ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ ಬಾಕ್ಸ್

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಜನವರಿ 26ರ `ಕಾಮನಬಿಲ್ಲು~ ಪ್ರಕಟಿಸಿದ ಗೋಪಾಲನಹಳ್ಳಿಯ ಯಶೋಗಾಥೆ ಚೆನ್ನಾಗಿತ್ತು. ಆದರೆ ಇಲ್ಲಿನ ಯುವಕರಿಗೆ ಪಟ್ಟಣದಿಂದ ಹಿಂದಿರುಗಲು ಪ್ರೇರಣೆಯಾದದ್ದು ಅವರಿಗಿದ್ದ ಜಮೀನು ಎಂಬ ವಿಷಯವನ್ನು ಮರೆಯಲು ಸಾಧ್ಯವಿಲ್ಲ. ಹೀಗೆ ಭೂಮಿಯಿಲ್ಲದ ಅನೇಕ ಯುವಕರೂ ಗೋಪಾಲನಹಳ್ಳಿಯಲ್ಲಿ ಇರುವ ಸಾಧ್ಯತೆ ಇದೆ.
 ಅವರೂ ಹಳ್ಳಿಗೆ ಹಿಂದಿರುಗಿದ್ದಾರಾ ಎಂಬ ಪ್ರಶ್ನೆಯನ್ನು ಲೇಖಕರು ಕೇಳಿಕೊಂಡಿದ್ದರೆ ಲೇಖನ ಇನ್ನಷ್ಟು ಸಮಗ್ರವಾಗಿರುತ್ತಿತ್ತು. ಹಳ್ಳಿಗೆ ಹಿಂದಿರುಗಿದ ಯುವಕರ ಪ್ರಯತ್ನವನ್ನು ಸಂಭ್ರಮಿಸುವ ವೇಳೆಯೇ ಹಿಂದಿರುಗಲು ಯಾವ ಸಾಧ್ಯತೆಯೂ ಇಲ್ಲದ ವರ್ಗದ ಬಗ್ಗೆ ಯೋಚಿಸುವುದೂ ಅಗತ್ಯ ಎನಿಸುತ್ತದೆ.

 ಕೆ.ಪಿ. ರಮೇಶ್, ಮೈಸೂರು

ಗೋಪಾಲನಹಳ್ಳಿ ಬರಿದಾಗದೇ ಇರುವುದು ಸಂತೋಷದ ಸಂಗತಿ. ಆದರೆ ಎಲ್ಲ ಹಳ್ಳಿಗಳೂ ಗೋಪಾಲನ ಹಳ್ಳಿಗಳಾಗಲು ಸಾಧ್ಯವಿಲ್ಲ. ಅದರಲ್ಲೂ ಮುಖ್ಯವಾಗಿ ನಗರಗಳಿಗೆ ಅಂಟಿೊಂಡಂತೆ ಇರುವ ಹಳ್ಳಿಗಳಲ್ಲಿ ಕೃಷಿ ಮಾಡುವುದಕ್ಕಿಂತ ಜಮೀನು ಮಾರುವುದೇ ಲಾಭದಾಯಕವಾಗಿರುವ ಈ ಹೊತ್ತಿನಲ್ಲಿ ಗೋಪಾಲನಹಳ್ಳಿಯ ಉದಾಹರಣೆಯಷ್ಟೇ ಸಾಕಾಗುವುದಿಲ್ಲ.
 
ಪಾಶ್ಚಾತ್ಯ ದೇಶಗಳಲ್ಲಿ ನಗರಗಳ ವ್ಯಾಪ್ತಿಗೊಂದು ಕಡಿವಾಣ ಹಾಕುವ ಪ್ರಯತ್ನಗಳು ನಡೆಯುತ್ತಿವೆಯಂತೆ. ನಮ್ಮಲ್ಲಿಯೂ ಈ ಪ್ರಯತ್ನಗಳನ್ನು ಆರಂಭಿಸಲು ಇದು ಸೂಕ್ತಕಾಲ ಎನಿಸುತ್ತಿದೆ.

 ಕೆ.ಸಿ. ರಾವ್, ಬೆಂಗಳೂರು
ಗಾಣಧಾಳು ಶ್ರೀಕಂಠ ಅವರ `ಗೊಪಾಲನ ಹಳ್ಳಿ ಬರಿದಾಗುತ್ತಿಲ್ಲ~ ಹಳ್ಳಿಯ ಬದುಕಿನ ಹೊಸ ಸಾಧ್ಯತೆಯೊಂದನ್ನು ತೆರೆದಿಡುತ್ತಿದೆ. ಹಾಗೆಯೇ ಯುವಜನತೆ ಪಟ್ಟಣದ ವ್ಯಾಮೋಹಕ್ಕೆ ಬಲಿಯಾಗಿದೆ ಎಂಬ ದೂರಿಗೂ ಒಂದು ಉತ್ತರವಾಗುತ್ತಿದೆ. ಗೋಪಾಲಹಳ್ಳಿಯ ಯುವಕರು ದೇಶದ ಎಲ್ಲ ಹಳ್ಳಿಗಳಿಗೂ ಮಾದರಿಯಾಗಲಿ.

 ಟಿ.ವಿ. ಪಾಂಡುರಂಗ, ಚಿಕ್ರಮಗಳೂರು.
ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರ ಮನೋಭಾವದ ಕೊರತೆಯ ಜೊತೆಗೆ ಜಾತಿ ರಾಜಕೀಯದಿಂದ ತಮ್ಮ ಮಾನವೀಯ ಬದುಕನ್ನು ದೂರ ಮಾಡಿಕೊಳ್ಳುತ್ತಿರುವ ಗ್ರಾಮೀಣರಿಗೆ ತಮ್ಮನ್ನು ತಿದ್ದಿಕೊಳ್ಳುವುದಕ್ಕೆ ಗೋಪಾಲಹಳ್ಳಿ ಒಂದು ಉದಾಹರಣೆಯಾಗಲಿ.

ಹಳ್ಳಿಯ ಬದುಕು ಕೆಟ್ಟದಲ್ಲ ಎಂಬುದರ ಅರಿವನ್ನು ಮೂಡಿಸಿಕೊಂಡಿರುವ ಗೋಪಾಲನ ಹಳ್ಳಿಯ ಯುವಕರಿಗೆ ಅನಂತಾನಂತ ಧನ್ಯವಾದಗಳು

 ಕುಬೇರಪ್ಪ ಎಂ ವಿಭೂತಿ, ಹರಿಹರ
ಗ್ಯಾಜೆಟ್ ಲೋಕ ಅಂಕಣ ಚೆನ್ನಾಗಿ ಮೂಡಿ ಬರುತ್ತಿದೆ. ವಿವಿಧ ಉತ್ಪನ್ನಗಳನ್ನು ಗ್ರಾಹಕರಿಗೆ ಉಪಯೋಗವಾಗುವಂತೆ ವಿಶ್ಲೇಷಿಸುವ ಅಂಕಣವೊಂದು ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಮೂಡಿ ಬರುತ್ತಿದೆ ಎನಿಸುತ್ತಿದೆ.

ಫೋನ್‌ಗಳು, ಕ್ಯಾಮೆರಾಗಳು ಮತ್ತು ಅವುಗಳಿಗೆ ಸಂಬಂಧಿಸಿದ ಉಪಕರಣಗಳ ಜೊತೆಗೆ ಇತರ ಎಲೆಕ್ಟ್ರಾನಿಕ್ ಉಪಕರಣಗಳ ವಿಶ್ಲೇಷಣೆಯನ್ನೂ ಇದರಲ್ಲಿಯೇ ನೀಡುವುದು ಉತ್ತಮ ಎನಿಸುತ್ತದೆ. 

 ಎಸ್. ಚಂದ್ರಶೇಖರ್, ಮಾಗಡಿ
ಬರೇ ಪಟ್ಟಣಿಗರಿಗೆ ಮತ್ತು ಇಂಗ್ಲಿಷ್ ಬಲ್ಲವರಿಗೆ ಮಾತ್ರ ಸೀಮಿತವಾಗಿದ್ದ ಮಾಹಿತಿಗಳನ್ನು ಗ್ಯಾಜೆಟ್ ಲೋಕದ ಮೂಲಕ ಎಲ್ಲರಿಗೂ ನೀಡುತ್ತಿರುವ `ಕಾಮನಬಿಲ್ಲು~ ಪುರವಣಿಗೆ ಧನ್ಯವಾದಗಳು.

ವಾಹನಗಳ ಕುರಿತಂತೆ ನೀಡುತ್ತಿರುವ ಮಾಹಿತಿ ಅತ್ಯುತ್ತಮವಾಗಿದೆ. ಸುಧೀಂದ್ರ ಪ್ರಸಾದ್ ಅವರು ಬರೆದ ಹೈಬ್ರಿಡ್ ಕಾರುಗಳ ಕುರಿತ ಲೇಖನ ಚೆನ್ನಾಗಿತ್ತು. ಈ ಬಗೆಯ ಕಾರುಗಳು ಆದಷ್ಟು ಬೇಗ ಸಾಮಾನ್ಯರಿಗೂ ಕೊಳ್ಳುವಂಥ ದರದಲ್ಲಿ ಮಾರುಕಟ್ಟೆಗೆ ಬರಲಿ. 
 ಎಂ. ಫಾರೂಕ್, ಶಿವಮೊಗ್ಗ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT