ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಮಹಿಳೆಯರ ಆತ್ಮಹತ್ಯೆ

Last Updated 10 ಜುಲೈ 2012, 19:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಾಡುಗೋಡಿ ಮತ್ತು ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಪತ್ನಿ ಸೇರಿದಂತೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಡುಗೋಡಿ ಬಳಿಯ ಚನ್ನಸಂದ್ರ ನಿವಾಸಿ ವಿಶ್ವನಾಥ್ ಎಂಬುವರ ಪತ್ನಿ ಸೌಮ್ಯ (25) ಅವರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ವಿಜಾಪುರದ ವಿಶ್ವನಾಥ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಎಂ.ಟೆಕ್ ಪದವೀಧರೆಯಾದ ಸೌಮ್ಯ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು. ದಂಪತಿ ಚನ್ನಸಂದ್ರದ ಹಳೆ ಅಂಚೆ ಕಚೇರಿ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಸೌಮ್ಯ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ವಿಶ್ವನಾಥ್ ಅವರು ರಾತ್ರಿ ಏಳು ಗಂಟೆ ಸುಮಾರಿಗೆ ಮನೆಗೆ ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಕಾಡುಗೋಡಿ ಪೊಲೀಸರು ಹೇಳಿದ್ದಾರೆ.

`ಅಳಿಯ ವಿಶ್ವನಾಥ್ ಮತ್ತು ಆತನ ಪೋಷಕರು, ವರದಕ್ಷಿಣೆ ಹಣಕ್ಕಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ, ಅಳಿಯ ಮತ್ತು ಆತನ ಕುಟುಂಬ ಸದಸ್ಯರೇ ಕಾರಣ ಎಂದು ಸೌಮ್ಯ ಅವರ ತಂದೆ ಹನುಮಂತರಾಯ ಅವರು ದೂರು ಕೊಟ್ಟಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡು ವಿಶ್ವನಾಥ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ~ ಎಂದು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣ: ಬನಶಂಕರಿ ಸಮೀಪದ ಕಾವೇರಿನಗರ ಕೊಳೆಗೇರಿ ನಿವಾಸಿ ನಾಗೇಶ್ ಎಂಬುವರ ಪತ್ನಿ ಅಶ್ವಿನಿ (20) ಅವರು ಮಂಗಳವಾರ ನಸುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮದುವೆಯಾಗಿ ಒಂದು ವರ್ಷವಾಗಿತ್ತು. ನಾಗೇಶ್ ಬಡಗಿಯಾಗಿದ್ದಾರೆ. ನಾಗೇಶ್ ಮತ್ತು ಅವರ ತಾಯಿ ತಿಮ್ಮಕ್ಕ ಅವರು ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಅಶ್ವಿನಿ ಅವರು ಮನೆಯ ಕೊಠಡಿಯೊಂದರಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

`ಅಳಿಯ ಮತ್ತು ಆತನ ತಾಯಿ, ವರದಕ್ಷಿಣೆ ಹಣ ತರುವಂತೆ ಮಗಳಿಗೆ ಪೀಡಿಸುತ್ತಿದ್ದರು. ಈ ಬಗ್ಗೆ ಮಗಳು ಹಲವು ಬಾರಿ ಅಳಲು ತೋಡಿಕೊಂಡಿದ್ದಳು. ವರದಕ್ಷಿಣೆ ಕಿರುಕುಳ ತಾಳಲಾರದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಶ್ವಿನಿ ಅವರ ತಾಯಿ ಜಯಲಕ್ಷ್ಮಿ ಅವರು ದೂರು ಕೊಟ್ಟಿದ್ದಾರೆ~ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬನಶಂಕರಿ ಪೊಲೀಸರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡು ನಾಗೇಶ್ ಅವರನ್ನು ಬಂಧಿಸಿದ್ದಾರೆ.

ಹೆಚ್ಚಿನ ಬಡ್ಡಿ- ಬಂಧನ: ಸಾಲಗಾರರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಮೂರು ಮಂದಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಮತ್ತೀಕೆರೆಯ ರಾಜೀವ್‌ರೆಡ್ಡಿ (33), ಯಶವಂತಪುರದ ಶ್ರೀನಾಥ್‌ರೆಡ್ಡಿ (35) ಮತ್ತು ಸುಬ್ಬಾರೆಡ್ಡಿ (44) ಬಂಧಿತರು. ಆಂಧ್ರಪ್ರದೇಶ ಮೂಲದ ಆರೋಪಿಗಳು ಸಣ್ಣಪುಟ್ಟ ವ್ಯಾಪಾರಿಗಳಿಗೆ ಸಾಲ ನೀಡಿ ಮಾಸಿಕ ಶೇ 10ರಷ್ಟು ಬಡ್ಡಿ ಪಡೆಯುತ್ತಿದ್ದರು. ಬಂಧಿತರಿಂದ ಆಸ್ತಿಯ ದಾಖಲೆಪತ್ರಗಳು, ಬ್ಯಾಂಕ್ ಚೆಕ್‌ಗಳು ಹಾಗೂ ಸಾಲದ ಕರಾರು ಪತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

10 ವರ್ಷಗಳಿಂದ ಬಡ್ಡಿ ವ್ಯವಹಾರ ಮಾಡುತ್ತಿದ್ದ ಅವರು, ಆಸ್ತಿ ಹಾಗೂ ವಾಹನಗಳ ದಾಖಲೆಪತ್ರಗಳನ್ನು ಅಡವಿಟ್ಟುಕೊಂಡು ಸಾಲ ಕೊಡುತ್ತಿದ್ದರು. ಸಾಲದ ಹಣ ಹಿಂದಿರುಗಿಸದಿದ್ದರೆ ಸಾಲಗಾರರ ಆಸ್ತಿ ಮತ್ತು ವಾಹನಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿದ್ದರು. ಬಡ್ಡಿ ವ್ಯವಹಾರದಿಂದ ಸಂಪಾದಿಸಿದ ಹಣದಲ್ಲಿ ಆಂಧ್ರಪ್ರದೇಶದಲ್ಲಿ ಲಕ್ಷಾಂತರ ರೂ. ಮೌಲ್ಯದ ಆಸ್ತಿ ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT