ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದಲ್ಲಿ ಮನೆ, ಹೋದಲ್ಲಿ ಭಿಕ್ಷೆ!

Last Updated 21 ಫೆಬ್ರುವರಿ 2011, 7:30 IST
ಅಕ್ಷರ ಗಾತ್ರ

ಯಳಂದೂರು; ರಾಷ್ಟ್ರೀಯ ಹೆದ್ದಾರಿಯಲ್ಲಿ ನೆತ್ತಿ ಸುಡುವ ಬಿಸಿಲಲ್ಲಿ ಹಸುಗೂಸು ಎತ್ತಿಕೊಂಡು ನಡೆಯುವ ಮಹಿಳೆಯರು. ಟೆಂಟ್ ಹಾಕುವ ಪರಿಕರಗಳೊಂದಿಗೆ ಮೂಗುದಾರ ಹಿಡಿದು ಹೆಜ್ಜೆ ಹಾಕುವ ಪುರುಷರು. ತಟ್ಟೆ, ಲೋಟದ ಸಾಮಾನು ಹೊತ್ತು ಒಡೆಯನನ್ನು ಹಿಂಬಾಲಿಸುವ ಬಸವಗಳು. ಎಲ್ಲಿಗೆ ಹೋಗುತ್ತೇವೆಂಬ ಅರಿವಿಲ್ಲ. ‘ಇದ್ದಲ್ಲಿ ಮನೆ, ಹೋದಲ್ಲಿ ಭಿಕ್ಷೆ’ ಎಂಬಂತಾಗಿದೆ ಕೋಲೆ ಬಸವನ ಸಂಚಾರಿ ಕುಟುಂಬದ ಕಥೆ.

ತುಮಕೂರು ಜಿಲ್ಲೆ ಬೆಲಗುಂಭ ಗ್ರಾಮದ ಈ ತಂಡ ಯಳಂದೂರು ಪಟ್ಟಣಕ್ಕೆ ಬಂದಿದೆ. ಭಿಕ್ಷೆ ಬೇಡುವುದು ವೃತ್ತಿಯಲ್ಲ. ಪ್ರವೃತ್ತಿಯಿಂದ ಪೂಜೆಗೂಲ್ಲರ ಕುಟುಂಬ. ಸಂಪ್ರದಾಯಕ್ಕೆ ಕಟ್ಟುಬಿದ್ದು, ಆಚಾರ-ವಿಚಾರ ಪಾಲನೆಗೆ ಈ ಕಾಯಕ ಮಾಡುವುದು.  ವರ್ಷದಲ್ಲಿ ಆರು ತಿಂಗಳು ಊರು ಸುತ್ತಿ ಭಿಕ್ಷೆ ಬೇಡುವುದು ಹವ್ಯಾಸ.
‘ಮುಂಜಾನೆ ಎದ್ದು ಬಸವನನ್ನು ಅಲಂಕರಿಸಲಾಗುವುದು. ಮಂಗಳವಾದ್ಯ ಮೊಳಗಿಸಿ, ಡೋಲು ಬಾರಿಸುತ್ತ ಮನೆ ಮುಂದೆ ಹೋಗುತ್ತೇವೆ. ಅವರು ನೀಡುವ ಹಣ, ಧಾನ್ಯ ಪಡೆದು ಬಸವ ಆಶೀರ್ವಾದ ಮಾಡುತ್ತದೆ. ಬಸವನಿಂದ ‘ಸೀತಾರಾಮ ಕಲ್ಯಾಣ’ ಹಾಗೂ ಕೆಲವೊಮ್ಮೆ ಕೋಲೆ ಬಸವನಿಂದ ಯೋಗ ಸಹ ಮಾಡಿಸಲಾಗುತ್ತದೆ.

ಗೃಹಪ್ರವೇಶ ಸಂದರ್ಭದಲ್ಲಿ ಬೇಡಿಕೆ ಇದೆ. ತೆಲುಗು, ಕನ್ನಡ ಮಾತನಾಡುವ 7 ಜನರ ತಂಡ ಜಿಲ್ಲೆಯಾದ್ಯಂತ ಸಂಚರಿಸುತ್ತಿದೆ. ಕೃಷ್ಣಮತಕ್ಕೆ ಸೇರಿದ ಗೂಲ್ಲರ ಕುಟುಂಬ ಇದನ್ನು ಹಿರಿಯರ ಬಳುವಳಿಯಂತೆ ಪಾಲಿಸಿಕೊಂಡಿ ಬಂದಿದೆ. ಅವರ ಜೊತೆಯಲ್ಲಿ 4 ಬಸವ ಇವೆ. ದಿನ 20 ಕಿ.ಮೀ ನಡೆಯುತ್ತೇವೆ. ರಾತ್ರಿ ಯಾವುದಾದರೂ ಗ್ರಾಮ ಅಥವಾ ಪಟ್ಟಣದಲ್ಲಿ ತಂಗುತ್ತೇವೆ. ಸಂಸ್ಕೃತಿ ಪಾಲನೆಯಿಂದ ಹಣ ಸಿಗುತ್ತದೆ. ಆದರೆ ಇದು ಭಿಕ್ಷೆಯಲ್ಲ ಎನ್ನುತ್ತಾರೆ ತಂಡದ ಸದಸ್ಯ ವೆಂಕಟೇಶ್.

‘ಬಿಸಿಲಲ್ಲಿ ಕಂದಮಗಳನ್ನು ಹೂತ್ತು ಸಾಗುವ ಮಹಿಳೆಯರಿಗೆ ಸಂಸಾರ ನಿಭಾಯಿಸುವ ಜವಾಬ್ದಾರಿ ಇದೆ. ಪುರುಷರು ಹಗಲಿನಲ್ಲಿ ಭಿಕ್ಷೆಗೆ ಹೋದಾಗ ಮಕ್ಕಳ ಲಾಲನೆ ಪಾಲನೆ ಮಾಡಬೇಕು. ಮಳೆ, ಬಿಸಿಲು ಶಾಖಕ್ಕೆ ನಲುಗಬೇಕು. ನಮಗೆ ಮಕ್ಕಳ ಹಕ್ಕುಗಳ ಬಗ್ಗೆ ಯಾವುದೇ ಅರಿವಿಲ್ಲ’ ಎನ್ನುತ್ತಾರೆ ಪುಟ್ಟಮ್ಮ, ನಾರಾಯಣಮ್ಮ, ಸುಬ್ಬಮ್ಮ.
ದಸರಾ ಹಬ್ಬಕ್ಕೆ ಮನೆ ಬಿಟ್ಟು ಯುಗಾದಿಗೆ ತಮ್ಮ ಗುಡಿಸಲು ತಲುಪುತ್ತಾರೆ. ಉಳಿದ ಆರು ತಿಂಗಳು ಭಿಕ್ಷೆ ನಿಷೇಧ. ಸರ್ಕಾರ ಸ್ವಂತ ಊರಿನಲ್ಲಿ ಮನೆ ನಿರ್ಮಿಸಲು ಸ್ವಲ್ಪ ನೆರವು ನೀಡಿದೆ. ಆದರೆ ಹತ್ತಾರು ತಂಡಗಳು ಈ ಧಾರ್ಮಿಕ ಆಚರಣೆಯನ್ನು ಇನ್ನೂ ಪಾಲಿಸುತ್ತಿವೆ. ಭಿಕ್ಷೆ ಬೇಡುವುದನ್ನು ಸರ್ಕಾರ ನಿಷೇಧಿಸಿದೆ. ಆದರೆ ಕುಲ ಕಸುಬಾಗಿ ಇದನ್ನು ಕೋಲೆ ಬಸವನ ಕುಟುಂಬ ಆಚರಿಸಿಕೊಂಡು ಬರುತ್ತಿದೆ ಎನ್ನುತ್ತಾರೆ ಸುಬ್ರಮಣ್ಯ, ಶಿವಣ್ಣ ಹಾಗೂ ನಾರಾಯಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT