ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಾಂ ಭೂಮಿ ವಿವಾದ: ಸುಪ್ರೀಂಕೋರ್ಟ್‌ಗೆ ಮೊರೆ

Last Updated 16 ಜುಲೈ 2012, 7:45 IST
ಅಕ್ಷರ ಗಾತ್ರ

ಕಳಸ: ಹೋಬಳಿಯ 6,777 ಎಕರೆ ಪ್ರದೇಶದ ವಿವಾದವಾದ ಕಳಸೇಶ್ವರ ಸ್ವಾಮಿಯ ಇನಾಂ ಭೂಮಿ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರುವುದು ಖಚಿತವಾಗಿದೆ.

600 ಕ್ಕೂ ಹೆಚ್ಚು ಕೃಷಿಕರು ಸಾಗುವಳಿ ಮಾಡಿರುವ ಭೂಮಿ ಅರಣ್ಯ ಎಂದು ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಪುನರ್ ಪರಿಶೀಲನಾ ಅರ್ಜಿ ವಿಚಾರಣೆಗೆ ಬಾಕಿ ಇದೆ. ಏಪ್ರಿಲ್ 20 ರ ತೀರ್ಪಿನಲ್ಲಿ ಹೈಕೋರ್ಟ್ ಕೃಷಿಕರು ಇನಾಂ ಜಮೀನನ್ನು ಖುಲ್ಲಾ ಮಾಡಬೇಕು ಎಂದು ನೀಡಿರುವ ತೀರ್ಪಿಗೆ ಸುಪ್ರೀಂ      ಕೋರ್ಟ್‌ನಲ್ಲಿ ತಡೆಯಾಜ್ಞೆ ತರಬೇಕಾಗಿದೆ ಎಂದು ಇನಾಂ ಭೂಮಿ ಸಂತ್ರಸ್ತರ ಸಮಿತಿ ಅಧ್ಯಕ್ಷ ಭೀಮೇಶ್ವರ ಜೋಷಿ ತಿಳಿಸಿದ್ದರು.

ಹೊರನಾಡಿನಲ್ಲಿ ಭಾನುವಾರ ನಡೆದ ಇನಾಂ ಭೂಮಿ ಸಂತ್ರಸ್ತರ ಸಭೆಯ ನಂತರ ಅವರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು. ಪುನರ್‌ಪರಿಶೀಲನಾ ಅರ್ಜಿ ಇದೇ 20 ರಂದು ಹೈಕೋರ್ಟ್ ಮುಂದೆ ಬರಲಿದೆ. ಆಗಸ್ಟ್ 2 ಸುಪ್ರೀಂ    ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕೊನೆಯ ದಿನವಾಗಿದೆ.ಈ ಹಿನ್ನೆಲೆಯಲ್ಲಿ ಸೂಕ್ತ ವಕೀಲರನ್ನು ಗೊತ್ತುಪಡಿಸಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಲು ಸಿದ್ಧತೆ ನಡೆದಿದೆ ಎಂದು ಅವರು ವಿವರಿಸಿದರು.

ಇನಾಂ ವಿವಾದ ಸಂವಾದ: ಹೊರನಾಡಿನ ಅಮೃತ ಸಭಾಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆ ಪ್ರಯುಕ್ತ ಭಾನುವಾರ ವಿವಾದಿತ ಇನಾಂ ಭೂಮಿಯ ಬಗ್ಗೆ ಸಂವಾದ ಏರ್ಪಡಿಸಿತ್ತು.
ಪ್ರಾಸ್ತಾವಿಕ ಮಾತನಾಡಿದ ಜಿ. ಭೀಮೇಶ್ವರ ಜೋಷಿ, ಇನಾಂ ಭೂಮಿಯನ್ನು ಹೈಕೋರ್ಟ್ ಅರಣ್ಯ ಎಂದು ತೀರ್ಪು ನೀಡಿರುವುದರಿಂದ 600ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬರುವ ಅಪಾಯ ಇದೆ ಎಂದರು.

ಕಳಸೇಶ್ವರ ದೇವಸ್ಥಾನ ಹಿಂದೆ ಸರ್ಕಾರದಂತೆಯೇ ಕಾರ್ಯ ನಿರ್ವಹಿಸುತ್ತಿತ್ತು. ಕಳಸೇಶ್ವರ ಸಂಸ್ಥೆಯಲ್ಲ ವ್ಯಕ್ತಿ ಎಂಬ ಆಧಾರದ ಮೇಲೆ ಈ ಹಿಂದೆ ವಾದ ಮಂಡಿಸಿದ್ದರಿಂದ ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ಜಯ ಸಿಕ್ಕಿತ್ತು. 1928 ಅಧಿಸೂಚನೆಯೇ ಅಕ್ರಮ ಎಂದು ಸಾಬೀತುಪಡಿಸಿದಲ್ಲಿ  ಹೋಬಳಿಯ ಜನರ ಆತಂಕ ನಿವಾರಣೆಯಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಹರ್ಷ ಅಭಿಪ್ರಾಯಪಟ್ಟರು.

1928ರ ಅಧಿಸೂಚನೆ ಆಧಾರದಲ್ಲಿ ಎಂದಿಗೂ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿಲ್ಲ. ಯಾವ ಸರ್ಕಾರಿ ದಾಖಲೆಯಲ್ಲೂ ಈ 6,777 ಎಕರೆ ಅರಣ್ಯ ಎಂಬ ಉಲ್ಲೇಖ ಇಲ್ಲ. ವಿವಾದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸುಪ್ರೀಂಕೋರ್ಟ್‌ಗೆ ಪೂರೈಕೆ ಮಾಡಿದರೆ ಜನರ ಪರವಾಗಿ ತೀರ್ಪು ಬರುತ್ತದೆ ಎಂದು ಹರ್ಷ ವಿಶ್ಲೇಷಿಸಿದರು.

ಪ್ರಗತಿ ಮಹಿಳಾ ಸಂಘದ ಅಧ್ಯಕ್ಷೆ ಸೀತು ಮಾತನಾಡಿ, ಹೋರಾಟದಿಂದ ಮಾತ್ರ ಜನರು ತಮ್ಮ ಭೂಮಿ ಉಳಿಸಿಕೊಳ್ಳಬಹುದು ಎಂದರು. ಕೊಪ್ಪದ ಗಿರಿಜನ ಅಂಬಾಭವಾನಿ ಸಂಘ ಕೂಡ ಇನಾಂ ಭೂಮಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತು. ಪತ್ರಕರ್ತ ಗಿರಿಜಾ ಶಂಕರ ಮಾತನಾಡಿ, ಅರಣ್ಯ ಎಂಬ ಘೋಷಣೆಯನ್ನು ಸರ್ಕಾರವೂ ಬದಲಾಯಿಸುವುದು ಕಷ್ಟ. ದಾಖಲೆಗಳ ಆಧಾರದ ಮೇಲೆ ತೀರ್ಪು ನೀಡುವ ಸುಪ್ರೀಂಕೋರ್ಟ್‌ಗೆ ಸಮರ್ಪಕ ದಾಖಲೆ ಒದಗಿಸಿದಲ್ಲಿ ಜನಪರ ತೀರ್ಪು ಬರಬಹುದು ಎಂದರು.

ಕೆ.ಸಿ. ಧರಣೇಂದ್ರ ಇನಾಂ ಸಮಸ್ಯೆಯ ಪರಿಹಾರದ ಬಗ್ಗೆ ಇರುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು. ಸಂತ್ರಸ್ತರ ಸಮಿತಿ ಕಾರ್ಯದರ್ಶಿ ವೆಂಕಟಸುಬ್ಬಯ್ಯ ಇನಾಂ ಭೂಮಿ ಸಾಗುವಳಿದಾರರ ಪರವಾಗಿ ಇರುವ ಕೆಲ ಮಾಹಿತಿ ತಿಳಿಸಿ ನ್ಯಾಯಾಲಯದಲ್ಲಿ ಜಯ ಸಿಗಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ತಾ.ಪಂ. ಸದಸ್ಯ ಶೇಷಗಿರಿ ಮಾತನಾಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಇನಾಂ ಸಮಸ್ಯೆಯನ್ನು ಖಂಡಿತವಾಗಿಯೂ ನಿವಾರಿಸಿಕೊಳ್ಳಬಹುದು ಎಂದರು. ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಅಮರ್‌ನಾಥ್, ತಾಲ್ಲೂಕು ಅಧ್ಯಕ್ಷ ಪ್ರಸನ್ನ ಮತ್ತಿತರರು ಭಾಗವಹಿಸಿದ್ದರು.

`ಕನ್ನಡ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಹೇರಿಕೆ ಬೇಡ~
ಬೀರೂರು:
ಸರ್ಕಾರವೇ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಆರಂಭಿಸಲು ಹೊರಟಿದ್ದು, ಮಕ್ಕಳಿಗೆ ಇಂಗ್ಲಿಷ್ ಹೇರಿಕೆ ಬೇಡ ಎಂದು ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಎನ್. ಶಿವಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನದಲ್ಲಿ ಶನಿವಾರ ಸಂಜೆ ಬೀರೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಸೇವಾಧೀಕ್ಷಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಇಂಗ್ಲಿಷ್ ಕಲಿಕೆ ಬೇಡ ಎಂಬುದು ನಮ್ಮ ಅಭಿಪ್ರಾಯವಲ್ಲ. ಇಂಗ್ಲಿಷ್ ಅನ್ನು ಭಾಷೆಯಾಗಿ ಕಲಿಸಿ, ಆದರೆ ಮಾಧ್ಯಮ ಬೇಡ ಎನ್ನುವುದು ಒತ್ತಾಯ ಎಂದರು.ಸಾಹಿತ್ಯ ಪರಿಷತ್‌ನ ನೂತನ ಸದಸ್ಯರಿಗೆ ಸೇವಾ ದೀಕ್ಷೆಯ ಪ್ರಮಾಣವಚನವನ್ನು ಎಸ್.ಎನ್. ಶಿವಸ್ವಾಮಿ ಬೋಧಿಸಿದರು. ಜೋಡಿತಿಮ್ಮಾಪುರದ ಜಾನಪದ ಕಲಾವಿದರಾದ ಲಕ್ಕಮ್ಮ, ತಿಮ್ಮಮ್ಮ ಉದ್ಘಾಟಿಸಿದರು.

ಪರಮೇಶ್ವರ ಭಟ್ಟ ಸ್ನೇಹ, ಹಾಸ್ಯ ಕವಿ: ಕೃಷ್ಣಭಟ್
ನರಸಿಂಹರಾಜಪುರ: ಎಸ್.ವಿ. ಪರಮೇಶ್ವರ ಭಟ್ಟ ಅವರು ಸರಳ, ಸ್ನೇಹ ಹಾಗೂ ಹಾಸ್ಯ ಪ್ರವೃತ್ತಿಯ ಕವಿಯಾಗಿದ್ದರು ಎಂದು ಕನ್ನಡ ಪಂಡಿತ ವಿ.ಎಸ್. ಕೃಷ್ಣಭಟ್ಟ ತಿಳಿಸಿದರು.ಇಲ್ಲಿನ ಕೃಷಿ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ಕಸಬಾ ಹೋಬಳಿ ಘಟಕ ಹಾಗೂ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ದಿ. ಸೂರ್ಯನಾರಾಯಣ ರಾವ್ ಕಮಲಮ್ಮ ಇವರ ದತ್ತಿಉಪನ್ಯಾಸ ಕಾರ್ಯಕ್ರಮದಲ್ಲಿ ಕವಿ ಪರಮೇಶ್ವರ ಭಟ್ಟರ ಕೃತಿ, ಕಾವ್ಯ ಬಗ್ಗೆ ಉಪನ್ಯಾಸ ನೀಡಿದರು.

ಭಟ್ಟರು ಮೂಲತ: ಶೃಂಗೇರಿಯವರು. ಇವರು ರಾಗಿಣಿ ಕವನ ಸಂಕಲನ, ಕಾಳಿದಾಸ ಕವಿಯ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದರು. ಸಣ್ಣವಯಸ್ಸಲ್ಲೇ ಜಾನಪದ, ಕಲೆ, ನಾಟಕ, ಕಾವ್ಯ ವಾಚನದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು ಎಂದರು. ತಾಲ್ಲೂಕು ಘಟಕ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಉದ್ಘಾಟಿಸಿದರು. ಪಿ.ಸಿ. ಮ್ಯಾಥ್ಯು ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT