ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೋ ಗಿಡ... ಸಂಪೂರ್ಣ ಉಚಿತ!

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದಿನ ಕಳೆದರೆ ಇಲ್ಲಿ ನೂರಾರು ಸಮಸ್ಯೆ. ಹೆಚ್ಚುತ್ತಿರುವ ಜನಸಂಖ್ಯೆ,  ಅಪಾರ್ಟ್‌ಮೆಂಟ್‌ಗಳು ಒಂದೆಡೆಯಾದರೆ, ಹದಗೆಡುತ್ತಿರುವ ಪರಿಸರ ಸಮಸ್ಯೆಯ ಮತ್ತೊಂದು ಮುಖ.

ವಾಹಗಳೊಂದಿಗೆ ಫ್ಲೈ ಓವರ್‌ಗಳ ಸಂಖ್ಯೆಯೂ ಇಮ್ಮಡಿಸುತ್ತಿದೆ. ರಿಂಗ್ ರಸ್ತೆಗಳು ವಿಸ್ತಾರಗೊಳ್ಳುತ್ತಲೇ ಇವೆ. ಪೈಪೋಟಿಗೆ ಬಿದ್ದಂತೆ ಮೆಟ್ರೊ ಕೂಡ ತಲೆಯೆತ್ತಿದೆ. ಆದರೆ ಈ ಎಲ್ಲಾ ಅಭಿವೃದ್ಧಿಯ ಹಿಂದೆ ಬಲಿಯಾಗುತ್ತಿರುವುದು ನಮ್ಮ ಹಸಿರು.

`ಮನೆಗೊಂದು ಗಿಡ ನೆಡಿ~ ಎಂದು ಸರ್ಕಾರ ಸೇರಿದಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಜನರಲ್ಲಿ ತಿಳಿವಳಿಕೆ ಮೂಡಿಸಲು ಪ್ರಯತ್ನಿಸುತ್ತಲೇ ಇವೆ.  ಆದರೆ ಅದು ಕಾರ್ಯರೂಪಕ್ಕೆ ಬಂದಿರುವುದು ವಿರಳ. ಈ ಸಂದರ್ಭದಲ್ಲಿ `ಸಸಿಗಳನ್ನು ಉಚಿತವಾಗಿ ನೀಡಿ ಪರಿಸರವನ್ನು ನಮ್ಮ ಕೈಲಾದಷ್ಟು ಸಂರಕ್ಷಿಸುವ ಪ್ರಯತ್ನ ಮಾಡುತ್ತೇವೆ~  ಎನ್ನುತ್ತಿದೆ ಟ್ರೀ ಫಾರ್ ಫ್ರೀ ಸಂಸ್ಥೆ.

ಉಚಿತ ಆಮ್ಲಜನಕ, ಸ್ವಚ್ಛಂದ ಗಾಳಿ, ಹಕ್ಕಿಗಳ ಕಲರವ, ಶುದ್ಧ ಪರಿಸರ, ಶಬ್ಧ ಮಾಲಿನ್ಯದ ನಿಯಂತ್ರಣ, ಉಚಿತ ಹೂ-ಹಣ್ಣು, ತಂಪೆರೆಯುವ ನೆರಳು, ಇವೆಲ್ಲ ನಗರಿಗರಿಗೆ ಏಕೆ ಬೇಡವೆನಿಸುತ್ತಿವೆ? ಎಂದು ಪ್ರಶ್ನಿಸುವ ಸಂಸ್ಥೆಯ ಮುಖ್ಯಸ್ಥೆ ಜಾನೆಟ್ ಅವರು, ಒಂದು ಗಿಡ ನೆಟ್ಟರೆ ಮುಂದೆ ಅದರಿಂದ ಒದಗುವ ಯತೇಚ್ಛ ಲಾಭದ ಕುರಿತು ವಿವರಿಸುತ್ತಿದ್ದರು.

`ಎಲ್ಲೆ ಮೀರುತ್ತಿರುವ ಭೂಮಿಯ ಶಾಖವನ್ನು ಕಡಿಮೆ ಮಾಡೋಣ, ಅದಕ್ಕೆ ತಂಪೆರೆಯೋಣ, ಮರಗಿಡಗಳನ್ನು ಪ್ರೀತಿಸೋಣ, ಒಂದು ಮರ ಕಡಿದರೆ ಅದಕ್ಕೆ ಪೂರಕವಾಗಿ ಹತ್ತು ಸಸಿ ನೆಡೋಣ~ ಎಂದು ಪರಿಸರದೆಡೆಗಿನ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು.

ತಮ್ಮ ಪತಿಯ ಜ್ಞಾಪಕಾರ್ಥವಾಗಿ ಮತ್ತು ಪರಿಸರದೆಡೆಗಿನ ಕಾಳಜಿಯ ಸಲುವಾಗಿ ಜಾನೆಟ್ ಅವರು 2005ರಲ್ಲಿ ಆರಂಭಿಸಿದ್ದು ರಾಜಾನೆಟ್ ಯಜ್ಞೇಶ್ವರ ಚಾರಿಟಬಲ್ ಟ್ರಸ್ಟ್. ಅದರ ಭಾಗವೇ `ಟ್ರೀ ಫಾರ್ ಫ್ರೀ~.

`ಬೆಂಗಳೂರು ಬೆಳೆಯುತ್ತಿದೆ ಎನ್ನುವುದಕ್ಕೆ ನಮ್ಮ ಮುಂದೆ ಹಲವು ನಿದರ್ಶನಗಳಿವೆ. ಅಂತೆಯೇ ಮುಂದೊಂದು ದಿನ ಅದು ಹಾಳಾಗಲಿದೆ ಎನ್ನುವ ಭಯವೂ ನಮ್ಮದು. ಇದೇ ನಮ್ಮ ಕಾಳಜಿ~ ಎನ್ನುವ ಜಾನೆಟ್ ಅವರು ಇದುವರೆಗೂ  ಸುಮಾರು 37,000 ಸಸಿಗಳನ್ನು ಉಚಿತವಾಗಿ ನೆಟ್ಟಿರುವರಂತೆ.


ಜಯನಗರ, ಲಾಲ್‌ಬಾಗ್, ಹೊಸೂರು ಹೀಗೆ ನಗರದ ಹಲವೆಡೆ ಗಿಡಗಳನ್ನು ನೆಟ್ಟಿರುವ ಇವರ ಜಾಡು ಗ್ರಾಮಾಂತರ ಜಿಲ್ಲೆಗಳಿಗೂ ಹಬ್ಬಿದೆಯಂತೆ. ಹಿಂದೆ ನಗರದ 30 ಕಿ. ಮೀ ವ್ಯಾಪ್ತಿಯಲ್ಲಿದ್ದ ಇವರ ಮಿತಿ ಈಗ 100 ಕಿ.ಮೀಗೆ ಏರಿದೆಯಂತೆ.

ಜನಗಳಿಗೆ ಗಿಡದ ಮಹತ್ವದ ಬಗ್ಗೆ ಇನ್ನೂ ಹೆಚ್ಚಿನ ತಿಳಿವಳಿಕೆಯಿಲ್ಲ. ಅವುಗಳ  ಆರೈಕೆ, ನೆಡುವ ಕ್ರಮ ಇದಾವುದರ ಬಗ್ಗೆಯೂ ಕೆಲವರಿಗೆ ತಿಳಿದಿಲ್ಲ. ಆದ್ದರಿಂದ ನಾವೇ ಕೇಳಿದವರಿಗೆ ಗಿಡದ ಮಹತ್ವ, ನೆಡುವ ಕ್ರಮ, ಆರೈಕೆ ರೀತಿ ಎಲ್ಲವನ್ನೂ ತಿಳಿಸಿಕೊಡುತ್ತೇವೆ.
 
ಗಿಡವನ್ನು ದುಡ್ಡಿಗೆ ಕೊಳ್ಳಿ ಎಂದರೆ ಜನಕ್ಕೆ ಕಷ್ಟವಾಗಬಹುದು. ಆದ್ದರಿಂದ ನಾವೇ ಉಚಿತವಾಗಿ ನೀಡುತ್ತೇವೆ. ನಮ್ಮ ಬೆಂಬಲಕ್ಕೆ ಪ್ರಾಯೋಜಕರಿದ್ದಾರೆ. ಗಿಡ ಕೇಳಿದಾಕ್ಷಣ ವ್ಯಾನ್‌ನಲ್ಲಿ ನಾವು ಮನೆ ಮುಂದೆ ಹಾಜರ್~ ಎಂದು ವಿಶ್ವಾಸದಿಂದ ನುಡಿದರು.

`ಗಿಡಗಳಿಗೆ ಆಶ್ರಯ ನೀಡಲು ನಮ್ಮದೇ ಜಾಗವಿದೆ. ಹುಟ್ಟುಹಬ್ಬ ಇನ್ನಿತರ ವಿಶೇಷ ಸಂದರ್ಭದಲ್ಲಿ ಜನರೂ ಗಿಡಗಳಿಗೆ ಹಣ ನೀಡಿ ಆರೈಕೆ ಮಾಡಲು ಸಹಾಯ ಮಾಡುತ್ತಾರೆ. ಲಾಲ್‌ಬಾಗ್, ಅರಣ್ಯ ಇಲಾಖೆಯವರಿಂದಲೂ ಗಿಡಗಳನ್ನು ಖರೀದಿಸಿ ಉಚಿತವಾಗಿ ಕೊಡುತ್ತೇವೆ. ವೃದ್ಧಾಶ್ರಮ, ಅನಾಥಾಶ್ರಮಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಇದ್ದೇ ಇರುತ್ತದೆ.

ಅಷ್ಟೇ ಅಲ್ಲ, ಖಾಲಿ ಕಾಣುವ ರಸ್ತೆಗಳಲ್ಲಿ ಸರ್ಕಾರದ ಒಪ್ಪಿಗೆ ತೆಗೆದುಕೊಂಡು ಗಿಡ ನೆಡುತ್ತೇವೆ, ಅದಕ್ಕೆ ಬಿದಿರಿನಿಂದ ರಕ್ಷಣೆಯನ್ನೂ ನೀಡುತ್ತೇವೆ. ಮರ ಗಿಡ ನಮ್ಮ ಉಳಿವಿಗೆ ಎಷ್ಟು ಅವಶ್ಯ~ ಎಂಬುದನ್ನು ಈ ರೀತಿ ತೋರಿಸುತ್ತೇವೆ~ ಎಂದು ತಮ್ಮ ಪ್ರಯತ್ನಗಳ ಕುರಿತು ಹೇಳಿಕೊಂಡರು.

ನಗರದಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚುತ್ತಿರುವುದರಿಂದ, ಅಲ್ಲಿ ಜಾಗದ ಕೊರತೆಯಿಂದಾಗಿ ನಿವಾಸಿಗಳು ತಮಗೆ ಕಂಡ ಜಾಗದಲ್ಲಿ ಗಿಡ ನೆಡಲು ಕರೆ ಮಾಡಿ ಸಲಹೆ ನೀಡಿದಾಗ, ಸಂಬಂಧ ಪಟ್ಟವರ ಒಪ್ಪಿಗೆ ಪಡೆದು ಅಲ್ಲಿ ಗಿಡ ನೆಡುತ್ತಾರೆ. ಇಡೀ ನಗರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕೆನ್ನುವ ಉದ್ದೇಶದೊಂದಿಗೆ  ಈ ಸಂಸ್ಥೆ ಆರಂಭಿಸಿದ್ದಾಗಿ ತಿಳಿಸಿದರು.

`ನಾವು ಭೂಮಿಗೆ ಬಗೆದ ಕೇಡನ್ನು ಗಿಡಗಳು ಒಂದಿಷ್ಟು ಕಡಿಮೆ ಮಾಡುತ್ತವೆ. ಮರಗಳಿಂದ ಮಣ್ಣಿನ ಸವೆತ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಮರಗಳು ಹೆಚ್ಚಿದ್ದ ರಸ್ತೆಗಳಲ್ಲಿ ಜನರೂ ವೇಗವಾಗಿ ವಾಹನ ಸಂಚರಿಸುವುದಿಲ್ಲವಾದ್ದರಿಂದ ಅಪಘಾತದ ಪ್ರಮಾಣವನ್ನೂ ತಡೆಯಬಹುದು~ ಎಂದು ಕಿವಿ ಮಾತು ಹೇಳಿದರು.

ವಿಶೇಷ ಸಂದರ್ಭಗಳಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಗಿಡಗಳನ್ನೇ ಉಡುಗೊರೆಯನ್ನಾಗಿ ನೀಡಿ. ಅದು ಮಿಕ್ಕ್ಲ್ಲೆಲವಕ್ಕಿಂತ ಭಿನ್ನ ಮತ್ತು ಅಮೂಲ್ಯವಾದದ್ದು. ಸಸಿ ಬೆಳೆದು ಮರವಾದ ಮೇಲೆ ಅವರಲ್ಲಿ ನಿಮ್ಮ ನೆನಪೂ ಚಿರವಾಗಿರುತ್ತದೆ~ ಎಂದರು.

ಸಂಪಿಗೆ, ಮಾವು, ಬೇವು, ಸಪೋಟಾ, ಹಲಸು, ಹೊಂಗೆ ಸೇರಿದಂತೆ ಹಲವು ರೀತಿಯ ಸ್ಥಳೀಯ ಸಸ್ಯಗಳನ್ನು ಉಚಿತವಾಗಿ ನೀಡುತ್ತಾ ಬಂದಿರುವರಂತೆ. ಗಿಡ ಅಥವಾ ಹಸಿರನ್ನು ಪಸರಿಸುವ ಕಾರ್ಯದಲ್ಲಿ ಈಗ ನೀವೂ ಕೈಜೋಡಿಸಬಹುದು.
ಮಾಹಿತಿಗೆ: 98454 49703.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT