ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಿಂಗ್ಸ್ ಮುನ್ನಡೆಯತ್ತ ಚಿತ್ತ...

ರಣಜಿ ಕ್ರಿಕೆಟ್: ಆಮೋಲ್ ಅಮೂಲ್ಯ ಶತಕ; ವಿದರ್ಭ ತಂಡದ ಹೋರಾಟ
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮೈಸೂರು: ಸತತ ಮೂರನೇ ದಿನವೂ ಬ್ಯಾಟ್ಸ್ ಮನ್‌ಗಳಿಗೇ ಒಲಿದ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಸೋಮವಾರ ವಿದರ್ಭ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಮೋಲ್ ಉಬರಾಂದೆ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು. ಅಲ್ಲದೇ ಕರ್ನಾಟಕ ತಂಡವು ನಿರ್ಮಿಸಿದ್ದ 619 ರನ್ನುಗಳ ಬೃಹತ್ ಬೆಟ್ಟದ ಅರ್ಧಭಾಗ  ಕರಗಿಸುವಲ್ಲಿಯೂ ಪ್ರವಾಸಿ ತಂಡವು  ಯಶಸ್ವಿಯಾಗಿದೆ.

ರಣಜಿ ಟ್ರೋಫಿ ಟೂರ್ನಿಯ ಬಿ ಗುಂಪಿನ ಆರನೇ ಪಂದ್ಯದಲ್ಲಿ ಬೋನಸ್ ಅಂಕದೊಂದಿಗೆ ಗೆಲುವು ಸಾಧಿಸುವ ಕರ್ನಾಟಕದ ಗುರಿಗೆ ವಿದರ್ಭ ಅಡ್ಡಗೋಡೆಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

ಸೋಮವಾರ ದಿನದಾಟದ ಕೊನೆಗೆ 115 ಓವರ್‌ಗಳಲ್ಲಿ 2 ವಿಕೆಟ್‌ಗೆ ಗಳಿಸಿರುವ 302 ರನ್ ಗಳಿಸಿದ್ದು, ಪಂದ್ಯವನ್ನು ಗೆಲ್ಲದಿದ್ದರೂ, ಸೋಲಬಾರದು ಎಂಬ ಸ್ಪಷ್ಟ ಇರಾದೆಯೊಂದಿಗೆ ಸಾಯಿರಾಜ್ ಬಹುತುಳೆ ಬಳಗ ಆಡುತ್ತಿದೆ.  ಅಲ್ಲದೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಜೀವನದ ಮೊಟ್ಟಮೊದಲ ಶತಕ ಗಳಿಸಿರುವ ಆಮೋಲ್ ಉಬರಾಂದೆ (ಬ್ಯಾಟಿಂಗ್ 129, 344ನಿಮಿಷ, 251ಎಸೆತ, 18ಬೌಂಡರಿ) ಮತ್ತು ಶತಕದತ್ತ ನಿರಾತಂಕವಾಗಿ ಸಾಗುತ್ತಿರುವ ಶಲಭ್ ಶ್ರೀವಾಸ್ತವ್ (ಬ್ಯಾಟಿಂಗ್ 84, 282ನಿ, 218ಎಸೆತ, 10ಬೌಂಡರಿ) ಕೊನೆಯ ದಿನವಾದ ಮಂಗಳವಾರಕ್ಕೆ ತಮ್ಮ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಈ ಋತುವಿನ ಕಳೆದ ಐದು ಪಂದ್ಯಗಳಲ್ಲಿ ಮೊದಲ ಪಂದ್ಯವನ್ನು ಗೆದ್ದಿದ್ದ ವಿದರ್ಭ ತಂಡ ನಂತರದ ಪಂದ್ಯಗಳಲ್ಲಿ ಸೋಲಿನ ದವಡೆಯಿಂದ ಪಾರಾಗಿ ಡ್ರಾ ಮಾಡಿಕೊಳ್ಳುತ್ತಲೇ ಬಂದಿದೆ. ಇಲ್ಲಿಯೂ ಅದೇ ತಂತ್ರವನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗುತ್ತಿದೆ.

ಇನಿಂಗ್ಸ್ ಲೀಡ್ ಪಡೆದು 3 ಅಂಕ ಗಳಿಸಲು ವಿದರ್ಭ ಕೊನೆಯ ದಿನದಾಟದ 90 ಓವರ್‌ಗಳಲ್ಲಿ 318 ರನ್ ಗಳಿಸಬೇಕು. ಅಷ್ಟರೊಳಗೆ ಇನ್ನುಳಿದ ಎಂಟು ವಿಕೆಟ್‌ಗಳನ್ನು ಕಬಳಿಸಿದರೆ ಕರ್ನಾಟಕಕ್ಕೆ ಮೂರು ಪಾಯಿಂಟ್ ಸಿಗುವ ಅವಕಾಶವೂ ಇದೆ. 

ಆದರೆ ಮೊದಲೆರಡು ದಿನ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಆಡಿದ ಮಾದರಿಯಲ್ಲಿಯೇ ವಿದರ್ಭದ ಆಟಗಾರರೂ ಆಡುತ್ತಿದ್ದಾರೆ. ಇದರಿಂದಾಗಿ  ಬೃಹತ್ ಮೊತ್ತವನ್ನು ಮುಂದಿಟ್ಟುಕೊಂಡು ಎದುರಾಳಿಗಳನ್ನು ಮಣಿಸುವ ಆತಿಥೇಯರ ಯೋಜನೆಯೂ ತಲೆಕೆಳಗಾಗುವಂತೆ ಕಾಣುತ್ತಿದೆ. 

ಭಾನುವಾರ ಚಹಾ ವಿರಾಮದ ನಂತರ ಬ್ಯಾಟಿಂಗಿಗೆ ಇಳಿದ ವಿದರ್ಭ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಫಯಾಜ್ ಫಜಲ್ ಮತ್ತು ಶಿವಸುಂದರ್ ದಾಸ್ ಉತ್ತಮ ಆರಂಭ ನೀಡಿದ್ದರು. ಸೋಮವಾರ ಆಟ ಮುಂದುವರೆಸಿದ ಅವರು, ಎಳೆಬಿಸಿಲು ಬಿದ್ದಿದ್ದ ಅಂಗಳದಲ್ಲಿ ಬೌಲರ್‌ಗಳನ್ನು  ತಾಳ್ಮೆಯಿಂದ ಎದುರಿಸಿದರು.  ನಿನ್ನೆ 21 ರನ್ ಗಳಿಸಿದ್ದ ಫಯಾಜ್ ಫಜಲ್ ಸೋಮವಾರ ಒಂದು ರನ್ ಮಾತ್ರ ಗಳಿಸಿದರು.ದಿನದ ಆರನೇ ಓವರ್‌ನಲ್ಲಿ ಅಭಿಮನ್ಯು ಮಿಥುನ್ ಎಸೆತವನ್ನು ಕಟ್ ಮಾಡಲು ಯತ್ನಿಸಿದ ಫಯಾಜ್ ಗಣೇಶ್ ಸತೀಶ್‌ಗೆ ಕ್ಯಾಚ್ ಆದರು.

  26 ರನ್ ಗಳಿಸಿದ್ದ ಶಿವಸುಂದರ್ ದಾಸ್ ನಂತರ ಬಂದ ಆಮೋಲ್ ಜೊತೆ ಸೇರಿದ ದಾಸ್, ತಮ್ಮ ಅರ್ಧಶತಕ ಪೂರೈಸಿಕೊಂಡರು. ಸ್ಟುವರ್ಟ್ ಬಿನ್ನಿ ಮಾಡಿದ 44ನೇ ಓವರ್‌ನಲ್ಲಿ ಆಫ್‌ಸ್ಟಂಪ್‌ನಿಂದ ತುಸು ಹೊರಗಿದ್ದ ಎಸೆತವನ್ನು ಹೊಡೆಯಲು ಯತ್ನಿಸಿದ ದಾಸ್ ಬ್ಯಾಟಿನ ಅಂಚು ಸವರಿದ ಚೆಂಡು ಸ್ಲಿಪ್‌ನಲ್ಲಿದ್ದ ಮನೀಶ್ ಪಾಂಡೆ ಕೈಸೇರಿತು. ದಾಸ್ ಪೆವಿಲಿಯನ್‌ಗೆ ಹೋದ ಮೇಲೆ  ಬಂದ ಶಲಭ್ ಶ್ರೀವಾಸ್ತವ, ಅಮೋಲ್ ಜೊತೆ ಸೇರಿ ಇಡೀ ದಿನ ಬೌಲರ್‌ಗಳನ್ನು ಕಾಡಿದರು. 

ಸಪಾಟಾದ ಪಿಚ್‌ನಲ್ಲಿ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದ ಅಮೋಲ್ ಮತ್ತು ಶಲಭ್ ಅಷ್ಟೇ ಚಾಕಚಕ್ಯತೆಯಿಂದ ರನ್‌ಗಳನ್ನೂ ಕಲೆ ಹಾಕಿದರು. ದಿನದ ಕೊನೆಗೆ  ಮೂರನೇ ವಿಕೆಟ್‌ಗೆ 209 ರನ್ ಗಳಿಸಿದ್ದ ಅವರ ಜೊತೆಗಾರಿಕೆಯಿಂದ ಊಟಕ್ಕೆ ಮುನ್ನ ತಂಡವು 109 ರನ್ ಗಳಿಸಿತು.

ಕರ್ನಾಟಕ ತಂಡದ ನಾಯಕ ಆರ್. ವಿನಯಕುಮಾರ್ ಬೌಲಿಂಗ್‌ನಲ್ಲಿ ಹಲವು ಬಾರಿ ಬದಲಾವಣೆ  ಮಾಡಿದರೂ ಪ್ರಯೋಜನವಾಗಲಿಲ್ಲ. ವಿನಯಕುಮಾರ್ ಬೌಲಿಂಗ್ ಮಾಡಿದ 54ನೇ ಓವರ್‌ನಲ್ಲಿಯೇ ಶಲಭ್ ಎರಡು ಮತ್ತು ಆಮೋಲ್ ಒಂದು ಬೌಂಡರಿ ಗಳಿಸಿದರು. 58ನೇ ಓವರ್‌ನಲ್ಲಿ ನಾಲ್ಕು ರನ್ ನೀಡಿದ ವಿನಯಕುಮಾರ್ ಮತ್ತೆ ಇಡೀ ದಿನ ಬೌಲಿಂಗ್ ಮಾಡಲಿಲ್ಲ. ಊಟದ ವಿರಾಮದ ನಂತರ ಹಿಮ್ಮಡಿಯ ಸೆಳೆತದ ಸಮಸ್ಯೆಯಿಂದ ಮೈದಾನಕ್ಕೆ ಇಳಿಯಲಿಲ್ಲ.

ಎರಡನೇ ಅವಧಿಯಲ್ಲಿ ನಿಧಾನಗತಿಯ ಆಟ ಆರಂಭಿಸಿದ ಜೋಡಿಯು ಅವಕಾಶ ಸಿಕ್ಕಾಗ ಚೆಂಡನ್ನು ಬೌಂಡರಿಗೆರೆಯಾಚೆ ಕಳಿಸುವುದನ್ನು ಬಿಡಲಿಲ್ಲ.
66ನೇ ಓವರ್‌ನಲ್ಲಿ ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಎಸೆತವನ್ನು ಡಿಪ್ ಮಿಡ್‌ವಿಕೆಟ್ ಬೌಂಡರಿ ದಾಟಿಸಿದ ಅಮೋಲ್ ಅರ್ಧಶತಕದ ಗಡಿ ದಾಟಿದರು. ನಾಗಪುರದಲ್ಲಿ ಉತ್ತರ ಪ್ರದೇಶ ವಿರುದ್ಧ ಗಳಿಸಿದ್ದ 42 ರನ್ ಅವರ ಸರ್ವಾಧಿಕ ಸ್ಕೋರ್  ಆಗಿತ್ತು.

`ಮಂಡ್ಯದ ಹುಡುಗ' ಎಚ್.ಎಸ್. ಶರತ್, ಅಭಿಮನ್ಯು ಮಿಥುನ್, ಸ್ಟುವರ್ಟ್ ಬಿನ್ನಿ ಬೌಲಿಂಗ್‌ನಲ್ಲಿ ಹಲವು ಬಾರಿ ಆಫ್‌ಸ್ಟಂಪ್‌ನಿಂದ ಕೂದಲೆಳೆಯ ಅಂತರದಲ್ಲಿ ಎಸೆತಗಳು ಸಾಗಿಹೋದವು. ಅದರ ಹಿಂದೆಯೇ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರ ಬಳಗ ತಲೆ ಮೇಲೆ ಕೈಹೊತ್ತು ಕೂರುತ್ತಿದ್ದರು. ಓವರ್ ದ ವಿಕೆಟ್ ಮತ್ತು ರೌಂಡ್ ದ ವಿಕೆಟ್ ಬೌಲಿಂಗ್ ಮೂಲಕ ಹಾಕಿದ ಗುಡ್‌ಲೆಂತ್ ಎಸೆತಗಳನ್ನೂ ಆಮೋಲ್ ಆತ್ಮವಿಶ್ವಾಸದಿಂದ ಎದುರಿಸಿದರು.

ಏಳನೇ ಪ್ರಥಮ ದರ್ಜೆ ಪಂದ್ಯ ಆಡುತ್ತಿರುವ 24 ವರ್ಷದ ಅಮೋಲ್. ಶಲಭ್ ಜೊತೆ ಸೇರಿ  ಚಹಾ ವಿರಾಮದ ಮುನ್ನವೇ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು ಶಲಭ್  108 ಎಸೆತಗಳಲ್ಲಿ ಎಂಟು ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. . 82ನೇ ಓವರ್‌ನಲ್ಲಿ ಹೊಸ ಚೆಂಡು ಕೈಗೆ ಬಂದರೂ ಕರ್ನಾಟಕಕ್ಕೆ ಪ್ರಯೋಜನವಾಗಲಿಲ್ಲ.  ಊಟದಿಂದ ಚಹಾದವರೆಗಿನ ಅವಧಿಯಲ್ಲಿ 76 ರನ್‌ಗಳು ಬಂದವು. 

ನಂತರದ ಅವಧಿಯಲ್ಲಿ ರನ್ ಗಳಿಕೆಯ ವೇಗ ಕಡಿಮೆಯಾಯಿತು. ನೂರನೇ ಓವರ್‌ನಲ್ಲಿ ಶರತ್ ಎಸೆತವನ್ನು ಪಾಯಿಂಟ್ ಫೀಲ್ಡರ್ ತಲೆ ಮೇಲಿಂದ ಬೌಂಡರಿ ಗೆರೆ ದಾಟಿಸಿದ ಆಮೋಲ್ ಶತಕ ಪೂರೈಸಿದರು. ಚಹಾ ವಿರಾಮದ ನಂತರ ಕೇವಲ 69 ರನ್‌ಗಳು ವಿದರ್ಭ ಖಾತೆಗೆ ಸೇರಿದವು. ಆದರೆ ವಿಕೆಟ್ ಮಾತ್ರ ಬೀಳಲಿಲ್ಲ!

ಸ್ಕೋರ್ ವಿವರ:
ಕರ್ನಾಟಕ: ಪ್ರಥಮ ಇನಿಂಗ್ಸ್155 ಓವರ್‌ಗಳಲ್ಲಿ 8 ವಿಕೆಟ್‌ಗೆ 619ಡಿಕ್ಲೆರ್ಡ್‌

ವಿದರ್ಭ: 115 ಓವರ್‌ಗಳಲ್ಲಿ 2 ವಿಕೆಟ್‌ಗೆ 302
ಫಯಾಜ್ ಫಜಲ್  ಸಿ ಗಣೇಶ್ ಬಿ ಮಿಥುನ್  22
ಶಿವಸುಂದರ್ ದಾಸ್ ಸಿ ಪಾಂಡೆ ಬಿ ಬಿನ್ನಿ  53
ಅಮೋಲ್ ಉಬರಾಂದೆ ಬ್ಯಾಟಿಂಗ್ 129
ಶಲಭ್ ಶ್ರೀವಾಸ್ತವ ಬ್ಯಾಟಿಂಗ್  84
ಇತರೆ: 14 (ಬೈ 3, ಲೆಗ್‌ಬೈ 8, ನೋಬಾಲ್ 2, ವೈಡ್ 1)
ವಿಕೆಟ್ ಪತನ: 1-63 (30.4, ಫಯಾಜ್), 2-93 (43.5 ದಾಸ್).
ಬೌಲಿಂಗ್: ಆರ್. ವಿನಯಕುಮಾರ್ 13-3-45-0, ಅಭಿಮನ್ಯು ಮಿಥುನ್ 23-7-45-1, ಸ್ಟುವರ್ಟ್ ಬಿನ್ನಿ 18-3-63-1 (ನೋಬಾಲ್ 1, ವೈಡ್ 1), ಎಚ್.ಎಸ್. ಶರತ್ 17-2-57-0 (ನೋಬಾಲ್ 1), ಕೆ.ಪಿ. ಅಪ್ಪಣ್ಣ 32-10-58-0, ಕುನಾಲ್ ಕಪೂರ್ 6-3-7-0, ಗಣೇಶ್ ಸತೀಶ್ 6-0-16-0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT