಗಳನ್ನು ಮಾಡುತ್ತೇವೆ. ನಮ್ಮ ಸಂಬಂಧಿಗಳು ಅಲ್ಲಿರುವುದರಿಂದ ಅಲ್ಲೇ ಹೋಗಿ ಕಲಾಕೃತಿಗಳನ್ನು ತಯಾರಿಸಿಕೊಂಡು ಇಲ್ಲಿಗೆ ತರುತ್ತೇನೆ.  

ಈ ವೃತ್ತಿ ವಂಶ ಪಾರಂಪರ‌್ಯವಾದದ್ದೆ?
ಹೌದು. ನನ್ನದು 3ನೇ ತಲೆಮಾರು. ಚಿಕ್ಕವನಿದ್ದಾಗಿಂದಲೂ ನಮ್ಮ ತಾತ ಮಾಡುತ್ತಿರುವುದನ್ನು ನೋಡುತ್ತಿದ್ದೆ. ಬೆಳೆಯುತ್ತಾ ಬೆಳೆಯುತ್ತಾ ಸಣ್ಣ ಸಣ್ಣ ಆಕೃತಿಗಳ ಮಾಡೋದನ್ನು ಕಲಿತೆ. ಆಗ ದೆಹಲಿಯಲ್ಲಿದ್ದೆವು.

ನನ್ನ ತಂದೆ ರೈಲ್ವೆ ಇಲಾಖೆ ನೌಕರರು, ಬೆಂಗಳೂರಿಗೆ ವರ್ಗವಾಗಿದ್ದರಿಂದ ಇಲ್ಲಿಗೆ  ಬರಬೇಕಾಯಿತು. ತಂದೆ ಅಷ್ಟಾಗಿ ಈ ವೃತ್ತಿಯನ್ನು ನೆಚ್ಚಿಕೊಂಡಿರಲಿಲ್ಲ. ತಾತ ಮಾಡುವಾಗಲೇ ಈ ಬಗ್ಗೆ ಒಲವು ಮೂಡಿಸಿಕೊಂಡಿದ್ದ ನಾನು ಪಿಯುಸಿ ಮುಗಿಸಿ ಅದನ್ನೇ ವೃತ್ತಿಯಾಗಿಸಿಕೊಂಡೆ.

ಕಲಾಕೃತಿಗಳನ್ನು ಇಲ್ಲೇ ತಯಾರಿಸಬಹುದಲ್ಲವೇ?
ಇಲ್ಲಿ ಮಡಕೆ ತಯಾರಿಕೆಗೆ ಯೋಗ್ಯ ಮಣ್ಣು ಸಿಗುವುದಿಲ್ಲ. ಇಲ್ಲಿನ ಜೇಡಿಮಣ್ಣಿನಿಂದ ಕಲಾಕೃತಿಗಳನ್ನು ಮಾಡಿದರೆ ದೀರ್ಘಕಾಲ ಬಾಳಿಕೆ ಬರುವುದಿಲ್ಲ. ನಮಗೆ ಬೇಕಾದಂತೆ ರೂಪಿಸಲಾಗುವುದಿಲ್ಲ. ಹಾಗಾಗಿ ದೆಹಲಿಯಿಂದ ಮಣ್ಣನ್ನು ತಂದು ಇಲ್ಲಿ ಮಾಡುವ ಬದಲು ಅಲ್ಲೇ ತಯಾರಿಸಿಕೊಂಡು ಬರುತ್ತೇನೆ. ಅಲ್ಲಿ ನಮ್ಮ ಸಂಬಂಧಿ ಗಂಗಾಲೆಹರಿ ಕೂಡ ನನಗೆ ಸಹಕರಿಸುತ್ತಾರೆ.

ಬೇರೆ ಕೆಲಸದತ್ತ ಒಲವಿಲ್ಲವೇ?
ಇಲ್ಲಿ ನಮಗೆ ನಾವೇ ಮಾಲೀಕರು. ಹೀಗೇ ಮಾಡು ಎಂದು ಕಡಿವಾಣ ಹಾಕುವವರು ಯಾರೂ ಇಲ್ಲ. ಕಷ್ಟಪಟ್ಟರೆ ಫಲ ಸಿಕ್ಕೇ ಸಿಗುತ್ತದೆ. ನಮ್ಮ ಮನಸ್ಸಿಗೆ ಬಂದಂತಹ ಕೆಲಸ ನಾವು ಮಾಡಬಹುದು. ನಮ್ಮ  ಕ್ರಿಯಾಶೀಲತೆ ಮೇಲೆ ನಮ್ಮ ದುಡಿಮೆ ಅವಲಂಬಿತವಾಗಿರುತ್ತದೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಛಲ ಉಳ್ಳವರು ಬೇರೆಯವರನ್ನು ಅವಲಂಬಿಸಬೇಕಿಲ್ಲ. 

ಎಷ್ಟು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದೀರಿ?
ಲೆಕ್ಕ ಇಟ್ಟಿಲ್ಲ. ಚೆನ್ನೈ, ಕೊಲ್ಕತ್ತ, ತಮಿಳುನಾಡು, ಹೈದರಾಬಾದ್, ಮುಂಬೈ, ಪುಣೆ, ಅಹಮದಾಬಾದ್, ವಿಜಯವಾಡ, ಹರಿಯಾಣ ಮೊದಲಾದೆಡೆ ನನ್ನ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದೇನೆ.

ಆದರೆ ನನ್ನ ವಸ್ತುಗಳನ್ನು ಬೆಂಗಳೂರಿನ ಜನ ಮೆಚ್ಚಿಕೊಂಡಷ್ಟು ಬೇರೆ ಕಡೆ ಮೆಚ್ಚಿಲ್ಲ. ಇಲ್ಲಿ ಪ್ರತಿಯೊಬ್ಬರೂ ನನ್ನ ಕಲೆಯನ್ನು ಗುರುತಿಸಿ ಕೊಂಡುಕೊಳ್ಳುತ್ತಾರೆ. ಎಷ್ಟೋ ವೇಳೆ ಪ್ರದರ್ಶನದ ಅವಧಿ ಮುಗಿಯುವ ಮೊದಲೇ ನನ್ನ ವಸ್ತುಗಳು ಖಾಲಿಯಾಗಿರುತ್ತವೆ. ಅದು ಬೆಂಗಳೂರಿನಲ್ಲಿ ಮಾತ್ರ. ಇಲ್ಲಿ ಕಲೆಯನ್ನು ಮೆಚ್ಚಿಕೊಂಡು ಆದರಿಸುವವರಿದ್ದಾರೆ.
 
ಬೆಂಗಳೂರು, ದೆಹಲಿಯಲ್ಲಿ ನಿಮಗೆ ಯಾವುದಿಷ್ಟ?
ಬೆಂಗಳೂರು. ಯಾರಾದ್ರೂ ಕೇಳಿದರೆ ನಾನು ಬೆಂಗಳೂರಿನವ, ಕನ್ನಡಿಗ ಎಂದು ಹೇಳಿಕೊಳ್ಳುತ್ತೇನೆ. ಇಲ್ಲಿನ ಭಾಷೆ, ಜನ, ನನಗೆ ತುಂಬಾ ಇಷ್ಟ. ಅಂದಹಾಗೆ ನನ್ನ ಹೊಟ್ಟೆ ತುಂಬಿಸುತ್ತಿರುವುದೂ ಇದೇ ನಗರ. ಎಷ್ಟು ಊರು ಸುತ್ತಿದರೂ ನೆಮ್ಮದಿ ಅಂತ ಸಿಗುವುದು ಈ ಊರಲ್ಲೆ.

ಭಾಷೆ ತೊಡಕಾಗಲಿಲ್ಲವೇ?
ಮೂಲತಃ ನಾನು ಹಿಂದಿ ಭಾಷಿಗ. ಇಲ್ಲಿಗೆ ಬಂದಾಗ ಕನ್ನಡ ಸ್ವಲ್ಪ ತೊಡಕಾಗುತಿತ್ತು. ಇಲ್ಲಿನ ಸಂಸ್ಕೃತಿಯ ಬಗ್ಗೆ ಅರಿಯಬೇಕೆಂಬ ಹಟಕ್ಕೆ ಬಿದ್ದು ಭಾಷೆ ಕಲಿತೆ. ಈಗ ಕನ್ನಡ ಸ್ಪಷ್ಟವಾಗಿ ಮಾತನಾಡಲು, ಓದಲು, ಬರೆಯಲು ಬರುತ್ತೆ. ಜತೆಗೆ ತಮಿಳು, ತೆಲುಗು ಇಂಗ್ಲಿಷ್, ಬೋಜ್‌ಪುರಿ, ಮಲಯಾಳಂ ಭಾಷೆಗಳೂ ಬರುತ್ತವೆ. ಆದರೆ ಎಲ್ಲಕ್ಕಿಂತ ಕನ್ನಡ ಭಾಷೆ ಹೆಚ್ಚು ಇಷ್ಟ.

ತಾತನ ಕಾಲಕ್ಕೂ ಈಗಿಗೂ ಏನಾದರೂ ವ್ಯತ್ಯಾಸ?
ತುಂಬಾ ಇದೆ. ಆಗಿನ ಕಾಲದಲ್ಲಿ ಮಣ್ಣಿನ ಮಡಿಕೆ ಕುಡಿಕೆಗಳನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಬೇಡಿಕೆಯೂ ಇತ್ತು. ಈಗ ಅವನ್ನೇ ಮಾಡುತ್ತಾ ಕೂತರೆ ಕೊಳ್ಳುವವರಿಲ್ಲ. ಹಾಗಾಗಿ ಮಣ್ಣಿನಲ್ಲೇ ವಿವಿಧ ಬಗೆಯ ಕಲಾಕೃತಿಗಳನ್ನು ಮಾಡಲು ಶುರುಮಾಡಿದೆವು. ಬಣ್ಣ ತುಂಬಿ ನಮ್ಮ ಕಲೆಗೆ ಹೊಳಪು ನೀಡಿದೆವು. ಅವನ್ನು ಜನರೂ ಇಷ್ಟಪಟ್ಟರು.

ನೀವು ಎದುರಿಸುತ್ತಿರುವ ಸವಾಲುಗಳು?
ನಮ್ಮಂತೆಯೇ ಕಲಾಕೃತಿಗಳನ್ನು ತಯಾರಿಸುವವರು ಹಲವರಿದ್ದಾರೆ. ಅವರ ನಡುವೆಯೂ ನಮ್ಮತನವನ್ನು ಗುರುತಿಸಿಕೊಳ್ಳಬೇಕಾದುದು ನಿಜಕ್ಕೂ ಸವಾಲಿನ ಕೆಲಸ. ದಿನದಿನಕ್ಕೂ ಕಲಾಕೃತಿಗಳ ಶೈಲಿಯನ್ನು ಬದಲಾಯಿಸಿದರೆ ಜನ ಖಂಡಿತ ನಮ್ಮ ವಸ್ತುಗಳೆಡೆ ಕಣ್ಣು ಹಾಯಿಸುತ್ತಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT