ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ ಬಾಕ್ಸ್

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ಪ್ರಜಾವಾಣಿಯ ಕಾಮನಬಿಲ್ಲಿನಲ್ಲಿ(10-5-2012) ಆಧುನಿಕ ಗಣಕ ಸಾಧನಗಳ ಪರಿಚಯ ಮಾಡಿಕೊಡುವುದು ಸ್ವಾಗತಾರ್ಹ. ವಿಷಯ ತಿಳಿಯಲೆಂದೇ ಕನ್ನಡ ಪತ್ರಿಕೆಯಲ್ಲಿ ಲೇಖನಗಳನ್ನು ಓದುವವರಿಗಾಗಿ ಕನ್ನಡ ಪದಗಳನ್ನೇ ಬಳಸುವುದು ಅಪೇಕ್ಷಣಿಯ.

`ಗ್ಯಾಜೆಟ್ ಲೋಕ~  ಈ ವಾರ ಪರಿಚಯಿಸಿರುವ ಎಚ್ ಸಿ ಎಲ್ ಅವರ ಅಗ್ಗದಲ್ಲಿ ಹಲಗೆ ಗಣಕವ ಹಿಡಿಸುವ ಸಾಧನ ಕುರಿತ ಬರಹವನ್ನು ಕುತೂಹಲದಿಂದ ಓದಿದೆ.
 
ಬಿ ಎಸ್ ಎನ್ ಎಲ್ ಅವರು ವಿದ್ಯಾರ್ಥಿಗಳಿಗಾಗಿ ಅತಿ ಕಡಿಮೆ ಬೆಲೆಯ ಪೆಂಟಾ ಟಿ, ಮೈಕ್ರೊ ಮ್ಯೋಕ್ ಅವರ ಫನ್ ಬುಕ್ ಮೊದಲಾದ ಹಲಗೆ ಗಣಕಗಳು ಈಗ ಮಾರುಕಟ್ಟೆಯಲ್ಲಿವೆ.
 
ಈ ಗಣಕಗಳಲ್ಲಿ ಕನ್ನಡವನ್ನು ಬಳಸುವುದಕ್ಕೆ ಇರುವ ಸೌಲಭ್ಯಗಳು ಮತ್ತು ಬಳಸುವ ಕ್ರಮಗಳ ಬಗ್ಗೆ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳು ತಿಳಿಸುವುದು ಅಗತ್ಯ.

ಹಲಗೆ (ಗಣಕ) ಬಳಪ ಹಿಡಿಯದ ಅಗ್ಗಳಿಕೆಯ ಕುಮಾರವ್ಯಾಸನನ್ನು ನೆನಪಿಸುವ ಪದ. ಇಂಗ್ಲಿಷಿನಲ್ಲಿ ಬಳಕೆಯಲ್ಲಿರುವ ಕಂಪ್ಯೂಟರ್ ಪದ ಕೂಡ ಅದರ ಇಂದಿನ ಬಳಕೆಯ ಎಲ್ಲ ಸಾಧ್ಯತೆಗಳ ಅರ್ಥಗಳನ್ನು  ಪಡೆದಿರುವುದು ಸಾಧ್ಯವಿಲ್ಲ.
 
ಇಂಗ್ಲಿಷಿನದಲ್ಲದ ಕಂಪ್ಯೂಟರ್ ಪದಕ್ಕೆ ಹೊಸ ಹೊಸ ಅರ್ಥಗಳು ಸೇರುವುದಕ್ಕೆ ಅಭ್ಯಂತರವಿಲ್ಲದಿದ್ದರೆ ಕನ್ನಡದ ಗಣಕ ಕೂಡ ಈಗಿನ, ಮುಂದೆ ಬರಲಿರುವ ಎಲ್ಲ ಹೊಸ ಅರ್ಥಗಳನ್ನೂ ಒಳಗೊಳ್ಳುವುದರಲ್ಲಿ ಸಂದೇಹ ಬೇಡ.

ಅದಕ್ಕಾಗಿ ಅದೇ ಸ್ಥಿತಿಯಲ್ಲಿರುವ ಬೇರೊಂದು ಭಾಷೆಯ ಪದವನ್ನು ಆಮದು ಮಾಡಕೊಳ್ಳುವ ಅಗತ್ಯವಿಲ್ಲ. ಇಂಗ್ಲಿಷಿನ ಟ್ಯಾಬ್ಲೆಟ್ ಎನ್ನುವ ಪದದಲ್ಲಿ ಗಣಕಕ್ಕೆ ಸಂಬಂಧಿಸಿದ ಯಾವ ಅರ್ಥವೂ ಇಲ್ಲ. ಅದನ್ನು ವರ್ಣಿಸುವಾಗ ಇಂಗ್ಲಿಷಿನಲ್ಲಿ ಸ್ಲೇಟಿನಂತಿರುವ ಗಣಕ ಎಂದೇ ಹೇಳುತ್ತಾರೆ.

ಆದ್ದರಿಂದ ~ಹಲಗೆ ಗಣಕ~ ಎಂಬ ಕನ್ನಡ ಪದವೇ ಹೆಚ್ಚು ಅರ್ಥಪೂರ್ಣವೂ ಜೀವಂತವೂ ಆಗಿದೆ. ಹೊಸ ಹೊಸ ಗಣಕ ಸಾಧನಗಳು (ಗ್ಯಾಜೆಟ್ ಗಳು) ಬಂದಾಗ ಅವುಗಳಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಕನ್ನಡಿಗರಿಗೆ ತಿಳಿಸುವುದು ಕನ್ನಡ ಪತ್ರಿಕೆ ಮಾತ್ರ ಮಾಡಬಹುದಾದ, ಮಾಡಬೇಕಾದ ಕಾರ್ಯ. ಪ್ರಜಾವಾಣಿ ಹಾಗೆ ಮಾಡಲಿ ಎಂದು ನನ್ನ ಕೋರಿಕೆ.
 ಪಂಡಿತಾರಾಧ್ಯ, ಮೈಸೂರು

ವಾಹನಗಳು ಮತ್ತು ಅದರ ತಂತ್ರಜ್ಞಾನದ ಕುರಿತಂತೆ ಬರೆಯುವುದಕ್ಕೆ ಕನ್ನಡದಲ್ಲೊಂದು ಭಾಷೆಯೇ ರೂಪುಗೊಂಡಿಲ್ಲ. ಕಂಪ್ಯೂಟರ್ ಮತ್ತಿತ್ಯಾದಿ ತಂತ್ರಜ್ಞಾನಕ್ಕಿಂತ ಹೆಚ್ಚು ವ್ಯಾಪಕವಾಗಿರುವ ಮತ್ತು ದಿನ ನಿತ್ಯದ ನಮ್ಮ ಬದುಕಿನಲ್ಲಿ ಹಾಸಹೊಕ್ಕಾಗಿರುವ ಈ ಕ್ಷೇತ್ರದ ಕುರಿತಂತೆ `ಪ್ರಜಾವಾಣಿ~ ಗಮನಹರಿಸಿರುವುದು ನಿಜಕ್ಕೂ ಸಂತೋಷದ ಸಂಗತಿ.
 
ಸದ್ಯ `ಕಾಮನಬಿಲ್ಲು~ವಿನಲ್ಲಿ ಪ್ರಕಟವಾಗುತ್ತಿರುವ ಲೇಖನಗಳಲ್ಲಿ ತಾಂತ್ರಿಕ ವಿವರಣೆಗಳೆಲ್ಲವೂ ಹೆಚ್ಚು ಕಡಿಮೆ ಇಂಗ್ಲಿಷ್ ಪಾರಿಭಾಷಿಕಗಳನ್ನೇ ಹೊಂದಿರುತ್ತವೆ. ಈ ಪದಗಳನ್ನೆಲ್ಲಾ ಕನ್ನಡಕ್ಕೆ ಅನುವಾದಿಸಿದರೆ ಬರೆದಿರುವುದೇನು ಎಂಬುದು ಅರ್ಥವಾಗದ ಸ್ಥಿತಿ ತಲುಪಬಹುದು.
 
ಆದರೆ ಟಾರ್ಕ್, ಆರ್‌ಪಿಎಂ ಮುಂತಾದುವುಗಳು ಕನ್ನಡದ ವಿವರಣೆಯೊಳಗೆ ಬಸ್ಸು, ಕಾರು, ರೈಲುಗಳಷ್ಟೇ ಸಹಜವಾಗಿ ಹೊಂದಿಕೊಳ್ಳುವ ತನಕ ಅವುಗಳ ತಾಂತ್ರಿಕ ವಿವರಣೆಗಳನ್ನು ಕೊಡುವುದು ಅಗತ್ಯ.
 ಕೆ. ನಿರಂಜನ, ಹಾಸನ

ವಾಹನ ಲೋಕದ ಕುರಿತು ಪ್ರತಿವಾರವೂ ಹೊಸ ಹೊಸ ವಿಷಯಗಳನ್ನು ನೀಡುತ್ತಿರುವ `ಕಾಮನಬಿಲ್ಲು~ ಪುರವಣಿಗೆ ಧನ್ಯವಾದಗಳು. ವಾಹನಗಳಿಗೆ ವಿಮೆ ಪಡೆಯುವಾಗ, ವಾರ್ಷಿಕ ನಿರ್ವಹಣಾ ಯೋಜನೆಗಳನ್ನು ಆರಿಸಿಕೊಳ್ಳುವಾಗ ಯಾವ ವಿಷಯಗಳ ಕುರಿತು ಗಮನಹರಿಸಬೇಕು ಎಂಬುದರ ಕುರಿತಂತೆಯೂ ಮಾಹಿತಿಯನ್ನು ಒದಗಿಸಿದರೆ ಅನುಕೂಲವಾಗುತ್ತದೆ.
 ಎಸ್.ಕೆ. ರಮೇಶ್, ಮೂಡಿಗೆರೆ

ಜಾನಮಟ್ಟಿಯ ಕುರಿತ ಕಾಮನಬಿಲ್ಲು ಲೇಖನ ಕೇವಲ ಒಂದು ಊರನ್ನು ಮತ್ತು ಅಲ್ಲಿನ ಯುವಕರ ಸೇನೆ ಸೇರುವ ಹಂಬಲವನ್ನಷ್ಟೇ ಪರಿಚಯಿಸಿಲ್ಲ. ಅದು ಅದರಾಚೆಗಿನ ಕೆಲವು ಸಮಸ್ಯೆಗಳನ್ನೂ ಹೇಳುತ್ತಿದೆ. ಅಲ್ಲಿನ ಯಾರೂ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿಲ್ಲ ಎಂಬ ವಿಚಾರ ನಿಜಕ್ಕೂ ಚಿಂತನೆಗೆ ಹಚ್ಚುವಂಥದ್ದು.

ಅಂದರೆ ಪ್ರೌಢಶಾಲಾ ಶಿಕ್ಷಣ ಮುಗಿಯುವ ವೇಳೆಗೆ ಉದ್ಯೋಗ ಹುಡುಕಿಕೊಳ್ಳಲೇಬೇಕಾದ ಈ ಊರಿನ ಯುವಕರ ಪರಿಸ್ಥಿತಿಯನ್ನೂ ಲೇಖನ ಪ್ರತಿಬಿಂಬಿಸಿದೆ. ಈ ಉತ್ಸಾಹಿ ಯುವಕರಿಗೆ ಉನ್ನತ ಶಿಕ್ಷಣವೂ ದೊರೆಯುವಂಥ ವಾತಾವರಣವೊಂದನ್ನು ಸೃಷ್ಟಿಸುವ ಅಗತ್ಯವಿದೆ.
 ಈರಪ್ಪ ಮಲಗಿಹಾಳ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT