ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೋ `ಇ ಚಾಪ್ಟರ್'

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ಕಲೆಹಾಕುವಲ್ಲಿ ಇಂಟರ್ನೆಟ್ ಪ್ರಮುಖ ಪಾತ್ರ ವಹಿಸುತ್ತದೆ. ಸಂಪರ್ಕಕ್ಕೆ, ಮಾಹಿತಿಗೆ, ಇತಿಹಾಸದ ಪುಟಗಳನ್ನು ಕೆದಕಿ ಅಧ್ಯಯನ ನಡೆಸಲು ಬೆರಳತುದಿಯ ಸ್ನೇಹಿತ ಅದು. ಕಂಪ್ಯೂಟರ್ ಮೂಲಕವೇ ಪದವಿ ಗಳಿಸುವವರ ಪಾಲಿಗೆ ಕಂಪ್ಯೂಟರ್ ಸಾಕ್ಷಾತ್ ಗುರುವಿದ್ದಂತೆ. ಇದೀಗ ಈ `ಗುರು' ತನ್ನ ವಿದ್ಯಾರ್ಥಿಗಳಿಗೆ ದೈನಂದಿನ ಪಾಠವನ್ನೇ ಮೊಗೆದುಕೊಡಲು ಸಿದ್ಧವಾಗಿದೆ.

ಅಧ್ಯಾಯವನ್ನಷ್ಟೇ ಖರೀದಿಸಿ!
ದೇಶದ ಪ್ರಮುಖ ಇ- ಬುಕ್ ರಿಟೇಲ್ ಮಳಿಗೆಗಳಲ್ಲೊಂದಾದ `ಅಟ್ಟನೊ', ಇದೇ ಮೊದಲ ಬಾರಿಗೆ ಪರಿಚಯಿಸಿರುವ `ಚಾಪ್ಟರ್ ಬೈ' ಎಂಬ ವ್ಯವಸ್ಥೆಯಂತೆ `ಇ ಬುಕ್'ಗಳಿಂದ ವಿದ್ಯಾರ್ಥಿಗಳು ತಮಗೆ ಬೇಕಾದ ಅಧ್ಯಾಯಗಳನ್ನಷ್ಟೇ ಆನ್‌ಲೈನ್‌ನಲ್ಲಿ ಖರೀದಿಸಬಹುದು. ವಿಶೇಷವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ, ಮ್ಯಾನೇಜ್‌ಮೆಂಟ್, ಎಂಜಿನಿಯರಿಂಗ್, ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಇದರಿಂದ ಅನುಕೂಲವಾಗಲಿದೆ.

ಪ್ರತಿ ವಿಷಯಕ್ಕೂ (ಸಬ್ಜೆಕ್ಟ್) ಬೇರೆ ಬೇರೆ ಪುಸ್ತಕಗಳನ್ನು ಖರೀದಿಸಿ, ಗ್ರಂಥಾಲಯದಿಂದ ಪಡೆದು ಅಥವಾ ಸ್ನೇಹಿತರಿಂದ ದಿನದ ಮಟ್ಟಿಗೆ ಪಡೆದುಕೊಂಡು ತಮಗೆ ಬೇಕಾದ ಮಾಹಿತಿಗಾಗಿ ಇಡೀ ಪುಸ್ತಕವನ್ನು ಜಾಲಾಡುವ ಬದಲು, ಯಾವ ವಿಷಯ ಮತ್ತು ಯಾವ ಅಧ್ಯಾಯ ಎಂಬುದನ್ನು ನಮೂದಿಸಿ ಡೌನ್‌ಲೋಡ್ ಮಾಡಿಕೊಳ್ಳುವ ಸುಲಭ ಸೌಕರ್ಯ `ಚಾಪ್ಟರ್ ಬೈ'ನಲ್ಲಿದೆ.

ಇದರ ಬಗ್ಗೆ `ಅಟ್ಟನೊ'ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೌಮ್ಯಾ ಬ್ಯಾನರ್ಜಿ ಹೀಗೆ ಮಾಹಿತಿ ಕೊಡುತ್ತಾರೆ: `ಆಧುನಿಕ ತಂತ್ರಜ್ಞಾನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಪ್ರಪಂಚದ ಯಾವುದೋ ಮೂಲೆಯಲ್ಲಿನ ಆಗುಹೋಗುಗಳನ್ನು ಬೆರಳತುದಿಯಲ್ಲಿ ಸಿಗುವಂತೆ ಮಾಡಿದೆ. ಆದರೆ ಪಠ್ಯಪುಸ್ತಕಗಳ ವಿಚಾರಕ್ಕೆ ಬಂದರೆ ಅದೇ ಹಳೆಯ ಮಾದರಿಯಲ್ಲೇ ಇದ್ದೇವೆ. ದೊಡ್ಡ ದೊಡ್ಡ ಪುಸ್ತಕಗಳನ್ನು ಹೊರುವುದು, ಮಾಹಿತಿಗಾಗಿ ಪುಟಗಳನ್ನು ಮಗುಚಿ ಮಗುಚಿ ಸಮಯ ವ್ಯರ್ಥಗೊಳಿಸುವುದು ಇತ್ಯಾದಿ.

ಈ ಸಮಸ್ಯೆಯನ್ನು ಪರಿಹರಿಸಿ ಪಠ್ಯವನ್ನು ವೈಯಕ್ತಿಕಗೊಳಿಸುವುದು, ಭೌತಿಕ ಮಿತಿಯನ್ನು ಮೀರಿದ ಉತ್ತಮ ಗುಣಮಟ್ಟದ ಶೈಕ್ಷಣಿಕ ಅನುಭವವನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು `ಚಾಪ್ಟರ್ ಬೈ'ನ ಉದ್ದೇಶ. ಈ ಮೂಲಕ ವಿದ್ಯಾರ್ಥಿಗಳು ಪಿಸಿ/ ಲ್ಯಾಪ್‌ಟಾಪ್/ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ಗಳಿಗೆ  ಇ- ಚಾಪ್ಟರ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹೀಗೆ ಡೌನ್‌ಲೋಡ್ ಮಾಡಲಾದ ಇ- ಚಾಪ್ಟರ್‌ನ್ನು ಬೋಲ್ಡ್, ಹೈಲೈಟ್, ಅಂಡರ್‌ಲೈನ್ ಅಥವಾ ಬುಕ್‌ಮಾರ್ಕ್ ಮಾಡುವುದಲ್ಲದೆ, ಅದರ ಮೇಲೆ ಪುಸ್ತಕದ ಮೇಲೆ ಬರೆದಂತೆ ತಮ್ಮ ಅಭಿಪ್ರಾಯಗಳನ್ನು ಬರೆದುಕೊಳ್ಳಲು ಅವಕಾಶ ಇರುತ್ತದೆ. ಒಂದೇ ಚಾಪ್ಟರ್ ಖರೀದಿಸಲು ಕೇವಲ ಮೂರು ರೂಪಾಯಿ ವ್ಯಯಿಸಿದರಾಯಿತು'.

ಅಂದ ಹಾಗೆ, ಪಿಯರ್‌ಸನ್ ಎಜುಕೇಶನ್, ಶೇಠ್ ಪಬ್ಲಿಷರ್ಸ್‌ ಮತ್ತು ಲಕ್ಷ್ಮಿ ಪಬ್ಲಿಷರ್ಸ್‌ ಸಂಸ್ಥೆಗಳು ಅಟ್ಟನೊದೊಂದಿಗೆ `ಚಾಪ್ಟರ್ ಬೈ'ಗೆ ಕೈಜೋಡಿಸಿವೆ.  ಇ- ಚಾಪ್ಟರ್‌ಗಳಿಗೆ ಮತ್ತು ಇನ್ನಷ್ಟು ಮಾಹಿತಿಗೆ www.attano.com ಗೆ ಭೇಟಿ ಕೊಡಬಹುದು.
-ರೋಹಿಣಿ ಮುಂಡಾಜೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT