ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ನಾಮಪತ್ರ ವಾಪಸ್ ಪಡೆವ ಕೆಲಸ

Last Updated 19 ಏಪ್ರಿಲ್ 2013, 8:15 IST
ಅಕ್ಷರ ಗಾತ್ರ

ವಿಜಾಪುರ: ಬಂಡಾಯದ ಬಿಸಿ ಬಹುತೇಕ ರಾಜಕೀಯ ಪಕ್ಷಗಳಿಗೂ ತಟ್ಟಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷೇತರರು ಅಧಿಕ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಗೆಲುವಿಗೆ ತೊಡಕಾಗಬಹುದಾದ ಪಕ್ಷೇತರ ಮತ್ತು ಬಂಡಾಯ ಅಭ್ಯರ್ಥಿಗಳ ನಾಮಪತ್ರ ವಾಪಸ್ಸಾತಿಗೆ ಬಹುತೇಕ ಅಭ್ಯರ್ಥಿಗಳು ಹರಸಾಹಸ ನಡೆಸುತ್ತಿದ್ದಾರೆ.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 168 ಅಭ್ಯರ್ಥಿಗಳು ಒಟ್ಟಾರೆ 243 ನಾಮಪತ್ರಗಳನ್ನು ಸಲ್ಲಿಸಿದ್ದರು. ಗುರುವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಒಟ್ಟು 168 ಜನ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಅವರಲ್ಲಿ 97ಜನ ಪಕ್ಷೇತರರು ಇದ್ದಾರೆ.

`ಪಕ್ಷೇತರರ ಸ್ಪರ್ಧೆಯಲ್ಲಿ ಸ್ವ-ಬಯಕೆ, ಪರರ ಬಯಕೆ ಕೆಲಸ ಮಾಡಿವೆ. ಕೆಲವರು ಸ್ವಯಂ ಪ್ರೇರಿತರಾಗಿ, ಹಲವರು ಇನ್ನಾರದೋ ಚಿತಾವಣಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಎದುರಾಳಿ ಅಭ್ಯರ್ಥಿಯ ಗೆಲುವಿಗೆ ತಡೆ ಒಡ್ಡುವುದರಿಂದ ಆ ಪಕ್ಷದ ಮತ ಬ್ಯಾಂಕ್ ಆಗಿರುವ ಜನಾಂಗಕ್ಕೆ ಸೇರಿದ ಒಬ್ಬಿಬ್ಬ ವ್ಯಕ್ತಿಯನ್ನು ಕಣಕ್ಕಿಳಿಸಿ ಮತ ವಿಭಜಿಸುವುದು ಪ್ರಮುಖ ಉದ್ದೇಶ' ಎನ್ನುತ್ತಾರೆ ಹಿರಿಯ ರಾಜಕಾರಣಿಯೊಬ್ಬರು.

`ವ್ಯಕ್ತಿಯೊಬ್ಬರು ತನಗೆ ಟಿಕೆಟ್ ನೀಡಬೇಕು ಎಂದು ಕೇಳಿದರು. 100 ಜನರನ್ನು ಕರೆತನ್ನಿ, ನಿಮಗೇ ಟಿಕೆಟ್ ಕೊಡುತ್ತೇವೆ ಎಂದು ಹೇಳಿದೆವು. ಅವರಿಂದ ಅದು ಸಾಧ್ಯವಾಗಲಿಲ್ಲ. ಜನಬಲ ನೋಡಿಕೊಂಡು ಬೇರೆ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಪಕ್ಷ ಅನ್ಯಾಯ ಮಾಡಿದೆ, ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲರೂ ಟಿಕೆಟ್ ಕೇಳುತ್ತಿರುವುದು ಯಾವ ಕಾರಣಕ್ಕೆ ಎಂಬುದು ಗೊತ್ತಿಲ್ಲ' ಎಂದು ಪಕ್ಷವೊಂದರ ಪ್ರಮುಖ ಪದಾಧಿಕಾರಿಯೊಬ್ಬರು ಹೇಳಿ ಮುಗುಳ್ನಕ್ಕರು.

ಒಳ ಒಪ್ಪಂದ
`ಕೆಲ ಚಿಕ್ಕಪುಟ್ಟ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕೆಲವೆಡೆ ಒಳ ಒಪ್ಪಂದ ಹಾಗೂ ಇನ್ನೊಬ್ಬರ ಹಿತಾಸಕ್ತಿ ಕಾಪಾಡುವ ಉದ್ದೇಶ ಕೆಲಸ ಮಾಡಿದೆ. ಕಣದಲ್ಲಿರುವ ಮತ್ತು ತಮಗೆ ಬೇಕಿರುವ ಅನ್ಯ ಪಕ್ಷದ ಅಭ್ಯರ್ಥಿಯ ಅಣತಿಯಂತೆ ಕೆಲವೆಡೆ ಟಿಕೆಟ್ ಹಂಚಿಕೆ ಮಾಡಲಾಗಿದೆ' ಎಂಬುದು ಕೆಲ ಅಭ್ಯರ್ಥಿಗಳ ದೂರು.

`ಒಬ್ಬ ಅಭ್ಯರ್ಥಿಗೆ ಎದುರಾಳಿ ಪ್ರಬಲ ಅಭ್ಯರ್ಥಿಯನ್ನು ಸೋಲಿಸುವುದೇ ಗುರಿ. ತನ್ನ ಪ್ರಭಾವ ಬಳಸಿ ಎದುರಾಳಿ ಅಭ್ಯರ್ಥಿಯ ಜಾತಿಗೆ ಸೇರಿದ ವ್ಯಕ್ತಿಗೆ ಇಲ್ಲವೆ ಆ ಎದುರಾಳಿ ಅಭ್ಯರ್ಥಿ ಪಕ್ಷದ ಮತ ಬ್ಯಾಂಕ್ ಆಗಿರುವ ಜಾತಿಯ ವ್ಯಕ್ತಿಗಳಿಗೆ ಸಣ್ಣಪುಟ್ಟ ಪಕ್ಷಗಳ ಟಿಕೆಟ್ ಕೊಡಿಸಿದ್ದಾರೆ.  ಎದುರಾಳಿ ಮತ ಬ್ಯಾಂಕ್‌ನಿಂದ ಇಂತಹ ಅಭ್ಯರ್ಥಿಗಳು ಕನಿಷ್ಠ 500-1000 ಮತ ಪಡೆದರೂ ತಮಗೆ ಅನುಕೂಲವಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಬಹುತೇಕ ಕಡೆಗಳಲ್ಲಿ ಹೀಗೇ ಆಗಿದೆ' ಎನ್ನುತ್ತಾರೆ ಅವರು.

ಬಲು ಬೇಡಿಕೆ
`ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಕೆಲವರು ವ್ಯವಹಾರಕ್ಕೆ ಯತ್ನಿಸುತ್ತಿದ್ದಾರೆ. ಇಂತಿಷ್ಟು ಕೊಟ್ಟರೆ ನಾಮಪತ್ರ ವಾಪಸ್ಸು ಪಡೆಯುತ್ತೇವೆ ಎಂಬ ಸಂದೇಶ ಕಳಿಸುತ್ತಿದ್ದಾರೆ.

ಒಂದು ಮತವೂ ನಮಗೆ ಮಹತ್ವದ್ದಾಗಿರುವುದರಿಂದ ಕೆಲ ಅಭ್ಯರ್ಥಿಗಳನ್ನು ಹಿಂದೆ ಸರಿಸಲು ನಾವೇ ಪ್ರಯತ್ನಿಸುತ್ತಿದ್ದೇವೆ. ಅವರ ಬೇಡಿಕೆ ಕೇಳಿದರೆ ಚುನಾವಣೆ ಕಣದಿಂದ ನಾವೇ ಹಿಂದೆ ಸರಿಯಬೇಕು ಎನ್ನಿಸುತ್ತಿದೆ' ಎಂದು ಮೂವರು ಅಭ್ಯರ್ಥಿಗಳು ಖಾಸಗಿಯಾಗಿ ಹೇಳಿದರು.

ಎಲ್ಲ ಪಕ್ಷಗಳೂ ಕಣಕ್ಕೆ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್‌ಪಿ, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳ ಜೊತೆಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಹಿಂದೂಸ್ತಾನ ಜನತಾ ಪಾರ್ಟಿ, ಜನತಾ ದಳ ಸಂಯುಕ್ತ, ಕನ್ನಡ ಮಕ್ಕಳ ಪಕ್ಷ, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ, ಡಾ.ಬಿ.ಆರ್. ಅಂಬೇಡ್ಕರ ಜನತಾ ಪಾರ್ಟಿ, ಕರ್ನಾಟಕ ರಾಜ್ಯ ರೈತ ಸಂಘದ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT