ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಯರ್‌ ಫೋನ್ ಕಿವಿಗಳತ್ತ ಶರಣರ ಕೂಗು

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ನನಗೆ ಮಾತಿಗಿಂತ ಮೌನದಲ್ಲೇ ಜಾಸ್ತಿ ನಂಬಿಕೆ’ ಎನ್ನುತ್ತಾ ಮಾತು ಪ್ರಾರಂಭಿಸಿದರು ಹಿರಿಯ ನಟ ರಾಮಕೃಷ್ಣ.
‘ನಮಗೆಲ್ಲರಿಗೂ ಬಸವಣ್ಣ ದೇವರು. ಇಂಥ ಚಿತ್ರ ನಿರ್ದೇಶಿಸುತ್ತಿರುವ ಪುರುಷೋತ್ತಮ್ ಅವರೂ ದೇವರು, ಬಸವಣ್ಣನನ್ನು ಆವಾಹಿಸಿಕೊಂಡಿರುವ ನಟ ರಮೇಶ್ ಕೂಡ ದೇವರು...’     –ರಾಮಕೃಷ್ಣ ಅವರ ದೇವರ ದರ್ಶನಕ್ಕೆ, ‘ಅಯ್ಯೋ ದೇವರೆ’ ಎಂದು ನಕ್ಕು ಬ್ರೇಕ್ ಹಾಕಿದರು ನಟ ರಮೇಶ್ ಅರವಿಂದ್‌.

ನಿರ್ದೇಶಕ ಪುರುಷೋತ್ತಮ್‌ ಭಕ್ತಿಪ್ರಧಾನ ಚಿತ್ರಗಳಿಗೆ ಹೆಸರಾದವರು. ಅವರ ನಿರ್ದೇಶನದ ‘ಮಹಾಶರಣ ಹರಳಯ್ಯ’ ಚಿತ್ರೀಕರಣ ಮತ್ತು ಡಬ್ಬಿಂಗ್ ಮುಗಿಸಿದ ಸಂಭ್ರಮದಲ್ಲಿತ್ತು. ಡಿಟಿಎಸ್ ಅಳವಡಿಕೆ ಕಾರ್ಯ ಪ್ರಾರಂಭವಾಗಿದ್ದು ಚಿತ್ರವನ್ನು ಅಕ್ಟೋಬರ್ ಮೊದಲ ವಾರದಲ್ಲಿ ತೆರೆಗೆ ತರುವುದು ನಿರ್ದೇಶಕರ ಉದ್ದೇಶ.

12ನೇ ಶತಮಾನದ ಕೂಗನ್ನು 21ನೇ ಶತಮಾನದ ಕಿವಿಯಲ್ಲಿ ಕೇಳಿದಾಗ ಅದಕ್ಕೆ ಹೊಸ ಅರ್ಥ ಸಿಗುತ್ತದೆ ಎಂದು ಬಸವಣ್ಣನ ಪಾತ್ರದ ಮೂಲಕ ಅವರ ತತ್ವಗಳ ಪ್ರಸ್ತುತತೆ ವಿಶ್ಲೇಷಿಸಿದರು ರಮೇಶ್ ಅರವಿಂದ್. ಐತಿಹಾಸಿಕ ಪಾತ್ರದಲ್ಲಿ ನಟಿಸಿಲ್ಲ ಎನ್ನುವ ಅವರ ಬಹುಕಾಲದ ಕೊರಗನ್ನು ‘ಮಹಾಶರಣ ಹರಳಯ್ಯ’ ಚಿತ್ರದ ಬಸವಣ್ಣನ ಪಾತ್ರ ದೂರ ಮಾಡಿದೆ­ಯಂತೆ. ಪಾತ್ರ ಮಾತ್ರವಲ್ಲ, ಪಾತ್ರದ ಆಚೆಗೂ ಬಸವಣ್ಣನ ಕುರಿತ ಅಧ್ಯಯನ ಅವರ ಬದುಕಿಗೆ ಹೊಸ ಅರ್ಥ, ಆಯಾಮಗಳನ್ನು ನೀಡಿದೆಯಂತೆ.

ಬಿಜ್ಜಳನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮಕೃಷ್ಣ, ಅಪರೂಪಕ್ಕೆ ಚಿತ್ರರಂಗ ತಮ್ಮನ್ನು ನೆನಪಿಸಿಕೊಂಡಿದೆ ಎಂದರು. ‘ಚಿತ್ರ­ರಂಗದಲ್ಲಿ ಇನ್ನೂ ಇದ್ದೇನೆ ಎಂದು ಸಂತೋಷ­ವಾಗುತ್ತಿದೆ’ ಎಂದ ಅವರ ಮಾತಿನಲ್ಲಿ, ತಮ್ಮನ್ನು ಚಿತ್ರರಂಗ ಕಡೆಗಣಿಸು­ತ್ತಿರುವುದರ ಕುರಿತ ನೋವಿತ್ತು.

ಹರಳಯ್ಯನ ಪಾತ್ರದಲ್ಲಿ ನಟಿಸಿರುವುದು ನಟ ಶ್ರೀಧರ್. ಸುದ್ದಿಗೋಷ್ಠಿಯಲ್ಲಿ ಅವರು ಹಾಜರಿರಲಿಲ್ಲ. ಹರಳಯ್ಯನ ತಂದೆಯಾಗಿ ಕಾಣಿಸಿಕೊಂಡಿರುವುದು ದಿ. ಉದಯ್‌ಕುಮಾರ್ ಅವರ ಮಗ ವಿಕ್ರಮ್ ಉದಯ್. ನಟ ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ತಂದೆ ರಂಗಭೂಮಿ ಮತ್ತು ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರೂ ಅವರಿಗೆ ಅಭಿನಯ ಪ್ರಪಂಚ ಹೊಸತು.

ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಮೂವರು ಸ್ನೇಹಿತರು– ದೇವರಾಜ್, ಕೆ.ಎನ್. ವೆಂಕಟೇಶ್ ಮತ್ತು ಕೆ.ವಿ. ರವಿಚಂದ್ರ. ಮಾತಿಗಿಂತ ಮೌನವೇ ಲೇಸು ಎಂಬ ರಾಮಕೃಷ್ಣ ಮಾತನ್ನು ಅನುಕರಿಸು­ವವರಂತೆ ಮುಗುಳ್ನಗುವಿನಲ್ಲೇ ನಿರ್ಮಾಪಕರ ಮಾತು ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT