ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಿಂಗ್ಸ್‌ ಮುನ್ನಡೆ ಮೇಲೆ ಕಣ್ಣು

ರಣಜಿ ಕ್ರಿಕೆಟ್‌: ಕುಸಿದ ಮುಂಬೈಗೆ ಸಿದ್ದಾರ್ಥ್‌ ಅರ್ಧಶತಕದ ಬಲ, ಶರತ್‌ಗೆ ಮೂರು ವಿಕೆಟ್‌
Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಬೌಲರ್‌ಗಳ ಎದುರು ದಿಢೀರ್‌ ಕುಸಿತ ಕಂಡು ನಂತರ ಅಮೋಘವಾಗಿ ಚೇತರಿಸಿಕೊಂಡ ಮುಂಬೈ ತಂಡಕ್ಕೆ ಇನಿಂಗ್ಸ್‌ಮುನ್ನಡೆ ಸಾಧಿಸುವ ಆಸೆ. ಇದೇ ಆಸೆ ಕರ್ನಾಟಕದ ಆಟಗಾರರ ಮನದಲ್ಲಿಯೂ ಇದೆ. ಆದರೆ, ಈ ಕನಸು ಯಾರ ಪಾಲಾಗಲಿದೆ? ಕರ್ನಾಟಕ ಮತ್ತು ಮುಂಬೈ ತಂಡಗಳ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಎ’ ಗುಂಪಿನ ರಣಜಿ ಪಂದ್ಯ ಇಂಥದ್ದೊಂದು ಕುತೂಹಲ ಹುಟ್ಟುಹಾಕಿದೆ.

ಹಾಲಿ ಚಾಂಪಿಯನ್‌ ಇನಿಂಗ್ಸ್‌ ಮುನ್ನಡೆ ಗಳಿಸಲು 35 ರನ್‌ ಗಳಿಸಬೇಕಿದೆ. ಇಷ್ಟು ರನ್‌ಗಳ ಒಳಗೆ ಮುಂಬೈ ತಂಡವನ್ನು ಕಟ್ಟಿಹಾಕಿದರೆ, ಈ ಅವಕಾಶ ಆತಿಥೇಯರ ಪಾಲಾಗಲಿದೆ. ವಿನಯ್‌ ಕುಮಾರ್‌ ಸಾರಥ್ಯದ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 98.3 ಓವರ್‌ಗಳಲ್ಲಿ 251 ರನ್‌ ಕಲೆ ಹಾಕಿತು. ಮುಂಬೈ ಸೋಮವಾ ರದ ಅಂತ್ಯಕ್ಕೆ 76 ಓವರ್‌ಗಳಲ್ಲಿ 7 ವಿಕೆಟ್‌ಗೆ 217 ರನ್‌ ಗಳಿಸಿದೆ. ಆದ್ದರಿಂದ ಮೂರನೇ ದಿನದಾಟ ಕುತೂಹಲಕ್ಕೆ ಕಾರಣವಾಗಿದೆ.

23ಕ್ಕೆ ಆಲ್‌ಔಟ್‌: ಭಾನುವಾರ ಏಳು ವಿಕೆಟ್‌ ನಷ್ಟಕ್ಕೆ 228 ರನ್‌ ಗಳಿಸಿದ್ದ ಕರ್ನಾಟಕ ಸೋಮವಾರ 23 ರನ್‌ಗಳನ್ನಷ್ಟೇ ಕಲೆ ಹಾಕಿತು. 120 ರನ್‌ ಪೇರಿಸಿ ಕ್ರೀಸ್‌ನಲ್ಲಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ 13 ರನ್‌ ಸೇರಿಸಿ ರನ್‌ ಔಟ್‌ ಆದರು. ಅಭಿಮನ್ಯು ಮಿಥುನ್‌, ಕೆ.ಪಿ. ಅಪ್ಪಣ್ಣ ಬೇಗನೆ ವಿಕೆಟ್‌ ಒಪ್ಪಿಸಿದರು. ಆತಿಥೇಯರ ಮೊದಲ ಇನಿಂಗ್ಸ್‌ನ ಹೋರಾಟ ಅಂತ್ಯ ಕಂಡಾಗ ದಿನದಾಟ ಆರಂಭವಾಗಿ ಆಗಷ್ಟೇ 33 ನಿಮಿಷವಾಗಿತ್ತು.

ಆರಂಭಿಕ ಕುಸಿತ: ಇನಿಂಗ್ಸ್‌ ಮುನ್ನಡೆ ಗಳಿಸಲು ಸಾಧಾರಣ ಮೊತ್ತವಿದ್ದರೂ 40 ಸಲ ರಣಜಿ ಟ್ರೋಫಿ ಎತ್ತಿ ಹಿಡಿದಿರುವ ಮುಂಬೈ ತಂಡ ಸಾಕಷ್ಟು ಪರದಾಡಿತು. ಕೌಸ್ತುಬ್‌ ಪವಾರ್‌ ಮತ್ತು  ವಿಕೆಟ್‌ ಕೀಪರ್ ಆದಿತ್ಯ ತಾರೆ ಮೊದಲು ಕ್ರೀಸ್‌ಗೆ ಕಚ್ಚಿ ನಿಲ್ಲಲು ಪ್ರಯತ್ನಿಸಿದರು. ವೇಗಿ ಎಚ್‌.ಎಸ್. ಶರತ್‌ ಇದಕ್ಕೆ ಅವಕಾಶವೇ ನೀಡಲಿಲ್ಲ.

ಮಂಡ್ಯದ ಶರತ್‌ 16ನೇ ಓವರ್‌ನಲ್ಲಿ ವಿಕೆಟ್ ಗಳಿಕೆಗೆ ಮುನ್ನುಡಿ ಬರೆದರು. ಅವರು ಮೊದಲು ಆದಿತ್ಯ ಬಲಿ ಪಡೆದರು. ಆಗ ಮುಂಬೈ ತಂಡದ ಮೊತ್ತ 15.4 ಓವರ್‌ಗಳಲ್ಲಿ 28ಕ್ಕೆ1. ನಂತರ ಕೌಸ್ತುಬ್‌ ಮತ್ತು ನಾಯಕ ವಾಸಿಮ್‌ ಜಾಫರ್‌ ಪೆವಿಲಿಯನ್‌ ಸೇರಿದರು. ಈ ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಔಟಾದಾಗ ಮುಂಬೈ 18 ಓವರ್‌ಗಳಲ್ಲಿ 35 ರನ್‌ಗಳನ್ನಷ್ಟೇ ಕಲೆ ಹಾಕಿತ್ತು.

ವಿದರ್ಭ ವಿರುದ್ಧ ಶತಕ ಸಿಡಿಸಿದ್ದ 35 ವರ್ಷದ ಜಾಫರ್‌ ಇಲ್ಲಿ ರನ್‌ ಖಾತೆ ತೆರೆಯದೆ ಶರತ್‌ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಆಗ ಹಾಲಿ ಚಾಂಪಿಯನ್ನರು 150 ರನ್ ಗಳಿಸುವುದೇ ಕಷ್ಟ ಎನ್ನುವಂಥ ಪರಿಸ್ಥಿತಿ ಇತ್ತು. ಹಿಕೇನ್‌ ಷಾ 44 ರನ್‌ ಗಳಿಸಿ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದರು.

 ಹುಸಿಯಾದ ನಿರೀಕ್ಷೆ: ಪೆವಿಲಿಯನ್ ತುದಿಯಿಂದ ಬೌಲ್‌ ಮಾಡಿ ಮೂರು ವಿಕೆಟ್‌ ಕಬಳಿಸಿದ ಶರತ್‌ ಮುಂಬೈ ತಂಡವನ್ನು ಎರಡನೇ ದಿನದಾಟದಲ್ಲಿಯೇ ಕಟ್ಟಿಹಾಕುವ ಭರವಸೆ ಮೂಡಿಸಿದ್ದರು. ಮೊದಲ ರಣಜಿ ಪಂದ ಆಡುತ್ತಿರುವ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಮೂರು ವಿಕೆಟ್‌ ಕಬಳಿಸಿ ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು.

20 ವರ್ಷದ ಶ್ರೇಯಸ್‌ ಮೊನಚಾದ ದಾಳಿ ಯಿಂದ ಹಿಕೇನ್‌ ಷಾ, ದೊರೈಸ್ವಾಮಿ ಸುಬ್ರಮಣಿ ಯನ್‌ ಮತ್ತು ಶಾರ್ದುಲ್‌ ಠಾಕೂರ್‌ ವಿಕೆಟ್ ಉರುಳಿಸಿದರು. ಇದರಿಂದ ಕರ್ನಾಟಕಕ್ಕೆ ಇನಿಂಗ್ಸ್‌ ಮುನ್ನಡೆ ಸಾಧಿಸುವ ನಿರೀಕ್ಷೆ ಬಲವಾ ಯಿತು. ಆದರೆ, ಸಿದ್ದೇಶ್‌ ಲಾಡ್‌ ಬೌಲರ್‌ಗಳ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದರು.

ಸವಾಲಾದ ಸಿದ್ದೇಶ್‌: ಮುಂಬೈನ ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲರೂ ಬೇಗನೆ ವಿಕೆಟ್‌ ಒಪ್ಪಿಸಿದರೆ, ಸಿದ್ದೇಶ್‌ ಮಾತ್ರ ಆತಿಥೇಯ ಬೌಲರ್‌ಗಳಿಗೆ ಸವಾಲಾದರು. ಆರಂಭದಲ್ಲಿ ಅವರು ರನ್‌ ಗಳಿಸಲು ಅವಸರಿಸಲಿಲ್ಲ. ಮೊದಲ ಅರ್ಧ ಗಂಟೆಯ ಆಟದಲ್ಲಿ ಒಂದು, ಎರಡು ರನ್‌ ಕಲೆ ಹಾಕಿ ವಿಕೆಟ್‌ ಬೀಳದಂತೆ ಎಚ್ಚರಿಕೆ ವಹಿಸಿದರು. ಒಟ್ಟು ಮೂರು ಗಂಟೆ ಕ್ರೀಸ್‌ನಲ್ಲಿದ್ದ ಅವರು 125 ಎಸೆತಗಳಲ್ಲಿ 59 ರನ್‌ ಗಳಿಸಿದ್ದಾರೆ.

ಥರ್ಡ್‌ ಮ್ಯಾನ್‌ ಮತ್ತು ಕವರ್ ಬಳಿ ಹೆಚ್ಚು ಕೇಂದ್ರಿಕರಿಸಿ ಆಡಿದ ಸಿದ್ದೇಶ್‌ ಏಳು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿದರು. ಜಾವೇದ್‌ ಖಾನ್‌ (ಬ್ಯಾಟಿಂಗ್‌ 33, 71 ಎಸೆತ, 4 ಬೌಂಡರಿ, 1 ಸಿಕ್ಸರ್‌) ರನ್‌ ಕಲೆ ಹಾಕಿದ್ದಾರೆ. ಈ ಜೋಡಿ ಎಂಟನೇ ವಿಕೆಟ್‌ ಜೊತೆಯಾಟದಲ್ಲಿ 56 ರನ್‌ ಗಳಿಸಿ ಚೇತರಿಕೆ ನೀಡಿತು.

ಆರಂಭದಲ್ಲಿ ವಿಕೆಟ್‌ ಕಳೆದುಕೊಂಡ ಕಾರಣ ಮುಂಬೈ ಇನಿಂಗ್ಸ್‌ ಮುನ್ನಡೆ ಸಾಧಿಸುವ ಕನಸು ಕೈಬಿಟ್ಟಿತ್ತು. ಆದರೆ, ಸಿದ್ದೇಶ್‌ ತೋರಿದ ಜವಾಬ್ದಾರಿಯುತ ಆಟದಿಂದ ಆ ಕನಸು ಮತ್ತೆ ಚಿಗುರೊಡೆಯಿತು. ಕ್ರೀಸ್‌ ಕಾಯ್ದಕೊಂಡಿರುವ ಸಿದ್ದೇಶ್‌ ಮತ್ತು ಜಾವೇದ್‌ ಮೇಲೆ ಇನಿಂಗ್ಸ್‌ ಮುನ್ನಡೆ ತಂದುಕೊಡಬೇಕಾದ ಜವಾಬ್ದಾರಿಯಿದೆ.

ಯಾರತ್ತ ಪಿಚ್‌ ಚಿತ್ತ: ತೀರಾ ಕೆಳ ಮಟ್ಟದಲ್ಲಿ ನುಗ್ಗಿ ಬರುತ್ತಿದ್ದ ಚೆಂಡನ್ನು ಅಂದಾಜಿಸಲು ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಪ್ರಯಾಸ ಪಟ್ಟರು. ಆದ್ದರಿಂದ ಮಂಗಳವಾರದ ಪಿಚ್‌ ‘ಆಟ’ ಹೇಗಿರ ಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ 23 ರನ್‌ ಕಲೆ ಹಾಕುವ ಅಂತರದಲ್ಲಿ ಕರ್ನಾಟಕ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಮುಂಬೈ ಇನಿಂಗ್ಸ್‌ ಮುನ್ನಡೆ ಸಾಧಿಸಲು  35 ರನ್‌ ಗಳಿಸಬೇಕಿದೆ. ದಿನದಾಟದ ಮೊದಲ ಅವಧಿಯಲ್ಲಿ ಮುಂಬೈ ತಂಡವನ್ನು ಕಟ್ಟಿಹಾಕುವುದು ಅಸಾಧ್ಯವೇನಲ್ಲ. ಆದ್ದರಿಂದ ಕರ್ನಾಟಕಕ್ಕೂ ಇನಿಂಗ್ಸ್‌ ಮುನ್ನಡೆಗೆ ಅವಕಾಶವಿದೆ. ಈ ಆತಂಕ ಮುಂಬೈಗೂ ಚೆನ್ನಾಗಿ ಗೊತ್ತಿದೆ. ಸೋಮವಾರ ದಿನದಾಟದ ನಂತರ ಮಾತನಾಡಿದ ಸಿದ್ದೇಶ್, ‘ಇನಿಂಗ್ಸ್‌ ಮುನ್ನಡೆ ಗಳಿಸಿದರೆ ಸಾಕು. ಅದಕ್ಕಿಂತ ಒಂದೂ ರನ್‌ ಹೆಚ್ಚಿಗೆ ಬೇಕಿಲ್ಲ..’ ಎಂದರು. ಹಾಲಿ ಚಾಂಪಿಯನ್ನರು ಎಷ್ಟೊಂದು ಒತ್ತಡದಲ್ಲಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT