ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಇನಾಂ ಗಡುವು -ಧೃತಿಗೆಡಬೇಡಿ'

ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಅಭಯ
Last Updated 17 ಡಿಸೆಂಬರ್ 2012, 9:17 IST
ಅಕ್ಷರ ಗಾತ್ರ

ಕಳಸ: ಹೋಬಳಿಯ ಇನಾಂ ಭೂಮಿಯಲ್ಲಿ ವಾಸ ವಾಗಿರುವ ಕೃಷಿಕರನ್ನು ಇದೇ 31ರ ಒಳಗೆ ಖುಲ್ಲಾ ಮಾಡಿಸಲಾಗುತ್ತದೆ ಎಂಬ ವದಂತಿಗೆ ಬೆಳೆಗಾರರು ಧೃತಿಗೆಡುವುದು ಬೇಡ. ಇನಾಂ ವಾಸಿಗಳನ್ನು ಉಳಿಸಲು ಇನ್ನೂ ಹಲವಾರು ಬಗೆಯ ಅವಕಾಶಗಳು ಇವೆ ಎಂದು  ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಹೇಳಿದರು.

ಪಟ್ಟಣದ ದುರ್ಗಾ ಮಂಟಪದಲ್ಲಿ ಇನಾಂ ಭೂಮಿ ಮತ್ತು ಒತ್ತುವರಿ ಸಮಸ್ಯೆ ಬಗ್ಗೆ ಕಾಂಗ್ರೆಸ್ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನಲ್ಲಿ ಇನಾಂ ಸಂಬಂಧಿತ ಮೊಕದ್ದಮೆಯಲ್ಲಿ ಜನರಿಗೆ  ನ್ಯಾಯ ಸಿಗುತ್ತದೆ ಎಂದರು.

ನ್ಯಾಯಾಲಯದಲ್ಲಿ ಫಲಿತಾಂಶ ಏನೇ ಆದರೂ ಕೂಡ ಅರಣ್ಯ ಹಕ್ಕು ಕಾಯ್ದೆ ಮೂಲಕ ಇನಾಂ ವಾಸಿಗಳ ಜಮೀನಿಗೆ ಹಕ್ಕು ಪತ್ರ ನೀಡಲು ಸಾಧ್ಯವಿದೆ. ಎಲ್ಲ ಇನಾಂ ಭೂಮಿ ಕೃಷಿಕರೂ ಈಗಲೇ ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಬೇಕು. ಆ ಅರ್ಜಿಗಳು ವಿಲೇವಾರಿ ಆಗುವವರೆಗೂ ಯಾವ ಕೃಷಿಕರನ್ನೂ ಒಕ್ಕಲೆಬ್ಬಿಸುವಂತಿಲ್ಲ. ಈ ಕಾಯ್ದೆಯ ನೆರವಿನಿಂದ  ಎಲ್ಲ ಇನಾಂ ವಾಸಿಗಳಿಗೂ ಹಕ್ಕುಪತ್ರ ನೀಡಲು ಸಾಧ್ಯವಿದೆ ಎಂದೂ ಶಂಕರ್ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಕ್ಕೆ ಕಂದಾಯ ಮತ್ತು ಅರಣ್ಯ ಭೂಮಿ ಯಾವುದು ಎಂಬ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಸಂಸದ ಜಯಪ್ರಕಾಶ್ ಹೆಗ್ಡೆ ಪ್ರಶ್ನೆ ಮಾಡುತ್ತಾರೆ. ಆ ವಿಚಾರಗಳೆಲ್ಲವೂ ಇತ್ಯರ್ಥವಾಗುವವರೆಗೆ ಇನಾಂ ವಾಸಿಗಳನ್ನು ಖುಲ್ಲಾ ಮಾಡುವುದು ಅಸಾಧ್ಯ ಎಂದೂ ಶಂಕರ್ ನುಡಿದರು.

ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕಾಫಿ ಬೆಳೆಗಾರರ ಬಗೆಗಿನ ಪೂರ್ವಾಗ್ರಹಪೀಡಿತ ಭಾವನೆಯಿಂದ ಮಲೆನಾಡಿನಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಇನಾಂ ಸಮಸ್ಯೆಯ ಬಗ್ಗೆ ರಾಜ್ಯದ ಮಂತ್ರಿಮಂಡಲ ಚರ್ಚೆ ನಡೆಸಿ  ಕೃಷಿಕರ ಪರವಾಗಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕಾಗಿದೆ. ರಾಜ್ಯ ಸರ್ಕಾರ ಪುನರ್ವಸತಿ ಬಗ್ಗೆ ಮಾತನಾಡುವ ಬದಲು ಕೃಷಿಕರನ್ನು ಇಲ್ಲೇ ಉಳಿಸುವುದು ಆದ್ಯತೆಯಾಗಬೇಕು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಇನಾಂ ಸಮಸ್ಯೆಯ ಪರಿಹಾರಕ್ಕೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾಉಸ್ತುವಾರಿ ಸಚಿವರು ಪ್ರಯತ್ನಿಸುವ ಬದಲು ಕೇವಲ ಹೇಳಿಕೆ ನೀಡುವುದರಲ್ಲೇ ತಲ್ಲೆನರಾಗಿದ್ದಾರೆ. ಮಲೆನಾಡಿನಲ್ಲಿ ಸರ್ಕಾರದ ತಪ್ಪುಗಳಿಂದಲೇ ನಕ್ಸಲಿಸಂ ಬೆಳೆಯುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿ.ಎಲ್.ರಾಮದಾಸ್, ಇನಾಂ ಮತ್ತು ಒತ್ತುವರಿ ಸಮಸ್ಯೆಯಿಂದಾಗಿ ಸಾವಿರಾರು ಕೃಷಿಕ ಕುಟುಂಬಗಳ ಬದುಕು ಅಭದ್ರತೆಯತ್ತ ಸಾಗಿದೆ ಎಂದು ವಿಶ್ಲೇಷಿಸಿದರು. ಮುಖಂಡರಾದ ನಿಂಗಯ್ಯ, ಚಂದ್ರಪ್ಪ, ಕೇಶವೇಗೌಡ, ಚೆನ್ನಕೇಶವ, ಪ್ರಭಾಕರ್, ದೇವದಾಸ್, ಧರಣೇಂದ್ರ, ಮಹಾಬಲೇಶ್ವರ ಶಾಸ್ತ್ರಿ, ಮಹೇಂದ್ರ, ಹರ್ಷ, ಶ್ರೆನಿವಾಸ ಹೆಬ್ಬಾರ್ ಮತ್ತಿತರರು    ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT