ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೋಸಿಸ್: ರೂ.1,906 ಕೋಟಿ ನಿವ್ವಳ ಲಾಭ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಎರಡನೆಯ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ)  ಸಂಸ್ಥೆ ಇನ್ಫೋಸಿಸ್ ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕ ಅವಧಿಯಲ್ಲಿ ರೂ.1,906 ಕೋಟಿ ನಿವ್ವಳ ಲಾಭ ದಾಖಲಿಸಿದೆ.
 
ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭಶೇ 9.7 ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕ  ಅವಧಿಗೆ ಶೇ 10.7ರಷ್ಟು ಪ್ರಗತಿ ದಾಖಲಿಸಿದೆ ಎಂದು ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಇನ್ಫೋಸಿಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಡಿ ಶಿಬುಲಾಲ್ ತಿಳಿಸಿದರು.

ಸಹ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್  ಅನುಪಸ್ಥಿತಿಯಲ್ಲಿ, ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿಬುಲಾಲ್, `ಜಾಗತಿಕ ಆರ್ಥಿಕ ಅಸ್ಥಿರತೆ, ಯೂರೋಪ್ ಸಾಲದ ಬಿಕ್ಕಟ್ಟಿನಂತಹ  ಪ್ರತಿಕೂಲ ವಾತಾವರಣ ಇದ್ದರೂ, ಕಂಪೆನಿಯು ಎರಡನೆಯ ತ್ರೈಮಾಸಿಕ  ಅವಧಿಯಲ್ಲಿ ಗಮನಾರ್ಹ ಹಣಕಾಸು ಪ್ರಗತಿ ದಾಖಲಿಸಿದೆ~ ಎಂದರು.

ಆದಾಗ್ಯೂ, ಅಮೆರಿಕ ಮತ್ತು ಯೂರೋಪ್ ಆರ್ಥಿಕ ಬಿಕ್ಕಟ್ಟಿನ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದೇವೆ. ದೇಶದ ಶೇ 80ರಷ್ಟು ಐಟಿ ವರಮಾನ ಈ ಮಾರುಕಟ್ಟೆಗಳಿಂದ ಬರುತ್ತಿರುವುದರಿಂದ ಇದು ಕಳವಳಕಾರಿ ಸಂಗತಿ ಎಂದರು.

ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿಯ ಒಟ್ಟು ವರಮಾನ ಶೇ 16.6ರಷ್ಟು ಹೆಚ್ಚಿದ್ದು, ರೂ.8,099 ಕೋಟಿಗಳಷ್ಟಾಗಿದೆ. ಈ ಅವಧಿಯಲ್ಲಿ ಒಟ್ಟು 15,352 ಉದ್ಯೋಗಿಗಳನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ. ಇವರಲ್ಲಿ ವೀಸಾ ರಹಿತ ಸ್ಥಳೀಯ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚು. ಮುಂದಿನ ತ್ರೈಮಾಸಿಕ ಅವಧಿಯಲ್ಲೂ 8 ಸಾವಿರ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

`ಒಟ್ಟಾರೆ ಮಾರುಕಟ್ಟೆ ಪರಿಸ್ಥಿತಿ ಪ್ರತಿಕೂಲವಾಗಿದ್ದರೂ ಈ ಅವಧಿಯಲ್ಲಿ 45 ಹೊಸ ಗ್ರಾಹಕ ಸಂಸ್ಥೆಗಳು ಸೇರ್ಪಡೆಗೊಂಡಿವೆ. ಕ್ಲೌಡ್ ಕಂಪ್ಯೂಟಿಂಗ್ ಮತ್ತು ಹೊರಗುತ್ತಿಗೆ ಉದ್ಯಮಗಳು ಉತ್ತಮ ಪ್ರಗತಿ ದಾಖಲಿಸಿವೆ ಎಂದು ಮುಖ್ಯ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್ ಹೇಳಿದರು.

ಹೆಚ್ಚಿನ ಲಾಭ: ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಐಟಿ ರಫ್ತು ಸೇವೆಗಳಿಂದ ಇನ್ಫೋಸಿಸ್‌ಗೆ ಹೆಚ್ಚಿನ ವರಮಾನ ಬರುವ ನಿರೀಕ್ಷೆ ಇದೆ. ನಿವ್ವಳ ಲಾಭದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಬುಧವಾರದ ವಹಿವಾಟಿನಲ್ಲಿ ಇನ್ಫೋಸಿಸ್ ಷೇರು  ದರಗಳು ಶೇ 6.83ರಷ್ಟು ಏರಿಕೆ ಕಂಡವು. ಕಂಪೆನಿಯು ಪ್ರತಿ ಷೇರಿಗೆ ರೂ.15 ರಂತೆ ಮಧ್ಯಂತರ ಲಾಭಾಂಶವನ್ನೂ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT