ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ವಿಳಂಬ ಬೇಡ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನ್ಯಾ. ಬನ್ನೂರಮಠ ಅವರ ನಿರಾಕರಣೆ ಮತ್ತು ರಾಜ್ಯಪಾಲರು, ಅವರ ನೇಮಕ ಪ್ರಸ್ತಾಪದ ಕಡತವನ್ನು ಸರ್ಕಾರಕ್ಕೆ ಹಿಂತಿರುಗಿಸಿದ ಮೇಲೆ ಕರ್ನಾಟಕದ ಲೋಕಾಯುಕ್ತರ ನೇಮಕ ಪ್ರಕ್ರಿಯೆಯನ್ನು ಹೊಸದಾಗಿ ಆರಂಭಿಸಲು ಅವಕಾಶ ಮುಕ್ತವಾಗಿದೆ.
 
ರಾಜ್ಯ ಸರ್ಕಾರ ಇನ್ನು ತಡಮಾಡದೆ ನೂತನ ಲೋಕಾಯುಕ್ತರ ನೇಮಕ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ವಿಧಾನಮಂಡಲ ವಿರೋಧ ಪಕ್ಷಗಳ ನಾಯಕರೊಂದಿಗೆ ಸಮಾಲೋಚಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಬೇಕು.
 
ಅರ್ಹ ಹೆಸರುಗಳನ್ನು ಕಳಿಸಿದರೆ ತಕ್ಷಣವೇ ಲೋಕಾಯುಕ್ತರ ನೇಮಕ ಪ್ರಸ್ತಾವಕ್ಕೆ ಅಂಕಿತ ಹಾಕುವುದಾಗಿ ರಾಜ್ಯಪಾಲರು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಆಡಳಿತಾತ್ಮಕ ವಿಳಂಬದ ಸಾಧ್ಯತೆ ಇಲ್ಲ.
 
ರಾಜ್ಯದ ನೈಸರ್ಗಿಕ ಸಂಪತ್ತನ್ನು ಮನಸೋ ಇಚ್ಛೆ ಲೂಟಿ ಮಾಡಿದ ಭ್ರಷ್ಟಾಚಾರದ ಪ್ರಕರಣಗಳು ವಿಚಾರಣೆಯ ಪ್ರಮುಖ ಘಟ್ಟದಲ್ಲಿ ನಿಂತಿರುವುದರಿಂದ ಲೋಕಾಯುಕ್ತರ ನೇಮಕ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ತುರ್ತಿನದಾಗಿದೆ.

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಹಗರಣಗಳ ಬಗ್ಗೆ ಜನಾಭಿಪ್ರಾಯ ಮೂಡಿಸಲು ಯತ್ನಿಸುತ್ತಿರುವ ಬಿಜೆಪಿ ನಾಯಕರ ನೈತಿಕ ಸ್ಥೈರ್ಯ ಹೆಚ್ಚಿಸುವುದಕ್ಕಾದರೂ ಕರ್ನಾಟಕದಲ್ಲಿ ಲೋಕಾಯುಕ್ತರ ನೇಮಕವನ್ನು ಬಿಜೆಪಿ ಸರ್ಕಾರ ತುರ್ತಾಗಿ ಮಾಡಬೇಕಾಗಿದೆ.
 
ಆದರೆ, ಭ್ರಷ್ಟಾಚಾರ ಕುರಿತಂತೆ ಇದುವರೆಗೆ ಇಬ್ಬಂದಿ ಧೋರಣೆಯನ್ನೇ ಪ್ರದರ್ಶಿಸುತ್ತ ಬಂದಿರುವ ಬಿಜೆಪಿ, ರಾಜ್ಯದ ಭ್ರಷ್ಟಾಚಾರ ವಿರೋಧಿ ತನಿಖಾ ಸಂಸ್ಥೆಯನ್ನು ಬಲಪಡಿಸುವುದಕ್ಕೆ ಮುಂದಾಗುವುದೇ ಎಂಬುದು ಈಗಿನ ಪ್ರಶ್ನೆ.

 ಏಕೆಂದರೆ, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರ ಹಗರಣಗಳನ್ನು ಸೃಷ್ಟಿಸಿದ ಕುಖ್ಯಾತಿ ಬಿಜೆಪಿ ಸರ್ಕಾರದ್ದಾಗಿದೆ. ಹಲವು ಸಚಿವರು ಭ್ರಷ್ಟಾಚಾರ ಆರೋಪಗಳಿಗೆ ಗುರಿಯಾಗಿ ಅಧಿಕಾರ ತ್ಯಜಿಸಿದ್ದಾರೆ.

ಕೆಲವರು ಜೈಲಿಗೂ ಹೋಗಿದ್ದಾರೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತಾಗಿ ತನಿಖೆ ನಡೆಸಿದ ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಅವರ ವರದಿಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದ ಕಾರಣದಿಂದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ತ್ಯಜಿಸಬೇಕಾಯಿತು. ಅವರಲ್ಲದೆ, ಬಿಜೆಪಿ ಸರ್ಕಾರದಲ್ಲಿನ ಕೆಲವು ಸಚಿವರ ವಿರುದ್ಧ ಲೋಕಾಯುಕ್ತ ತನಿಖೆಗಳು ನಿರ್ಣಾಯಕ ಹಂತದಲ್ಲಿವೆ.
 
ಇವನ್ನೆಲ್ಲ ದುರ್ಬಲಗೊಳಿಸಿ ಪ್ರಭಾವಿ ಆರೋಪಿಗಳನ್ನು ರಕ್ಷಿಸುವ ದುರುದ್ದೇಶದ ಕಾರಣದಿಂದ ಲೋಕಾಯುಕ್ತ ನೇಮಕ ವಿಳಂಬವಾಗಿದೆ. ಪ್ರಭಾವಿಗಳು ಭಾಗಿಯಾದ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದ ದಕ್ಷ ಅಧಿಕಾರಿಗಳನ್ನು ಲೋಕಾಯುಕ್ತದಿಂದ ತೆಗೆದಿದೆ.
 
ಲೋಕಾಯುಕ್ತದಿಂದಲೇ ಕ್ರಮಕ್ಕೆ ಶಿಫಾರಸು ಮಾಡಲಾದ ಕಳಂಕಿತ ಅಧಿಕಾರಿಗಳನ್ನು ಲೋಕಾಯುಕ್ತದ ಆಯಕಟ್ಟಿನ ಹುದ್ದೆಗಳಿಗೆ ನೇಮಿಸಿದೆ. ಇವೆಲ್ಲ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರ.
 
ಇದು ರಾಜ್ಯದ ಜನತೆ ಬಿಜೆಪಿ ಸರ್ಕಾರದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ದ್ರೋಹ. ಭ್ರಷ್ಟಾಚಾರದ ವಿರುದ್ಧ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಲೋಕಾಯುಕ್ತಕ್ಕೆ ನ್ಯಾಯನಿಷ್ಠುರ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಮುಖ್ಯಮಂತ್ರಿ ಸದಾನಂದಗೌಡರು ಸರ್ಕಾರಕ್ಕೆ ಅಂಟಿದ ಭ್ರಷ್ಟತೆಯ ಕಳಂಕವನ್ನು ತೊಡೆಯಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT