ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ವಿಳಂಬ ಸಲ್ಲದು

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಹೋರಾಟ ದಿನೇ ದಿನೇ ವ್ಯಾಪಕವಾಗುತ್ತಿದ್ದರೂ, ಕೇಂದ್ರ ಸರ್ಕಾರ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾಗದೆ ಇರುವುದು ದುರದೃಷ್ಟಕರ.

ಪ್ರತ್ಯೇಕ ರಾಜ್ಯ ರಚನೆಗೆ ಬೆಂಬಲಿಸಿ ಆ ಭಾಗದ ಆಳುವ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಮತ್ತು ಸಂಸತ್ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದರೂ ಯುಪಿಎ ಸರ್ಕಾರ ತೆಲಂಗಾಣ ಭಾಗದ ಜನರ ಬೇಡಿಕೆ ಬಗೆಗೆ ನಿರ್ಲಕ್ಷ್ಯ ತೋರುತ್ತಿರುವುದು ಬೇಜವಾಬ್ದಾರಿಯ ಪರಮಾವಧಿ.

ಜನಪ್ರತಿನಿಧಿಗಳ ಸಾಮೂಹಿಕ ರಾಜೀನಾಮೆಯು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರವಾದರೂ, ಪ್ರತ್ಯೇಕ ರಾಜ್ಯ ರಚನೆಗೆ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ವಿರೋಧಿಸುತ್ತಿರುವುದನ್ನು ಗಂಭೀರವಾಗಿ ಪರಿಶೀಲಿಸಿ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಿದೆ.
 
ತೆಲಂಗಾಣ ಹೋರಾಟದಿಂದಾಗಿ ರೈಲು ಮತ್ತು ಬಸ್ ಸಂಚಾರ ಸ್ತಬ್ದಗೊಂಡಿದೆ. ಇದರ ಬಿಸಿ ಆಂಧ್ರ ಪ್ರದೇಶ ಮಾತ್ರವಲ್ಲದೆ ನೆರೆಹೊರೆ ರಾಜ್ಯಗಳ ದೈನಂದಿನ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಕಳೆದ ಮೂರು ದಿನಗಳ ಕಾಲ ರೈಲು ಸಂಚಾರ ನಿಂತಿದ್ದ ಕಾರಣ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸಿಂಗರೇಣಿಯಿಂದ ಕಲ್ಲಿದ್ದಲು ಪೂರೈಕೆ ಆಗದೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿನ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ.
ಇದರಿಂದಾಗಿ ಈ ಎರಡೂ ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ.

ಕಳೆದ ಯುಪಿಎ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯ ರಚನೆಯೂ ಸೇರಿತ್ತು. ಆದರೂ, ಆ ಕಾರ್ಯಕ್ರಮವನ್ನು ಜಾರಿಗೆ ತರಲಾಗದೆ ಮೀನ ಮೇಷ ಎಣಿಸಿ ತೆಲಂಗಾಣ ಭಾಗದ ಜನರನ್ನು ವಂಚಿಸಿದ್ದು ಅಕ್ಷಮ್ಯ.

ತೆಲಂಗಾಣ ರಾಜ್ಯ ಬೇಡಿಕೆಗೆ ಪರಿಹಾರ ಕಂಡು ಹಿಡಿಯಲು ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಆಯೋಗವನ್ನು ರಚಿಸಿತು. ಆದರೆ ಈ ಆಯೋಗವೂ ಆರು ಸಲಹೆಗಳನ್ನು ನೀಡುವ ಮೂಲಕ ವಿವಾದವನ್ನು ಬಗೆಹರಿಸುವ ಹೊಣೆಯನ್ನು ರಾಜಕಾರಣಿಗಳ ಹೆಗಲಿಗೇ ಹಾಕಿತು.

ಈ ಆಯೋಗದ ವರದಿಯ ನಂತರವೂ ಕೇಂದ್ರದಿಂದ ಯಾವುದೇ ಪ್ರಗತಿ ಕಂಡುಬರದೇ ಹೋದುದು ಸಮಸ್ಯೆ ಪದೇ ಪದೇ ಬಿಗಡಾಯಿಸಲು ಕಾರಣವಾಗಿದೆ.

ತೆಲಂಗಾಣ ರಾಜ್ಯ ರಚನೆಗೆ ಕಾಂಗ್ರೆಸ್ಸಿನ ಶಾಸಕರು ಮತ್ತು ಸಂಸದರ ಬೆಂಬಲ ಇರಲಾರದು ಎಂದು ಕೇಂದ್ರ ಸರ್ಕಾರ ಭಾವಿಸಿ ಈ ಸಮಸ್ಯೆಯನ್ನು ಮುಂದೂಡುತ್ತಲೇ ಇರುವುದು ವಿವೇಕವಲ್ಲ. ಆದರೆ ಪರಿಸ್ಥಿತಿ ಬದಲಾಗಿದೆ.

ತೆಲಂಗಾಣ ಭಾಗದ ಕಾಂಗ್ರೆಸ್ ಶಾಸಕರೂ ಈಗ ಬೀದಿಗಿಳಿದಿದ್ದಾರೆ. ಚಳವಳಿ ಉಲ್ಬಣಗೊಂಡಿದೆ. ರಾಜ್ಯದಲ್ಲಿ ಕಾನೂನು ಪರಿಸ್ಥಿತಿ ಹದಗೆಡುತ್ತಿದೆ. ಶಾಲಾ ಕಾಲೇಜುಗಳು ಬಂದ್ ಆಗಿವೆ.

ಸರ್ಕಾರಿ ಕಚೇರಿಗಳೂ ಕೆಲಸ ಮಾಡದಂಥ ಪರಿಸ್ಥಿತಿ ಉಂಟಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ ವಿವಾದವನ್ನು ಮುಂದೂಡುವುದರಲ್ಲಿ ಅರ್ಥವಿಲ್ಲ. ಪ್ರತ್ಯೇಕ ರಾಜ್ಯ ರಚನೆಗೆ ಕಾಲ ಪಕ್ವವಾಗಿದೆ.

ಕೇಂದ್ರ ಸರ್ಕಾರ ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ತೆಲಂಗಾಣ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT