ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಬಾರದ ಸಂಸದರ ನಿಧಿ; ಕಾಮಗಾರಿಗೆ ತೊಡಕು

Last Updated 22 ಫೆಬ್ರುವರಿ 2012, 9:30 IST
ಅಕ್ಷರ ಗಾತ್ರ

ಮಂಗಳೂರು: ಸಂಸದರ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು(ಎಂಪಿಎಲ್‌ಎಡಿಎಸ್) ವರ್ಷಕ್ಕೆ 5 ಕೋಟಿಗೆ ಹೆಚ್ಚಿಸಿದ ಬಳಿಕ ವ್ಯಕ್ತವಾದ ಸಂತೋಷ ಜರ‌್ರನೆ ಸೋರಿಹೋಗುವಂತಹ ಪರಿಸ್ಥಿತಿ ಸದ್ಯ ಎದುರಾಗಿದ್ದು, ಹಣಕಾಸು ವರ್ಷ ಕೊನೆಗೊಳ್ಳುತ್ತ ಬಂದರೂ ಮೊದಲ ಕಂತಿನ 2.5 ಕೋಟಿ ರೂಪಾಯಿ ಇನ್ನೂ ಜಿಲ್ಲೆಗೆ ಬಿಡುಗಡೆಯೇ ಆಗಿಲ್ಲ!

2010-11ನೇ ಸಾಲಿನವರೆಗೆ ಸಂಸದರ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗಾಗಿ ಲಭಿಸುತ್ತಿದ್ದ ಹಣ 2 ಕೋಟಿ ರೂಪಾಯಿ ಮಾತ್ರ. ಈ ಹಣಕಾಸು ವರ್ಷದಿಂದ (2011-12) ಅದನ್ನು 5 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಆದರೆ 10 ತಿಂಗಳಾದರೂ ಮೊದಲ ಕಂತಿನ 2.5 ಕೋಟಿ ರೂಪಾಯಿ ಬಿಡುಗಡೆಯಾಗಿಲ್ಲ.

ಇಷ್ಟೇ ಆಗಿದ್ದರೆ ಸಹಿಸಿಕೊಳ್ಳಬಹುದು. ಕಳೆದ ಹಣಕಾಸು ವರ್ಷದಲ್ಲಿನ ಇನ್ನೊಂದು ಕಂತಿನ ರೂಪದಲ್ಲಿ ಸಿಗಬೇಕಾಗಿದ್ದ 1 ಕೋಟಿ ರೂಪಾಯಿಯೇ ಬಿಡುಗಡೆಯಾಗಿಲ್ಲ! ಅಂದರೆ ಕಳೆದ ವರ್ಷ ಮೊದಲ ಕಂತಿನ ರೂಪದಲ್ಲಿ 1 ಕೋಟಿ ರೂಪಾಯಿ ಬಂದುದು ಬಿಟ್ಟರೆ ಜಿಲ್ಲೆಗೆ ಸಂಸದರ ನಿಧಿಯ ರೂಪದಲ್ಲಿ ಕೇಂದ್ರದಿಂದ ನಯಾ ಪೈಸೆ ಬಂದಿಲ್ಲ. ಕಳೆದ ವರ್ಷದ ಮೊದಲ ಕಂತು ಬಿಡುಗಡೆಯಾದುದು 2011ರ ಏಪ್ರಿಲ್ 5ರಂದು.

ಸಂಸದ ನಳಿನ್ ಕುಮರ್ ಕಟೀಲ್ ಅವರ ಅಧಿಕಾರ ಅವಧಿಯಲ್ಲಿ ಇದುವರೆಗೆ ಜಿಲ್ಲೆಗೆ 9 ಕೋಟಿ ರೂಪಾಯಿ ಹರಿದುಬರಬೇಕಿತ್ತು. ಇದುವರೆಗೆ ಬಂದುದು ಕೇವಲ 3 ಕೋಟಿ ರೂಪಾಯಿ ಮಾತ್ರ. ಈ ಅವಸ್ಥೆ ದ.ಕ.ಜಿಲ್ಲೆಗಷ್ಟೇ ಸೀಮಿತವಾದುದಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ದ.ಕ.ಕ್ಕಿಂತ ಉತ್ತಮ ಸ್ಥಿತಿ ಇಲ್ಲ. 15 ಕ್ಷೇತ್ರಗಳಲ್ಲಿ ಮಾತ್ರ ತಲಾ 9 ಕೋಟಿ ರೂಪಾಯಿ ಪೈಕೆ 7 ಕೋಟಿ ರೂಪಾಯಿ ಕೇಂದ್ರದಿಂದ ಹರಿದುಬಂದಿದೆ.

ವಿಳಂಬಕ್ಕೆ ಕಾರಣ ಏನು: ಸಂಸದರ ನಿಧಿಯಿಂದ ಕೆಲಸ, ಕಾರ್ಯಗಳನ್ನು ಮಾಡಿಸುವ ಹೊಣೆಗಾರಿಕೆ ಜಿಲ್ಲಾಡಳಿತದ್ದು. ಸಂಸದರು ಕ್ಷೇತ್ರದ ಸ್ಥಳೀಯ ಸಮಿತಿಗಳ ಶಿಫಾರಸಿನ ಮೇರೆಗೆ ಕಾಮಗಾರಿಗಳನ್ನು ಗುರುತಿಸಿ ಜಿಲ್ಲಾಡಳಿತಕ್ಕೆ ಒದಗಿಸಬಹುದಷ್ಟೇ. ಕಾಮಗಾರಿಯ ಗುತ್ತಿಗೆ ಸಹಿತ ಅನುಷ್ಠಾನವನ್ನು ಜಿಲ್ಲಾಡಳಿತವೇ ಮಾಡಬೇಕಾಗುತ್ತದೆ. ಕೆಲಸ ಕೊನೆಗೊಂಡ ಪ್ರಮಾಣಪತ್ರ ನೀಡಿಕೆಯಲ್ಲಿ ವಿಳಂಬ, ಬಿಲ್ ಅಂತಿಮಗೊಳಿಸುವಲ್ಲಿನ ವಿಳಂಬ, ಕಾಮಗಾರಿಗಳ ಬಗ್ಗೆ ಸಮೀಕ್ಷೆ ನಡೆಸುವವರ ವಿಭಿನ್ನ ವರದಿಗಳಂತಹ ಕಾರಣಗಳಿಂದ ಹಣ ಬಿಡುಗಡೆಯಾಗುವುದು ವಿಳಂಬವಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಸರಿಯಾಗಿ ಬೆನ್ನುಹತ್ತದ್ದರಿಂದಲೇ ಸಂಸದರ ನಿಧಿ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ ಎಂಬ ಭಾವನೆ ಸಾರ್ವತ್ರಿಕವಾಗಿದೆ.

`ಸಂಸದರಿಗೆ ಒಂದು ಕಾಮಗಾರಿಗೆ ಗರಿಷ್ಠ 25 ಲಕ್ಷ ರೂಪಾಯಿ ವರೆಗೆ ಹಣ ಮೀಸಲಿಡುವುದಕ್ಕೆ ಅಧಿಕಾರ ಇದೆ. ಕೆಲವು ಸಂಸದರು ಇಂತಹ ದೊಡ್ಡ ಯೋಜನೆಗಳಿಗೆ ತಮ್ಮ ಅನುದಾನವನ್ನು ನೀಡುವ ಮೂಲಕ ಕಾಮಗಾರಿಯನ್ನು ಬೇಗ ಮುಗಿಸಿದ ಪ್ರಮಾಣಪತ್ರ ಸಿಗುವಂತೆ ನೊಡಿಕೊಂಡು ಹಣ ತರಿಸಿಕೊಳ್ಳುತ್ತಾರೆ, ಆದರೆ ಕ್ಷೇತ್ರದ ಎಲ್ಲೆಡೆ ಸಣ್ಣಪುಟ್ಟ ಕಾಮಗಾರಿಗಳಿಗೆ ಹಣ ನೀಡುವ ಪರಿಪಾಠವನ್ನು ನಮ್ಮ ಸಂಸದರು ಇಟ್ಟುಕೊಂಡಿರುವುದರಿಂದ ಎಲ್ಲಾ ಕಾಮಗಾರಿಗಳ ಮೇಲ್ವಿಚಾರಣೆ ನೋಡಿಕೊಂಡು ಕೇಂದ್ರಕ್ಕೆ ವರದಿ ಸಲ್ಲಿಸುವುದು ವಿಳಂಬವಾಗುತ್ತಿದೆ~ ಎಂದು ಸಂಸದರ ಕಚೇರಿಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಜಿಲ್ಲಾಡಳಿತವೂ ಸಂಸದರ ನಿಧಿ ರೂಪದಲ್ಲಿ ತನ್ನ ಬಳಿ 1 ಕೋಟಿ ರೂಪಾಯಿಗಿಂತ ಅಧಿಕ ಹಣ ಸಂಗ್ರಹ ಇಲ್ಲ ಎಂಬುದನ್ನು ಕೇಂದ್ರಕ್ಕೆ ಮನವರಿಕೆ ಮಾಡಿದ ನಂತರವಷ್ಟೇ ಮುಂದಿನ ಕಂತು ಬಿಡುಗಡೆಯಾಗುತ್ತದೆ. ಜಿಲ್ಲಾಡಳಿತ ಕೆಲವೊಮ್ಮೆ ಹೀಗೆ ಮಾಡದೆ ಇರುವುದರಿಂದಲೂ ಸಂಸದರ ನಿಧಿ ಬಿಡುಗಡೆಯಾಗುವುದಿಲ್ಲ ಎಂದು ಸಹ ಹೇಳಲಾಗುತ್ತಿದೆ. (ದ.ಕ. ಜಿಲ್ಲಾಡಳಿತದ ಬಳಿ ಸದ್ಯ ಸಂಸದರ ನಿಧಿಯ ಸುಮಾರು 70 ಲಕ್ಷ ರೂಪಾಯಿ ಹಣ ವಿಲೇವಾರಿಗೆ ಬಾಕಿ ಉಳಿದಿದೆ).

`ಕೇಂದ್ರ ಸರ್ಕಾರ ಮುಂದಿನ ಕಂತಿನಲ್ಲಿ ಬಿಡುಗಡೆ ಮಾಡಲಿರುವ ದುಡ್ಡಿನಲ್ಲಿ ಕಾಮಗಾರಿಗಳನ್ನು ವಹಿಸಿಕೊಂಡವರಿಗೆ ಶೇ 50ರಷ್ಟರ ಬದಲಿಗೆ ಶೇ 75ರಷ್ಟು ಹಣ ನೀಡುವ ವ್ಯವಸ್ಥೆ ಮಾಡಬೇಕು. ಇದರಿಂದ ಕಾಮಗಾರಿಗಳು ತ್ವರಿತವಾಗಿ ಕೊನೆಗೊಳ್ಳುವುದು ಸಾಧ್ಯವಿದೆ ಎಂದು ಜಿಲ್ಲಾಡಳಿತವನ್ನು ಕೋರಿದ್ದೇವೆ~ ಎಂದು ಸಂಸದರ ಕಚೇರಿಯ ಮೂಲಗಳು ತಿಳಿಸಿವೆ.

ಪೊನ್ನುರಾಜ್ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸಂಸದರ ನಿಧಿ ರೂಪದಲ್ಲಿ ನಯಾ ಪೈಸೆ ಬಿಡಗಡೆ ಮಾಡಿರಲಿಲ್ಲ. ಕಾಮಗಾರಿಗಳ ಗುಣಮಟ್ಟದ ನೆಪ ಹೇಳಿ ಅವರು ಹಣ ಬಿಡುಗಡೆಯಾಗದಂತೆ ನೋಡಿಕೊಂಡಿದ್ದರು. ಇದರಿಂದಾಗಿಯೇ ಜಿಲ್ಲೆಗೆ ಅನ್ಯಾಯವಾಗುವಂತಾಗಿದೆ. ಕಾಮಗಾರಿಗಳ ಮಾಹಿತಿ, ಅವುಗಳ ದಾಖಲೆ ಪತ್ರಗಳ ಪರಿಶೀಲನೆಯಂತಹ ವಿಚಾರದಲ್ಲಿ ಜಿಲ್ಲೆಯ ಕಾರ್ಯಕ್ರಮಗಳು ಉತ್ತಮವಾಗಿದ್ದರೂ 2 ವರ್ಷ ಹಣ ಬಿಡುಗಡೆಯಾಗದ್ದರ ಪ್ರತಿಫಲವನ್ನು ಈಗಲೂ ಅನುಭವಿಸುವಂತಾಗಿದೆ ಎಂದು ಮೂಲಗಳು ತಿಳಿಸಿವೆ.

ಶೀಘ್ರ ಬಿಡುಗಡೆ ನಿರೀಕ್ಷೆ
ಸಂಸದರ ಕ್ಷೇತ್ರ ಅಭಿವೃದ್ಧಿ ನಿಧಿ ಬಿಡುಗಡೆಯಾಗುವಲ್ಲಿ ಕಳೆದ ವರ್ಷದ ವರೆಗೆ ಜಿಲ್ಲೆಯಲ್ಲಿ ಸಮಸ್ಯೆ ಇದ್ದುದು ನಿಜ. ಆದರೆ ಇದೀಗ ಅಂತಹ ಸಮಸ್ಯೆ ಇಲ್ಲ. ಕಾಮಗಾರಿಗೆ ಹಣ ಬಳಸಿದ್ದರ ವರದಿಯನ್ನು ಕಾಲ ಕಾಲಕ್ಕೆ ಕೇಂದ್ರಕ್ಕೆ ಸಲ್ಲಿಸಲಾಗುತ್ತಿದೆ. ಒಂದು ಅಥವಾ ಎರಡು ವಾರದೊಳಗೆ ಈ ಹಣಕಾಸು ವರ್ಷದ ಮೊದಲ ಕಂತಿನ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ.
-ಎನ್.ಎಸ್.ಚನ್ನಪ್ಪ ಗೌಡಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT