ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರ ಹೆಸರೂ ಒಂದೇ!

ಕಥೆ
Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಅವಳು ಬೆಡ್‌ಶೀಟನ್ನು ವಾಶಿಂಗ್ ಮೆಷೀನ್‌ನಲ್ಲಿ ಹಾಕಿ ಪರದಾಡುತ್ತಿದ್ದಳು. ನೀರಲ್ಲಿ ನೆನೆದ ವೂಲನ್ ಬೆಡ್‌ಶೀಟ್ ಯಮ ಭಾರವಿತ್ತು. ಸುಮಾರಾಗಿ ಒಗೆದು ಸಹಾಯ ಮಾಡಿದ್ದ ವಿಡಿಯೋಕಾನ್ ಮೆಶೀನು, ಹಿಂಡಿ ಒಣಗಿ ಹಾಕುವ ಕೆಲಸವನ್ನು ಅವಳಿಗೆ ವಹಿಸಿತ್ತು.

ಸುಸ್ತಾಗಿದ್ದ ತೋಳುಗಳನ್ನು ಮುಕ್ಕರಿದು ಗಟ್ಟಿಗೊಳಿಸಿ ಬೆಡ್‌ಶೀಟ್ ಎತ್ತುವಲ್ಲಿ ಸಫಲತೆಯನ್ನು ಕಂಡ ಅವಳು, ಅದನ್ನು ಬೆನ್ನಿಗೇರಿಸಿಕೊಂಡು ಮನೆಯಿಂದ ಹೊರಬಂದು ಮೆಟ್ಟಿಲನ್ನತ್ತಿ ತಾರಸಿಯಲ್ಲಿ ನೇತುಬಿದ್ದಿದ್ದ ವಯರಿಗೆ ಒಣಹಾಕಿದಳು.
ಬೆಳಿಗ್ಗೆ ಎದ್ದು ಕೆಲಸ ಶುರುವಾಗಿನಿಂದಲೂ ಮನೆಗೆ ವಾಣಿ ಹಾಗು ಅವಳ ಗಂಡ ಅಶ್ವಿನ್ ಬರುವಿಕೆಯ ಕಾತರ ಅವಳಿಗೆ. ಅವಳು ವಾಣಿ. ಮನೆಗೆ ಬರುತ್ತಿದ್ದವಳು ಕೂಡ ವಾಣಿ! ಹೌದು, ಇಬ್ಬರೂ ಒಂದೇ ಹೆಸರಿನವರು.

ರಾಜು ಹಾಗು ಅಶ್ವಿನ್ ತುಂಬಾ ಹಳೆಯ ಗೆಳೆಯರು. ಕಾಕತಾಳೀಯವೆಂತಲೋ ಏನೋ ಇಬ್ಬರಿಗೂ ಒಂದೇ ಹೆಸರಿನ ಹೆಂಡತಿಯರು ಗಂಟು ಹಾಕಿಕೊಂಡರು. ವಾಣಿ ಹಾಗು ವಾಣಿ! ಸೊ... ‘ವಾಣಿದ್ವಯ’ರ ಕಾಮನ್ ಫ್ರೆಂಡ್ಸ್‌ಗಳು ಇವರ ಹೆಸರನ್ನು ತಮ್ಮ ಮೊಬೈಲಿನಲ್ಲಿ ಸೇರಿಸುವಾಗ ವಾಣಿ–ರಾಜು, ವಾಣಿ–ಅಶ್ವಿನ್ ಎಂದೇ ಅವರವರ ಗಂಡಂದಿರ ಹೆಸರನ್ನು ಜೊತೆಗೆ ಸೇರಿಸಿ ಸೇವ್ ಮಾಡಿಕೊಳ್ಳುತ್ತಾರೆ.

ಇವತ್ತು ವಾಣಿ-ರಾಜು ದಂಪತಿಗಳ ಮನೆಗೆ ವಾಣಿ, ಅಶ್ವಿನ್ ದಂಪತಿಗಳು ಬರುತ್ತಿದ್ದಾರೆ. ಅದೂ ಸುಮಾರು ಎರಡು ವರ್ಷಗಳ ನಂತರ.
ವಾಣಿ ಹಾಗು ರಾಜುವಿನದು ಆರೇಂಜ್ಡ್ ಮ್ಯಾರೇಜ್. ವಾಣಿ ತಾನು ಓದುತ್ತಿದ್ದ ಕಾಲೇಜಿನಲ್ಲಿ ಯಾರನ್ನೋ ಇಷ್ಟ ಪಟ್ಟು ಅದು ಹೇಗೋ ತಂದೆಗೆ ಗೊತ್ತಾಗಿ ಕಾಲೇಜು ಬಿಡಿಸಿ, ದಿಢೀರ್ ಅಂತ ಮದುವೆ ಫಿಕ್ಸ್ ಮಾಡಿಬಿಟ್ಟಿದ್ದರು. ವಾಣಿಯೂ ಸಹ ಹೆಚ್ಚಿನ ತಲೆ ಕೆಡಿಸಿಕೊಳ್ಳದೆ ತನ್ನಿಂದ ಅಪ್ಪ–ಅಮ್ಮ ಹಾಗು ತಂಗಿಗೆ ಯಾಕೆ ಮುಜುಗರ ತರಿಸುವುದು ಎಂತಲೇ ನಗು ನಗುತ್ತಲೇ ಮದುವೆಗೆ ಒಪ್ಪಿಕೊಂಡಿದ್ದಳು. ಈಗ ಮದುವೆ ಆಗಿ ಸುಮಾರು ಮೂರೂವರೆ ವರ್ಷಗಳಾಗಿವೆ.

ರಾಜು ತುಂಬಾ ಬಿಂದಾಸ್ ಮನುಷ್ಯ. ಬೆಂಗಳೂರಿನ ಒಂದು ಜಾಹೀರಾತು ಸಂಸ್ಥೆಯಲ್ಲಿ ಪರವಾಗಿಲ್ಲ ಅನ್ನುವ  ಹುದ್ದೆಯಲ್ಲಿರುವ ಆತನನ್ನು ಬಲ್ಲವರು ಪರೋಪಕಾರಿ ಅಂತಲೇ ಕರೆಯುತ್ತಾರೆ. ಎಲ್ಲರೊಂದಿಗೂ ಎಷ್ಟು ಬೇಕು ಅಷ್ಟು ಇರಬಯಸುವ ಅವನು ಒಳ್ಳೆಯ ಹೆಸರುಗಳಿಸಿದ್ದಾನೆ.

ಆದರೆ ಅದೇನು ಹತಾಶೆಯೋ, ಹೆಂಡತಿಯ ವಿಷಯದಲ್ಲಿ ಮಾತ್ರ ಭಾರೀ ತಾರತಮ್ಯ ಮಾಡುತ್ತಾನೆ. ಗೊತ್ತೋ ಗೊತ್ತಿಲ್ಲದೆಯೋ ಆಗಾಗ ತುಂಬಾ ಕೀಳಾಗಿ ನಡೆದುಕೊಳ್ಳುತ್ತಾನೆ. ಮದುವೆ ಆದ ಸುಮಾರು ಆರು ತಿಂಗಳು ನೆಟ್ಟಗೆ ಇದ್ದ ಆತ ಆದೇನಾಯಿತೋ ಹೆಂಡತಿಯಲ್ಲಿ ನಿರಾಸಕ್ತನಾದ. ಬರೀ ನಿರಾಸಕ್ತನಾಗಿದ್ದರೆ ಪರವಾಗಿರಲಿಲ್ಲ. ಸಿಟ್ಟು ಬಂದಾಗ ಮುಖ ಮೂತಿ ನೋಡದೆ ನಾಯಿಗೆ ಬಡಿದಂತೆ ಬಡಿಯುತ್ತಾನೆ.

ಆಫೀಸಿನಲ್ಲಿ ಎಲ್ಲರ ಜತೆ ನಗು ನಗುತ್ತಲೇ ಇರುವ ಅವನಿಗೆ ಹೆಂಡತಿ ಅಂದರೆ ಈಗ ಒಂಥರಾ ಅಸಡ್ಡೆ. ಟೀಗೆ ಸಕ್ರೆ ಹೆಚ್ಚಾಗ್ಬಿಟ್ರೆ ಸಿಟ್ಟು. ಶೂಗೆ ಪಾಲಿಶ್ ಹಾಕೋದು ತಡ ಆಗ್ಬಿಟ್ರೆ ಸಿಟ್ಟು. ಅಂಗಿ ಐರನ್ ಆಗಿಲ್ಲ ಅಂದ್ರೆ ಸಿಟ್ಟು. ಓದೋಕ್ಕೆ ಕೈಗೆ ಪೇಪರ್ ಸಿಕ್ಕಿಲ್ಲ ಅಂದ್ರೆ ಸಿಟ್ಟು. ಇತ್ತೀಚೆಗೆ ಸಮಾಧಾನವಾಗಿ ಕೇಳೋದೇ ಮರೆತಿದ್ದಾನೆ. ವಿಚಿತ್ರ ಅಂದರೆ ಅವಳಿಗೆ ಮನೆಯಲ್ಲಿ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿರುವ ಆತ, ಆಫೀಸಿನ ಸಮಯ ಮುಗಿದಾಕ್ಷಣ ಎಲ್ಲೂ ಹೋಗದೆ ನೇರ ಮನೆಗೇ ಬಂದು ಸೆಟ್ಲ್ ಆಗಿಬಿಡುತ್ತಾನೆ.

ಈಗೀಗ ಇದ್ದಕ್ಕಿದ್ದಂತೆಯೇ ಸಣ್ಣ ಸಣ್ಣ ವಿಷಯಕ್ಕೂ ಸಿಡಿದೇಳುತ್ತಾನೆ. ಇಬ್ಬರೂ ಒಟ್ಟಿಗೆ ಉಂಡು ಎಷ್ಟು ದಿನಗಳಾದವೋ. ಒಟ್ಟಿಗೆ ಒಂದು ಸಿನಿಮಾ ಇಲ್ಲ. ಒಂದು ಫಂಕ್ಷನ್ ಇಲ್ಲ. ಆಫೀಸಿನಿಂದ ಅವನು ಬರುವುದನ್ನೇ ಕಾದು, ಬಂದಾಗ ಅವನಿಗೆ ಎಲ್ಲ ರೀತಿಯ ಉಪಚಾರವನ್ನೂ ಮಾಡಿ, ಊಟಕ್ಕೆ ಬಡಿಸಿ ಕೊನೆಗೆ ಬೆಡ್ ಪಕ್ಕ ಹೋಗಿ ಮಲಗುತ್ತಾಳೆ ವಾಣಿ. ಏನಾದರು ಬೇಕಿದ್ದರೆ ಅವಳೇ ಬಾಯಿಬಿಟ್ಟು ಕೇಳಬೇಕು.

ಇಲ್ಲದಿದ್ದರೆ ಮನೆಯಲ್ಲಿ ಬರೀ ಮೌನ. ಇಬ್ಬರ ನಡುವೆ ಹ್ಞೂ ಹಾಂ ಅನ್ನೋದು ಬಿಟ್ಟರೆ ಮತ್ತೇನೂ ಇಲ್ಲ. ಮಾತಾಡಿದರೆ ಅದು ಎತ್ತೆತ್ತಗೋ ತಿರುಗಿ ಗಲಾಟೆ ಆಗಿ ಮತ್ತೆ ಕಿರುಚಾಟ ಬಡಿದಾಟಗಳು ನಡೆದು ವಾಣಿಯು ಕೈ ಕಾಲು ಸೊಂಟ ನೋವಿನಿಂದ ನರಳುವಲ್ಲಿ ಕೊನೆಯಾಗುತ್ತಿತ್ತು!

ಆದರೂ ಗಂಡ ಬಿಟ್ಟವಳೆಂದು ಅನಿಸಿಕೊಂಡು ಬಾಳಲು ಧೈರ್ಯವಿಲ್ಲದ ಕಾರಣಕ್ಕಾಗಿ ವಾಣಿಯ ಸಂಸಾರ ಮುಂದೆ ಮುಂದೆ ಸಾಗುತ್ತಲೇ ಇತ್ತು. ಮದುವೆ ಅನ್ನೋದನ್ನ ಯಾಕಾದ್ರೂ ಕಂಡು ಹಿಡಿದರಪ್ಪಾ ಅಂತ ಸದಾ ವಿಧಿಯನ್ನು ಬೈದುಕೊಳ್ಳುತ್ತಲೇ ಕೆಲಸ, ಬದುಕು, ನೂಕುತ್ತಿರುವ ವಾಣಿಯ ಬದುಕಲ್ಲಿ ಬೆಳಕು ಮೂಡಿಸುವುದು ಈಗ ಯಾರಿಂದಲೂ ಅಸಾಧ್ಯದ ಮಾತೇ!

ವಾಣಿ ಹಾಗು ಅಶ್ವಿನ್ ಪ್ರೀತಿಸಿ ಮದುವೆಯಾಗಿದ್ದರು. ಈಗ ತುಂಬಾ ದಿನಗಳ ನಂತರ ಇವರ ಮನೆಗೆ ಬರುತ್ತಿದ್ದರು. ಅವರು ಬರುವ ಸುದ್ದಿ ಕೇಳಿ ಒಳಗೊಳಗೇ ಸಂಭ್ರಮ ವಾಣಿಗೆ. ಎರಡೂ ಫ್ಯಾಮಿಲಿಯೂ ಸೇರಿದರೆ ಬರೀ ಮಾತು, ಹರಟೆ, ಕುಡಿ, ತಿನ್ನು! ಎಲ್ಲರೂ ಸೇರಿ ಮೂರು ದಿನ ಖುಷಿಯಾಗಿ ಕಳೆಯಬಹುದಿತ್ತು. ಅಶ್ವಿನ್ ಬಂದಿದ್ದಾನೆಂದರೆ ಮನೆಯ ವಾತಾವರಣವೇ ಬದಲಾಗಿಬಿಡುತ್ತದೆ.

ಅಶ್ವಿನ್ ಕೂಡ ಮಹಾ ಮಾತುಗಾರ. ಬಾಯಿ ಬಿಟ್ಟರೆ ‘ಸಾಕು’ ಅನ್ನೋವರೆಗೂ ಮಾತನಾಡುತ್ತಲೇ ಇರುತ್ತಾನೆ. ವಾಣಿಯನ್ನು ಕಂಡರೆ ಅವನಿಗೆ ಬಹಳ ಗೌರವ. ರಾಜುವನ್ನು ಮದುವೆ ಆದ ದಿನದಿಂದಲೂ ವಾಣಿಯನ್ನು ಬಹಳ ಗೋಳಾಡಿಸಿ, ಅವಳು ಬಾಯ್ತುಂಬಾ ನಗುವವರೆಗೂ ಬಿಟ್ಟಿಲ್ಲ.

ಹಳೆಯದೆಲ್ಲವನ್ನೂ ನೆನಸಿಕೊಂಡು ಮುಖದಲ್ಲಿ ಸಣ್ಣ ನಗೆಯನ್ನುಕ್ಕಿಸಿಕೊಂಡ ಅವಳು, ಕೊನೆ ಬಾರಿ ಅವರಿಬ್ಬರೂ ಇಲ್ಲಿ ಬಂದಾಗ ನಡೆದಿದ್ದ ಘಟನೆಯೊಂದನ್ನು ನೆನೆದು ಗಪ್ ಚುಪ್ ಆದಳು.

ಆಗೊಮ್ಮೆ ವಾಣಿ-ಅಶ್ವಿನ್ ಶಿಮ್ಲಾಕ್ಕೆ ಹೋಗಿದ್ದರು. ಶಿಮ್ಲಾ ಮುಗಿಸಿ ನೇರ ಮನೆಗೆ ಬಂದಿದ್ದರು. ಅವರು ಬಂದಾಗ ಮನೆಯಲ್ಲಿ ಏನೋ ಸಣ್ಣ ವಿಷಯಕ್ಕೆ ವಾಣಿಗೂ ರಾಜುವಿಗೂ ಮಾತಿಗೆ ಮಾತು ಬೆಳೆದು ಅದು ಜಗಳಕ್ಕೆ ತಿರುಗಿ, ಇಬ್ಬರೂ ಜಗಳ ಮಾಡುವ ರೀತಿಯನ್ನು ಮೊದಲ ಬಾರಿಗೆ ನೋಡಿದ ವಾಣಿ ಹಾಗು ಅಶ್ವಿನ್ ಗಾಬರಿಗೊಂಡಿದ್ದರು. ಗಂಡ ಹೆಂಡತಿ ಜಗಳ ಸಾಮಾನ್ಯ! ಆದರೆ ಆ ರೀತಿ? ‘ಹೆಂಡತಿ ಹತ್ತಿರ ಆ ರೀತಿ ನಡೆದುಕೊಳ್ಳಬಾರದು’ ಎಂದು ಅಶ್ವಿನ್ ಎಲ್ಲರೆದರು ರಾಜುವಿಗೆ ಬುದ್ಧಿ ಹೇಳಲು, ಇದರಿಂದ ಮತ್ತೂ ಸಿಟ್ಟಿಗೆದ್ದ ರಾಜು, ವಾಣಿಯ ಮೇಲೆ ಕೈ ಮಾಡಿದ್ದ. ‘ಹಿಂಗೆಲ್ಲಾ ಆಡ್ಬಾರ್ದಪ್ಪ, ಚೆನ್ನಾಗಿರಲ್ಲ... ನಾವು ಹೊರಡ್ತೀವಿ’ ಎಂತಲೇ ಮನೆ ಖಾಲಿ ಮಾಡಿದ್ದರು ಅಶ್ವಿನ್ ಹಾಗು ವಾಣಿ.

ಹೌದು, ಕಳೆದ ಬಾರಿ ಆದಂತೆ ಈ ಬಾರಿ ಆಗಬಾರದು. ಈಗ ಗಂಡ ಹೆಂಡತಿ ಇಬ್ಬರೂ ಚೆನ್ನಾಗಿದ್ದಾರೆ, ಆಗಾಗ ಗಲಾಟೆ ಮಾಡಿಕೊಂಡರೂ ನೆಮ್ಮದಿಯಾಗಿ ಇದ್ದಾರೆ ಅಂತ ಅನ್ನಿಸಬೇಕು. ಮೊದಲಿನ ರೀತಿ ಜಗಳ, ಮುನಿಸು? ಉಹುಂ...ಇಲ್ಲ! ಗಂಡ ಹೆಂಡ್ತಿ ಹೊಂದಿಕೊಂಡು ಚೆನ್ನಾಗಿದಾರಪ್ಪ ಅಂತ ಅನ್ನಿಸಬೇಕು. ನಾವಿಬ್ಬರು ಬದುಕುತ್ತಿರುವ ರೀತಿ... ರೀತಿಯಲ್ಲ ಬದುಕು... ಊರವರಿಗೆ ಯಾಕೆ ಗೊತ್ತಾಗಬೇಕು? ಗೊತ್ತಾಗಿ ಏನು ಮಾಡಲು ಸಾಧ್ಯ? ಉಹುಂ, ಈ ಬಾರಿ ರವಷ್ಟೂ ಸುಳಿವನ್ನು ಬಿಟ್ಟುಕೊಡಲಾರೆ... ನಾಚಿಗೆಗೇಡು!

ರಾಜು... ಉಹುಂ... ಮದುವೆ ಆಗೋ ತನಕ ಮುದ್ದಾಡುತ್ತಿದ್ದ ಇವನು ಮದುವೆ ಆಗಿ ಆರು ತಿಂಗಳೊಳಗೆ ಅದೆಷ್ಟೊಂದು ಬದಲಾಗಿಬಿಟ್ಟ! ವಾಣಿಗೆ ಕಣ್ಣು ತುಂಬಿ ಬಂದಿತು. ಅವಳು ನನ್ನ ಹೆಂಡ್ತಿ, ನನ್ನ ಅರ್ಧಾಂಗಿ... ನಾನು ಹಿಂಗೆಲ್ಲ ಅಡ್ತಿದ್ರೆ ಅವಳಿಗೂ ನೋವಾಗುತ್ತೆ... ಅಪರೂಪಕ್ಕೆ ಸಿಟ್ಟಾದ್ರೆ ಸರಿ. ದಿನವೂ ಅಂದ್ರೆ?... ಎಂದು ಒಮ್ಮೆಯಾದರೂ ಅವನಿಗೆ ಹೊಳೆಯಲೇ ಇಲ್ಲವಲ್ಲ! ನಾನೆಂಥ ಪಾಪ ಮಾಡಿದೀನಿ? ಮತ್ತೆ ನೊಂದುಕೊಂಡಳು.

ಕಣ್ಣೊರೆಸಿಕೊಳ್ಳುತ್ತಲೇ ‘ಅಯ್ಯೋ ಏನ್ ಮಾಡೋಕ್ಕಾಗುತ್ತೆ... ಎಲ್ಲ ಹಣೇಲಿ ಬರದಂಗೆ ಆಗುತ್ತೆ. ಸಾಯಲಿ. ಆದರೆ ನನ್ನ ಪಾಲಿನ ಒಳ್ಳೆ ದಿನಗಳು ನನಗಿನ್ನೂ ಒದಗಿ ಬಂದಿಲ್ಲ ಅನ್ನೋದನ್ನ ಯಾರ ಮುಂದೆಯೂ ತೋರಿಸುವ ಅವಶ್ಯಕವಿಲ್ಲ! ಹೌದು, ಅವರಿಗೆ ಒಂದು ಸಣ್ಣ ಸುಳಿವೂ ಸಿಗುವುದಿಲ್ಲ. ಇವನು, ಬಂದವರ ಮುಂದೆ ಹೆಂಗೆ ನಡೆಸಿಕೊಂಡರೂ ನಾನು ತುಟಿ ಪಿಟಕ್ ಅನ್ನದೆ ಎಲ್ಲವನ್ನೂ ನಗು ನಗುತ್ತಲೇ ಮಾಡಿದರಾಯಿತು... ಸ್ವಲ್ಪ ಡ್ರಾಮ ಅಷ್ಟೇ...’

ಅಷ್ಟರಲ್ಲಿ ಅಶ್ವಿನ್ ಫೋನು...
‘ಹಲೋ ವಾಣಿ, ಕಾರಲ್ಲಿ ಬರುವಾಗ ಒಂದು ಸಣ್ಣ ಆಕ್ಸಿಡೆಂಟ್ ಆಯಿತು. ವಾಣಿ ತಲೆಗೆ ಏಟು ಬಿದ್ದಿದೆ. ಹಂಗೆ ಸ್ವಲ್ಪ ಹಾಸ್ಪಿಟಲ್ ಹೋಗಿ ಬರ್ತೀವಿ. ಅಂಥಾ ಏಟೇನಿಲ್ಲ. ಊಟಕ್ಕೆ ಬರೋದು ಲೇಟ್ ಆಗ್ಬೋದು. ಸೋ ನೀವ್ ಊಟ ಮುಗಿಸಿ. ನಾವ್ ಜಾಯಿನ್ ಆಯ್ತಿವಿ’.
‘ಅಯ್ಯೋ, ಹೌದಾ, ಸರಿ... ಅಷ್ಟೇನೂ ಏಟ್ ಆಗಿಲ್ಲ ತಾನೇ... ಯಾವ್ ಹಾಸ್ಪಿಟಲ್?’

‘ಏನಿಲ್ಲ, ಸ್ವಲ್ಪ ಅಷ್ಟೇ ಏಟಾಗಿದೆ, ಗಾಬರಿ ಏನಿಲ್ಲ... ಬರ್ತಿವಿ’.
ತುಂಬಾ ದಿನಗಳ ನಂತರ ಬರುತ್ತಿರುವ ಗೆಳೆಯನನ್ನು ಸ್ವಾಗತಿಸಲು ಮಧ್ಯಾಹ್ನ ಆಫೀಸಿಗೆ ರಜೆ ಹಾಕಿ ರಾಜು ಕೂಡ ಊಟಕ್ಕೆ ಮನೆಗೆ ಬರುತ್ತಿದ್ದನು. ಇದರ ಮಧ್ಯೆ ಹೀಗಾಯಿತು.

ಹಿಂದಿ ಸಿನಿಮಾವೊಂದರ ಹಾಡಿನ ಕಾಲಿಂಗ್ ಬೆಲ್ ಶಬ್ದಕ್ಕೆ ಹೊರಬಂದು ಬಾಗಿಲು ತೆಗೆದಳು ವಾಣಿ. ಒಳಬಂದ ರಾಜು ಶೂ ಬಿಚ್ಚುವುದನ್ನೇ ನೋಡುತ್ತಾ ಹೇಳಿದಳು. ‘ವಾಣಿಗೆ ಬರುವಾಗ ತಲೆಗೆ ಸ್ವಲ್ಪ ಏಟಾಗಿದೆಯಂತೆ, ಸಣ್ಣ ಆಕ್ಸಿಡೆಂಟ್ ಆಗಿದೆ. ಹಾಸ್ಪಿಟಲ್‌ಗೆ ಹೋಗಿ ಸ್ವಲ್ಪ ಲೇಟ್ ಆಗಿ ಬರ್ತೀವಿ ಅಂದ್ರು’.

‘ಓಹ್’ ಎಂದವನೇ ತನ್ನ ಮೊಬೈಲ್ ಎತ್ತಿಕೊಂಡು ಅಶ್ವಿನ್‌ಗೆ ಫೋನಾಯಿಸುತ್ತಲೇ ಬಾತ್ರೂಮಿಗೆ ಹೊರಟ. ನಂತರ ನೇರ ಡೈನಿಂಗ್ ಟೇಬಲ್ ಕಡೆ ಹೊರಟು ಕುರ್ಚಿ ಎಳೆದು ಕೂತ. ವಾಣಿ ಬಡಿಸತೊಡಗಿದಳು.

ಊಟದ ಬಳಿಕ ನೇರವಾಗಿ ರೂಮಿಗೆ ಹೊರಟು ರೂಮಿನ ಬಾಗಿಲು ಮುಚ್ಚಿಕೊಂಡ.
ಸಮಯ ಸಂಜೆ ಐದು ಮೂವತ್ತು. ಅರೇ ಅವರಿನ್ನೂ ಬರಲಿಲ್ಲ. ಅಶ್ವಿನ್‌ಗೆ ಫೋನ್ ಮಾಡೋದೋ ಬಿಡೋದೋ ಅಂತ ಯೋಚಿಸುತ್ತಿದ್ದಳು. ಅದಕ್ಕೂ ಇವನು ಏನಾದರು ಕೊಂಕಾಡಿದರೆ?

ತಲೆಗೆ ಸ್ವಲ್ಪ ಏಟಾಗಿದೆ ಅಂತ ಆಸ್ಪತ್ರೆಗೆ ಹೋಗಿ ಅರ್ಧ ದಿನವೇ ಆಯಿತು. ನನಗೇನಾದ್ರು ಆ ರೀತಿ ಆಗಿದ್ರೆ ಆಟೋ ತೊಗೊಂಡು ಒಬ್ಳೆ ಹೋಗಿದ್ದು ಬಾ ಅಂದಿರೋನು ಈ ಪಾರ್ಟಿ. ಹೌದು, ಅವರು ಬರಲೇಬೇಕು. ಬಂದು ಅವರಿಬ್ಬರು ಒಬ್ಬರಿಗೊಬ್ಬರು ಬದುಕುವುದನ್ನು ಕಣ್ಣಾರೆ ಕಂಡು ಸ್ವಲ್ಪವಾದರೂ ರಾಜುಗೆ ಏನೂ ಅನ್ನಿಸದೆ ಇರುತ್ತಾ? ಅವರಿಬ್ಬರ ಹೊಂದಾಣಿಕೆ... ನಾವೇಕೆ ಈ ರೀತಿ ಇದೀವಿ ಅಂತ ಅವನಿಗೆ ಸ್ವಲ್ಪವಾದರೂ ಬೇಜಾರೂ... ತಾನು ಬಹಳ ಆಸೆ ಪಡುತ್ತಿದ್ದೇನೆ ಅನ್ನಿಸಿತು. ಅಯ್ಯೋ, ಹೋಗ್ಲಿ... ಅವರು ಬಂದರೆ ಸಾಕು... ಮೂರ್ ದಿನವಾದರೂ ಒಂದು ಸ್ವಲ್ಪ ಬದಲಾವಣೆ ಕಾಣಬಹುದು... ಹೊರಗೆ ಟೂರ್ ಹೋದ ರೀತಿ... ಕಣ್ಣೊರೆಸಿಕೊಳ್ಳುತ್ತಲೇ ಕಿಟಕಿಯಲ್ಲಿ ಇಣುಕಿ ವಾಣಿ–ಅಶ್ವಿನ್‌ರನ್ನು ಕಾಯುತ್ತಿದ್ದಳು.

ಸಂಜೆ ಆರು ಗಂಟೆಗೆ ಅಶ್ವಿನ್ ದಂಪತಿಗಳು ಆಗಮಿಸಿದರು. ಅತಿಥಿಗಳನ್ನು ನಗು ನಗುತ್ತಲೇ ಸ್ವಾಗತಿಸಿದರು ವಾಣಿ ಹಾಗೂ ರಾಜು.
ಮನೆಯಲ್ಲಿ ಹರಟೆ. ಸಂತಸ. ತುಂಬಾ ಮಾತುಗಾರ ಅಶ್ವಿನ್ ಹಾಗು ಅವನಲ್ಲಿ ಅತಿಯಾದ ಪ್ರೀತಿಯುಳ್ಳ ವಾಣಿಯನ್ನು ಕಂಡು ಕಣ್ತುಂಬ ಹರಸಿದಳು ವಾಣಿ.

ಮನೆಗೆ ಬಂದ ಗಂಡ ಹೆಂಡಿರು ನಿಜವಾಗಿಯೂ ವಾಣಿಗೆ ಹೊಟ್ಟೆ ಉರಿಸಲೇ ಬಂದವರಂತೆ ಇದ್ದರು. ಇಬ್ಬರೂ ಪರಸ್ಪರ ಮಾತನಾಡುವಾಗ ಇದ್ದ ಆತ್ಮೀಯತೆ, ಪ್ರೀತಿ, ಗೌರವ ನಮ್ಮ ಬಾಳಲ್ಲಿ ಯಾಕಿಲ್ಲ ಎಂದು ಕಣ್ಣಲ್ಲೇ ನೀರು ತುಂಬಿಕೊಂಡದ್ದು ಅವಳೊಬ್ಬಳಿಗೇ ಗೊತ್ತು. ತಲೆಗೆ ಬ್ಯಾಂಡೇಜ್ ಹಾಕಿಕೊಂಡಿದ್ದ ವಾಣಿಯನ್ನು ಅವನು ಕೇರ್ ಮಾಡುತ್ತಿದ್ದ ರೀತಿ ಮತ್ತೊಬ್ಬ ವಾಣಿಯ ನೋವನ್ನು ಇಮ್ಮಡಿಗೊಳಿಸುತ್ತಿತ್ತು. ತನ್ನ ಗಂಡ ಆ ರೀತಿ ಹಣೆಗೆ ಮುತ್ತಿಡುವ ಭಂಗಿಯಲ್ಲಿ ತನ್ನೆದುರು ನಿಂತು ಅದೆಷ್ಟು ದಿನಗಳಾದವು?

ಅವನು ಅವಳನ್ನು ಮಾತನಾಡಿಸುವಾಗ ಅವಳ ಹೆಸರು ಹಿಡಿದು ಕೂಗದೆ ಮಾತು ಮಾತಿಗೂ ಚಿನ್ನೂ, ಬಂಗಾರ ಅನ್ನುತ್ತಿದ್ದರೆ ಅವಳು ಮಗುವಾಗಿಬಿಡುತ್ತಿದ್ದಳು. ಅವಳೂ ಸಹ ‘ಅಶ್ವೀ...ನ್’ ಎಂದು ರಾಗ ಎಳೆಯುತ್ತಲೇ ಕರೆಯುವುದರಲ್ಲೇ ಗೊತ್ತಾಗುತ್ತಿತ್ತು ಅವರಿಬ್ಬರೂ ಒಬ್ಬರಿಗೊಬ್ಬರು ಎಷ್ಟು ಹೊಂದುಕೊಂಡು ಬಾಳುತ್ತಿದ್ದಾರೆಂದು. ಹೊಂದಾಣಿಕೆಯಷ್ಟೇ ಬದುಕಲ್ಲವೇ?

ಅವಳು ಅಡುಗೆ ಮನೆಯೊಳ್ಳಕ್ಕೇ ತಟ್ಟೆ ಹಿಡಿಕೊಂಡು ನುಗ್ಗಿದ್ದಾಗ ಅವಳ ಸೆರಗಿಡಿದೇ ಹಿಂಬಾಲಿಸಿದ ಅವನು ಬಹುಶಃ ಅವಳ ತುಟಿಗೆ ಕೈಯಿಡಲು ಪ್ರಯತ್ನಿಸುತ್ತಿದ್ದನೇನೋ, ವಾಣಿಯನ್ನು ನೋಡಿ ಇಬ್ಬರೂ ದೂರ ನಿಂತುಬಿಟ್ಟರು. ಅವಳು ನಾಚಿಕೊನ್ಡಳೇನೊ, ಆ ಕಡೆ ತಿರುಗಿ ಕಣ್ಣಲ್ಲಿ ನೀರೋ ಧೂಳೋ ಒರೆಸಿಕೊಳ್ಳುವಂತೆ ನಾಟಕ ಮಾಡಿಬಿಟ್ಟಳು. ಊಟ ಮಾಡುವಾಗ ಸ್ಪೂನ್‌ನಿಂದ ಮೊದಲು ಅವಳ ಬಾಯಿಗೆ ತುತ್ತು ಇರಿಸಿ ಆಮೇಲೆ ತಾನು ತಿನ್ನುತ್ತಿದ್ದ. ಹೆಜ್ಜೆ ಹೆಜ್ಜೆಗೂ ರೋಮಿಯೊ – ಜೂಲಿಯೆಟ್ ಅವರನ್ನು ನೆನಪಿಸುವ ಜೋಡಿ ಅವರದು. ತನಗೆ ಅಶ್ವಿನ್ ರೀತಿಯ ಗಂಡ ಸಿಗದಿದ್ದಕ್ಕೆ ದೇವರ ಫೋಟೋವನ್ನೊಮ್ಮೆ ನೋಡಿ ಸುಮ್ಮನಾದಳು ವಾಣಿ.

ಇದ್ದ ಮೂರು ದಿನವೂ ಸುಖ ಸಂತೋಷವಾಗಿ ಕಳೆದ ಅಶ್ವಿನ್ ದಂಪತಿಗಳು ರಾಜು ದಂಪತಿಗಳನ್ನೂ ನಕ್ಕು ನಲಿಸಿದ್ದರು. ಒಟ್ಟೊಟ್ಟಿಗೆ ಇಂಥ ನಗೆ ನಕ್ಕು ರಾಜು, ವಾಣಿಗೆ ಅದೆಷ್ಟು ದಿನಗಳಾಗಿದ್ದವೋ! ಈಗ ಹೊರಡುವ ಸಮಯ. ಎಲ್ಲಿಯೂ ತಾನು ಸದಾ ದುಃಖಿ ಅನ್ನುವ ಯಾವುದೇ ಸುಳಿವು ಬಿಟ್ಟುಕೊಡದೆ ನಗು ನಗುತ್ತಲೇ ಅವರನ್ನು ಬೀಳ್ಕೊಟ್ಟಳು ವಾಣಿ.  

ಇಬ್ಬರಿಗೂ ಬಾಯ್ ಹೇಳಿ ಕಾರ್ ಹತ್ತಿ ಹೊರಟ ವಾಣಿ ಹಾಗೂ ಅಶ್ವಿನ್ ಹೊರಡುವಾಗ ಸುಮಾರು ರಾತ್ರಿ ಒಂಬತ್ತೂವರೆ  ಸಮಯ. ಇನ್ನೈದಾರು ಕಿಲೋ ಮೀಟರ್ ಸಾಗಿದರೆ ಅವರ ಮನೆ ಸಿಕ್ಕುತ್ತದೆ. ವಾಣಿ ಹಿಂದೆ ಕೂತಿದ್ದಾಳೆ. ಅಶ್ವಿನ್ ಗಾಡಿ ಓಡಿಸುತ್ತಿದ್ದಾನೆ. ಕಾರಿನೊಳಗೆ ನಿಶ್ಶಬ್ದ. 

ಸ್ವಲ್ಪದರಲ್ಲಿಯೇ ಅಶ್ವಿನ್ ಮೊಬೈಲ್ ರಿಂಗಣಿಸಿತು. ರಾಜು ಫೋನ್‌ ಇರಬೇಕು ಅಥವಾ ವಾಣಿ, ಅಥವಾ ಆಫೀಸಿನಿಂದ? ಯಾರೊಂದಿಗೋ ಏನೋ ಮಾತಾಡಿ ನಕ್ಕು ಸುಮ್ಮನಾದ. ಕ್ಷಣ ಹೊತ್ತು ಸುಮ್ಮನಿದ್ದ ವಾಣಿ, ಹಿಂದೆ ಸೀಟಿನಿಂದ ಬಗ್ಗಿ ಮುಂದೆ ಸೀಟ್ ಮೇಲಿದ್ದ ಅವನ ಮೊಬೈಲ್ ಎತ್ತಿಕೊಳ್ಳಲು ಹೋದಳು.

ಅದೇನನ್ನಿಸಿತೋ, ಸುಮ್ಮನೆ ರೇಗಾಡಿದ...
‘ಸುಮ್ನೆ ಇರೋಕ್ಕಾಗಲ್ವಾ?’

‘ಇಷ್ಟು ವರ್ಷದಿಂದ ಸುಮ್ಮನೆ ಇದೀನಲ್ಲ’– ಅವಳೂ ರೇಗಾಡಿದಳು.
‘ತೆಗೀಬೇಡ ಈಗ’ ಎಂದು ಕೆಂಡಾಮಂಡಲವಾದ.

‘ಏನ್ ತೆಗಿಯೋದು, ವಾಣಿ ಅಕ್ಕನ ನೋಡಿದ್ರೆ ತುಂಬಾನೇ ಖುಷಿ ಆಗುತ್ತೆ. ಎಲ್ರೂ ತರ ನನ್ನ ಬದುಕು ಯಾಕಿಲ್ಲ ಅನ್ನಿಸುತ್ತೆ?’ ಎಂದು ಕಣ್ಣೀರು ತುಂಬಿಕೊಂಡಳು.

‘ಏನಾಯ್ತು ಈಗ, ಬರೀ ನಿಂದಿದೇ ಆಯ್ತು... ಬರೀ ಎಲ್ರಿಗೂ ಕಂಪೇರ್ ಮಾಡೋದು... ನಾನಂಗಿಲ್ಲ, ಹಿಂಗಿಲ್ಲ ಅನ್ನೋದು... ಥುತ್’.
‘ಏನಾಗಿಲ್ಲ ಹೇಳು, ಬರೀ ಗೋಳಿನ, ನಾಟಕದ ಲೈಫು... ಎಷ್ಟೂ ಅಂತ... ರಾಜುನಾ ನೋಡಿದ್ರೆ ಬಹಳ ಗೌರವ ಉಕ್ಕುತ್ತೆ’.

‘ಲೇ, ನಿಂಗವನು ಬೇಕಾದ್ರೆ, ಅವನ ಜೊತೇನೆ ಹೋಗು, ನಂಗೂ ಸಾಕಾಗಿದೆ’.
‘ಥೂ... ಸಂಬಂಧ, ಸ್ನೇಹ ಬೇರೆ ಕೇಡು ನಿನ್ನಂಥೋನಿಗೆ’.

‘ಲೇ, ಮುಚ್ಕೊಂಡ್ ಇದ್ರೆ ಸರೀ, ಇಲ್ಲ ಅಂದ್ರೆ... ಅಷ್ಟೇ’.
‘ಏನ್ ಮಾಡ್ತೀಯಾ, ಇಟ್ಕೊಂಡು ಕತ್ತು ಅಮುಕ್ತೀಯ... ಸಾಯಿ ಸಾಯಿ ಅಂತ... ಇಲ್ದಿದ್ರೆ ಸ್ಕ್ರೂ ಡ್ರೈವರ್ ತೊಗೊಂಡು ತಲೆಗೆ ಬಾರಿಸ್ತೀಯ ಅಷ್ಟೇ... ವಾಣಿಗೂ ರಾಜುಗೂ ಈ ವಿಷ್ಯಾ ಗೊತ್ತಾಗಿದ್ರೆ ಅದೆಷ್ಟು ನೊಂದುಕೊಳ್ಳುತ್ತಿದ್ದರೋ... ತಲೆಗೆ ಆದ ಏಟು ಆಕ್ಸಿಡೆಂಟ್‌ನಿಂದ ಅಲ್ಲ, ಸ್ಕ್ರೂ ಡ್ರೈವರ್‌ನಿಂದ ಆದ ಏಟು ಅಂತ...’

‘ಇನ್ನೊಂದ್ ನಿಮಿಷ ಇರ್ಬೇಡ ಇಲ್ಲಿ. ನನ್‌ ಕಾರಿಂದ ಇಳಿ, ಅಥ್ವಾ ನಾನೇ ಇಳಿದು ಹೋಗ್ತೀನಿ. ಎರಡರಲ್ಲೊಂದು... ನೀನು ಅಥ್ವಾ ನಾನು... ಇಳಿ ಅಷ್ಟೇ’.

‘ಎಲ್ಲಿ ಯಾವಾಗ ಅನ್ನೋ ಪ್ರಜ್ಞೇನೂ ನಿನಗೆ ಇರೋಲ್ಲ... ರಾತ್ರಿ ಹತ್ತು ಗಂಟೆ ಆಗಿದೆ ಇಳಿ ಅಂತ ಇದೀಯಾ... ಇಳೀತೀನಿ. ಇದೇನು ಫಸ್ಟ್‌ ಟೈಮ್ ಅಲ್ವಲ್ಲ... ಬಾಸ್ಟರ್ಡ್’.

‘... ಔಟ್... ಐ ಸೆಡ್ ಔಟ್... ಸೂ...’
ಕಾರಿನಿಂದ ಇಳಿದು ರಸ್ತೆಯಲ್ಲಿ ನಿಂತ ಅಶ್ವಿನಿಯನ್ನು ಆಟೋದವರು, ಕಾರಿನವರು, ಬಸ್ಸೊಳಗಿದ್ದವರೂ ಇಣುಕಿ ಇಣುಕಿ ನೋಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT