ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಹೋಟೆಲ್ ತಿಂಡಿಗಳ ದರ ಏರಿಕೆ ಬಿಸಿ

Last Updated 26 ಸೆಪ್ಟೆಂಬರ್ 2011, 5:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೆಟ್ರೋಲ್, ದಿನಸಿ, ವಿದ್ಯುತ್ ಹೀಗೆ ದಿನೇ ದಿನೇ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದ ಕಂಗೆಟ್ಟಿರುವ ಅವಳಿನಗರದ ಜನತೆಗೆ, ಇದೀಗ ಹೋಟೆಲ್ ಖಾದ್ಯಗಳ ದರ ಏರಿಕೆಯ ಬಿಸಿಯೂ ಎದುರಾಗಿದೆ.

ಇದೇ 28ರಿಂದ ಹುಬ್ಬಳ್ಳಿ ನಗರದ ವ್ಯಾಪ್ತಿಯಲ್ಲಿ ತಿಂಡಿ ಹಾಗೂ ಊಟಕ್ಕೆ ಎರಡು ರೂಪಾಯಿ ಹಾಗೂ ಚಹಾ, ಕಾಫಿ, ಪಾನೀಯಗಳಿಗೆ ಒಂದು ರೂಪಾಯಿ ಹೆಚ್ಚಿಸಲು ಹುಬ್ಬಳ್ಳಿ ಹೋಟೆಲ್ ಸಂಘ ನಿರ್ಧರಿಸಿದೆ. ಧಾರವಾಡ ನಗರದ ವ್ಯಾಪ್ತಿಯಲ್ಲಿ ಬೆಲೆ ಹೆಚ್ಚಳ ಕುರಿತಾದ ಅಂತಿಮ ನಿರ್ಧಾರವನ್ನು ಅಲ್ಲಿನ ಹೋಟೆಲ್ ಮಾಲೀಕರ ಸಂಘ ಅಕ್ಟೋಬರ್ 5ರಂದು ಕರೆದಿರುವ ಸಭೆಯಲ್ಲಿ ಕೈಗೊಳ್ಳಲಿದೆ. ಸದ್ಯಕ್ಕೆ ಒಂದು ವಾರದವರೆಗೆ ಧಾರವಾಡ ಜನತೆಗೆ ಬೆಲೆ ಏರಿಕೆಯ ಬಿಸಿ ತಪ್ಪಲಿದೆ.

ಹಾಲಿ ಏಳು ರೂಪಾಯಿ ಇರುವ ಚಹಾ ಬೆಲೆ ಎಂಟು ರೂಪಾಯಿ ಆಗಲಿದೆ. 14 ರೂಪಾಯಿ ಇರುವ ಎರಡು ಇಡ್ಲಿ ಬೆಲೆ ರೂ. 16ಕ್ಕೆ ಹೆಚ್ಚಳವಾಗಲಿದೆ. ಕಳೆದ ವರ್ಷ ಇದೇ ರೀತಿ ಬೆಲೆ ಹೆಚ್ಚಿಸಿದ್ದ ಹುಬ್ಬಳ್ಳಿ ಹೋಟೆಲ್ ಸಂಘ ಈಗ ಮತ್ತೊಮ್ಮೆ ಗ್ರಾಹಕರಿಗೆ ಹೆಚ್ಚಿನ ಬೆಲೆ ನೀಡುವ ಅನಿವಾರ್ಯತೆ ಸೃಷ್ಟಿಸಿದೆ.

ಹುಬ್ಬಳ್ಳಿಯಲ್ಲಿ 700ಕ್ಕೂ ಹೆಚ್ಚು ಹೋಟೆಲ್‌ಗಳಿದ್ದು, ಇಲ್ಲಿನ ಹೋಟೆಲ್ ಸಂಘದ ವ್ಯಾಪ್ತಿಯಲ್ಲಿ 400 ಹೋಟೆಲ್‌ಗಳು ಹೆಸರು ನೋಂದಾಯಿಸಿವೆ. ಸಂಘದ ನಿರ್ಧಾರದಂತೆ ನೋಂದಾಯಿತ ಹೋಟೆಲ್‌ಗಳಲ್ಲಿ ಬೆಲೆ ಹೆಚ್ಚಳವಾಗುತ್ತಿದ್ದಂತೆಯೇ ಇತರೆಡೆಯೂ ಬೆಲೆ ಹೆಚ್ಚಲಿದೆ.

`ದಿನಸಿ, ವಿದ್ಯುತ್ ದರ ಹೆಚ್ಚಿದೆ. ಕಾರ್ಮಿಕರ ಕೊರತೆ ಎದುರಾಗಿದೆ. ಇಂಧನ ಬೆಲೆ ಹೆಚ್ಚಳದಿಂದ ಸಾಗಣೆಯ ವೆಚ್ಚವೂ ಗಣನೀಯವಾಗಿ ಹೆಚ್ಚಿದೆ. ಇನ್ನೊಂದೆಡೆ ಅನಧಿಕೃತ ಹೋಟೆಲ್‌ಗಳ ಸ್ಪರ್ಧೆ ನಿಭಾಯಿಸಿ ಸರ್ಕಾರಕ್ಕೆ ತೆರಿಗೆ, ಹೆಚ್ಚುವರಿ ದರ ಪಾವತಿಸಬೇಕಿದೆ. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ಆಗ ಹೋಟೆಲ್‌ಗಳ ನಿರ್ವಹಣೆಯೂ ಹೆಚ್ಚಳವಾಗಲಿದೆ.
 
ಇದರಿಂದ ಮಧ್ಯಮ ವರ್ಗದ ಹೋಟೆಲ್ ಉದ್ಯಮ ಸಂಕಷ್ಟಕ್ಕೀಡಾಗಿದ್ದು, ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದರಿಂದ ದರ ಹೆಚ್ಚಳ ಅನಿವಾರ್ಯ~ ಎಂದು ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಹರಿದಾಸ ಶೆಟ್ಟಿ ಸಂಘದ ನಿರ್ಧಾರ ಸಮರ್ಥಿಸಿಕೊಳ್ಳುತ್ತಾರೆ.

`ಕಳೆದ ಆರು ತಿಂಗಳಲ್ಲಿ ಹಾಲಿನ ದರ ಲೀಟರ್‌ಗೆ ಆರು ರೂಪಾಯಿ ಹೆಚ್ಚಳವಾಗಿದೆ. ನಾಲ್ಕು ತಿಂಗಳ ಹಿಂದೆ ಕಡಲೆ ಹಿಟ್ಟು ಕ್ವಿಂಟಲ್‌ಗೆ ರೂ. 1800 ಇದ್ದದ್ದು, ಈಗ ಮೂರು ಸಾವಿರ ರೂಪಾಯಿ ಹೆಚ್ಚಳಗೊಂಡಿದೆ. ಕಿಲೋಗೆ 22 ರೂಪಾಯಿ ಇದ್ದ ಅಕ್ಕಿಯ ದರ ಈಗ ರೂ. 30ಕ್ಕೆ ಹೆಚ್ಚಳಗೊಂಡಿದೆ. ಈಗಾಗಲೇ ಬೆಲೆ ಹೆಚ್ಚಿಸಬೇಕಿತ್ತು. ಪಿತೃಪಕ್ಷ ಇದ್ದ ಕಾರಣ ಒಳ್ಳೆಯ ದಿನಕ್ಕಾಗಿ ಕಾದಿದ್ದೆವು. ಇದೇ 27ಕ್ಕೆ ಪಿತೃಪಕ್ಷ ಕೊನೆಗೊಳ್ಳಲಿದೆ. 28ರಿಂದ ಬೆಲೆ ಹೆಚ್ಚಿಸಲು ತೀರ್ಮಾನಿಸಲಾಗಿದೆ~ ಎಂದು ಹರಿದಾಸ ಶೆಟ್ಟಿ ಹೇಳುತ್ತಾರೆ.

`ಧಾರವಾಡ ನಗರದ ವ್ಯಾಪ್ತಿಯಲ್ಲಿ ಹೋಟೆಲ್ ಸಂಘದ ಗಮನಕ್ಕೆ ಬಾರದೆ ಒಂದೂವರೆ ತಿಂಗಳ ಹಿಂದೆ ಕೆಲವು ಹೋಟೆಲ್‌ಗಳು ತಿಂಡಿಗಳ ಬೆಲೆ ಹೆಚ್ಚಿಸಿದ್ದು, ಆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿ ಹೋಟೆಲ್ ತಿಂಡಿಗಳ ಬೆಲೆಯಲ್ಲಿ ಏಕರೂಪದ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ~ ಎನ್ನುತ್ತಾರೆ ಧಾರವಾಡ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ.

ಇನ್ನು ಬೆಲೆ ಹೆಚ್ಚಳಗೊಳಿಸುವ ಹೋಟೆಲ್ ಸಂಘದ ನಿರ್ಧಾರವನ್ನು ಗ್ರಾಹಕರು ಖಂಡಿಸುತ್ತಾರೆ. `ವರ್ಷದ ನಂತರ ಬೆಲೆ ಹೆಚ್ಚಿಸುತ್ತಿರುವುದಾಗಿ ಹೋಟೆಲ್ ಸಂಘದವರು ಹೇಳಿದರೂ, ನಗರದ ಕೆಲವು ಹೋಟೆಲ್‌ಗಳಲ್ಲಿ ವರ್ಷದಿಂದೀಚೆಗೆ ಹಲವು ಬಾರಿ ದರ ಹೆಚ್ಚಿಸಲಾಗಿದೆ. ಇದನ್ನು ನಿಯಂತ್ರಿಸುವವರ‌್ಯಾರು?~ ಎಂದು ವಿದ್ಯಾರ್ಥಿ ಸಂಘಟನೆಯೊಂದರ ಮುಖಂಡ ಉಮೇಶ್ ಪ್ರಶ್ನಿಸುತ್ತಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದಾಗಲೆಲ್ಲಾ ಇವರು ತಿಂಡಿ-ಊಟದ ಬೆಲೆ ಹೆಚ್ಚಿಸಿದ್ದಾರೆ. ಮತ್ತೆ ದರ ಹೆಚ್ಚಿಸಿದರೆ ಜನಸಾಮಾನ್ಯರು ಹೋಟೆಲ್‌ಗಳಿಗೆ ಹೋಗುವುದೇ ದುಸ್ತರ ಎಂಬುದು ಅಮರಗೋಳದ ದ್ಯಾವಪ್ಪ  ಗೌಡರ ಆಕ್ರೋಶ. `ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ~ ಹೋಟೆಲ್ ಮಾಲೀಕರಿಗೆ ತೊಂದರೆಯಾದರೆ ಸರ್ಕಾರವನ್ನು ಕೇಳಿ ಅನುಕೂಲ ಮಾಡಿಸಿಕೊಳ್ಳಲಿ. ಬದಲಿಗೆ ನಮ್ಮಂತಹ ಗ್ರಾಹಕರ ಮೇಲೆ ಹೊರೆ ಹಾಕುವುದೇಕೆ ಎನ್ನುವುದು ಹುಬ್ಬಳ್ಳಿಯ ಖಾಸಗಿ ಶಾಲೆಯೊಂದರ ಶಿಕ್ಷಕ ಶಶಿಕಾಂತ ಸಾವಂತ್ ಅವರ ಪ್ರಶ್ನೆ.

`70-80ರ ದಶಕದಲ್ಲಿ 10 ಪೈಸೆ ಬೆಲೆ ಹೆಚ್ಚಳ ಮಾಡಬೇಕಿದ್ದರೂ ವಿದ್ಯಾರ್ಥಿ ಸಂಘಟನೆಗಳು-ರೈತ ಪ್ರತಿನಿಧಿಗಳ ಜೊತೆ ಚರ್ಚಿಸಿ ಹೋಟೆಲ್ ಮಾಲಿಕರು ಬೆಲೆ ಹೆಚ್ಚಳಗೊಳಿಸಬೇಕಿತ್ತು. ಹೋಟೆಲ್ ಬೆಲೆ ಏರಿಕೆ ವಿರುದ್ಧ ಆಗ ಚಳವಳಿಗಳೇ ನಡೆದಿದ್ದವು. ಈಗ ಮನಬಂದಂತೆ ಬೆಲೆ ಹೆಚ್ಚಳಗೊಳಿಸಿದರೂ ಅವರನ್ನು ಪ್ರಶ್ನಿಸುವಂತಿಲ್ಲ. ಕೊನೆಗೆ ಎಲ್ಲಾ ಹೊರೆ ಸಾಮಾನ್ಯರ ಮೇಲೆ ಬೀಳುತ್ತದೆ~ ಎಂದು ನೂಲ್ವಿಯ ರೈತ ಮುಖಂಡ ಚೆನ್ನವೀರಪ್ಪ ಹಳ್ಯಾಳ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT