ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫಿಗೆ ನಾರಾಯಣಮೂರ್ತಿ ವಿದಾಯ

Last Updated 23 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಇದು ಸುಮಾರು 43 ವರ್ಷಗಳ ಹಿಂದಿನ ಮಾತು. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಐಐಟಿ ಕಾನ್ಪುರದಲ್ಲಿ ಕಂಟ್ರೋಲ್ ಥಿಯರಿ ವ್ಯಾಸಂಗ ಮಾಡುತ್ತಿದ್ದ ಎಂ.ಟೆಕ್ ವಿದ್ಯಾರ್ಥಿಯೊಬ್ಬನಿಗೆ ಅಮೆರಿಕದ ಹೆಸರಾಂತ ವಿಶ್ವವಿದ್ಯಾಲಯವೊಂದರ ಕಂಪ್ಯೂಟರ್ ವಿಜ್ಞಾನಿಯೊಬ್ಬರ ಜೊತೆ ಉಪಾಹಾರ ಸೇವಿಸುವ ಆಕಸ್ಮಿಕ ಅವಕಾಶ ಲಭಿಸಿತು.
 
ಕಂಪ್ಯೂಟರ್ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಯ ಬಗ್ಗೆ ಆ ವಿಜ್ಞಾನಿ ಮಾತನಾಡುತ್ತಿದ್ದರೆ ಈ ಯುವಕ ಮೈಯೆಲ್ಲ  ಕಿವಿಯಾಗಿ ಕೇಳುತ್ತಿದ್ದ. ಹೊಸ ತಂತ್ರಜ್ಞಾನವನ್ನು ದೇಶದ ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಯೋಚಿಸುತ್ತಿದ್ದ. ಸುಮಾರು ಒಂದು ಗಂಟೆ ನಡೆದ ಚರ್ಚೆ ಮುಗಿದಿದ್ದೇ ತಡ, ಈತ ನೇರವಾಗಿ ಹೋಗಿದ್ದು ಐಐಟಿ ಗ್ರಂಥಾಲಯಕ್ಕೆ.

ವಿಜ್ಞಾನಿ ಶಿಫಾರಸು ಮಾಡಿದ ನಾಲ್ಕೈದು ಸಂಶೋಧನಾ ಪ್ರಬಂಧಗಳನ್ನು ಶ್ರದ್ಧೆಯಿಂದ ಓದಿದ. ಲೈಬ್ರರಿಯಿಂದ ಹೊರನಡೆದ ಯುವಕನ ಕಣ್ಣುಗಳಲ್ಲಿ ಅದಮ್ಯ ಆತ್ಮವಿಶ್ವಾಸವಿತ್ತು. ಓದಿದರೆ ಕಂಪ್ಯೂಟರ್ ವಿಜ್ಞಾನವನ್ನೇ ಓದಬೇಕು, ಅದರಲ್ಲೇ ಸಾಧನೆ ಮಾಡಬೇಕು ಎಂಬ ಛಲ ಮೂಡಿತು.
 
ಆ ಛಲವೇ ಹೆಮ್ಮರವಾಗಿ, ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆ ಯುವಕನೇ ನಾಗವಾರ ರಾಮರಾವ್ ನಾರಾಯಣಮೂರ್ತಿ. ಅರ್ಥಾತ್ ನಮ್ಮ ಹೆಮ್ಮೆಯ ಕನ್ನಡಿಗ, ಐ.ಟಿ ಲೋಕದ ದಿಗ್ಗಜ ಎನ್.ಆರ್. ನಾರಾಯಣಮೂರ್ತಿ.

ಪುಣೆಯ `ಪಾಟ್ನಿ~ ಕಂಪ್ಯೂಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣಮೂರ್ತಿ ಅವರು 1981ರಲ್ಲಿ  ತಮ್ಮ `ಪತ್ನಿ~ ಸುಧಾ ಮೂರ್ತಿ ಅವರಿಂದ ಪಡೆದ ಹತ್ತು ಸಾವಿರ ರೂಪಾಯಿ ಕೈಗಡದೊಂದಿಗೆ, 10x10 ಕೋಣೆಯಲ್ಲಿ  ಇತರ ಆರು ಜನರೊಂದಿಗೆ ಸ್ಥಾಪಿಸಿದ ಇನ್ಫೋಸಿಸ್, ಇಂದು ಒಂದು ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳು, 33 ದೇಶಗಳಲ್ಲಿ  ಶಾಖೆಗಳು ಹಾಗೂ ರೂ. 27 ಸಾವಿರ ಕೋಟಿ  ವರಮಾನ ತರುವ ದೈತ್ಯ ಸಂಸ್ಥೆಯಾಗಿ ಬೆಳೆದಿದ್ದು ಒಂದು ಯಶೋಗಾಥೆಯೇ ಸರಿ.

1993ರಲ್ಲಿಯೇ ಭಾರತೀಯ ಷೇರು ಮಾರುಕಟ್ಟೆ ಪ್ರವೇಶಿಸಿದ ಇನ್ಫೋಸಿಸ್, 1999ರಲ್ಲಿ ಅಮೆರಿಕದ ಷೇರು ವಿನಿಮಯ ಕೇಂದ್ರ ನಾಸ್ದಾಕ್‌ನಲ್ಲಿ ನೋಂದಾವಣೆಗೊಳ್ಳುವ ಮೂಲಕ ಅಮೆರಿಕ ಷೇರು ಮಾರುಕಟ್ಟೆಗೆ ಅಡಿಯಿರಿಸಿದ ಭಾರತದ ಪ್ರಥಮ ಕಂಪೆನಿ ಎಂಬ ಪ್ರಶಂಸೆಗೆ ಭಾಜನವಾಯಿತು. ನಾರಾಯಣಮೂರ್ತಿ ಅವರ ದೂರದೃಷ್ಟಿ ಹಾಗೂ ವ್ಯಾವಹಾರಿಕ ಕೌಶಲವೇ ಸಂಸ್ಥೆಯ ಉನ್ನತಿಗೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಜಗತ್ತು, ಭಾರತವನ್ನು ನೋಡುತ್ತಿದ್ದ ದೃಷ್ಟಿಕೋನ ಬದಲಾಯಿಸಿದ್ದೇ ಇನ್ಫೋಸಿಸ್. ಭಾರತವೆಂದರೆ ಹಾವಾಡಿಗರ ನಾಡು, ಭಿಕ್ಷುಕರ ಬೀಡು ಎಂದು ತಿಳಿದಿದ್ದ ವಿದೇಶೀಯರಿಗೆ ಮಾಹಿತಿ ತಂತ್ರಜ್ಞಾನದ ಮೂಲಕ ಭಾರತ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬಹುದು ಎಂದು ತೋರಿಸಿಕೊಟ್ಟವರೇ ನಾರಾಯಣಮೂರ್ತಿ.
 
ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಇನ್ಫೋಸಿಸ್ ಒಂದು ದಿಕ್ಸೂಚಿ.
ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಆಗಸ್ಟ್ 20, 1946ರಂದು ಜನಿಸಿದ ನಾರಾಯಣಮೂರ್ತಿ ಅವರ ಜೀವನ ಒಂದು ಸ್ಫೂರ್ತಿ ಚಿಲುಮೆ.

ಅವರು 1967ರಲ್ಲಿ ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ. ಪದವಿ ಪಡೆದರು. 1969ರಲ್ಲಿ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಕಾನ್ಪುರ) ಯಲ್ಲಿ ಎಂಟೆಕ್ ಪದವಿ ಗಳಿಸಿದರು.

ಐಟಿ ವಲಯದ ಪಿತಾಮಹ
ನಾರಾಯಣಮೂರ್ತಿ ಅವರ ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಶಿಸಿರುವ ಅಮೆರಿಕದ ನಿಯತಕಾಲಿಕ `ಟೈಮ್~ ನಿಯತಕಾಲಿಕೆಯು, ಇನ್ನೂ ಆರು ದಶಕಗಳ ಕಾಲ ಭಾರತವನ್ನು ಮುನ್ನಡೆಸುವ ಸಾಮರ್ಥ್ಯವಿರುವ ಭಾರತೀಯರ ಪಟ್ಟಿಯಲ್ಲಿ ಇವರ ಹೆಸರನ್ನೂ ಸೇರಿಸಿದೆ. ಅಷ್ಟೇ ಅಲ್ಲ, ಭಾರತದ ಐಟಿ ವಲಯದ ಪಿತಾಮಹ ಎಂದು ಯಾರನ್ನಾದರೂ ಕರೆಯುವುದಿದ್ದರೆ ಅವರು ಎನ್.ಆರ್. ನಾರಾಯಣಮೂರ್ತಿ ಮಾತ್ರ ಎಂದೂ ಹಾಡಿ ಹೊಗಳಿದೆ.

1981 ರಿಂದ 2002ರ ವರೆಗೆ ಅಂದರೆ ಸುದೀರ್ಘ 21 ವರ್ಷಗಳವರೆಗೆ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಯಶಸ್ವಿಯಾಗಿ ಸಂಸ್ಥೆ ಮುನ್ನಡೆಸಿದ ನಾರಾಯಣಮೂರ್ತಿ ಅವರು, 2002ರಲ್ಲಿ ತಮ್ಮ ಹುದ್ದೆಯನ್ನು ನಂದನ್ ನಿಲೇಕಣಿ ಅವರಿಗೆ ಬಿಟ್ಟು ಕೊಟ್ಟಿದ್ದರು.

ತಮ್ಮ ನೇತೃತ್ವದಲ್ಲಿ ಸಂಸ್ಥೆ ಇನ್ನೂ ಮಿಂಚುತ್ತಿರುವಾಗಲೇ ಮಹತ್ವದ ಹುದ್ದೆಯಿಂದ ಕೆಳಗಿಳಿದು ಆ ಸ್ಥಾನದಲ್ಲಿ  ಇನ್ನೊಬ್ಬರು ಪ್ರಕಾಶಿಸಲು ಅವಕಾಶ ಮಾಡಿಕೊಟ್ಟಿದ್ದು ನಾರಾಯಣಮೂರ್ತಿ ಅವರ ಹಿರಿಮೆ. 2002 ರಿಂದ 2006 ರ ವರೆಗೆ ಅಡಳಿತ ಮಂಡಳಿಯ ಕಾರ್ಯಕಾರಿ ಅಧ್ಯಕ್ಷರಾಗಿಯೂ ನಾರಾಯಣಮೂರ್ತಿ ಸೇವೆ ಸಲ್ಲಿಸಿದ್ದಾರೆ.

2006ರಲ್ಲಿಯೇ ಈ ಹುದ್ದೆಯಿಂದ ನಿವೃತ್ತರಾಗಿದ್ದರೂ ಕಳೆದ ಐದು ವರ್ಷಗಳಿಂದ ಕಂಪೆನಿಯ ಕಾರ‌್ಯೇತರ ಅಧ್ಯಕ್ಷ (ನಾನ್-ಎಕ್ಸಿಕ್ಯೂಟಿವ್ ಚೇರ್‌ಮನ್) ಹಾಗೂ ಮುಖ್ಯ ಸಲಹೆಗಾರರಾಗಿ (ಚೀಫ್ ಮೆಂಟರ್) ಕಾರ‌್ಯ ನಿರ್ವಹಿಸುತ್ತಿದ್ದರು.

ಪಾರದರ್ಶಕ ಆಡಳಿತ
ಕೆಲ ಸಂಸ್ಥೆಗಳ ವಾರ್ಷಿಕ ವರದಿಯಲ್ಲಿ ಕಂಪೆನಿಯ ಲಾಭವನ್ನಷ್ಟೇ ಬಹಿರಂಗಪಡಿಸುವ ಪರಿಪಾಠವಿರುತ್ತದೆ. ಆದರೆ, ಇನ್ಫೋಸಿಸ್‌ನಲ್ಲಿ ಕಾರ್ಪೊರೇಟ್ ಆಡಳಿತದ ಅತ್ಯುತ್ತುಮ ತತ್ವಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದಕ್ಕೆ ಉದಾಹರಣೆಯೆಂದರೆ, 1995ರಲ್ಲಿ ಇನ್ಫೋಸಿಸ್ ಆರ್ಥಿಕ ನಷ್ಟ ಅನುಭವಿಸಿತ್ತು.

 ಸಾಮಾನ್ಯವಾಗಿ ಕಂಪೆನಿಗಳು ಅನುಸರಿಸುವ ಲೆಕ್ಕಾಚಾರಗಳ ಪ್ರಕಾರ ಇಂಥ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಇನ್ಫೋಸಿಸ್ ವಾರ್ಷಿಕ ವರದಿಯಲ್ಲಿ ಸಂಸ್ಥೆಯ ನಷ್ಟದ ಬಗ್ಗೆ ಪ್ರಸ್ತಾಪಿಸಿ ಪ್ರಾಮಾಣಿಕತೆ ಮೆರೆದಿತ್ತು. ಸಂಸ್ಥೆಯ ಚಟುವಟಿಕೆಗಳಲ್ಲಿ ಇರುವ ಪಾರದರ್ಶಕತೆ ಮತ್ತು ಮುಕ್ತ ವಾತಾವರಣ ಒಂದಕ್ಕೊಂದು ಪೂರಕವಾಗಿರಬೇಕು.

ಯಾವುದೇ ಉದ್ಯೋಗಿ ಸಂಸ್ಥೆಯ ನಿರ್ಧಾರಗಳನ್ನು ನಿರ್ಭಯವಾಗಿ ಪ್ರಶ್ನಿಸುವ ಮುಕ್ತ ವಾತಾವರಣವಿರಬೇಕು. ಆಗ ಮಾತ್ರ ಸಂಸ್ಥೆಯೊಂದು ಪ್ರಗತಿ ಹೊಂದಲು ಸಾಧ್ಯ ಎನ್ನುವುದು ನಾರಾಯಣಮೂರ್ತಿ ಅವರ ಅಭಿಪ್ರಾಯ.

ಸತ್ಯಂ ಕಂಪ್ಯೂಟರ್ಸ್ ಹಗರಣ ಬೆಳಕಿಗೆ ಬರುವ ಹಲವು ವರ್ಷಗಳ ಮೊದಲೇ ಇನ್ಫೋಸಿಸ್‌ನ ಲೆಕ್ಕ ಪರಿಶೋಧನೆ (ಆಡಿಟ್) ಬಗ್ಗೆ ನಾರಾಯಣಮೂರ್ತಿ ಅವರು ಕೆಲ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದ್ದರು. ಕಂಪೆನಿಯ ಆಡಿಟ್ ಮಾಡುವವರು ಹೊರಗಿನವರಾಗಿರಬೇಕು. ಆಡಿಟ್ ಸಂದರ್ಭದಲ್ಲಿ ಸಂಸ್ಥೆಯ ಯಾವೊಬ್ಬ ನಿರ್ದೇಶಕರೂ ಅಲ್ಲಿ ಹಾಜರಿರಬಾರದು ಎಂಬಂಥ ಸೂತ್ರಗಳಿದ್ದವು.

ಹಿಂಜರಿತದ ಭಯ ಬೇಡ
ಐ.ಟಿ ಕಂಪೆನಿಗಳನ್ನು ಆಗಾಗ ಕಾಡುವ ಆರ್ಥಿಕ ಹಿಂಜರಿತದ ಬಗ್ಗೆ ಅನಗತ್ಯ ಭಯ ಬೇಡ ಎಂಬುದು ನಾರಾಯಣಮೂರ್ತಿ ಅವರ ಅಭಯ. ಮೇಲೆ ಹೋಗಿದ್ದು ಕೆಳಗೆ ಬರಲೇ ಬೇಕು ಎಂಬುದು ಪ್ರಕೃತಿಯ ನಿಯಮ. ಪ್ರತಿ  ಕ್ಷೇತ್ರದಲ್ಲಿಯೂ  ಏಳರಿಂದ ಹತ್ತು ವರ್ಷಗಳ ನಡುವೆ ಒಂದು ಪರಿವರ್ತಕ ಪಥ ಇರುತ್ತದೆ. ಇದಕ್ಕೆ ಐ.ಟಿ ಕ್ಷೇತ್ರವೂ ಹೊರತಲ್ಲ.
 
ಆದ್ದರಿಂದ ಇಂಥ ಏರಿಳಿತಗಳನ್ನು ಬೇವು-ಬೆಲ್ಲದಂತೆ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು   ಅವರ ಅನುಭವಾಮೃತ. ಕೇವಲ 20 ವರ್ಷಗಳ ಅಲ್ಪಾವಧಿಯಲ್ಲಿ ಜಗತ್ತಿನ ಪ್ರಮುಖ ಐಟಿ ಕಂಪೆನಿಗಳ ಸಾಲಿನಲ್ಲಿ ಇನ್ಫೋಸಿಸ್ ಅನ್ನು ನಿಲ್ಲಿಸಿದ ಕೀರ್ತಿ ನಾರಾಯಣಮೂರ್ತಿ ಅವರಿಗೆ ಸಲ್ಲುತ್ತದೆ.

ಕಳೆದ ಶುಕ್ರವಾರ (ಆಗಸ್ಟ್ 19, 2011) ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿರುವ ಮೂರ್ತಿ ಅವರು ತಮ್ಮ ಅಧಿಕಾರವನ್ನು ಇನ್ನೊಬ್ಬ ಕನ್ನಡಿಗ ಕೆ.ವಿ. ಕಾಮತ್ ಅವರಿಗೆ ಹಸ್ತಾಂತರಿಸಿದ್ದಾರೆ.

ಮೂರ್ತಿ ಅವರ ನಿವೃತ್ತಿಯಿಂದ ಈವರೆಗೆ ಸಂಸ್ಥೆಯ ಜೊತೆ ಇದ್ದ ಅವರ ಔಪಚಾರಿಕ ನಂಟು ಕಳಚಿದಂತಾಗಿದೆ. ಆದರೆ ಸಂಸ್ಥೆಯ ಗೌರವಾಧ್ಯಕ್ಷರಾಗಿ (ಚೇರ್‌ಮನ್ ಎಮೆರಿಟಸ್) ಅವರು ಮುಂದುವರಿಯಲಿದ್ದಾರೆ.

ಸುಮಾರು 30 ವರ್ಷಗಳವರೆಗೆ ಇನ್ಫೋಸಿಸ್ ಉಳಿಸಿ-ಬೆಳೆಸಿ ಈಗ ಅಲ್ಲಿಂದ ಹೊರಬರುತ್ತಿರುವುದನ್ನು- ಪ್ರೀತಿಯಿಂದ ಸಾಕಿ-ಸಲುಹಿದ ಮಗಳನ್ನು ಗಂಡನ ಮನೆಗೆ ಕಳುಹಿಸುವುದಕ್ಕೆ ಹೋಲಿಸುತ್ತಾರೆ ನಾರಾಯಣಮೂರ್ತಿ. ಅಗತ್ಯ ಬಿದ್ದಾಗ ಮಗಳಿಗೆ ಸಹಾಯಹಸ್ತ ಚಾಚಲು ಪಾಲಕರು ಇದ್ದೇ ಇರುತ್ತಾರೆ.

ಮಗಳು ತವರು ಮನೆ ತೊರೆದು ಹೊಸ ವಾತಾವರಣದಲ್ಲಿ ಸುಂದರ ಬದುಕು ಕಟ್ಟಿಕೊಳ್ಳುವುದಕ್ಕಿಂತ ಹೆಚ್ಚಿನ ಸಂತೋಷದ ಸಂಗತಿ ಯಾವುದಿದೆ ಎಂದು ತಮ್ಮ ಹಾಗೂ ಸಂಸ್ಥೆಯ ನಡುವಿನ ಹೊಕ್ಕಳುಬಳ್ಳಿಯ ಸಂಬಂಧವನ್ನು ಭಾವಪೂರ್ಣವಾಗಿ ವಿವರಿಸುತ್ತಾರೆ.

ಪ್ರಚಾರದಿಂದ ಮಾರು ದೂರ
ಜಾಗತಿಕ ಪ್ರತಿಷ್ಠಿತ ಐಟಿ ಕಂಪೆನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್‌ನ ಸ್ಥಾಪಕ-ಸಿಇಒ ಆಗಿದ್ದರೂ ಅಧಿಕಾರ ಎಂದೂ ಅವರ ತಲೆಗೆ ಏರಲಿಲ್ಲ. ಅವರು ಮನಸ್ಸು ಮಾಡಿದ್ದರೆ ಅನೇಕ ವರ್ಷಗಳ ಹಿಂದೆಯೇ ಕೇಂದ್ರ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಮೆರೆಯುವ ಅವಕಾಶವಿತ್ತು.

ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರ ಸರಕಾರ ಸೇರಲು ವೈಯಕ್ತಿಕವಾಗಿ ಆಮಂತ್ರಣ ನೀಡಿದ್ದರು. ಆದರೆ, ರಾಜಕಾರಣ ತಮಗೆ ಹೇಳಿ ಮಾಡಿಸಿದ ಕ್ಷೇತ್ರವಲ್ಲ ಎಂದು ನಯವಾಗಿ ಆ ಮನವಿ  ತಿರಸ್ಕರಿಸಿದ್ದರು ನಾರಾಯಣಮೂರ್ತಿ.

ಸರಳತೆಗೆ ಇನ್ನೊಂದು ಹೆಸರು ನಾರಾಯಣಮೂರ್ತಿ ಎನ್ನಬಹುದು. ಒಬ್ಬ ಶಾಲಾ ಶಿಕ್ಷಕರ ಮಗನಾಗಿ ಬೆಳೆದ ಅವರು ಇಡೀ ಜಗತ್ತೇ ಗುರುತಿಸುವ ಸಾಧನೆ ಮಾಡಿದರೂ ಇಂದಿಗೂ ನೆಲೆಸಿರುವುದು 80ರ ದಶಕದಲ್ಲಿ ಬೆಂಗಳೂರಿಗೆ ಬಂದಾಗ ನೆಲೆಸಿದ್ದ ಜಯನಗರದ ಅದೇ ಮನೆಯಲ್ಲಿ.

ಆದ್ದರಿಂದಲೇ ಮಧ್ಯಮ ವರ್ಗದ ಹೀರೊ ಎಂಬ ಪಟ್ಟ ಅವರಿಗಿದೆ. ಇವರು ತಮ್ಮ ಸಾಧನೆಗಳನ್ನು ಪ್ರಕಟಿಸಿ, ಪ್ರಚಾರ ಗಿಟ್ಟಿಸಿಕೊಳ್ಳಲಿಲ್ಲ. ಈ ವರೆಗೆ ನಾರಾಯಣಮೂರ್ತಿ ಅವರಿಗೆ ವಿವಿಧ ವಿಶ್ವವಿದ್ಯಾಲಯಗಳಿಂದ ಸುಮಾರು 20 ಗೌರವ ಡಾಕ್ಟರೇಟ್ ಸಂದಿರುವ ವಿಷಯ ಅನೇಕರಿಗೆ ಗೊತ್ತಿಲ್ಲ.

`ಇನ್ಫೋಸಿಸ್ ಪ್ರಾರಂಭಿಸಿದಾಗ ಕಂಪೆನಿಯಲ್ಲಿ ಹೆಚ್ಚಿನ ಷೇರುಗಳು ನಾರಾಯಣಮೂರ್ತಿ ಅವರ ಬಳಿ ಇದ್ದವು. ಆದರೆ, ತಮ್ಮ ಪಾಲಿನ ಷೇರುಗಳಲ್ಲೇ ಕಡಿತಗೊಳಿಸಿ ಇತರ ಸಹ ಸಂಸ್ಥಾಪಕರಿಗೆ ಹಂಚಿದ ವಿಶಾಲ ಹೃದಯಿ.

ವರ್ಷದಿಂದ ವರ್ಷಕ್ಕೆ ಕಂಪೆನಿಯನ್ನು ಯಶಸ್ಸಿನತ್ತ ಮುನ್ನಡೆಸಿ ಸಾವಿರಾರು ಕೋಟಿ ರೂಪಾಯಿ ಆದಾಯ ತರುತ್ತಿದ್ದರೂ ಮೂರ್ತಿ ಮಾತ್ರ ಇತರ ಸ್ಥಾಪಕರಿಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದರು. ಒಮ್ಮೆಯೂ ಅವರು ಕಾರ್ಪೊರೇಟ್ ಸಂಪನ್ಮೂಲಗಳನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡವರಲ್ಲ. ತಮ್ಮ ಖರ್ಚುಗಳನ್ನು ಕಂಪೆನಿಯ ಖಾತೆಗೆ ಸೇರಿಸಿದವರಲ್ಲ.
 
ತಮ್ಮ ಕುಟುಂಬದ ಸದಸ್ಯರನ್ನು ಸಂಸ್ಥೆಯ ಆಡಳಿತದಲ್ಲಿ ತಲೆ ಹಾಕಲು ಅವಕಾಶವನ್ನೂ ನೀಡಿದವರಲ್ಲ. ಅರ್ಹತೆ ಇಲ್ಲದೇ ಯಾರಿಗೂ ಮಣೆ ಹಾಕಲಿಲ್ಲ~ ಎಂದು ಮೂರ್ತಿ ಬಗ್ಗೆ   ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಟಿ.ವಿ. ಮೋಹನದಾಸ್ ಪೈ ಶ್ಲಾಘನೆಯ ಮಾತುಗಳನ್ನಾಡುತ್ತಾರೆ.

ಪ್ರಶಸ್ತಿ-ಪುರಸ್ಕಾರ
(ನಾರಾಯಣ) ಮೂರ್ತಿ ಚಿಕ್ಕದಾದರೂ ಅವರ ಕೀರ್ತಿ ಮಾತ್ರ ದೊಡ್ಡದು! ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ, ಫ್ರಾನ್ಸ್ ಹಾಗೂ ಬ್ರಿಟನ್ ದೇಶಗಳ ಉನ್ನತ ನಾಗರಿಕ ಪ್ರಶಸ್ತಿಗಳು ಸಂದಿವೆ.  

 ನಮ್ಮ ಬಳಿ ಇರುವ ಸಂಪತ್ತು- ಆರ್ಥಿಕ, ಬೌದ್ಧಿಕ ಅಥವಾ ಭಾವನಾತ್ಮಕ ಸಂಪತ್ತಾಗಿರಬಹುದು ಅದು ಸಂಪೂರ್ಣ ನಮಗೆ ಸೇರಿದ್ದಲ.  ನಾವು ಆ ಸಂಪತ್ತಿನ ತಾತ್ಕಾಲಿಕ ಮಾಲಿಕರಷ್ಟೇ. ನಮಗಿಂತ ಕಡಿಮೆ ಅದೃಷ್ಟವಂತರಾಗಿರುವವರ ಜೊತೆ ಅದನ್ನು ಹಂಚಿಕೊಂಡಾಗಲಷ್ಟೇ ಅದರ ಸಮರ್ಪಕ ಬಳಕೆ ಆದಂತೆ ಎಂಬುದು  ಅವರ ಭಾವನೆ.

ಯಾರೋ ನೆಟ್ಟ ಗಿಡಗಳಿಂದ ನಾವು ಅನೇಕ ಬಾರಿ ಹಣ್ಣುಗಳನ್ನು ಸವಿದಿದ್ದೆೀವೆ. ನಮ್ಮ ಸರದಿ ಬಂದಾಗ ಇಂಥವೇ ರುಚಿಕಟ್ಟಾದ ಹಣ್ಣಿನ ಗಿಡಗಳನ್ನು ನಾವು ನೆಡಬೇಕು. ನಮ್ಮ ಜೀವಿತಾವಧಿಯಲ್ಲಿ ಈ ಗಿಡಗಳು ಫಲ ನೀಡದಿದ್ದರೂ ಮುಂದಿನ ಜನಾಂಗಕ್ಕೆ ಹಣ್ಣುಗಳನ್ನು ನೀಡುವುದರಲ್ಲಿ ಸಂದೇಹವಿಲ್ಲ.

ನಾರಾಯಣಮೂರ್ತಿ ಅವರೂ ಇಂಥ ಸಂಪದ್ಭರಿತ ಹಣ್ಣಿನ ತೋಟವನ್ನು ಜೋಪಾನದಿಂದ ಬೆಳೆಸಿ, ಮುಂದಿನ ಪೀಳಿಗೆಗೆ ಬಿಟ್ಟು ಹೋಗುತ್ತಿದ್ದಾರೆ. ತೋಟಗಾರನ ಹೊಟ್ಟೆ  ತಣ್ಣಗಿರಲಿ!

ಸಂಪತ್ತು ಸೃಷ್ಟಿ
ಮೊದಲ ವರ್ಷ ಇನ್ಫೋಸಿಸ್ ಗಳಿಸಿದ ಲಾಭ ಕೇವಲ ರೂ.12 ಲಕ್ಷ! ನಂತರ ಅದು ಹಿಂತಿರುಗಿ ನೋಡಿದ್ದೆೀ ಇಲ್ಲ. 1982ರಲ್ಲಿ ರೂ. 12 ಲಕ್ಷ   ಇದ್ದ ವರಮಾನ 1992ರ ಹೊತ್ತಿಗೆ ರೂ. 8.66 ಕೋಟಿಗಳಿಗೆ ಏರಿತು. ಸಂಸ್ಥೆ 10ನೇ ವರ್ಷಕ್ಕೆ ಅಡಿಯಿರಿಸಿದಾಗ ದೇಶದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತ್ತು.
 
ಮುಕ್ತ ಆರ್ಥಿಕ ನೀತಿಗಳತ್ತ ದೇಶ ತನ್ನನ್ನು ತೆರೆದುಕೊಂಡಿತ್ತು. ಇಂಥ ವಾತಾವರಣವೇ ಮೊದಲ ಬಾರಿಗೆ ಕಂಪೆನಿಯ ಷೇರುಗಳನ್ನು ಸಾರ್ವಜನಿಕರಿಗೆ ಮಾರುವ (ಐಪಿಒ) ಬಗ್ಗೆ ನಾರಾಯಣಮೂರ್ತಿ ನಿರ್ಧರಿಸಿದರು.

ಅದೇ ವರ್ಷ ಸಂಸ್ಥೆಯ ನೌಕರರಿಗೆ ಎಂಪ್ಲಾಯೀಸ್ ಸ್ಟಾಕ್ ಆಪ್ಶನ್ (ಇಸಾಪ್) ಅಡಿಯಲ್ಲಿ ಷೇರುಗಳನ್ನು ಹಂಚಲಾಯಿತು. 1992 ರ ಮಾರ್ಚ್ 31 ರ ಹೊತ್ತಿಗೆ ಕಂಪೆನಿಯಲ್ಲಿ ಸಂಸ್ಥೆಯ ನೌಕರರ ಷೇರು ಶೇ 13.6 ರಷ್ಟಿತ್ತು. ದೇಶದಲ್ಲಿ  `ಇಸಾಪ್~ ನೀಡಿದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆ ಇನ್ಫೋಸಿಸ್‌ಗಿದೆ.

ಕೋಟ್ಯಧಿಪತಿಗಳು...

1994ರಲ್ಲಿ `ಇಸಾಪ್~ ಅನ್ವಯ 18 ಸಾವಿರ ನೌಕರರಿಗೆ ಕಂಪೆನಿಯ ಷೇರುಗಳನ್ನು ನೀಡಲಾಯಿತು. ಚಾಲಕರು, ಕಚೇರಿ ಸಹಾಯಕರು, ಕಾರ್ಯದರ್ಶಿಗಳು ಸೇರಿದಂತೆ ಕಂಪೆನಿಯ ಅನೇಕ ನೌಕರರು ದಿನ ಬೆಳಗಾಗುವುದರೊಳಗೆ ಲಕ್ಷಾಧೀಶರಾದರು.

ಇನ್ಫೋಸಿಸ್ ಇಂಥ ಯೋಜನೆಯೊಂದಕ್ಕೆ ಅಡಿಪಾಯ ಹಾಕಿದ್ದೆೀ ತಡ, `ಇಸಾಪ್~ ದೇಶದಲ್ಲಿ ಜನಪ್ರಿಯವಾಯಿತು. ಇನ್ಫೋಸಿಸ್‌ನಿಂದ ಉತ್ತೇಜಿತಗೊಂಡ ಅನೇಕ ಕಂಪೆನಿಗಳು ತಮ್ಮ ನೌಕರರಿಗೂ `ಇಸಾಪ್~ ನೀಡಿದವು.
 
ಕಂಪೆನಿಯ ಆದಾಯದಿಂದ ತಾವಷ್ಟೇ ಶ್ರೀಮಂತರಾದರೆ ಸಾಲದು. ವರಮಾನ ಹೆಚ್ಚಳಕ್ಕೆ ಕಾರಣಕರ್ತರಾದ ನೌಕರರೂ ನ್ಯಾಯಯುತವಾಗಿ ಶ್ರೀಮಂತರಾಗಬೇಕು ಎಂಬುದೇ ನಾರಾಯಣಮೂರ್ತಿ ಅವರ ಪ್ರಜಾಸತ್ತಾತ್ಮಕ ಧೋರಣೆಯಾಗಿತ್ತು.

ಕೇವಲ ಇನ್ಫೋಸಿಸ್ ನೌಕರರಷ್ಟೇ ಅಲ್ಲ ನಾರಾಯಣಮೂರ್ತಿ ಅವರನ್ನು ನಂಬಿ ಹಣ ಹೂಡಿದ ಮಧ್ಯಮ ವರ್ಗದ ಅನೇಕ ಹೂಡಿಕೆದಾರರು ಇಂದು ಕೋಟ್ಯಧಿಪತಿಗಳಾಗಿದ್ದಾರೆ.
 
1993ರಲ್ಲಿ  ಇನ್ಫೋಸಿಸ್ ಷೇರಿನ ಬೆಲೆ ಕೇವಲ ರೂ. 145   ಇತ್ತು. ಇಂದು `ಇನ್ಫಿ~ಯ ಪ್ರತಿ ಷೇರಿನ ಬೆಲೆ ರೂ. 2000ಕ್ಕೂ ಹೆಚ್ಚು. ಇನ್ಫಿ ಮೊದಲ ಬಾರಿಗೆ (1993) ಷೇರು ಮಾರುಕಟ್ಟೆ ಪ್ರವೇಶಿಸಿದಾಗ ಈ ಷೇರುಗಳಲ್ಲಿ ರೂ. 10,000 ತೊಡಗಿಸಿದವರು ಇಂದು ಕೋಟ್ಯಧಿಪತಿಗಳು. 18 ವರ್ಷಗಳ ಹಿಂದೆ ತೊಡಗಿಸಿದ್ದ ರೂ.10 ಸಾವಿರ  ಬೆಲೆ ಇಂದು ಬರೊಬ್ಬರಿ ರೂ. 3 ಕೋಟಿಗಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT