ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಫೋಸಿಸ್ ಪ್ರಗತಿಗೆ ಡಾಲರ್ ಅಡ್ಡಿ

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು(ಪಿಟಿಐ): ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಕಂಪೆನಿ `ಇನ್‌ಫೋಸಿಸ್~, 2012-13ರ ಮೊದಲ ತ್ರೈಮಾಸಿಕದಲ್ಲಿ ರೂ2289 ಕೋಟಿ ನಿವ್ವಳ ಲಾಭ ಗಳಿಸಿ, ಶೇ 32.29ರಷ್ಟು ಪ್ರಗತಿ ದಾಖಲಿಸಿದೆ. ಹಿಂದಿನ ವರ್ಷ ಇದೇ ಅವಧಿಯ ನಿವ್ವಳ ಲಾಭ ರೂ1722 ಕೋಟಿಯಷ್ಟಿತ್ತು.

2012ರ ಏಪ್ರಿಲ್-ಜೂನ್ ನಡುವಿನ ಈ ತ್ರೈಮಾಸಿಕದ ವರಮಾನ ಗಳಿಕೆಯಲ್ಲಿ ಶೇ 28.47ರ ಹೆಚ್ಚಳವಷ್ಟೇ (ರೂ9616 ಕೋಟಿ) ಆಗಿದೆ. ಆದರೆ ಡಾಲರ್ ಲೆಕ್ಕದಲ್ಲಿನ ಸಾಧನೆ ಕೇವಲ ಶೇ 4.8ರಷ್ಟಿದೆ.

ಮಿಶ್ರಫಲ:
ಕಳೆದ ವರ್ಷದ 4ನೇ ತ್ರೈಮಾಸಿಕ ಲೆಕ್ಕಪತ್ರ ಪ್ರಕಟಣೆ ವೇಳೆ ಇನ್‌ಫೋಸಿಸ್ ನೀಡಿದ್ದ 2012-13ನೇ ಸಾಲಿನ 1ನೇ ತ್ರೈಮಾಸಿಕ ಮುನ್ನೋಟವನ್ನು ಅವಲೋಕಿಸಿದರೆ ಈಗ ಮಿಶ್ರಫಲ ದೊರಕಿದಂತಿದೆ. ಅಂದರೆ, ರೂಪಾಯಿ ಲೆಕ್ಕದಲ್ಲಿನ ವರಮಾನ `ಮುನ್ನೋಟ~ದಲ್ಲಿ ಹೇಳಿದ್ದಕ್ಕಿಂತ ತುಸು ಹೆಚ್ಚೇ ಇದೆ. ಆದರೆ, ಡಾಲರ್ ಲೆಕ್ಕದಲ್ಲಿ ಮಾತ್ರ ಇಟ್ಟುಕೊಂಡಿದ್ದ ಗುರಿಯನ್ನು ಈ ಪ್ರಮುಖ ಐಟಿ ಕಂಪೆನಿಗೆ ಮುಟ್ಟಲಾಗಿಲ್ಲ ಎಂಬುದು ಸ್ಪಷ್ಟ.

ನಿರೀಕ್ಷೆ-ಪರಿಣಾಮ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ದಿಮೆಗಳ ಪ್ರಾತಿನಿಧಿಕ ಸಂಸ್ಥೆ `ನಾಸ್ಕಾಂ~ ಸಹ 1ನೇ ತ್ರೈಮಾಸಿಕದಲ್ಲಿ ಇನ್‌ಫೋಸಿಸ್ ಶೇ 11-14ರಷ್ಟು ಪ್ರಗತಿ ಸಾಧಿಸಲಿದೆ ಎಂದು ಅಂದಾಜು ಮಾಡಿತ್ತು. ಆ ನಿರೀಕ್ಷೆಯೂ ಹುಸಿಯಾಗಿದೆ.

ಇದೆಲ್ಲದರ ಪರಿಣಾಮವೇನೋ ಎನ್ನುವಂತೆ ಮುಂಬೈ ಷೇರುಪೇಟೆಯಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ ಇನ್‌ಫೋಸಿಸ್ ಷೇರುಗಳು ಶೇ 8.27ರಷ್ಟು ಮೌಲ್ಯ ಕಳೆದುಕೊಂಡು ರೂ2262ರಲ್ಲಿ ವಹಿವಾಟು ನಡೆಸಿದವು.
`ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ ಕಾರಣದಿಂದಾಗಿ ನಾವು 1.30 ಕೋಟಿ ಅಮೆರಿಕನ್ ಡಾಲರ್‌ನಷ್ಟು ವರಮಾನ ಕಳೆದುಕೊಳ್ಳುವಂತಾಯಿತು.
 
ಅಲ್ಲದೆ, ಯೂರೋಪ್‌ನ ಒಂದು ದೊಡ್ಡ ಒಪ್ಪಂದವೂ (1.50 ಕೋಟಿ ಡಾಲರ್ ಮೊತ್ತದ್ದು) ರದ್ದಾಗಿದ್ದರಿಂದ ವರಮಾನ ಗಳಿಕೆಯಲ್ಲಿ (ಡಾಲರ್ ಲೆಕ್ಕ) ನಿರೀಕ್ಷಿತ ಸಾಧನೆ ತೋರಲಾಗಿಲ್ಲ~ ಎಂದು ಇನ್‌ಫೋಸಿಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಡಿ.ಶಿಬುಲಾಲ್ ವಿವರಿಸಿದ್ದಾರೆ.

ಮುನ್ನೋಟ ಸಮಸ್ಯೆ: ಇದೇ ವೇಳೆ, ಮುಂಬರುವ ಪರಿಸ್ಥಿತಿಗಳು ಮತ್ತು ಮಾರುಕಟ್ಟೆ ಬೇಡಿಕೆ ಬಗ್ಗೆ ಸ್ಪಷ್ಟತೆ ಇಲ್ಲದಿರುವ ಕಾರಣ ಇನ್ನು ಮುಂದೆ `ಮುನ್ನೂಟ~ ನೀಡುವ ರೂಢಿಯನ್ನು ಕೈಬಿಡಲು ಕಂಪೆನಿ ನಿರ್ಧರಿಸಿದೆ.
ಆರಂಭದಿಂದಲೂ ಮುಂಬರುವ ತ್ರೈಮಾಸಿಕದಲ್ಲಿನ ವರಮಾನ ಗಳಿಕೆ ಬಗ್ಗೆ `ಮುನ್ನೋಟ~ ನೀಡುವುದನ್ನು ಕಂಪೆನಿ ರೂಢಿಸಿಕೊಂಡಿತ್ತು. ಆದರೆ, ಕಳೆದ ಕೆಲವು ತ್ರೈಮಾಸಿಕಗಳಿಂದ ಅದು ಇಟ್ಟುಕೊಂಡಿದ್ದ ಗುರಿಯನ್ನೂ ಸಾಧಿಸಲಾಗದೇ ಇರುವ ಹಿನ್ನೆಲೆಯಲ್ಲಿ ಕಂಪೆನಿ ಮುನ್ನೋಟ ಕೈಬಿಡುವ ನಿರ್ಧಾರಕ್ಕೆ ಬಂದಿದೆ.

ಇನ್ನೊಂದೆಡೆ ಆಶಿಕಾ ಸ್ಟಾಕ್ ಬ್ರೋಕಿಂಗ್ ರೀಸರ್ಚ್ ಸಂಸ್ಥೆ ಮುಖ್ಯಸ್ಥ ಪಾರಸ್ ಬೋಥ್ರ, `ಇನ್‌ಫೋಸಿಸ್‌ನ 1ನೇ ತ್ರೈಮಾಸಿಕ ಸಾಧನೆ ನಿರೀಕ್ಷಿಗಿಂತ ಕಡಿಮೆ ಇದೆ. ಕಳೆದ 4ನೇ ತ್ರೈಮಾಸಿಕದಲ್ಲಿ ಕಂಪೆನಿ ನೀಡಿದ್ದ ಮುನ್ನೋಟ ಸಹ ರೂಢಿಗಿಂತ ಬಹಳ ಕಡಿಮೆಯೇ ಇದ್ದಿತು~ ಎಂದು ವಿಶ್ಲೇಷಿಸಿದ್ದಾರೆ.

ಸಿಬ್ಬಂದಿ-ಗ್ರಾಹಕರು
ಇನ್‌ಫೋಸಿಸ್ 1ನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟಾರೆ 9236 ಮಂದಿಯನ್ನು ಹೊಸದಾಗಿ ನೇಮಕ ಮಾಡಿಕೊಂಡಿದೆ. ಇದೇ ಅವಧಿಯಲ್ಲಿ 8079 ಮಂದಿ ನಿರ್ಗಮಿಸಿದ್ದಾರೆ. ಜೂನ್ ಮಾಸಾಂತ್ಯ ವೇಳೆ 1,51,151 ಮಂದಿ ಸಿಬ್ಬಂದಿ ಇದ್ದರು. ಇದೇ ಅವಧಿಯಲ್ಲಿ ಕಂಪೆನಿ ಗೋಲ್ಡ್‌ಮನ್ ಸ್ಯಾಚ್ಸ್, ಬಿಟಿ ಗ್ರೂಪ್, ಬಿಪಿ ಪ್ರೈ.ಲಿ. ಸೇರಿದಂತೆ 51 ಹೊಸ ಗ್ರಾಹಕರನ್ನು ಪಡೆದುಕೊಂಡಿದೆ.

ಹೊಸ ನೇಮಕ-ವೇತನ
ಇನ್‌ಫೋಸಿಸ್ ಈ ಮೊದಲೇ ಯೋಜಿಸಿದಂತೆ ಪ್ರಸಕ್ತ ಹಣಕಾಸು ವರ್ಷ ಒಟ್ಟು 35000 ಸಿಬ್ಬಂದಿಯನ್ನು ನೇಮಿಸಿಕೊಳ್ಳವುದಕ್ಕೆ ಬದ್ಧ. ಇದರಲ್ಲಿ `ಬಿಪಿಒ~ ವಿಭಾಗದ 13 ಸಾವಿರ ನೇಮಕವೂ ಸೇರಿದೆ ಎಂದು ಹೇಳಿದೆ.  ಆದರೆ, ಸದ್ಯ ವೇತನ ಹೆಚ್ಚಳ ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಬಿಎಸ್‌ಇ 257 ಅಂಶ ಕುಸಿತ
ಮುಂಬೈ(ಪಿಟಿಐ): ಮುಂಬೈ ಷೇರುಪೇಟೆಯಲ್ಲಿ ಸಂವೇಧಿ ಸೂಚ್ಯಂಕ ಗುರುವಾರ ಕಳೆದ ಏಳು ವಾರಗಳಲ್ಲೇ ಹೆಚ್ಚು ಎನ್ನಬಹುದಾದಷ್ಟು ಪ್ರಮಾಣದ ಕುಸಿತ ಕಂಡಿದೆ.

ಇನ್‌ಫೋಸಿಸ್‌ನ 1ನೇ ತ್ರೈಮಾಸಿಕ ಸಾಧನೆ ಮತ್ತು ಮುನ್ನೋಟ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇದ್ದ ಕಾರಣ 257 ಅಂಶ ಕುಡಿತ ಕಂಡ ಪೇಟೆ, 17232.55 ಅಂಶಗಳೊಂದಿಗೆ ದಿನದಂತ್ಯ ಕಂಡಿತು. ಜತೆಗೆ ವಿಪ್ರೊ ಷೇರುಗಳೂ ಶೇ 4ರಷ್ಟು ಮೌಲ್ಯ ಕಳೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT