ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಅಂಗೈಯಲ್ಲಿ ಬೀದರ್‌ ಇತಿಹಾಸ

ಪ್ರವಾಸೋದ್ಯಮದ ಉತ್ತೇಜನಕ್ಕೆ ‘ವಿಕಿಪಿಡಿಯಾ’ ಬಳಕೆ
Last Updated 8 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾಡಳಿತವು ‘ಬೀದರ್‌ ವಿಕಿಪಿಡಿಯಾ ಪ್ರಾಜೆಕ್ಟ್‌’ ಸಹಯೋಗದೊಂದಿಗೆ ಐತಿಹಾಸಿಕ ಜಿಲ್ಲೆಗೆ ಸಂಬಂಧಪಟ್ಟ ಇನ್ನಷ್ಟು ಲೇಖನಗಳನ್ನು ಅಂತರ್ಜಾಲದಲ್ಲಿ ಅಳವಡಿಸಿದ್ದು, ಪ್ರವಾಸಿಗರನ್ನು ಸೆಳೆಯಲು ಸ್ಮಾರಕ ಸ್ಥಳಗಳಲ್ಲೇ ಅದಕ್ಕೆ  ಸಂಬಂಧಿಸಿದ ಮಾಹಿತಿ ಸ್ಮಾರ್ಟ್‌ ಫೋನ್‌ಗಳಲ್ಲಿ  ತ್ವರಿತವಾಗಿ ಲಭ್ಯವಾಗುವಂತೆ ಮಾಡುವತ್ತ ಹೆಜ್ಜೆ ಇಟ್ಟಿದೆ.

ವಿಕಿಪಿಡಿಯಾ ಅಧಿಕಾರಿಗಳ ಆಸಕ್ತಿ  ಫಲವಾಗಿ  ಈಗಾಗಲೇ 50 ಲೇಖನ­ಗಳನ್ನು ಅಂತರ್ಜಾಲದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಇಂಗ್ಲಿಷ್, ಕನ್ನಡ, ಹಿಂದಿ, ಸಂಸ್ಕೃತ ಫ್ರೆಂಚ್‌, ಅರೆಬಿಕ್ ಸೇರಿದಂತೆ ವಿಶ್ವದ 30 ಭಾಷೆಗಳಲ್ಲಿ  ಲೇಖನಗಳನ್ನು  ಅನುವಾದ ಮಾಡಲಾಗಿದೆ.  ಸ್ಮಾರಕಕ್ಕೆ ಸಂಬಂಧಿಸಿದ ಬಹುತೇಕ ಲೇಖನಗಳನ್ನು ಬೀದರ್‌ನವರೇ  ಸ್ವಪ್ರೇರಣೆಯಿಂದ ಬರೆದಿರುವುದು ವಿಶೇಷ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನವರಿಯಲ್ಲಿ ವಿಕಿಪಿಡಿಯಾ ಪ್ರತಿಷ್ಠಾನದವರು  ಬೀದರ್‌ನ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ ನಂತರ ಸಾಕಷ್ಟು ಮಾಹಿತಿ ಹರಿದು ಬಂದಿದೆ.

ಗುರುನಾನಕ ದೇವ್ ಎಂಜಿನಿಯರಿಂಗ್‌ ಕಾಲೇಜಿನ 20 ವಿದ್ಯಾರ್ಥಿಗಳು ಪ್ರೊ.ಚನ್ನವೀರ ಪಾಟೀಲ ಅವರ ನೇತೃತ್ವದಲ್ಲಿ ಸಭೆಯಲ್ಲಿ ಪಾಲ್ಗೊಂಡ ನಂತರ  ಲೇಖನಗಳನ್ನು ಬರೆಯಲಾರಂಭಿಸಿದರು. ಕಂಪ್ಯೂಟರ್‌ ಸೈನ್ಸ್‌ ವಿಭಾಗದ ನೀಲಾಂಬಿಕೆ ಪಾಟೀಲ, ಶಿವಪ್ರಿಯಾ ಸುಲಗುಂಟೆ ಹಾಗೂ ಶಿವಪ್ರಸಾದ ವಿದ್ಯಾರ್ಥಿಗಳು ಬರೆದ ಲೇಖನ­ಗಳನ್ನು ಪರಿಶೀಲಿಸಿ ಅವುಗಳಿಗೆ ಒಂದು ರೂಪ ಕೊಡುವಲ್ಲಿ ನೆರವಾದರು. 

ವಿಕಿಪಿಡಿಯಾದ ಪ್ರಮುಖರು ಲೇಖನಗಳನ್ನು ಪರಾಮರ್ಶೆಗೆ ಒಳಪಡಿಸಿ ಅಗತ್ಯ ಅಂಶಗಳನ್ನು ಸೇರಿಸಿ ಅನುವಾದ ಮಾಡುವ ಮೂಲಕ ಜಗತ್ತಿನ ಇನ್ನಿತರ ಭಾಷೆಗಳಲ್ಲಿಯೂ ಬೀದರ್‌ನ ಇತಿಹಾಸ ಸುಲಭವಾಗಿ ದೊರೆಯುವಂತೆ ಮಾಡಿದ್ದಾರೆ. ವಿಕಿಪಿಡಿಯಾದವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಗೈಯಲ್ಲಿ ಬೀದರ್‌ನ ಎಲ್ಲ ಮಾಹಿತಿ ಲಭ್ಯವಾಗುವಂತೆ ಮಾಡಲು ತೀರ್ಮಾನಿಸಿದ್ದು,  ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಕಾರ್ಯಾಗಾರ: ಎರಡನೆಯ ಹಂತದ  ಕಾರ್ಯಾಗಾರ  ಬೀದರ್‌ನ ಪ್ರತಾಪ­ನಗರದ ಶಾರದಾ ರುಡ್‌ಸೆಟ್‌ನಲ್ಲಿ ಏಪ್ರಿಲ್‌ 12ರಂದು ನಡೆಯಲಿದ್ದು, ಇದ­ರಲ್ಲಿ ವಿಶ್ವವಿದ್ಯಾಲಯ ಹಾಗೂ ಕಾಲೇಜು­ಗಳ ಆಸಕ್ತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ  ವಿಕಿಪಿಡಿಯಾದ ಸಂಚಾಲಕ ಓಂಪ್ರಕಾಶ ಹಾಗೂ ಪ್ರಮುಖರು ವಿಕಿಪಿಡಿ­ಯಾಕ್ಕೆ ಲೇಖನಗಳನ್ನು ಬರೆ­ಯು­ವಿಕೆ ಹಾಗೂ ಚಿತ್ರಗಳನ್ನು ಸೆರೆ ಹಿಡಿಯುವುದು ಹಾಗೂ ಅಪ್ ಲೋಡ್‌ ಮಾಡುವ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ.

ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಕಾಲೇಜು,  ಗುಲ್ಬರ್ಗ ವಿಶ್ವವಿದ್ಯಾಲಯದ ಸ್ನಾತಕೋ­ತ್ತರ ಕೇಂದ್ರ, ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜು, ಭೀಮಣ್ಣ ಖಂಡ್ರೆ ಇನ್‌ಸ್ಟಿಟ್ಯುಟ್‌ ಆಫ್‌ ಟೆಕ್ನಾಲಜಿ, ಬಸವಕಲ್ಯಾಣ ಎಂಜಿನಿಯರಿಂಗ್‌ ಕಾಲೇಜು, ಲಿಂಗರಾಜಪ್ಪ ಎಂಜಿನಿಯ­ರಿಂಗ್‌ ಕಾಲೇಜು ಹಾಗೂ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ­ಗಳಿಗೂ ಆಹ್ವಾನ ನೀಡಲಾಗಿದೆ. ‘ಪ್ರವಾಸಿ ಸ್ಥಳ ಹಾಗೂ ಸ್ಮಾರಕವಿರುವ ಸ್ಥಳಗಳಲ್ಲಿ ವಿಕಿಪಿಡಿಯಾ ಲೇಖನ ಹಾಗೂ ಕ್ವಿಕ್‌ ರಿಸ್ಪಾನ್ಸ್ ಕೋಡ್‌(ಕ್ಯೂಆರ್‌ಸಿ) ಅಳವಡಿಸಲಾಗುವುದು. ಮೊದಲ ಕೋಡ್‌ ಅನ್ನು ಏಪ್ರಿಲ್‌ 12 ರಂದು ಬೀದರ್‌ ಕೋಟೆಯ ಮುಂಭಾಗದಲ್ಲಿ ಅಳವಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಪಿ.ಸಿ.ಜಾಫರ್‌ ಮಾಹಿತಿ ನೀಡಿದರು.

ಏಕೈಕ ಜಿಲ್ಲೆ: ‘ವಿಕಿಪಿಡಿಯಾದಲ್ಲಿ ಸ್ಮಾರಕಗಳ ಬಗೆಗೆ ವೈವಿಧ್ಯಮ ಮತ್ತು ಹಲವು ಭಾಷೆಗಳಲ್ಲಿ ಲೇಖನಗಳು ಲಭ್ಯವಿರುವ ಏಕೈಕ ಜಿಲ್ಲೆ ಬೀದರ್‌ ಆಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ’ ಎಂದು  ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕಿಶೋರ್‌ ಜೋಶಿ ಹೇಳುತ್ತಾರೆ.
*
ಮುಖ್ಯಾಂಶಗಳು
*ಐತಿಹಾಸಿಕ ಸ್ಮಾರಕಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲಲು ಜಿಲ್ಲಾಡಳಿತ ಆಸಕ್ತಿ
*ಜಿಲ್ಲಾಧಿಕಾರಿಯೊಂದಿಗೆ ಕೈಜೋಡಿಸಿದ ಸ್ಥಳೀಯರು
*ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗೆ ವಿದ್ಯಾರ್ಥಿಗಳ ಸಾಥ್
*

ಈ ಯೋಜನೆಯನ್ನು ಮೇಲ್ದರ್ಜೆಗೆ ಏರಿಸಿ ಪ್ರವಾಸಿಗರನ್ನು ಸೆಳೆಯುವುದು ಜಿಲ್ಲಾ ಆಡಳಿತದ ಉದ್ದೇಶವಾಗಿದೆ
ಪಿ.ಸಿ.ಜಾಫರ್,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT