ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಮುಂದೆ ಪುರಸಭೆಯಲ್ಲೇ ನೋಂದಣಿ

ಕೃಷಿಯೇತರ ಭೂಮಿ, ನಿವೇಶನಗಳ ಖಾತಾ ನೋಂದಣಿ
Last Updated 18 ಜುಲೈ 2013, 9:52 IST
ಅಕ್ಷರ ಗಾತ್ರ

ಪುತ್ತೂರು: ಪುರಸಭಾ ವ್ಯಾಪ್ತಿಯಲ್ಲಿ ಕೃಷಿಯೇತರ ಭೂಮಿ, ನಿವೇಶನಗಳ ಖಾತಾ ನೋಂದಣಿ ಇನ್ನು ಮುಂದೆ ಪುರಸಭೆಯ  ಮೂಲಕ ನಡೆಯಲಿದ್ದು ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸುವಂತಿಲ್ಲ ಎಂದು ಪುರಸಭಾ ಆಡಳಿತಾಧಿಕಾರಿ ಆಗಿರುವ ಸಹಾಯಕ ಕಮಿಷನರ್ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈತನಕ  ಪುರಸಭಾ ವ್ಯಾಪ್ತಿಯಲ್ಲಿ ಕೃಷೀಯೇತರ ಭೂಮಿಗಳ ಖಾತಾ ನೋಂದಣಿ, ಆರ್‌ಟಿಸಿ ಪ್ರಕ್ರಿಯೆ ಕಂದಾಯ ಇಲಾಖೆಯಲ್ಲಿ ನಡೆಯುತ್ತಿತ್ತು. ಇನ್ನು ಮುಂದೆ ನಿವೇಶನಕ್ಕೆ, ಕೃಷೀಯೇತರ ಭೂಮಿ ಪುರಸಭೆಯಲ್ಲಿ ನೋಂದಣಿ ಮಾಡಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ದೃಢೀಕರಿಸಿ ನೀಡಬೇಕಾಗಿದೆ. ಖಾಲಿ ನಿವೇಶನಕ್ಕೆ ತೆರಿಗೆ ಇರುವುದಿಲ್ಲ. ಕಟ್ಟಡ ಕಟ್ಟುವಾಗ ತೆರಿಗೆ ಕಟ್ಟುವಂತದ್ದು ಇತ್ಯಾದಿ ಕೆಲವೊಂದು ಸುಲಭ ನಿಯಮಗಳನ್ನು ಅಳವಡಿಸಲಾಗಿದೆ ಎಂದರು.

ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಹಂತದಲ್ಲಿ ಭೂಪರಿವರ್ತನೆ ವಿಚಾರದಲ್ಲೂ ಕಟ್ಟುನಿಟ್ಟಿನ ನಿಯಮವನ್ನು ಪಾಲಿಸಲಾಗುವುದು. ಭೂಪರಿವರ್ತನೆ ಮಾಡಿದಂತಹ ಜಾಗದ ಬಡಾವಣೆಗೆ ನಗರ ಯೋಜನಾ ಪ್ರಾಧಿಕಾರದಿಂದ ಮಂಜೂರಾತಿ ಪಡೆದು ಮುಂದುವರಿಯಬೇಕು. ಬಡಾವಣೆ ನಿರ್ಮಿಸಲು 45 ಶೇಕಡಾ ರಸ್ತೆ ಉದ್ಯಾನವನ, ಸಾರ್ವಜನಿಕ ಉದ್ದೇಶಕ್ಕೆ ಸ್ಥಳ ಚರಂಡಿ ಇತ್ಯಾದಿ ಇರಬೇಕು.

55 ಶೇಕಡಾ ನಿವೇಶನದಲ್ಲಿ ಮೊದಲಾಗಿ ಶೇಕಡಾ 60ನ್ನು ಮಾರಾಟ ಮಾಡಬಹುದು. 2 ವರ್ಷದ ಒಳಗೆ ಬಡಾವಣೆ ಅಭಿವೃದ್ಧಿ ಪಡಿಸಿದ ಬಳಿಕ ಉಳಿದ 40 ಶೇಕಡವನ್ನು ಮಾರಾಟ ಮಾಡಲು ಅವಕಾಶವಿದೆ. ನಗರ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೆ ಯಾವುದೇ ಬಡಾವಣೆ ಮಾಡುವಂತಿಲ್ಲ ಎಂದು ಆಡಳಿತಾಧಿಕಾರಿಯವರು ಸ್ಪಷ್ಟವಾಗಿ ಸೂಚಿಸಿದ್ದಾರೆ.

ಕಾನೂನು ಅನುಷ್ಠಾನಗೊಳ್ಳದೆ ಕೆಲವೊಂದು ಬಡಾವಣೆಗಳು ನಿರ್ಮಾಣಗೊಂಡಿದೆ. ಅಧಿಕೃತವಾಗಿ ಪುತ್ತೂರಿನಲ್ಲಿ 2 ಬಡಾವಣೆ ಮಾತ್ರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿದೆ. ಉಳಿದೆಡೆ ಅಕ್ರಮ ಕಂಡುಬಂದಲ್ಲಿ ಭೂ ಪರಿವರ್ತನೆ ಆಗಿರುವುದನ್ನು ರದ್ದತಿಗೆ ಅಥವಾ ಭೂ ಪರಿವರ್ತನೆ ಆದೇಶವನ್ನು ಹಿಂಪಡೆಯುವುದಾಗಿ ತಿಳಿಸಿದರು.

ರಸ್ತೆ ವಿಸ್ತರಣೆ ಖಚಿತ:  ಕೋರ್ಟ್ ರಸ್ತೆ ಸೇರಿದಂತೆ ಇತರ ರಸ್ತೆಗಳನ್ನು  6 ಮೀಟರ್ ಅಗಲ ಮಾಡುವ ಸಲುವಾಗಿ  ಸೆಪ್ಟೆಂಬರ್ ಒಳಗೆ ಕಟ್ಟಡ ತೆರವುಗೊಳಿಸಲು ಸೂಚಿಸಲಾಗಿದೆ. ಬಳಿಕ ನೇರವಾಗಿ ಪುರಸಭೆ ವತಿಯಿಂದ ಕಟ್ಟಡ ತೆರವುಗೊಳಿಸುವುದು  ಖಚಿತ ಎಂದು ತಿಳಿಸಿದ ಅವರು ಪುರಸಭಾ ವ್ಯಾಪ್ತಿಯ ಅಭಿವೃದ್ಧಿಯ ಮಾಸ್ಟರ್ ಪ್ಲಾನ್‌ನಂತೆ ಕಾರ್ಯಾಚರಿಸಲಾಗುವುದು ಎಂದರು. ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಯೋಜನಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಶೇಖರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT