ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್‌: ಹಿಂಸಾಚಾರಕ್ಕೆ 93 ಜನ ಬಲಿ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ಬಾಗ್ದಾದ್ (ಎಪಿ): ಇರಾಕಿನಾದ್ಯಂತ ಸೋಮವಾರ ಸಂಭವಿಸಿದ ಪ್ರತ್ಯೇಕ ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿ ಘಟನೆಯಲ್ಲಿ 93 ಜನರು ಸಾವನ್ನಪ್ಪ್ದ್ದಿದಾರೆ.  ಈ ವರ್ಷದಲ್ಲಿ ನಡೆದ ಅತ್ಯಂತ ಭಯಾನಕ ದಾಳಿ ಇದಾಗಿದೆ.

ಅಲ್-ಖೈದಾ ಸಂಘಟನೆಯು ಇರಾಕ್‌ನಲ್ಲಿ ಮರುಸಂಘಟಿತವಾಗುತ್ತಿದೆ ಎಂದು ಅದರ ಮುಖಂಡ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಈ ಘೋರ ದಾಳಿಗಳು ನಡೆದಿವೆ.

ಉದೈಮ್ ಪಟ್ಟಣ ಸಮೀಪದಲ್ಲಿರುವ ಸೇನಾ ನೆಲೆಗೆ ಮೂರು ವಾಹನಗಳಲ್ಲಿ ಆಗಮಿಸಿದ ದುಷ್ಕರ್ಮಿಗಳು ಸೈನಿಕರನ್ನು ಗುರಿಯಾಗಿಸಿಕೊಂಡು ಮನಬಂದಂತೆ ಗುಂಡು ಹಾರಿಸಿ 13 ಜನರನ್ನು ಹತ್ಯೆಮಾಡಿದ್ದಾರೆ.

ಮತ್ತೊಂದು ಘಟನೆಯಲ್ಲಿ ಕಾರ್ ಬಾಂಬ್ ಸ್ಫೋಟಿಸಿ 16 ಜನರನ್ನು ಕೊಲ್ಲಲಾಗಿದೆ. ಬಾಗ್ದಾದ್‌ನಿಂದ 20 ಕಿ.ಮೀ ದೂರದಲ್ಲಿರುವ ತಾಜಿ ಪಟ್ಟಣದಲ್ಲಿ ನಡೆದ ಬಾಂಬ್ ದಾಳಿಗೆ 12 ಜನರು ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 13 ನಗರಗಳಲ್ಲಿ ನಡೆದ  ಹಿಂಸಾಚಾರಕ್ಕೆ 93 ಜನರು ಬಲಿಯಾಗಿ, ನೂರಾರು ಜನರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಹಾಗೂ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳು ನಡೆದಿವೆ ಎನ್ನಲಾಗಿದೆ. 

 ಅಲ್ ಖೈದಾ ಕೈವಾಡದ ಶಂಕೆ!

ಅಮೆರಿಕ ಕಳೆದ ಡಿಸೆಂಬರ್‌ನಲ್ಲಿ ಇಲ್ಲಿಂದ ಸೇನೆ ವಾಪಸ್ ಕರೆಸಿಕೊಂಡ ನಂತರ ನಡೆದಿರುವ ಅತಿದೊಡ್ಡ ದಾಳಿ ಇದಾಗಿದೆ. ಈ ಕೃತ್ಯದ ಹಿಂದೆ ಅಲ್‌ಖೈದಾ ಕೈವಾಡದ ಶಂಕೆ ವ್ಯಕ್ತವಾಗಿದೆ.

ಅಂತಿಮ ಹಂತಕ್ಕೆ ಸಿರಿಯಾ ಕಾಳಗ
ಡಮಾಸ್ಕಸ್ (ಎಎಫ್‌ಪಿ):
ಕಳೆದ ಕೆಲವು ದಿನಗಳಿಂದ ಸಿರಿಯಾದ ಸೇನೆ ಹಾಗೂ ಬಂಡುಕೋರರ ನಡುವಿನ ಕಾಳಗ ಕೊನೆಯ ಹಂತ ತಲುಪಿದೆ ಎಂದು ವಿಶ್ವಸಂಸ್ಥೆಯ ವೀಕ್ಷಕರು ತಿಳಿಸಿದ್ದಾರೆ.

 ಅಧ್ಯಕ್ಷ ಬಷರ್ ಅಲ್ ಅಸಾದ್ ಅವರು ಅಧಿಕಾರ ತ್ಯಜಿಸಿದರೆ ಅವರ `ಸುರಕ್ಷಿತ ನಿರ್ಗಮನ~ಕ್ಕೆ ದಾರಿ ಮಾಡಿಕೊಡುವುದಾಗಿ ಅರಬ್ ರಾಷ್ಟ್ರಗಳು ಹೇಳಿವೆ.

ಡಮಾಸ್ಕಸ್ ಹಾಗೂ ಅಲೆಪ್ಪೊ ನಗರಗಳಲ್ಲಿ ಸೋಮವಾರ ನಡೆದ ಕಾಳಗವು ಅಸಾದ್ ಅವರ ಆಡಳಿತ ಕೊನೆಗೊಳ್ಳುತ್ತಿರುವುದನ್ನು ಹಾಗೂ ಬಂಡುಕೋರರು ವಿಜಯದ ಹೊಸ್ತಿಲಲ್ಲಿ ನಿಂತಿರುವುದನ್ನು ಸೂಚಿಸುತ್ತಿದೆ ಎಂದು ಬಂಡುಕೋರ ತಂಡ ಅಭಿಪ್ರಾಯಪಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT