ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೆರಡು ದಿನಗಳ ನಂತರವೇ ನಿರ್ಧಾರ

Last Updated 3 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಉಜ್ಜಿನಿಯಲ್ಲಿ ಗುರುವಾರ ನಡೆದ ಉಜ್ಜಿನಿ ಸದ್ಧರ್ಮ ಪೀಠದ ನೂತನ ಜಗದ್ಗುರುಗಳ ಪೀಠಾರೋಹಣ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರೊಂದಿಗೆ ವೇದಿಕೆ ಹಂಚಿಕೊಂಡು ಅಚ್ಚರಿ ಮೂಡಿಸಿದ ಮಾಜಿ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ನಿರ್ಧಾರವನ್ನು ಪ್ರಕಟಿಸಲು ನಿರಾಕರಿಸಿದರು.

ಬೆಳಿಗ್ಗೆ ಗ್ರಾಮದ ಹೊರ ವಲಯದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ವರೆಗೆ ಶ್ರೀರಾಮುಲು ಆಗಮಿಸಿದರೂ ವಾಹನದಿಂದ ಕೆಳಗಿಳಿದು, ಮುಖ್ಯಮಂತ್ರಿಯವರನ್ನು ಸ್ವಾಗತಿಸುವ ಗೋಜಿಗೆ ಹೋಗಲಿಲ್ಲ.

ನಂತರ ಅವರೂ ಸಮಾರಂಭದಲ್ಲಿ ಭಾಗವಹಿಸಿ, ಸದಾನಂದಗೌಡ ಅವರ ಪಕ್ಕದಲ್ಲೇ ಕುಳಿತರು. ಸಮಾರಂಭದ ನಂತರ ಅವರೊಂದಿಗೇ ಭೋಜನ ಸ್ವೀಕರಿಸಿ, ಉಜ್ಜಿನಿ ಪೀಠದ ಮಠಕ್ಕೂ ಭೇಟಿ ನೀಡಿದರು. ತದನಂತರ ಶ್ರೀರಾಮುಲು ಹೆಲಿಪ್ಯಾಡ್‌ಗೆ ತೆರಳಿದರೂ ಸದಾನಂದಗೌಡ ಅವರನ್ನು ಬೀಳ್ಕೊಡಲು ಹೋಗದೆ ಸಾಗಿದರು.

ಸ್ವಾಗತಿಸಲಿಲ್ಲ: ಮುಖ್ಯಮಂತ್ರಿಯವರು ಸಚಿವ ಎಂ.ಪಿ. ರೇಣುಕಾಚಾರ್ಯ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ, ಸುದ್ದಿಗಾರರೊಂದಿಗೆ ಮಾತನಾಡಿ, ನಂತರ ವಾಹನ ಏರಿ ಸಮಾರಂಭ ನಡೆಯುವ ಸ್ಥಳಕ್ಕೆ ತೆರಳಲು ಅಣಿಯಾಗುತ್ತಿದ್ದಂತೆಯೇ ಶಾಸಕ ನಾಗೇಂದ್ರ, ಸಂಸದೆ ಜೆ.ಶಾಂತಾ ಅವರೊಂದಿಗೆ ವಾಹನದಲ್ಲಿ ಬಂದ ಶ್ರೀರಾಮುಲು, ಕೆಳಗಿಳಿದು ಮಾತನಾಡಿಸುವ ಸೌಜನ್ಯವನ್ನೂ ತೋರದೆ ಮಾಧ್ಯಮದವರ ಕಣ್ತಪ್ಪಿಸಿ ವೇದಿಕೆಯತ್ತ ತೆರಳಿ ಅಚ್ಚರಿ ಮೂಡಿಸಿದ್ದರು.

ವೇದಿಕೆಯ ಮೇಲೆ ಕೆಲಕಾಲ ಮುಖ್ಯಮಂತ್ರಿ ಸದಾನಂದಗೌಡ ಅವರ ಪಕ್ಕದಲ್ಲೇ ಕುಳಿತು ಮಾತುಕತೆ ನಡೆಸಿದ ಶ್ರೀರಾಮುಲು, ಸಮಾರಂಭದಲ್ಲಿ ಮಾತನಾಡುವ ವೇಳೆ ರಾಜಕೀಯ ಕುರಿತು ಪ್ರಸ್ತಾಪಿಸಲಿಲ್ಲ.

ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಶ್ರಮಿಸಿರುವ ಶ್ರೀರಾಮುಲು ಯಾರದೇ ಸಲಹೆಗಳಿಗೆ ಕಿವಿಗೊಡದೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಫರ್ಧಿಸಿ ಗೆಲುವು ಸಾಧಿಸಬೇಕು ಎಂದು ರಂಭಾಪುರಿ ಪೀಠದ ಜಗದ್ಗುಗಳು ಸಲಹೆ ನೀಡಿದರು.

ಸಮಾರಂಭದ ನಂತರ, ಉಪ ಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶ್ರೀರಾಮುಲು, ಈ ಕುರಿತು ಇನ್ನೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ಕರೆದು ತಿಳಿಸುವುದಾಗಿ ಹೇಳಿದರು.

ಪಕ್ಷಕ್ಕೆ ಬಿಟ್ಟ ವಿಚಾರ: `ಬಳ್ಳಾರಿ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆಯು ಪಕ್ಷದ ಚುನಾವಣಾ ಸಮಿತಿಗೆ ಬಿಟ್ಟ ವಿಚಾರ. ಈವರೆಗೆ ಶ್ರೀರಾಮುಲು ಅವರು ನನ್ನನ್ನು ಸಂಪರ್ಕಿಸಿಲ್ಲ. ನಾನೂ ಅವರನ್ನು ಸಂಪರ್ಕಿಸಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕಾರ್ಯಕ್ರಮಕ್ಕೆ ಮುನ್ನ ಸುದ್ದಿಗಾರರಿಗೆ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜಾಮೀನು ದೊರೆತಿರುವುದು ಸಂತಸದ ವಿಷಯ. ಅವರು ಆರೋಪದಿಂದ ಮುಕ್ತರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಕಾರ್ಯಕ್ರಮದ ನಂತರ ಹೇಳಿದರು.

ಬಳ್ಳಾರಿ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಅವರೇ ನಾಯಕತ್ವ ವಹಿಸುತ್ತಾರೆಯೇ? ಎಂಬ ಪ್ರಶ್ನೆಗೆ, ಈಗಲೇ ಏನನ್ನೂ ಹೇಳಲಾಗುವುದಿಲ್ಲ  ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT