ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇನಾ 3 ವರ್ಷದ ಸಾಧನೆ?

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಒಬ್ಬರು ಶಾಸಕರಭವನದಲ್ಲಿಯೇ ಲಂಚ ಸ್ವೀಕರಿಸುವ ಧೈರ್ಯತೋರಹೋಗಿ ಲೋಕಾಯುಕ್ತರ ಕೈಗೆ ಸಿಕ್ಕಿಹಾಕಿಕೊಂಡು ವಿಲವಿಲನೆ ಒದ್ದಾಡಿದರೆ, ಇನ್ನೊಬ್ಬರು ತಾನು  `ಸೀತೆಯಷ್ಟು ಪರಿಶುದ್ಧ~ ಎಂದು ಮಾತು ಮಾತಿಗೂ ಘೋಷಿಸಿಕೊಳ್ಳುತ್ತಲೇ ವೈದ್ಯಕೀಯ ಶಿಕ್ಷಣ ಇಲಾಖಾ ನೇಮಕಾತಿಯಲ್ಲಿ ಎಡವಟ್ಟು ಮಾಡಿಕೊಂಡು, ನ್ಯಾಯಾಲಯದಿಂದಲೂ ಛೀಮಾರಿ ಹಾಕಿಸಿಕೊಂಡು, ಮಂತ್ರಿಪದವಿ ಕಳೆದುಕೊಂಡರು.

ಮತ್ತೊಬ್ಬರು ತಮ್ಮ ಕೃಷ್ಣಲೀಲಾ ವಿನೋದಗಳಿಂದ ಜನಜನಿತರಾಗಿ ನಾಡಿನ ಮರ್ಯಾದಸ್ಥರು ತಲೆತಗ್ಗಿಸುವ ಕೆಲಸಮಾಡಿದರೂ ಮತ್ತೆ ಮಂತ್ರಿಯಾಗಿ ರಾಜಾರೋಷವಾಗಿ ತಲೆ ಎತ್ತಿತಿರುಗುತ್ತಿದ್ದರೆ, ಮಗದೊಬ್ಬರು ಸಚಿವರಾಗಿದ್ದುಕೊಂಡೇ ಗೆಳೆಯನ ಪತ್ನಿಯನ್ನು  `ರಮಿಸಲು ಹೋಗಿ~ ಮಂತ್ರಿಗಿರಿಯಿಂದ ಇಳಿದುದೇ ಅಲ್ಲದೆ ಒಮ್ಮೆ ಜೈಲನ್ನೂ ನೋಡಿಬಂದರು! ಭಾರತದ ಉತ್ತರ ತುದಿಯಿಂದ ಗಂಗಾಜಲವನ್ನು ಟ್ಯಾಂಕರಿನಲ್ಲಿ ತಂದು ಇಲ್ಲಿನ ಭಕ್ತಾದಿಗಳಿಗೆ ಹಂಚಿ ಪಾವನರಾಗುವ ಪುಣ್ಯ ಕಾರ್ಯವನ್ನು ಮಾಡಿದವರೊಬ್ಬರು ಎಗ್ಗಿಲ್ಲದ ಭೂ ಅವ್ಯವಹಾರದ ಮೂಲಕ ಸರ್ಕಾರಕ್ಕೂ ಬಡಪಾಯಿ ರೈತರಿಗೂ ಉದ್ದುದ್ದ ಪಂಗನಾಮ ಹಾಕಿ ಈಗ ಆರೋಪಿಯಾಗಿ ಕಟಕಟೆ ಹತ್ತಿಬರುತ್ತಿದ್ದಾರೆ.

 ಕೆಐಎಡಿಬಿ ಭೂ ಹಗರಣ, ಅಕ್ರಮಗಣಿಗಾರಿಕೆ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಿರುವ, ಹಣ ಬಲದಿಂದ ಏನನ್ನು ಬೇಕಾದರೂ, ಯಾರನ್ನು ಬೇಕಾದರೂ ಖರೀದಿಮಾಡಬಹುದು ಎಂಬ ಅದಮ್ಯ ಆತ್ಮವಿಶ್ವಾಸ ಹೊಂದಿದ್ದ ಇಬ್ಬರು ಪ್ರಭಾವಿ ಮಾಜಿ ಸಚಿವರು ಕಂಬಿ ಎಣಿಸುತ್ತಿದ್ದರೆ, ಟ್ರಸ್ಟ್‌ಗೆ ದೇಣಿಗೆ ಸ್ವೀಕಾರ, ಸ್ವಜನಹಿತಾಸಕ್ತಿಗಾಗಿ ಡೀನೋಟಿಫಿಕೇಶನ್, ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಆರೋಪ ಹೊತ್ತು ನಮ್ಮ ಮಾಜಿ ಮುಖ್ಯಮಂತ್ರಿಗಳೇ ಇದೀಗ ಸರದಿಯಲ್ಲಿ ನಿಂತಿದ್ದಾರೆ. ಆಹಾ! ಮೊದಲಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ  `ಭಿನ್ನ ಪಕ್ಷ~ವೊಂದು ಎಂತಹ ಅದ್ಭುತ ಪ್ರಾಮಾಣಿಕ, ಸಚ್ಚಾರಿತ್ರ್ಯವಂತ, ದಕ್ಷ ಶಾಸಕರನ್ನು ಮಂತ್ರಿಗಳನ್ನು ಸರ್ಕಾರವನ್ನು ಕೊಟ್ಟಿತು! ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಮಂದಿ,  `ಅರವತ್ತು ವರ್ಷಗಳಲ್ಲಿ ಆಗಿರದ ಸಾಧನೆಯನ್ನು ಮೂರೇ ವರ್ಷದಲ್ಲಿ ಮಾಡಿದ್ದೆೀವೆ~ ಎಂದು ನಿರ್ಲಜ್ಜವಾಗಿ ತಮಗೆ ತಾವೇ ಪ್ರಮಾಣಪತ್ರ ಕೊಟ್ಟುಕೊಳ್ಳುತ್ತಲೇ ರಾಜ್ಯವನ್ನು ಮೂರೇ ವರ್ಷದಲ್ಲಿ  ಯಾವ ಮಟ್ಟಕ್ಕೆ ತಲಪಿಸಿಬಿಟ್ಟರು! ಜೈ ಕನ್ನಡ ಭುವನೇಶ್ವರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT