ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ನಾಯಕಿ ಪಾತ್ರಕ್ಕಷ್ಟೇ ಜೈ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ಚಿಗರೆ ಕಂಗಳ ಹುಡುಗಿ ಈ ತೇಜಸ್ವಿನಿ. ಅಭಿನಯಿಸಬಲ್ಲೆ ಎಂಬುದನ್ನು ಮೊದಲ ಚಿತ್ರದಲ್ಲೇ ಸಾಬೀತುಪಡಿಸಿದ ಕಲಾವಿದೆ.

ಈ ಬಾರಿ ತೇಜಸ್ವಿನಿ ಅಭಿನಯದ `ತರಂಗಿಣಿ~ ಚಿತ್ರಕ್ಕೆ ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ ವಿಭಾಗದಲ್ಲಿ ರಾಜ್ಯಪ್ರಶಸ್ತಿ ಸಂದಿದೆ. ಅದರಿಂದ ಅವರು ಖುಷಿಯಾಗಿದ್ದಾರೆ. ಹೆಚ್ಚು ಹೆಚ್ಚು ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸುವುದು ತಮಗಿಷ್ಟ ಎಂದು ಹೇಳಿಕೊಂಡು ನಗೆ ಬೀರುತ್ತಿದ್ದಾರೆ. ಜೊತೆಗೆ ನಿರೀಕ್ಷಿಸಿದ ಪಾತ್ರಗಳು ಸಿಗುತ್ತಿಲ್ಲ ಎಂಬ ಬೇಸರವೂ ಅವರಿಗಿದೆ.

ಸಾಹಸ ಕಲಾವಿದ ಪ್ರಕಾಶ್ ಅವರ ಮಗಳಾದ ತೇಜಸ್ವಿನಿಗೆ ಚಿತ್ರರಂಗದ ಬಗ್ಗೆ ಸಹಜವಾಗಿಯೇ ಆಕರ್ಷಣೆ ಬೆಳೆಯಿತು. ಆ ಪ್ರಯತ್ನದಲ್ಲಿ `ಮಸಣದ ಮಕ್ಕಳು~ ಎಂಬ ಕಲಾತ್ಮಕ ಚಿತ್ರದಲ್ಲಿ ನಟಿಸುವ ಅವಕಾಶ ಬಂತು. ಮೊದಲ ಚಿತ್ರದ ನಟನೆಗೆ ಪ್ರಶಸ್ತಿ ಮತ್ತು ಮೆಚ್ಚುಗೆಗಳು ಸಿಕ್ಕವು. ಅದರಿಂದ ಅವರ ಆತ್ಮವಿಶ್ವಾಸ ಇಮ್ಮಡಿಯಾಯ್ತು. ನಂತರ ವ್ಯಾಪಾರಿ ಚಿತ್ರಗಳತ್ತ ವಾಲಿದ ಅವರು `ಮಾತಾಡ್ ಮಾತಾಡ್ ಮಲ್ಲಿಗೆ~ ಚಿತ್ರದಲ್ಲಿ ವಿಷ್ಣುವರ್ಧನ್ ಪುತ್ರಿಯಾಗಿ ಅಭಿನಯಿಸಿದರು. `ಗಜ~ ಮತ್ತು `ಅರಮನೆ~ ಚಿತ್ರಗಳಲ್ಲಿ ತಂಗಿಯಾಗಿ ಕಾಣಿಸಿಕೊಂಡರು. ಆದರೆ, ಅವೆಲ್ಲಕ್ಕಿಂತ ಮೊದಲು ಅವರು ಎರಡನೇ ನಾಯಕಿಯಾಗಿ ನಟಿಸಿದ್ದ `ಸವಿ ಸವಿ ನೆನಪು~ ಬಿಡುಗಡೆಯಾಯಿತು.

`ಆರಂಭದಲ್ಲಿ ನಾನು ತುಂಬಾ ಸಣ್ಣಗಿದ್ದೆ. ಕಣ್ಣಿನಲ್ಲಿ ಮುಗ್ಧತೆ ಇತ್ತು. ನಾಯಕಿ ಪಾತ್ರಕ್ಕೆ ಹೊಂದಿಕೆಯಾಗಲ್ಲ ಎನ್ನುತ್ತಿದ್ದರು. ಅದರಿಂದ ತಂಗಿ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೆ. ಇದೀಗ ದೇಹದ ತೂಕ ಹೆಚ್ಚಿಸಿಕೊಂಡಿದ್ದೇನೆ. ಮುಖದಲ್ಲಿ ಪ್ರಬುದ್ಧತೆ ಬಂದಿದೆ. ಆದ್ದರಿಂದ ನಾಯಕಿ ಪಾತ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ~ ಎಂದು ನುಡಿಯುತ್ತಾರೆ ತೇಜಸ್ವಿನಿ.

ಇದೀಗ ಅವರು ನಾಯಕಿಯಾಗಿರುವ `ನಂದಗೋಕುಲ~ ಮತ್ತು `ಕಲ್ಯಾಣಮಸ್ತು~ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ನಡುವೆ ಅವರು ತೆಲುಗು ಚಿತ್ರಗಳಿಂದ ಬರುತ್ತಿರುವ ಅವಕಾಶಗಳತ್ತಲೂ ಕಣ್ಣು ಹಾಯಿಸುತ್ತಿದ್ದಾರೆ.

`ನಾಯಕಿಗೆ ಪ್ರಾಮುಖ್ಯತೆ ಇರಬೇಕು ಮತ್ತು ಜನ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಂಥ ಪಾತ್ರ ನನಗೆ ಬೇಕು~ ಎನ್ನುವ ತೇಜಸ್ವಿನಿ ಅಭಿನಯಿಸಿರುವ ಕನ್ನಡ ಚಿತ್ರಗಳ ಸಂಖ್ಯೆ ಹತ್ತನ್ನು ದಾಟುತ್ತದೆ. `ಗ್ಲಾಮರ್ ಇದ್ದು ನಟನೆಗೆ ಅವಕಾಶ ಇರುವಂಥ ಪಾತ್ರಗಳ ಸೃಷ್ಟಿ ಕನ್ನಡದಲ್ಲಿ ಆಗುತ್ತಿಲ್ಲ. ಉದಾಹರಣೆಗೆ `ದಿ ಡರ್ಟಿ ಪಿಕ್ಚರ್~ನಲ್ಲಿ ವಿದ್ಯಾ ಬಾಲನ್ ನಟಿಸಿದ ಪಾತ್ರ. ಕನ್ನಡದಲ್ಲಿ ಅಂಥ ಪ್ರಯೋಗ ಮಾಡುವವರು ಕಡಿಮೆ. ವಾಣಿಜ್ಯ ಮನಸ್ಥಿತಿಯವರೇ ಜಾಸ್ತಿ~ ಎಂದು ನುಡಿಯುವ ಈ ಜಾಣೆಗೆ ಎಂಥದ್ದೇ ಪಾತ್ರವಾದರೂ ಅದಕ್ಕೆ ನೂರಕ್ಕೆ ನೂರರಷ್ಟು ನ್ಯಾಯ ಸಲ್ಲಿಸುವ ಆತ್ಮವಿಶ್ವಾಸ ಇದೆಯಂತೆ.

`ನನ್ನದು ಅತಿಯಾದ ಆತ್ಮವಿಶ್ವಾಸವಲ್ಲ. ಆದರೆ ನಟಿಯಾಗಿ ಎಂಥ ಸವಾಲಿನ ಪಾತ್ರವನ್ನಾದರೂ ನಿಭಾಯಿಸಬಲ್ಲೆ ಎಂಬ ನಂಬಿಕೆ ಇದೆ~ ಎಂದು ಉಲಿಯುತ್ತಾರೆ ತೇಜಸ್ವಿನಿ.

`ಅಪ್ಪನಿಗೆ ಉದ್ಯಮ ಗೊತ್ತು. ಪ್ರಕಾಶನ ಮಗಳು ಎಂದು ಚಿತ್ರರಂಗದ ಜನ ಗುರುತಿಸುತ್ತಾರೆ. ನನ್ನ ಪಾತ್ರದ ಬಗ್ಗೆ ಅಪ್ಪ-ಅಮ್ಮ, ನಾನು ಮೂವರೂ ಚರ್ಚಿಸಿ ನಿರ್ಧರಿಸುತ್ತೇವೆ. ನನಗೆ ಹೊಂದಿಕೆಯಾಗುವ ಯಾವುದೇ ಪಾತ್ರವನ್ನೂ ಬಿಡುವುದಿಲ್ಲ~ ಎನ್ನುವ ಅವರಿಗೆ ವಿಭಿನ್ನ ಪಾತ್ರಗಳಲ್ಲಿ ಮಿಂಚುವಾಸೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT