ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್ ಶೇ3.4ರ ಅಲ್ಪ ಪ್ರಗತಿ

4ನೇ ತ್ರೈಮಾಸಿಕ: ರೂ 2,394ಕೋಟಿ ನಿವ್ವಳ ಲಾಭ
Last Updated 12 ಏಪ್ರಿಲ್ 2013, 19:31 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿ `ಇನ್ಫೊಸಿಸ್' 2012-13ನೇ ಸಾಲಿನ ಹಣಕಾಸು ವರ್ಷದ ಕೊನೆಯ (4ನೇ) ತ್ರೈಮಾಸಿಕದಲ್ಲಿ ರೂ2394 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಶೇ 3.4ರಷ್ಟು ಅಲ್ಪ ಪ್ರಮಾಣದ ಪ್ರಗತಿ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯ ಲಾಭ ರೂ2,316 ಕೋಟಿಯಷ್ಟಿತ್ತು.

ದೇಶದ ಎರಡನೇ ಅತಿದೊಡ್ಡ `ಐ.ಟಿ' ಕಂಪೆನಿಯಾದ `ಇನ್ಫೊಸಿಸ್'ನ ನಿರ್ವಹಣಾ ವೆಚ್ಚಕ್ಕೂ ಮುಂಚಿನ ಒಟ್ಟಾರೆ ಲಾಭ 2011-12ರ 4ನೇ ತ್ರೈಮಾಸಿಕದಲ್ಲಿ ರೂ3653 ಕೋಟಿಯಷ್ಟಿದ್ದುದು, 2012-13ರ ಕೊನೆಯ ತ್ರೈಮಾಸಿಕದಲ್ಲಿ ರೂ3652 ಕೋಟಿಗೆ ಇಳಿಕೆಯಾಗಿದೆ.

ಇನ್ನೊಂದೆಡೆ 2013-14ನೇ ಹಣಕಾಸು ವರ್ಷದ `ಮುನ್ನೋಟ'ವನ್ನೂ ಪ್ರಕಟಿಸಿರುವ `ಇನ್ಫೊಸಿಸ್', ಒಟ್ಟಾರೆ ಆದಾಯದಲ್ಲಿ ಶೇ 6ರಿಂದ 10ರಷ್ಟು ಹೆಚ್ಚಳವನ್ನಷ್ಟೇ ನಿರೀಕ್ಷಿಸಬಹುದಾಗಿದೆ ಎಂದು ಹೇಳಿದೆ. ಇದು ದೇಶದ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಪ್ರಾತಿನಿಧಿಕ ಸಂಸ್ಥೆ `ನಾಸ್ಕಾಂ' ಅಂದಾಜು ಮಾಡಿದ ಐಟಿ ಉದ್ಯಮ ಕ್ಷೇತ್ರದ ಶೇ 12-14ರ ಪ್ರಗತಿಯ ನಿರೀಕ್ಷೆಗಿಂತ ಬಹಳ ಕಡಿಮೆ ಪ್ರಮಾಣದ್ದಾಗಿದೆ.

`ಇನ್ಫೊಸಿಸ್'ನ `ಮುನ್ನೋಟ' ವರದಿ ಶುಕ್ರವಾರ ಷೇರುಪೇಟೆಯಲ್ಲಿನ ಭಾರೀ (299.64 ಅಂಶ) ಕುಸಿತಕ್ಕೂ ಕಾರಣವಾಯಿತು. `ಇನ್ಫೊಸಿಸ್' ಷೇರುಗಳೂ 21.3ರಷ್ಟು ಮೌಲ್ಯ ಕಳೆದುಕೊಂಡವು.

ಕಂಪೆನಿಯ ಮುಖ್ಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ `ಇನ್ಫೊಸಿಸ್' ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಡಿ.ಶಿಬುಲಾಲ್, 2012-13ರ ಜನವರಿ-ಮಾರ್ಚ್ ಅವಧಿಯಲ್ಲಿ ಕಂಪೆನಿ ಆದಾಯ ರೂ10,454 ಕೋಟಿಯಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ರೂ8,852 ಕೋಟಿ ಆದಾಯಕ್ಕೆ ಹೋಲಿಸಿದರೆ ಶೇ 18.1ರಷ್ಟು ಹೆಚ್ಚಳವಾಗಿದೆ ಎಂದರು.

ಆದರೆ, 2013-14ನೇ ಸಾಲಿಗೆ ಅಂದಾಜು ಮಾಡಿರುವ `ಕಡಿಮೆ  ಆದಾಯ ಗಳಿಕೆ' ನಿರೀಕ್ಷೆಯು ಸದ್ಯ ಲಭ್ಯವಿರುವ ಅಂಕಿ-ಅಂಶಗಳನ್ನೇ ಆಧರಿಸಿದ್ದೇ ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾರುಕಟ್ಟೆ ಬಹಳ ಅಸ್ಥಿರವಾದ ಈ  ಸನ್ನಿವೇಶದಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಷೇರಿನ ಗಳಿಕೆ ಎಷ್ಟಿರಬಹುದು ಎಂಬುದನ್ನೂ ಈಗಲೇ ಹೇಳಲು ಸಾಧ್ಯವಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕದ ವೀಸಾ ಪಡೆಯುವ ವಿಚಾರದಲ್ಲಿಯೂ ನಿಖರ ಏನನ್ನೂ ಈಗಲೇ ಹೇಳಲು ಸಾಧ್ಯವಿಲ್ಲ ಎಂದೂ  ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ವರ್ಷದ ಲಾಭ ಗಳಿಕೆ
2012-13ನೇ ಸಾಲಿನಲ್ಲಿ(ನಾಲ್ಕೂ ತ್ರೈಮಾಸಿಕ) `ಇನ್ಫೊಸಿಸ್'ನ ಒಟ್ಟಾರೆ ನಿವ್ವಳ ಲಾಭ ರೂ9,421 ಕೋಟಿಯಷ್ಟಿದೆ. ಹಿಂದಿನ ವರ್ಷ ರೂ8,316 ಕೋಟಿಯಷ್ಟಿತ್ತು.

4ನೇ ತ್ರೈಮಾಸಿಕದಲ್ಲಿ ಕಂಪೆನಿ ಹೊಸದಾಗಿ 56 ಗ್ರಾಹಕರನ್ನು ಪಡೆದುಕೊಂಡಿದೆ. ಒಟ್ಟು 8990 ನೌಕರರನ್ನು ಸೇರಿಸಿಕೊಂಡಿದ್ದರೆ, 7931 ಮಂದಿ ನಿರ್ಗಮಿಸಿದ್ದಾರೆ. ಕೆಲಸ ಬಿಡುವವರ ಪ್ರಮಾಣ 4ನೇ ತ್ರೈಮಾಸಿಕದಲ್ಲಿ 14.7ರಿಂದ ಶೇ 16.3ಕ್ಕೇರಿದೆ. ಮಾರ್ಚ್ 31ರ ವೇಳೆಗೆ ಒಟ್ಟು 1.56 ಲಕ್ಷ ಸಿಬ್ಬಂದಿ ಇದ್ದರು.

ರೂ27 ಲಾಭಾಂಶ
ಬೆಂಗಳೂರು(ಐಎಎನ್‌ಎಸ್): `ಇನ್ಫೊಸಿಸ್' ರೂ5 ಮುಖಬೆಲೆಯ ಪ್ರತಿ ಷೇರಿಗೆ 2012-13ನೇ ಸಾಲಿನಲ್ಲಿ ಒಟ್ಟಾರೆ ರೂ27ರಷ್ಟು (ಅಂದಾಜು ಶೇ 540) ಲಾಭಾಂಶ ನೀಡಲಿದೆ.

ಮೊದಲು 2012ರ ಅಕ್ಟೋಬರ್‌ನಲ್ಲಿ ರೂ15 ಮಧ್ಯಂತರ ಲಾಭಾಂಶ ಘೋಷಿಸಿದ್ದಿತು. ಹಣಕಾಸು ವರ್ಷದ ಎರಡನೇ ಅವಧಿಗೆ ರೂ12ರ ಲಾಭಾಂಶ ನೀಡಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT