ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಪೈರ್ ಆಗದ ವಸ್ತುಪ್ರದರ್ಶನ

Last Updated 11 ಆಗಸ್ಟ್ 2012, 6:10 IST
ಅಕ್ಷರ ಗಾತ್ರ

ಮಂಡ್ಯ: ಸೌರ್ ವಿದ್ಯುತ್, ಮಳೆ ನೀರು ಸಂಗ್ರಹ, ಪವನಶಕ್ತಿಯಿಂದ ವಿದ್ಯುತ್ ಉತ್ಪಾದನೆ, ನೀರಿನಿಂದ ಮಂಜುಗಡ್ಡೆ ತಯಾರಿಕೆ, ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯ... ಮುಂತಾದ ವಿಷಯಗಳ ಬಗೆಗೆ ತಂದಿದ್ದ ಕೆಲವು ವಿಜ್ಞಾನ ಮಾದರಿಗಳು ಗಮನ ಸೆಳೆದವು.

ಅಂತಹ ಮಾದರಿಗಳ ಬಗೆಗೆ ವಿದ್ಯಾರ್ಥಿಗಳು ಕುತೂಹಲದಿಂದ ಮಾಹಿತಿ ಪಡೆಯುತ್ತಿದ್ದರು. ಉಳಿದಂತೆ ಬಹಳಷ್ಟು ಮಾದರಿಗಳು ಹೊಸತನವಿಲ್ಲದೆ ಅಂಗಡಿಯಲ್ಲಿ ಸಿಗುವ, ಶಾಲಾ ಪ್ರಯೋಗಾಲಯದಲ್ಲಿರುವ ವಿಜ್ಞಾನದ `ಸಿದ್ಧ~ ಮಾದರಿ, ವಿನ್ಯಾಸಗಳನ್ನೇ ಪ್ರದರ್ಶನಕ್ಕೆ ತರಲಾಗಿತ್ತು.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿತ್ತು.

ವಿಜ್ಞಾನ ಮಾದರಿ, ವಿನ್ಯಾಸಗಳನ್ನು ತಯಾರಿಕೆಗೆ 2500 ರೂಪಾಯಿಯನ್ನು ಪ್ರದರ್ಶನಕ್ಕೆ ತಂದಿದ್ದ ಪ್ರತಿ ಶಾಲೆಗೆ ನೀಡಲಾಗಿತ್ತು. ಆದರೆ, ಶೇ 90ಕ್ಕೂ ಶಾಲೆಗಳು, ತಮ್ಮ ಶಾಲೆಯ ಪ್ರಯೋಗಾಲಯದಲ್ಲಿಯೇ ಲಭ್ಯವಿರುವ ವಿಜ್ಞಾನ ಮಾದರಿ ವಸ್ತು ಪ್ರದರ್ಶನಕ್ಕೆ ತಂದಿದ್ದು, ಅಚ್ಚರಿ ಮೂಡಿಸಿತು.

ಅಷ್ಟೇ ಅಲ್ಲದೇ, ಪ್ರಯಾಣ ಭತ್ಯೆ ಸೇರಿದಂತೆ ಇನ್ನಿತರ ಖರ್ಚೆಂದು 2500 ರೂ. ನೀಡಲಾಗಿತ್ತು. ತಮ್ಮ ಶಾಲೆಯ ಪ್ರಾಯೋಗಾಲಯದಲ್ಲಿರುವ ವಸ್ತುಗಳನ್ನೇ ವಸ್ತು ಪ್ರದರ್ಶನಕ್ಕೆ ತಂದಿರುವ ಬಗೆಗೆ ಹೆಸರು ಹೇಳಲಿಚ್ಛಿಸದ ಶಿಕ್ಷಕರೊರಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

212 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 95 ಪ್ರೌಢಶಾಲೆಗಳಿಂದ ಒಟ್ಟು 427 ವಿಜ್ಞಾನ ಮಾದರಿಗಳನ್ನು ವಸ್ತು ಪ್ರದರ್ಶನದಲ್ಲಿ ಇಡಲಾಗಿತ್ತು.

ಏನಿದು ಇನ್‌ಸ್ಪೈರ್ ಆವಾರ್ಡ್: ಯುವ ವಿದ್ಯಾರ್ಥಿಗಳನ್ನು ವಿಜ್ಞಾನದೆಡೆಗೆ ಆಕರ್ಷಿಸುವ ಮೂಲಕ ವಿಜ್ಞಾನ, ತಂತ್ರಜ್ಞಾನ ಬಲಪಡಿಸುವುದು ಮತ್ತು ವಿಸ್ತರಿಸುವುದು ಇನ್‌ಸ್ಪೈರ್ (ಇನೋವೇಷನ್ ಇನ್ ಸೈನ್ಸ್ ಫರ್ಸ್ಯೂಟ್ ಫಾರ್ ಇನ್‌ಸ್ಪೈರ್ಡ್ ರಿಸರ್ಚ್) ಪ್ರಶಸ್ತಿಯ ಉದ್ದೇಶ.

ಸರ್ಕಾರ, ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ 10 ರಿಂದ 15 ವರ್ಷ ವಯೋಮಾನದ ವಿದ್ಯಾರ್ಥಿಗಳು ಈ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹರು.

ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಐದು ವಿದ್ಯಾರ್ಥಿಗಳನ್ನು ಶಿಫಾರಸ್ಸು ಮಾಡಲು ಅವಕಾಶವಿದೆ. ಆಯ್ಕೆ ವಿದ್ಯಾರ್ಥಿಗಳ ತಂಡಕ್ಕೆ (ಪ್ರತಿ ಶಾಲೆಗೆ) 5 ಸಾವಿರ ರೂ. ನೀಡಲಾಗುತ್ತದೆ. ಈ ಹಣದಲ್ಲಿಯೇ ವಿಜ್ಞಾನ ಮಾದರಿ, ವಿನ್ಯಾಸ ತಯಾರಿಸಬೇಕು. ಪ್ರಯಾಣ ಭತ್ಯೆಯೂ ಸೇರಿರುತ್ತದೆ.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು 2007-08ನೇ ಸಾಲಿನಲ್ಲಿ ದೇಶಾದ್ಯಂತ `ಸ್ಕೀಂ ಫಾರ್ ಅರ್ಲಿ ಅಟ್ರಾಕ್‌ಷನ್ ಆಫ್ ಟ್ಯಾಲೆಂಟ್~ ಎನ್ನುವ ಧ್ಯೇಯ ವಾಕ್ಯದೊಂದಿಗೆ ಈ ಪ್ರಶಸ್ತಿ ಸ್ಥಾಪಿಸಿದೆ.

ಜಿಲ್ಲಾ ಹಂತದಲ್ಲಿ ಆಯ್ಕೆಯಾದ ಶಾಲೆಗಳು ರಾಜ್ಯ ಮಟ್ಟದಲ್ಲಿಯೂ, ನಂತರ ರಾಷ್ಟ್ರ ಮಟ್ಟದಲ್ಲೂ ಸ್ಪರ್ಧಿಸುವ ಅವಕಾಶ ಇರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT