ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಾದರೂ ಅಕ್ರಮ ನಿಲ್ಲಲಿ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು  ರಾಜ್ಯ ಸರ್ಕಾರ ನಿಯಮಗಳಿಗೆ ತಿದ್ದುಪಡಿ ತಂದಿದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದ ವಿವಿಧ ನದಿ ತೀರಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಸರ್ಕಾರದ ನಿಯಂತ್ರಣ ಕ್ರಮಗಳು ಯಾವುದೇ ಪರಿಣಾಮ ಬೀರಿಲ್ಲ ಎನ್ನುವುದನ್ನು ಮಾಧ್ಯಮಗಳು ಪದೇ ಪದೇ ಬಹಿರಂಗಪಡಿಸಿವೆ.

ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ಹೆದರಿಸಿಯೋ, ಬುಟ್ಟಿಗೆ ಹಾಕಿ­ಕೊಂಡೋ ಅಕ್ರಮ ಮರಳು ಗಣಿಗಾರಿಕೆ ರಾಜಾರೋಷವಾಗಿ ನಡೆ­ದಿತ್ತು. ಅಧಿಕಾರಿಗಳು, ಪೊಲೀಸರು ಮತ್ತು ಮರಳು ಮಾಫಿಯಾ ನಡುವಣ ಕಳ್ಳಾಟ ಮುಂದುವರಿದೇ ಇತ್ತು. ಈ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಇರುವುದು ಯಾವ ಇಲಾಖೆಗೆ ಎಂಬ ಬಗ್ಗೆಯೂ ಗೊಂದಲ­ಗಳಿದ್ದವು.

ರಾಜಕೀಯ ಹಸ್ತಕ್ಷೇಪದಿಂದಾಗಿ ಮರಳಿನ ಅವ್ಯಾಹತ ಲೂಟಿಯಾ­ಗುವುದನ್ನು ಗಮನಿಸಿ, ರಾಷ್ಟ್ರೀಯ ಹಸಿರು ಪೀಠ ಕಳೆದ ಆಗಸ್ಟ್‌ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಾತಿನ ಚಾಟಿ ಬೀಸಿತ್ತು. ಮರಳು ನೀತಿಯನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಹಸಿರುಪೀಠ ಎಲ್ಲ ರಾಜ್ಯಗಳಿಗೂ ಆದೇಶ ನೀಡಿತ್ತು.

ಈಗ ತಡವಾಗಿಯಾದರೂ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ, ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವ ರಾಜ­ಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಈ ನಿಯಮ ತಿದ್ದುಪಡಿಯಿಂದಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸಲು ಸ್ಪಷ್ಟ ಕಾನೂನು ಅವಕಾಶ ಲಭಿಸಿದಂತಾಗಿದೆ. ಈ ತಿದ್ದುಪಡಿಯನ್ವಯ ಫಿಲ್ಟರ್‌ ಮರಳು ಉತ್ಪಾದನೆ, ಸಂಗ್ರಹ, ಸಾಗಣೆ ಮತ್ತು ಬಳಕೆ ಎಲ್ಲವೂ ನಿಷೇಧಗೊಂಡಿವೆ.

ಅಕ್ರಮ ಮರಳು ಗಣಿಗಾರಿಕೆಯಿಂದ ಒಂದೆಡೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಲುಕ್ಸಾನು ಆಗುತ್ತಿದ್ದರೆ, ಇನ್ನೊಂದೆಡೆ ಮರಳಿನ ನೈಸರ್ಗಿಕ ಸಂಪನ್ಮೂಲವೂ ಬರಿದಾಗತೊಡಗಿದೆ. ರಾಜ್ಯ ಸರ್ಕಾರ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳು ಮರಳನ್ನು ಬರೀ ಆದಾಯದ ಮೂಲವೆಂದು ಪರಿಗಣಿಸಬಾರದು.  ಮರಳು ನಮ್ಮ ರಾಷ್ಟ್ರೀಯ ಸಂಪತ್ತು.

ಅದರ ಬೇಕಾ­ಬಿಟ್ಟಿ ಬಳಕೆಯನ್ನು ತಡೆಯದಿದ್ದರೆ ನದಿ ಪಾತ್ರಗಳಲ್ಲಿ ನೈಸರ್ಗಿಕ ಅನಾಹುತ­ಗಳೂ  ಸಂಭವಿಸಬಹುದು. 2011ರಲ್ಲೇ ರಾಜ್ಯ ಮರಳು ನೀತಿಯನ್ನು ಪ್ರಕಟಿಸಿದ್ದರೂ ಗುತ್ತಿಗೆದಾರರು ಆ ನೀತಿಯನ್ನು ಪಾಲಿಸುವ ಗೋಜಿಗೆ ಹೋಗಿಲ್ಲ ಎನ್ನುವುದು ಎಲ್ಲರಿಗೆ ಗೊತ್ತಿರುವ ಸತ್ಯ. ಇನ್ನು ಮುಂದೆಯಾದರೂ ಭೂಗರ್ಭ ಶಾಸ್ತ್ರಜ್ಞರ ಸಲಹೆಯನ್ನು ಕಟ್ಟುನಿಟ್ಟಾಗಿ ಪರಿಗಣಿಸಿ ಗಣಿಗಾರಿಕೆಗೆ ಅನುಮತಿ ನೀಡುವ ಸ್ಥಳಗಳನ್ನು ವೈಜ್ಞಾನಿಕವಾಗಿಯೇ ಗುರುತಿಸಬೇಕು.

ಈಗ ನಿಯಮ ತಿದ್ದುಪಡಿಯ ಬಳಿಕ ಅಕ್ರಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ಅವಕಾಶಗಳು ಹೇರಳವಾಗಿವೆ. ಕಾನೂನಿನ ಈ ಅಂಶಗಳು ಕಟ್ಟುನಿಟ್ಟಾಗಿ ಜಾರಿಯಾಗದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲೂ ಸರ್ಕಾರ ಹಿಂಜರಿಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT